ಪದ್ಯ ೨: ಅರ್ಜುನನ ವಿವೇಕವು ಹೇಗೆ ಕೆಲಸಮಾಡಿತು?

ಮರುಳ ದೇವಾರ್ಚನೆಯೊ ಕನಸಿನ
ಸಿರಿಯೊ ಶಿಶುವಿನ ಕೈಯ ರತ್ನವೊ
ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ
ಹರನನೀ ಚರ್ಮಾಕ್ಷಿಯಲಿ ಗೋ
ಚರಿಸೆ ಬೇಡಿದುದಂಬು ಮರ್ತ್ಯದೊ
ಳಿರವು ಮಝುಭಾಪ್ಪೆನ್ನ ಪುಣ್ಯವೆನುತ್ತ ಬಸುಸುಯ್ದ (ಅರಣ್ಯ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಹುಚ್ಚನು ಮಾಡಿದ ಪೂಜೆಯೋ, ಕನಸಿನಲ್ಲಿ ದೊರೆತ ಐಶ್ವರ್ಯವೋ, ಮಗುವಿನ ಕೈಗೆ ಸಿಕ್ಕ ಬೆಲೆಬಾಳುವ ರತ್ನವೋ, ಹರಿದುಹೋದ ಹೂವಿನ ಹಾರವೋ, ಆನೆಯ ಸೊಂಡಿಲಿಗೆ ಸಿಕ್ಕ ಹೂಮಾಲೆಯೋ ಎನ್ನುವಂತೆ ನನ್ನ ವಿವೇಕವು ಕೆಲಸಮಾಡಿತು. ಈ ನನ್ನ ಕಣ್ಣಿನಿಂದಲೇ ಶಿವನನ್ನು ನೋಡಿ, ಅಸ್ತ್ರವನ್ನು ಬೇಡಿ ಬಿಟ್ಟೆ. ನನ್ನ ಪುಣ್ಯವು ಇನ್ನೆಂತಹ ಹೆಚ್ಚಿನದಾಗಿದ್ದೀತು ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ಮರುಳ: ತಿಳಿಗೇಡಿ, ದಡ್ಡ; ದೇವಾರ್ಚನೆ: ದೇವತಾ ಪೂಜೆ; ಕನಸು: ಸ್ವಪ್ನ; ಸಿರಿ: ಐಶ್ವರ್ಯ; ಶಿಶು: ಮಗು; ಕೈ: ಹಸ್ತ; ರತ್ನ: ಮಣಿ; ಹರಿ: ಕಡಿ, ಕತ್ತರಿಸು; ಹೂಮಾಲೆ: ಪುಷ್ಮಹಾರ; ಮದೀಯ: ನನ್ನ; ವಿವೇಕ: ಯುಕ್ತಾಯುಕ್ತ ವಿಚಾರ; ವಿಭ್ರಮ: ಅಲೆದಾಟ, ಸುತ್ತಾಟ; ಹರ: ಶಂಕರ; ಚರ್ಮ: ತೊಗಲು; ಅಕ್ಷಿ: ಕಣ್ಣು; ಗೋಚರ: ಕಾಣುವುದು; ಅಂಬು: ನೀರು; ಮರ್ತ್ಯ: ಮನುಷ್ಯ; ಇರವು: ಇರುವಿಕೆ, ವಾಸ; ಮಝ: ಭಲೆ; ಪುಣ್ಯ: ಸದಾಚಾರ; ಬಿಸುಸುಯ್: ನಿಟ್ಟುಸಿರುಬಿಡು;

ಪದವಿಂಗಡಣೆ:
ಮರುಳ+ ದೇವಾರ್ಚನೆಯೊ +ಕನಸಿನ
ಸಿರಿಯೊ +ಶಿಶುವಿನ+ ಕೈಯ +ರತ್ನವೊ
ಹರಿಯ +ಹೂಮಾಲೆಯೊ +ಮದೀಯ +ವಿವೇಕ+ ವಿಭ್ರಮವೊ
ಹರನನ್+ಈ+ ಚರ್ಮ+ಅಕ್ಷಿಯಲಿ +ಗೋ
ಚರಿಸೆ +ಬೇಡಿದುದ್+ಅಂಬು +ಮರ್ತ್ಯದೊಳ್
ಇರವು +ಮಝುಭಾಪ್ಪೆನ್ನ +ಪುಣ್ಯವೆನುತ್ತ+ ಬಸುಸುಯ್ದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರುಳ ದೇವಾರ್ಚನೆಯೊ, ಕನಸಿನ ಸಿರಿಯೊ, ಶಿಶುವಿನ ಕೈಯ ರತ್ನವೊ, ಹರಿಯ ಹೂಮಾಲೆಯೊ

ನುಡಿಮುತ್ತುಗಳು: ಅರಣ್ಯ ಪರ್ವ ೮ ಸಂಧಿ

  • ಮರುಳ ದೇವಾರ್ಚನೆಯೊ ಕನಸಿನಸಿರಿಯೊ ಶಿಶುವಿನ ಕೈಯ ರತ್ನವೊ ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ – ಪದ್ಯ ೨
  • ನೆಲನುಗ್ಗಡಣೆಗಳ ಕೈವಾರಿಗಳ ಗಡ ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ – ಪದ್ಯ ೫
  • ನೂರು ಯಜ್ಞದಮೇಹುಗಾಡನು ಮೆಟ್ಟಲೆಮ್ಮೀ ಹೂಹೆಗಳಿಗಳವಡುವದೊಲ್ಲೆವೆ – ಪದ್ಯ ೧೦
  • ಖರರುಚಿಯ ಮಾರಾಂಕವೋ ಸುರಗಿರಿಯ ಸೋದರವೋ ಮೃಗಾಂಕನ ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದಂಬರದಿ ಪದ್ಯ ೧೨
  • ಕಡೆಬೀಡ ಕೋಟಿಯ ಗುಡಿಯ ಬೊಡ್ಡಿಯರ – ಪದ್ಯ ೧೬
  • ಸುರಗಿರಿಯ ಹೊರಗಾಗಿಹವು ಕರ್ಣಿಕೆಯಂತೆ ಕನಕಾದ್ರಿ – ಪದ್ಯ ೨೯
  • ಮೇರೆಯಿಲ್ಲದ ದೇವತತಿಗಲಭಾರದಿಂ ಜಗ ಜರಿವುದೆಂದಾ ಮೇರುವಿಂಗಾನಿಸಿದ ರಜತಸ್ತಂಭವೊ – ಪದ್ಯ ೩೩
  • ಬಳಕೆ ಸಲ್ಲದು ಕಲಿಯ ಕಾಲದ ಹೊಲಬು ಹೊದ್ದದು ಹರಿಯ ರೂಪನು ತಳೆದ ಪುರವನು ಕ್ಷೀರವರಿಧಿ ಬಳಸಿಕೊಂಡಿಹುದು – ಪದ್ಯ ೫೧
  • ವರವರೂಥದ ಮಧ್ಯದಲಿ ವಿಸ್ತರದ ಮಣಿಪೀಠದಲಿ ಮಿಗೆ ದಿನಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು – ಪದ್ಯ ೬೫
  • ಕಾಲವೆಂಬುದು ರವಿಯ ಗಾಲಿಯ ಕಾಲಗತಿಯೈ – ಪದ್ಯ ೭೨
  • ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ – ಪದ್ಯ ೮೦
  • ರಜತಾಚಲವ ಕಂಡಂದದಲಿ ಕೆಲದಲಿ ಬಲವಿರೋಧಿಯ ಪಟ್ಟದಾನೆ – ಪದ್ಯ ೮
  • ಶಕ್ರನ ನೂರು ಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ – ಪದ್ಯ ೮
  • ಉಗಿದರೋ ಕತ್ತುರಿಯ ತವಲಾಯಿಗಳ ಮುಚ್ಚಳವೆನೆ ಕವಾಟವತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ – ಪದ್ಯ ೮
  • ನಿತಂಬಿನಿಯರ ಸುರೇಖಾ ಸ್ಥಾನಕದ ನಿರುಗೆಯ ಸುಢಾಳದ ನೂನ ಸಮ್ಮೋಹನದ ತೂಕದ ಭಾವ ಭಂಗಿಗಳ – ಪದ್ಯ ೯೨
  • ಕರಣದಲಾಯತೊಡಕದೆ ಪಾರ್ಥನಿದ್ದನು ಧೈರ್ಯ ಶಿಖರದಲಿ – ಪದ್ಯ ೯೫
  • ನಸುನಗೆ ಕುಣಿಯೆ ಮುಖದಲಿ – ಪದ್ಯ ೧೦೦
  • ನೀನಿಂದೆಮಗೆ ಸೊಸೆಯಹುದಾತನಂತಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿಲಹರಿಯಲಿ – ಪದ್ಯ ೧೦
  • ಕಮಲಮುಖಿನೀ ಕಮಲವಾತನುಭ್ರಮರ ನೀ ಸುರವನದ ಸಿರಿಮಧು ಸಮಯವರ್ಜುನನೆಂದು – ಪದ್ಯ ೧೦
  • ಮೇಲೆ ಮೇಲಭಿಲಾಷೆ ಧೈರ್ಯವಚಾಳವಿಸಿ ಪರಿತೋಷ ಪೂರಣದೇಳು ಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ – ಪದ್ಯ ೧೦
  • ಅಬುಜಾಯತಾಕ್ಷಿ ಮಹೋತ್ಸವದಿ ನಾರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ – ಪದ್ಯ ೧೦

ಪದ್ಯ ೧: ಅರ್ಜುನನೇಕೆ ದುಃಖಿಸಿದನು?

ಕೇಳು ಜನಮೇಜಯಧರಿತ್ರೀ
ಪಾಲ ವರ ಕೈಲಾಸವಾಸಿಯ
ಬೀಳುಗೊಂಡನು ತದ್ವಿಯೋಗದಲಿಂದ್ರಕೀಲದಲಿ
ಮೇಲುದುಗುಡಲಸ್ತ್ರ ಲಾಭವ
ನಾಲಿಸದೆ ಶಂಕರ ಪದಾಂಬುಜ
ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ (ಅರಣ್ಯ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶಿವನು ಕೈಲಾಸಕ್ಕೆ ತೆರಳಿದನು, ಅರ್ಜುನನು ತನಗೆ ಪಾಶುಪತಾಸ್ತ್ರವ ದೊರೆತ ಸಂತೋಷವನ್ನು ಮರೆತು, ಶಂಕರನ ಪಾದಕಮಲಗಳನ್ನು ಓಲೈಸುವ ಲಾಭವು ತಪ್ಪಿಹೋಯಿತಲ್ಲಾ ಎಂದು ದುಃಖದಿಂದ ಚಿಂತಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ವರ: ಶ್ರೇಷ್ಠ; ಬೀಳುಗೊಂಡು: ತೆರಳು, ಬೀಳ್ಕೊಡು; ವಿಯೋಗ: ಬೇರ್ಪಡಿಸುವಿಕೆ, ಪ್ರತ್ಯೇಕವಾಗುವಿಕೆ; ಮೇಲು: ಹೆಚ್ಚು; ದುಗುಡ: ದುಃಖ; ಅಸ್ತ್ರ: ಶಸ್ತ್ರ; ಲಾಭ: ಪ್ರಯೋಜನ; ಆಲಿಸು: ಕೇಳು; ಶಂಕರ: ಶಿವ; ಪದಾಂಬುಜ: ಪಾದ ಕಮಲ; ಓಲಗ: ದರ್ಬಾರು; ಸಿರಿ: ಐಶ್ವರ್ಯ; ತಪ್ಪಿತು: ಅಡ್ಡಪಡಿಸು; ಉಮ್ಮಳಿಸು: ಅ೦ತರಾಳದಿ೦ದ ಹೊರಹೊಮ್ಮು;

ಪದವಿಂಗಡಣೆ:
ಕೇಳು +ಜನಮೇಜಯ+ಧರಿತ್ರೀ
ಪಾಲ +ವರ+ ಕೈಲಾಸವಾಸಿಯ
ಬೀಳುಗೊಂಡನು +ತದ್ವಿಯೋಗದಲ್+ಇಂದ್ರಕೀಲದಲಿ
ಮೇಲು+ದುಗುಡದ್+ಅಸ್ತ್ರ +ಲಾಭವನ್
ಆಲಿಸದೆ+ ಶಂಕರ+ ಪದಾಂಬುಜದ್
ಓಲಗದ+ ಸಿರಿ+ ತಪ್ಪಿತೆನುತ್+ಉಮ್ಮಳಿಸಿದನು +ಪಾರ್ಥ

ಅಚ್ಚರಿ:
(೧) ಅರ್ಜುನನ ದುಃಖದ ಕಾರಣ – ಮೇಲುದುಗುಡಲಸ್ತ್ರ ಲಾಭವನಾಲಿಸದೆ ಶಂಕರ ಪದಾಂಬುಜ
ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ

ಪದ್ಯ ೧೧೫: ಅರ್ಜುನನೇಕೆ ಹರ್ಷಿತನಾದನು?

ಮುರಹರನು ತಾನೆಮಗೆ ಗುರುವರ
ಗುರು ಚರಣಯುಗದಮಳ ಭಕ್ತಿಯ
ಲರಿದ ನಿಜಮೂರ್ತಿಯನು ಕಂಡು ಕೃತಾರ್ಥನಾದೆನೆಲ
ಹರಿದುದ ಘಕುಲವೆನುತ ಪುಳಕೋ
ತ್ಕರದ ಹರುಷದಲಿರ್ದನಾ ನರ
ಪರಮಗದುಗಿನ ವೀರನಾರಾಯಣನ ಕರುಣದಲಿ (ಅರಣ್ಯ ಪರ್ವ, ೭ ಸಂಧಿ, ೧೧೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನೇ ನಮಗೆ ಗುರು, ಗುರುಪಾದ ಕಮಲ ಭಕ್ತಿಯಿಂದರಿತ ನಿಜಮೂರ್ತಿಯನ್ನು ಕಂಡು ನಾನು ಕೃತಾರ್ಥನಾದೆ. ನನ್ನ ಪಾಪ ಸಂಕುಲವು ನಾಶವಾಯಿತು ಎಂದು ಯೋಚಿಸಿ ಗದುಗಿನ ವೀರನಾರಾಯಣ ಕರುಣೆಯನ್ನು ಸ್ಮರಿಸಿ ಅರ್ಜುನನು ಹರ್ಷಿತನಾದನು.

ಅರ್ಥ:
ಮುರಹರ: ಕೃಷ್ಣ; ಗುರು: ಆಚಾರ್ಯ; ವರ: ಶ್ರೇಷ್ಠ; ಚರಣ: ಪಾದ; ಯುಗಳ: ಎರಡು; ಅಮಳ: ನಿರ್ಮಲ; ಭಕ್ತಿ: ದೇವರು ಮತ್ತು ಗುರುಗಳಲ್ಲಿ ತೋರುವು ನಿಷ್ಠೆ; ಅರಿ: ತಿಳಿ; ನಿಜ: ದಿಟ; ಮೂರ್ತಿ: ರೂಪ; ಕಂಡು: ನೋಡಿ; ಕೃತಾರ್ಥ: ಧನ್ಯ; ಹರಿ: ಜಾರು, ನಾಶ; ಅಘ: ಪಾಪ; ಕುಲ: ವಂಶ; ಪುಳಕ: ರೋಮಾಂಚನ; ಉತ್ಕರ: ಸಮೂಹ; ಹರುಷ: ಸಂತಸ; ನರ: ಅರ್ಜುನ; ಪರಮ: ಶ್ರೇಷ್ಠ; ಕರುಣೆ: ದಯೆ;

ಪದವಿಂಗಡಣೆ:
ಮುರಹರನು +ತಾನೆಮಗೆ+ ಗುರು+ವರ
ಗುರು +ಚರಣಯುಗದ್+ಅಮಳ +ಭಕ್ತಿಯಲ್
ಅರಿದ+ ನಿಜಮೂರ್ತಿಯನು+ ಕಂಡು +ಕೃತಾರ್ಥ+ನಾದೆನೆಲ
ಹರಿದುದ್ + ಅಘಕುಲವ್+ಎನುತ +ಪುಳಕೋ
ತ್ಕರದ+ ಹರುಷದಲ್+ಇರ್ದನಾ +ನರ
ಪರಮ+ಗದುಗಿನ+ ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ಮುರಹರ, ವೀರನಾರಾಯಣ – ಕೃಷ್ಣನ ಹೆಸರುಗಳ ಬಳಕೆ
(೨) ಅರ್ಜುನನ ಸಂತಸದ ಸ್ಥಿತಿ – ಹರಿದುದ ಘಕುಲವೆನುತ ಪುಳಕೋತ್ಕರದ ಹರುಷದಲಿರ್ದನಾ

ಪದ್ಯ ೧೧೪: ಅರ್ಜುನನು ಏನೆಂದು ಹೇಳಿ ಸಮಾಧಾನಗೊಂಡನು?

ಎತ್ತಿದೀ ಬಲು ಚಲವು ನೆರೆ ತಾನೇ
ನುತ್ತರಿಪುದೀಕ್ಷತ್ರ ಧರ್ಮವ
ದುತ್ತರೋತ್ತರವಹುದು ಮತ್ತಾಚಲದ ಬಲುಹಿಂದ
ಮತ್ತೆ ಬಹುಮಾತೇಕೆಯಗ್ರಜ
ನಿತ್ತ ಬೆಸದಿಂ ನಡೆದೆನೆಂಬ ಸು
ವೃತ್ತವದೆ ಸತ್ಕೀರ್ತಿ ಸಾಧನವೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೧೪ ಪದ್ಯ)

ತಾತ್ಪರ್ಯ:
ನಾನು ಹಿಡಿದ ಛಲವು ಕ್ಷತ್ರಿಯ ಧರ್ಮಕ್ಕನುಸಾರವಾದುದು. ಆ ಛಲದಿಂದಲೇ ಮುಂದೆ ಉತ್ತರೋತ್ತರವಾದ ಶ್ರೇಯಸ್ಸಾಗುತ್ತದೆ. ಹೆಚ್ಚೇಕೆ ಚಿಂತಿಸಬೇಕು, ಅಣ್ಣನು ಕೊಟ್ಟ ಆಜ್ಞೆಯನ್ನು ಪರಿಪಾಲಿಸಿದನೆಂಬ ಒಳ್ಳೆಯ ನಡತೆಯೇ ನನಗೆ ಸತ್ಕೀರ್ತಿಯನ್ನು ಕೊಡುತ್ತದೆ ಎಂದು ಅರ್ಜುನನು ಸಮಾಧಾನವನ್ನು ತಂದುಕೊಂಡನು.

ಅರ್ಥ:
ಬಲು: ಬಹಳ; ಛಲ: ದೃಢ ನಿಶ್ಚಯ; ನೆರೆ: ಆಧಾರ, ಅವಲಂಬನೆ; ಉತ್ತರ: ಫಲಿತಾಂಶ; ಕ್ಷತ್ರ: ಕ್ಷತ್ರಿಯ; ಧರ್ಮ: ಧಾರಣೆ ಮಾಡಿದುದು; ಉತ್ತರೋತ್ತರ: ಏಳಿಗೆ; ಬಹು: ಬಹಳ; ಮಾತು: ನುಡಿ, ಸೊಲ್ಲು; ಅಗ್ರಜ: ಅಣ್ಣ; ಬೆಸ: ಕೆಲಸ, ಕಾರ್ಯ; ನಡೆ: ಚಲಿಸು; ಸುವೃತ್ತ: ಬಳಸಿದ, ಒಳ್ಳೆಯ ಸುದ್ದಿ; ಸತ್ಕೀರ್ತಿ: ಖ್ಯಾತಿ; ಸಾಧನ: ಗುರಿಮುಟ್ಟುವ ಪ್ರಯತ್ನ;

ಪದವಿಂಗಡಣೆ:
ಎತ್ತಿದೀ +ಬಲು +ಚಲವು+ ನೆರೆ+ ತಾನೇನ್
ಉತ್ತರಿಪುದ್+ಈ+ಕ್ಷತ್ರ +ಧರ್ಮವದ್
ಉತ್ತರೋತ್ತರವಹುದು+ ಮತ್+ಆ+ಚಲದ+ ಬಲುಹಿಂದ
ಮತ್ತೆ+ ಬಹುಮಾತೇಕೆ+ಅಗ್ರಜನ್
ಇತ್ತ +ಬೆಸದಿಂ +ನಡೆದೆನೆಂಬ+ ಸು
ವೃತ್ತವದೆ +ಸತ್ಕೀರ್ತಿ +ಸಾಧನವೆಂದನಾ +ಪಾರ್ಥ

ಅಚ್ಚರಿ:
(೧) ಯಾವುದು ಸತ್ಕೀರ್ತಿ – ಅಗ್ರಜನಿತ್ತ ಬೆಸದಿಂ ನಡೆದೆನೆಂಬ ಸುವೃತ್ತವದೆ ಸತ್ಕೀರ್ತಿ

ಪದ್ಯ೧೧೩: ಅರ್ಜುನನು ಪಾಪ ಪುಣ್ಯಗಳ ಬಗ್ಗೆ ಏಕೆ ಚಿಂತಿಸಿದನು?

ಹರನು ಮಾಡುವುದೇನು ಕರ್ಮದ
ತರವು ನಮಗರಿಯಾಗಿ ತಾಗಲು
ಹರನು ಪಾಪದ ಪುಣ್ಯದೊಡಲಿಗೆ ಸಾಕ್ಷಿ ರೂಪನಲೆ
ಧರೆಯೊಳಗೆ ಶತಕೋಟಿ ಜನ್ಯಾಂ
ತರವು ಮಾಡಿದ ಪಾಪ ಪುಣ್ಯವು
ನರರ ಬೆನ್ನಲಿ ಬಹುದು ಹುಸಿಯಲ್ಲೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೧೩ ಪದ್ಯ)

ತಾತ್ಪರ್ಯ:
ಕರ್ಮವು ನಮಗೆ ಶತ್ರುವಾಗಿ ನಮ್ಮನ್ನು ಕಾಡಲು, ಶಿವನು ಮಾಡುವುದಾದರೂ ಏನು? ಹರನು ಪುಣ್ಯ ಪಾಪಗಳಿಗೆ ಸಾಕ್ಷಿರೂಪನಲ್ಲವೇ? ಅನಂತ ಜನ್ಮಾಂತರಗಳಲ್ಲಿ ಮಾಡಿದ ಪುಣ್ಯ ಪಾಪಗಳು ಮನುಷ್ಯರ ಬೆನ್ನು ಹತ್ತಿ ಬರುತ್ತವೆಯೆನ್ನುವುದು ಸುಳ್ಳಲ್ಲ, ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಹರ: ಶಿವ; ಕರ್ಮ: ಕೆಲಸ, ಕಾರ್ಯದ ಫಲ; ತರ: ಕ್ರಮ; ಅರಿ: ಶತ್ರು; ತಾಗು: ಮುಟ್ಟು; ಪಾಪ: ಕೆಟ್ಟ ಕೆಲಸ, ದುರಾಚಾರ; ಪುಣ್ಯ: ಒಳ್ಳೆಯ ಕೆಲಸ; ಒಡಲು: ದೇಹ; ಸಾಕ್ಷಿ: ಪುರಾವೆ; ರೂಪ: ಆಕಾರ; ಧರೆ: ಭೂಮಿ; ಜನ್ಮ: ಹುಟ್ಟು; ನರ: ಮನುಷ್ಯ; ಬೆನ್ನು: ಹಿಂಬದಿ; ಹುಸಿ: ಸುಳ್ಳು;

ಪದವಿಂಗಡಣೆ:
ಹರನು+ ಮಾಡುವುದೇನು +ಕರ್ಮದ
ತರವು +ನಮಗ್+ಅರಿಯಾಗಿ +ತಾಗಲು
ಹರನು+ ಪಾಪದ +ಪುಣ್ಯದ್+ಒಡಲಿಗೆ +ಸಾಕ್ಷಿ +ರೂಪನಲೆ
ಧರೆಯೊಳಗೆ +ಶತಕೋಟಿ +ಜನ್ಮಾಂ
ತರವು +ಮಾಡಿದ +ಪಾಪ +ಪುಣ್ಯವು
ನರರ +ಬೆನ್ನಲಿ +ಬಹುದು +ಹುಸಿಯಲ್ಲೆಂದನಾ+ ಪಾರ್ಥ

ಅಚ್ಚರಿ:
(೧) ಪಾಪ ಪುಣ್ಯ – ವಿರುದ್ಧ ಪದ
(೨) ಶಿವನು ಎಲ್ಲಕ್ಕೂ ಸಾಕ್ಷಿ ಎಂದ್ ಹೇಳುವ ಪರಿ – ಹರನು ಪಾಪದ ಪುಣ್ಯದೊಡಲಿಗೆ ಸಾಕ್ಷಿ ರೂಪನಲೆ