ಪದ್ಯ ೧೦೮: ಶಿವನು ಏನನ್ನು ಹೇಳಿ ಅರ್ಜುನನನ್ನು ಬೀಳ್ಕೊಟ್ಟನು?

ಸರಳ ಸಾಂಗೋಪಾಂಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ
ಹರಿ ಸಹಾಯನು ನಮ್ಮ ಸತ್ವದ
ಪರಮರೂಪಾತನು ಕಣಾ ನೀ
ನರಿದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ಬಳಿಕ ಶಂಕರನು ಅರ್ಜುನನಿಗೆ ವಿಧಿವತ್ತಾಗಿ ಪಾಶುಪತಾಸ್ತ್ರದ ಅಂಗ ಉಪಾಂಗಗಳ ಸಹಿತ ಎಲ್ಲವನ್ನೂ ಉಪದೇಶ ಮಾಡಿದನು. ನೀನಿನ್ನು ಇಂದ್ರನ ಪುರವಾದ ಅಮರಾವತಿಗೆ ತೆರಳು, ಮುಂದಿನ ನಿನ್ನ ಕಾರ್ಯಭಾರಗಳಿಗೆ ನಮ್ಮ ಸತ್ವಸ್ವರೂಪನಾದ ಶ್ರೀಕೃಷ್ಣನೇ ನಿಮಗೆ ಸಹಾಯ ಮಾಡುತ್ತಾನೆಂದು ಹೇಳಿ ಅರ್ಜುನನನ್ನು ಬೀಳ್ಕೊಟ್ಟನು.

ಅರ್ಥ:
ಸರಳ: ಸರಾಗ; ಸಾಂಗೋಪಾಂಗ: ವಿಧಿವತ್ತಾದುದು, ಶಾಸ್ತ್ರೋಕ್ತವಾದುದು; ಅರುಹು: ತಿಳಿಸು, ಹೇಳು; ಶಕ್ರ: ಇಂದ್ರ; ಪುರ: ಊರು; ನಡೆ: ಚಲಿಸು; ಉತ್ತರೋತ್ತರ: ಏಳಿಗೆ, ಬೆಳವಣಿಗೆ; ಕಾರ್ಯ: ಕೆಲಸ; ಹರಿ: ವಿಷ್ಣು; ಸಹಾಯ: ನೆರವು; ಸತ್ವ: ಸಾರ; ಪರಮ: ಶ್ರೇಷ್ಠ; ರೂಪ: ಆಕಾರ; ಅರಿ: ತಿಳಿ; ಮಹೇಶ: ಶಂಕರ; ಬೀಳ್ಕೊಟ್ಟು: ತೆರಳು;

ಪದವಿಂಗಡಣೆ:
ಸರಳ +ಸಾಂಗೋಪಾಂಗವನು+ ನಿನಗ್
ಅರುಹಿದೆನು +ನೀನಿನ್ನು +ಶಕ್ರನ
ಪುರಕೆ+ ನಡೆ +ನಿನ್+ಉತ್ತರೋತ್ತರ +ಕಾರ್ಯಗತಿಗಳಿಗೆ
ಹರಿ +ಸಹಾಯನು +ನಮ್ಮ +ಸತ್ವದ
ಪರಮರೂಪ+ಆತನು +ಕಣಾ +ನೀನ್
ಅರಿದಿರೆಂದು +ಮಹೇಶ +ಬೀಳ್ಕೊಟ್ಟನು+ ಧನಂಜಯನ

ಅಚ್ಚರಿ:
(೧) ನಿನಗರುಹಿದೆನು, ನೀನಿನ್ನು, ನಿನ್ನುತ್ತರೋತ್ತರ, ನೀನರಿದಿರೆಂದು – ನೀನ್ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ