ಪದ್ಯ ೧೧೨: ಅರ್ಜುನನು ಏನೆಂದು ಚಿಂತಿಸಿದನು?

ಹರನ ಕೃಪೆಯಂ ಪಡೆವುದರಿದಾ
ದರಿಸುವರೆ ಶಸ್ತ್ರಾಭಿಲಾಷೆಯ
ಮರುಳತನದಲಿ ವ್ಯರ್ಥನಾದೆನಲಾ ಮಹಾದೇವ
ಧರೆಯು ಕಾಮಿತವೆಂದು ಸುಖವನು
ಮರೆದೆನಕಟಕಟಾ ದುರಾಗ್ರಹ
ಪರಿವೃತಂಗೆ ಸುಬುದ್ಧಿಯೇಕಹುದೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೧೨ ಪದ್ಯ)

ತಾತ್ಪರ್ಯ:
ಶಿವನ ಕೃಪೆಯನ್ನು ಪಡೆಯುವುದು ಬಹು ಕಷ್ಟ ಸಾಧ್ಯವಾದುದು ಅವನು ಕೃಪೆ ಮಾಡಿ ನಿನಗೇನು ಬೇಕೆಂದು ಕೇಳಿದಾಗ ಅಸ್ತ್ರವನ್ನು ವರವಾಗಿ ಕೇಳಿ ಹುಚ್ಚುತನದಿಮ್ದ ಅವಕಾಶವನ್ನು ವ್ಯರ್ಥಮಾಡಿಕೊಂಡೆ. ಭೂಮಿಯ ಆಶೆಯಿಂದ ಆನಂದವನ್ನು ಮರೆತೆ. ದುರಾಗ್ರಹ ಪೀಡಿತರಿಗೆ ಸುಬುದ್ಧಿಯೆಲ್ಲಿಂದ ಬಂದೀತು ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಹರ: ಶಿವ; ಕೃಪೆ: ದಯೆ; ಪಡೆ: ಗಳಿಸು; ಆದರಿಸು: ಉಪಚಾರಮಾಡು; ಶಸ್ತ್ರ: ಅಸ್ತ್ರ, ಆಯುಧ; ಅಭಿಲಾಷೆ: ಆಸೆ, ಬಯಕೆ; ಮರುಳತನ: ತಿಳಿಗೇಡಿ; ವ್ಯರ್ಥ: ನಿರುಪಯುಕ್ತತೆ; ಧರೆ: ಭೂಮಿ; ಕಾಮಿತ: ಬಯಸಿದ, ಅಪೇಕ್ಷಿಸಿದ; ಸುಖ: ಸಂತೋಷ, ನಲಿವು; ಮರೆ: ನೆನಪಿನಿಂದ ದೂರ ಮಾಡು; ಅಕಟಕಟಾ: ಅಯ್ಯೋ; ದುರಾಗ್ರಹ: ಹಟಮಾರಿತನ; ಪರಿವೃತ: ಆವರಿಸಿದ, ಸುತ್ತುವರಿದ; ಸುಬುದ್ಧಿ: ಒಳ್ಳೆಯ ಬುದ್ಧಿ;

ಪದವಿಂಗಡಣೆ:
ಹರನ +ಕೃಪೆಯಂ +ಪಡೆವುದರಿದ್+
ಆದರಿಸುವರೆ +ಶಸ್ತ್ರ+ಅಭಿಲಾಷೆಯ
ಮರುಳತನದಲಿ+ ವ್ಯರ್ಥನ್+ಆದೆನಲಾ +ಮಹಾದೇವ
ಧರೆಯು +ಕಾಮಿತವೆಂದು +ಸುಖವನು
ಮರೆದೆನ್+ಅಕಟಕಟಾ +ದುರಾಗ್ರಹ
ಪರಿವೃತಂಗೆ +ಸುಬುದ್ಧಿ+ಏಕಹುದ್+ಎಂದನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಮನಸ್ಸಿನ ತಳಮಳ – ಶಸ್ತ್ರಾಭಿಲಾಷೆಯ ಮರುಳತನದಲಿ ವ್ಯರ್ಥನಾದೆನಲಾ ಮಹಾದೇವ, ಧರೆಯು ಕಾಮಿತವೆಂದು ಸುಖವನು ಮರೆದೆನಕಟಕಟಾ

ಪದ್ಯ ೧೧೧: ಶಿವನು ಅರ್ಜುನನಿಗೆ ಯಾವ ಆಜ್ಞೆಯನ್ನು ನೀಡಿ ತೆರಳಿದನು?

ಪುರಹರನು ಕರೆದರ್ಜುನನ ಸುರ
ಪುರಕೆ ಹೋಗುತೆ ನೀನು ಬಳಿಕಾ
ಸುರಸಮಿತಿಗಳ ವೈರಿಗಳ ವಧಿಸೆಂದು ಬೆಸಸುತ್ತ
ಹರಿಯಜರುಸಹಿತ ಭವ ರಜತಾ
ಚಲಕೆ ಬಿಜಯಂಗೈದನಿತ್ತಲು
ನರನು ಸೈವೆರಗಾಗಿ ಚಿಂತಾಚಿತ್ರದಂತಿರ್ದ (ಅರಣ್ಯ ಪರ್ವ, ೭ ಸಂಧಿ, ೧೧೧ ಪದ್ಯ)

ತಾತ್ಪರ್ಯ:
ಶಿವನು ಅರ್ಜುನನನ್ನು ಕರೆದು, ನೀನು ಅಮರಾವತಿಗೆ ಹೋಗಿ ದೇವಗಣಗಳ ವೈರಿಗಳಾದ ಅಸುರರನ್ನು ಸಂಹರಿಸು ಎಂದು ಹೇಳಿ ಬ್ರಹ್ಮ, ವಿಷ್ಣುಗಳೊಂದಿಗೆ ಹಿಮಾಲಯಕ್ಕೆ ತೆರಳಿದನು. ಅರ್ಜುನನು ಅತಿಶಯವಾಗಿ ವಿಸ್ಮಯಗೊಂಡು ಚಿಂತೆಯ ಚಿತ್ರದಂತಿದ್ದನು.

ಅರ್ಥ:
ಪುರಹರ: ಈಶ್ವರ; ಕರೆ: ಬರೆಮಾಡು; ಸುರಪುರ: ಅಮರಾವತಿ; ಸುರ: ದೇವತೆ; ಹೋಗು: ತೆರಳು; ಬಳಿಕ: ನಂತರ; ಸಮಿತಿ: ಗುಂಪು; ವೈರಿ: ಶತ್ರು; ವಧಿಸು: ಸಂಹರಿಸು; ಬೆಸಸು: ಹೇಳು; ಹರಿ: ವಿಷ್ಣು; ಅಜ: ಬ್ರಹ್ಮ; ಸಹಿತ: ಜೊತೆ; ಭವ: ಶಿವ; ರಜತಾಚಲ: ಹಿಮಾಲಯ; ಬಿಜಯಂಗೈ: ದಯಮಾಡಿಸು; ನರ: ಅರ್ಜುನ; ಸೈವೆರಗು: ಆತಿಯಾದ ತಳಮಳ; ಚಿಂತೆ: ಯೋಚನೆ;

ಪದವಿಂಗಡಣೆ:
ಪುರಹರನು +ಕರೆದ್+ಅರ್ಜುನನ +ಸುರ
ಪುರಕೆ +ಹೋಗುತೆ +ನೀನು +ಬಳಿಕ್
ಆ+ಸುರಸಮಿತಿಗಳ +ವೈರಿಗಳ+ ವಧಿಸೆಂದು +ಬೆಸಸುತ್ತ
ಹರಿ+ಅಜರು+ಸಹಿತ+ ಭವ+ ರಜತಾ
ಚಲಕೆ +ಬಿಜಯಂಗೈದನ್+ಇತ್ತಲು
ನರನು +ಸೈವೆರಗಾಗಿ+ ಚಿಂತಾಚಿತ್ರದಂತಿರ್ದ

ಅಚ್ಚರಿ:
(೧) ಅರ್ಜುನನ ಸ್ಥಿತಿ – ನರನು ಸೈವೆರಗಾಗಿ ಚಿಂತಾಚಿತ್ರದಂತಿರ್ದ

ಪದ್ಯ ೧೧೦: ಅರ್ಜುನನು ಶಿವನನ್ನು ಹೇಗೆ ಬೀಳ್ಕೊಟ್ಟನು?

ದೇವಿಯರು ಗುಹಗಣಪ ಮುಖ್ಯ ಗ
ಣಾವಳಿಗೆ ಪೊಡಮಟ್ಟನವರ ಕೃ
ಪಾವಲೋಕನದಿಂದ ಹೊಂಪುಳಿಯೋದನಡಿಗಡಿಗೆ
ದೇವ ರಜತಾಚಲಗಮನಸಂ
ಭಾವನೋದ್ಯೋಗದಲಿ ಮಿಗೆ ಗಾಂ
ಡೀವಿಯನು ನೆರೆ ನೋಡಿ ಕೃಪೆಯಿಂದಭವನಿಂತೆಂದ (ಅರಣ್ಯ ಪರ್ವ, ೭ ಸಂಧಿ, ೧೧೦ ಪದ್ಯ)

ತಾತ್ಪರ್ಯ:
ಪಾರ್ವತೀ ದೇವಿ, ಸುಬ್ರಹ್ಮಣ್ಯ, ಗಣಪತಿ, ಮೊದಲಾದವರೆಲ್ಲರಿಗೂ ಅರ್ಜುನನು ನಮಸ್ಕರಿಸಿ ಅವರ ಕರುಣಾ ಕಟಾಕ್ಷದಿಂದ ರೋಮಾಂಚನಗೊಂಡನು. ತನ್ನ ನಿವಾಸವಾದ ಹಿಮಾಲಯಕ್ಕೆ ಹೊರಟು ನಿಂತ ಶಿವನು ಅರ್ಜುನನಿಗೆ ಹೀಗೆ ಹೇಳಿದನು.

ಅರ್ಥ:
ದೇವಿ: ಭಗವತಿ; ಗುಹ: ಸುಬ್ರಹ್ಮಣ್ಯ; ಮುಖ್ಯ: ಪ್ರಮುಖ; ಗಣಾವಳಿ: ಶಿವನ ಪ್ರಮಥರ ಸಮೂಹ; ಪೊಡಮಟ್ಟು: ನಮಸ್ಕರಿಸು; ಕೃಪೆ: ದಯೆ; ಅವಲೋಕನ: ನೋಟ; ಹೊಂಪುಳಿ: ರೋಮಾಂಚನ, ಪುಳಕ; ಅಡಿಗಡಿಗೆ: ಮತ್ತೆ ಮತ್ತೆ; ದೇವ: ಭಗವಂತ; ರಜತಾಚಲ: ಹಿಮಾಲಯ; ಅಚಲ: ಬೆಟ್ಟ; ಗಮನ: ನಡಗೆ, ಹೋಗುವುದು; ಸಂಭಾವನೆ: ಅರ್ಹತೆ, ಸನ್ಮಾನ; ಉದ್ಯೋಗ: ಕಾರ್ಯ; ಮಿಗೆ; ಹೆಚ್ಚು; ಗಾಂಡೀವಿ: ಅರ್ಜುನ; ನೆರೆ: ಸೇರು, ಜೊತೆ; ನೋಡು: ವೀಕ್ಷಿಸು; ಕೃಪೆ: ದಯೆ; ಅಭವ: ಶಿವ;

ಪದವಿಂಗಡಣೆ:
ದೇವಿಯರು +ಗುಹ+ಗಣಪ+ ಮುಖ್ಯ ಗ
ಣಾವಳಿಗೆ +ಪೊಡಮಟ್ಟನ್+ಅವರ+ ಕೃಪ
ಅವಲೋಕನದಿಂದ +ಹೊಂಪುಳಿಯೋದನ್+ಅಡಿಗಡಿಗೆ
ದೇವ+ ರಜತಾಚಲ+ಗಮನ+ಸಂ
ಭಾವನ+ಉದ್ಯೋಗದಲಿ +ಮಿಗೆ +ಗಾಂ
ಡೀವಿಯನು+ ನೆರೆ+ ನೋಡಿ +ಕೃಪೆಯಿಂದ್+ಅಭವನ್+ಇಂತೆಂದ

ಅಚ್ಚರಿ:
(೧) ಶಿವನ ನಿವಾಸವನ್ನು ಹೇಳಲು – ರಜತಾಚಲ ಪದದ ಬಳಕೆ – ಬೆಳ್ಳಿಯ ಬೆಟ್ಟ, ಹಿಮಾಲಯ

ಪದ್ಯ ೧೦೯: ಶಿವನು ಅರ್ಜುನನಿಗೆ ಏನು ಹೇಳಿ ಹರಸಿದನು?

ನಿಮ್ಮ ಕಥೆ ವೇದೋಕ್ತವಾಗಲಿ
ನಿಮ್ಮ ಚರಿತಸುಚರಿತವಾಗಲಿ
ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘಕೆಡಲಿ
ನಿಮ್ಮ ನಿಂದಿಸಿದವರುಗಳು ದು
ಷ್ಕರ್ಮಿಗಳು ಪಾತಕರು ತಾನಿದು
ನಮ್ಮ ಮತವೆಂದಭವ ಹರಸಿದನಾ ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೧೦೯ ಪದ್ಯ)

ತಾತ್ಪರ್ಯ:
ನಿಮ್ಮ ಚರಿತ್ರೆಯು ವೇದ ಸಮಾನವೆಂದು ಪ್ರಸಿದ್ಧವಾಗಲಿ, ನಿಮ್ಮ ಚರಿತೆಯು ಸುಚರಿತೆಯೆಂದು ಪರಿಗಣಿತವಾಗಲಿ, ನಿಮ್ಮ ಕಥಾಮೃತವನ್ನು ಕೇಳಿದವರ ಪಾಪಗಳು ನಾಶವಾಗಲಿ, ನಿಮ್ಮನ್ನು ಯಾರಾದರು ನಿಂದಿಸುವರೋ ಅವರು ದುಷ್ಕರ್ಮಿಗಳು, ಪಾಪಿಗಳು ಎಂಬುದು ನಮ್ಮ ಅಭಿಪ್ರಾಯ ಎಂದು ಶಿವನು ಹೇಳಿ ಅರ್ಜುನನನ್ನು ಹರಸಿದನು.

ಅರ್ಥ:
ಕಥೆ: ವಿವರಣೆ; ವೇದ: ಜ್ಞಾನ; ಉಕ್ತ: ವಚನ; ಚರಿತ: ನಡೆದುದು; ಸುಚರಿತ: ಒಳ್ಳೆಯ ಚರಿತ್ರೆ; ಅಮೃತ: ಸುಧೆ; ಆಲಿಸು: ಕೇಳು; ಅಘ: ದುಃಖ; ಕೆಡು: ಹಾಳಾಗು, ಅಳಿ; ನಿಂದಿಸು: ದೂಷಿಸು; ದುಷ್ಕರ್ಮಿ: ದುಷ್ಟ; ಪಾತಕ: ಪಾಪಿ; ಮತ: ವಿಚಾರ; ಅಭವ: ಶಿವ;

ಪದವಿಂಗಡಣೆ:
ನಿಮ್ಮ +ಕಥೆ +ವೇದೋಕ್ತವಾಗಲಿ
ನಿಮ್ಮ +ಚರಿತ+ಸುಚರಿತವಾಗಲಿ
ನಿಮ್ಮ+ ಕಥನಾಮೃತವನ್+ಆಲಿಸಿ+ ಕೇಳ್ದರ್+ಅಘ+ಕೆಡಲಿ
ನಿಮ್ಮ +ನಿಂದಿಸಿದವರುಗಳು +ದು
ಷ್ಕರ್ಮಿಗಳು+ ಪಾತಕರು+ ತಾನಿದು
ನಮ್ಮ +ಮತವೆಂದ್+ಅಭವ+ ಹರಸಿದನಾ+ ಧನಂಜಯನ

ಪದ್ಯ ೧೦೮: ಶಿವನು ಏನನ್ನು ಹೇಳಿ ಅರ್ಜುನನನ್ನು ಬೀಳ್ಕೊಟ್ಟನು?

ಸರಳ ಸಾಂಗೋಪಾಂಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ
ಹರಿ ಸಹಾಯನು ನಮ್ಮ ಸತ್ವದ
ಪರಮರೂಪಾತನು ಕಣಾ ನೀ
ನರಿದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ಬಳಿಕ ಶಂಕರನು ಅರ್ಜುನನಿಗೆ ವಿಧಿವತ್ತಾಗಿ ಪಾಶುಪತಾಸ್ತ್ರದ ಅಂಗ ಉಪಾಂಗಗಳ ಸಹಿತ ಎಲ್ಲವನ್ನೂ ಉಪದೇಶ ಮಾಡಿದನು. ನೀನಿನ್ನು ಇಂದ್ರನ ಪುರವಾದ ಅಮರಾವತಿಗೆ ತೆರಳು, ಮುಂದಿನ ನಿನ್ನ ಕಾರ್ಯಭಾರಗಳಿಗೆ ನಮ್ಮ ಸತ್ವಸ್ವರೂಪನಾದ ಶ್ರೀಕೃಷ್ಣನೇ ನಿಮಗೆ ಸಹಾಯ ಮಾಡುತ್ತಾನೆಂದು ಹೇಳಿ ಅರ್ಜುನನನ್ನು ಬೀಳ್ಕೊಟ್ಟನು.

ಅರ್ಥ:
ಸರಳ: ಸರಾಗ; ಸಾಂಗೋಪಾಂಗ: ವಿಧಿವತ್ತಾದುದು, ಶಾಸ್ತ್ರೋಕ್ತವಾದುದು; ಅರುಹು: ತಿಳಿಸು, ಹೇಳು; ಶಕ್ರ: ಇಂದ್ರ; ಪುರ: ಊರು; ನಡೆ: ಚಲಿಸು; ಉತ್ತರೋತ್ತರ: ಏಳಿಗೆ, ಬೆಳವಣಿಗೆ; ಕಾರ್ಯ: ಕೆಲಸ; ಹರಿ: ವಿಷ್ಣು; ಸಹಾಯ: ನೆರವು; ಸತ್ವ: ಸಾರ; ಪರಮ: ಶ್ರೇಷ್ಠ; ರೂಪ: ಆಕಾರ; ಅರಿ: ತಿಳಿ; ಮಹೇಶ: ಶಂಕರ; ಬೀಳ್ಕೊಟ್ಟು: ತೆರಳು;

ಪದವಿಂಗಡಣೆ:
ಸರಳ +ಸಾಂಗೋಪಾಂಗವನು+ ನಿನಗ್
ಅರುಹಿದೆನು +ನೀನಿನ್ನು +ಶಕ್ರನ
ಪುರಕೆ+ ನಡೆ +ನಿನ್+ಉತ್ತರೋತ್ತರ +ಕಾರ್ಯಗತಿಗಳಿಗೆ
ಹರಿ +ಸಹಾಯನು +ನಮ್ಮ +ಸತ್ವದ
ಪರಮರೂಪ+ಆತನು +ಕಣಾ +ನೀನ್
ಅರಿದಿರೆಂದು +ಮಹೇಶ +ಬೀಳ್ಕೊಟ್ಟನು+ ಧನಂಜಯನ

ಅಚ್ಚರಿ:
(೧) ನಿನಗರುಹಿದೆನು, ನೀನಿನ್ನು, ನಿನ್ನುತ್ತರೋತ್ತರ, ನೀನರಿದಿರೆಂದು – ನೀನ್ ಪದದ ಬಳಕೆ

ಪದ್ಯ ೧೦೭: ಗಣಪತಿ ಮತ್ತು ಷಣ್ಮುಖರು ಅರ್ಜುನನನ್ನು ಹೇಗೆ ಆಶೀರ್ವದಿಸಿದರು?

ಕರಿಮುಖನ ಷಣ್ಮುಖನ ಚರಣ
ಕ್ಕೆರಗಿ ಸ್ತುತಿಸುತ್ತಿರಲು ಪಾರ್ಥನ
ಪರಮ ಭಕ್ತಿಗೆ ಮೆಚ್ಚಿ ತೆಗೆದಪ್ಪಿದರು ಕರುಣದಲಿ
ವರಮಹಾಸ್ತ್ರಂಗಳನು ಮಂತ್ರೋ
ತ್ಕರವನವರೊಲಿದಿತ್ತು ಗೆಲು ನೀ
ಧುರದೊಳಹಿತರನೆಂದು ಹರಸಿದರಾ ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೧೦೭ ಪದ್ಯ)

ತಾತ್ಪರ್ಯ:
ಗಣಪತಿ, ಷಣ್ಮುಖರ ಪಾದಗಳಿಗೆ ಅರ್ಜುನನು ನಮಸ್ಕರಿಸಿ ಅವರನ್ನು ಸ್ತುತಿಸಿದನು. ಅರ್ಜುನನ ಭಕ್ತಿಗೆ ಮೆಚ್ಚಿ ಅವನನ್ನು ಪ್ರೀತಿಯಿಂದ ಅಪ್ಪಿಕೊಂಡರು. ಅವರು ಮಂತ್ರಾಸ್ತ್ರಗಳನ್ನು ಅವನಿಗೆ ಉಪದೇಶಿಸಿದರು, ಯುದ್ಧದಲ್ಲಿ ಶತ್ರುಗಳನ್ನು ಜಯಿಸು ಎಂದು ಆಶೀರ್ವದಿಸಿದರು.

ಅರ್ಥ:
ಕರಿ: ಆನೆ; ಮುಖ: ಆನನ; ಷಟ್: ಆರು; ಷಣ್ಮುಖ: ಆರುಮುಖದವ (ಸುಬ್ರಹ್ಮಣ್ಯ); ಚರಣ: ಪಾದ; ಎರಗು: ನಮಸ್ಕರಿಸು; ಪರಮ: ಶ್ರೇಷ್ಠ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮೆಚ್ಚು: ಒಲುಮೆ, ಪ್ರೀತಿ; ಅಪ್ಪು: ಆಲಂಗಿಸು; ಕರುಣೆ: ದಯೆ; ವರ: ಶ್ರೇಷ್ಠ; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಮಂತ್ರ: ಚಂದೋಬದ್ಧವಾದ ದೇವತಾ ಸ್ತುತಿ; ಉತ್ಕರ: ರಾಶಿ, ಸಮೂಹ; ಒಲಿ: ಬಯಸು, ಅಪೇಕ್ಷಿಸು; ಗೆಲು: ಜಯಿಸು; ಧುರ: ಯುದ್ಧ, ಕಾಳಗ; ಅಹಿತ: ವೈರಿ; ಹರಸು: ಆಶೀರ್ವದಿಸು;

ಪದವಿಂಗಡಣೆ:
ಕರಿ+ಮುಖನ +ಷಣ್ಮುಖನ+ ಚರಣಕ್
ಎರಗಿ+ ಸ್ತುತಿಸುತ್ತಿರಲು +ಪಾರ್ಥನ
ಪರಮ+ ಭಕ್ತಿಗೆ+ ಮೆಚ್ಚಿ +ತೆಗೆದಪ್ಪಿದರು+ ಕರುಣದಲಿ
ವರ+ಮಹಾಸ್ತ್ರಂಗಳನು+ ಮಂತ್ರೋ
ತ್ಕರವನ್+ಅವರ್+ಒಲಿದಿತ್ತು +ಗೆಲು +ನೀ
ಧುರದೊಳ್+ಅಹಿತರನೆಂದು+ ಹರಸಿದರಾ+ ಧನಂಜಯನ

ಅಚ್ಚರಿ:
(೧) ಮುಖ ಪದದ ಬಳಕೆ – ಕರಿಮುಖ, ಷಣ್ಮುಖ