ಪದ್ಯ ೧೦೬: ಅಂಜನಾಸ್ತ್ರದ ಮಹಿಮೆ ಎಂತಹುದು?

ಒಂದು ದಶ ಶತ ಸಾವಿರದ ಹೆಸ
ರಿಂದ ಲಕ್ಷವು ಕೋಟಿಯಗಣಿತ
ದಿಂದ ನಿನಗಾಂತದಟರಿಪುಗಳ ತಿಂದು ತೇಗುವುದು
ಬಂದು ಬೆಸನನು ಬೇಡುವುದು ತಾ
ನೊಂದು ಶರರೂಪಾಗೆನುತ ಮುದ
ದಿಂದ ವರ ಮಂತ್ರೋಪದೇಶವನಿತ್ತಳರ್ಜುನಗೆ (ಅರಣ್ಯ ಪರ್ವ, ೭ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ಪಾರ್ವತಿಯು, ಅರ್ಜುನ ಈ ಅಸ್ತ್ರವು ನಿನ್ನ ಬಳಿಗೆ ಬಂದು ಬಾಣದ ರೂಪದಿಂದ ಕಾಣಿಸಿಕೊಳ್ಳುತ್ತದೆ. ಇದರ ಪ್ರಯೊಗ ಮಾಡಿದರೆ ಒಂದು, ಹತ್ತು ನೂರು, ಸಾವಿರ, ಲಕ್ಷ, ಖೋಟಿ, ಅನಂತ ಶತ್ರುಗಳನ್ನು ನುಂಗಿ ತೇಗುತ್ತದೆ, ಎಂದು ಹೇಳಿ ಮಂತ್ರವನ್ನು ಅರ್ಜುನನಿಗೆ ಉಪದೇಶಿಸಿದಳು.

ಅರ್ಥ:
ದಶ: ಹತ್ತು; ಶತ: ನೂರು; ಸಾವಿರ: ಸಹಸ್ರ; ಹೆಸರು: ನಾಮ; ಅಗಣಿತ: ಲೆಕ್ಕವಿಲ್ಲದ; ರಿಪು: ವೈರಿ; ತೇಗು: ತೇಗುವಿಕೆ, ಢರಕೆ; ಬೆಸಸು: ಹೇಳು, ಆಜ್ಞಾಪಿಸು; ಬೇಡು: ಕೇಳು, ಯಾಚಿಸು, ಬಯಸು; ಶರ: ಬಾಣ; ಮುದ: ಸಂತಸ; ವರ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ;

ಪದವಿಂಗಡಣೆ:
ಒಂದು +ದಶ +ಶತ +ಸಾವಿರದ+ ಹೆಸ
ರಿಂದ +ಲಕ್ಷವು +ಕೋಟಿ+ಅಗಣಿತ
ದಿಂದ +ನಿನಗಾಂತದಟ+ರಿಪುಗಳ +ತಿಂದು +ತೇಗುವುದು
ಬಂದು +ಬೆಸನನು +ಬೇಡುವುದು+ ತಾ
ನೊಂದು +ಶರ+ರೂಪಾಗೆನುತ+ ಮುದ
ದಿಂದ +ವರ +ಮಂತ್ರೋಪದೇಶವನ್+ಇತ್ತಳ್+ಅರ್ಜುನಗೆ

ಅಚ್ಚರಿ:
(೧) ಸಂಖ್ಯೆಯ ಬಳಕೆ – ೧, ೧೦, ೧೦೦, ೧೦೦೦, ೧,೦೦,೦೦೦, ೧,೦೦,೦೦,೦೦೦

ಪದ್ಯ ೧೦೫: ಪಾರ್ವತಿಯು ಅರ್ಜುನನಿಗೆ ಯಾವ ಅಸ್ತ್ರವನ್ನು ನೀಡಿದಳು?

ಕಂಜನಾಭನ ಮೈದುನನೆ ಬಾ
ಅಂಜದಿರು ನಿನಗಾಂತ ರಿಪುಗಳ
ಭಂಜಿಸುವ ಸಾಮರ್ಥ್ಯದನುವನು ತೆಳೆದು ರಂಜಿಸುವ
ಅಂಜನಾಸ್ತ್ರವನಿತ್ತೆ ಮಗನೆ ಧ
ನಂಜಯನೆ ನಿನಗೆನುತ ಕರುಣದಿ
ಮಂಜುಳಾರವದಿಂದ ತಚ್ಛಸ್ತ್ರವನು ಬೆಸಸಿದಳು (ಅರಣ್ಯ ಪರ್ವ, ೭ ಸಂಧಿ, ೧೦೫ ಪದ್ಯ)

ತಾತ್ಪರ್ಯ:
ಪಾರ್ವತೀ ದೇವಿಯು ಶ್ರೀಕೃಷ್ಣನ ಮೈದುನನೇ, ಹೆದರಬೇಡ, ಬಾ ನಿನ್ನೊಡನೆ ಯುದ್ಧಕ್ಕೆ ಬರುವ ಶತ್ರುಗಳನ್ನು ಸಂಹರಿಸಬಲ್ಲ ಶಕ್ತಿಯುಳ್ಳ ಅಂಜಳಿಕಾಸ್ತ್ರವನ್ನು ನಿನಗೆ ಕೊಟ್ಟಿದ್ದೇನೆ ಎಂದು ಹೇಳಿ ತನ್ನ ಮಂಜುಳ ಧ್ವನಿಯಿಂದ ಆ ಅಸ್ತ್ರವನ್ನು ಅರ್ಜುನನಿಗೆ ಕೊಟ್ಟಳು.

ಅರ್ಥ:
ಕಂಜ: ತಾವರೆ, ಕಮಲ; ಕಂಜನಾಭ: ವಿಷ್ಣು; ಮೈದುನ: ಗಂಡ ಯಾ ಹೆಂಡತಿಯ ತಮ್ಮ; ಅಂಜು: ಹೆದರು; ರಿಪು: ವೈರಿ; ಭಂಜಿಸು: ನಿವಾರಿಸು; ಸಾಮರ್ಥ್ಯ: ದಕ್ಷತೆ, ಯೋಗ್ಯತೆ, ಬಲ; ತಳೆದು: ಪಡೆ, ಹೊಂದು; ರಂಜಿಸು: ಹೊಳೆ, ಪ್ರಕಾಶಿಸು; ಅಸ್ತ್ರ: ಆಯುಧ, ಶಸ್ತ್ರ; ಮಗ: ಸುತ; ಧನಂಜಯ: ಅರ್ಜುನ; ಕರುಣ: ದಯೆ; ಮಂಜುಳ: ಮನೋಹರ, ಸೊಗಸು; ರವ: ಶಬ್ದ, ಧ್ವನಿ; ಬೆಸಸು: ಆಜ್ಞಾಪಿಸು, ಹೇಳು;

ಪದವಿಂಗಡಣೆ:
ಕಂಜನಾಭನ +ಮೈದುನನೆ +ಬಾ
ಅಂಜದಿರು +ನಿನಗಾಂತ +ರಿಪುಗಳ
ಭಂಜಿಸುವ +ಸಾಮರ್ಥ್ಯದ್+ಅನುವನು +ತೆಳೆದು +ರಂಜಿಸುವ
ಅಂಜನಾಸ್ತ್ರವನಿತ್ತೆ +ಮಗನೆ+ ಧ
ನಂಜಯನೆ +ನಿನಗೆನುತ +ಕರುಣದಿ
ಮಂಜುಳಾ+ರವದಿಂದ+ ತಚ್ಛಸ್ತ್ರವನು+ ಬೆಸಸಿದಳು

ಅಚ್ಚರಿ:
(೧) ಪಾರ್ವತಿಯ ತಾಯಿಯ ಮಮತೆ – ಬಾ ಅಂಜದಿರು ನಿನಗಾಂತ ರಿಪುಗಳ
ಭಂಜಿಸುವ ಸಾಮರ್ಥ್ಯದನುವನು ತೆಳೆದು ರಂಜಿಸುವ ಅಂಜನಾಸ್ತ್ರವನಿತ್ತೆ
(೨) ಧನಂಜಯ, ಕಂಜನಾಭನ ಮೈದುನನೆ – ಅರ್ಜುನನನ್ನು ಕರೆದ ಪರಿ

ಪದ್ಯ ೧೦೪: ಅರ್ಜುನನು ಪಾರ್ವತಿಯನ್ನು ಹೇಗೆ ಪೂಜಿಸಿದನು?

ಗಿರಿಜೆ ತ್ರಿಜಗನ್ಮಾತೆ ರಕ್ಷಿಸು
ಪರಮ ಕರುಣಾಮೂರ್ತಿ ಜಗದೊಳು
ಸಿರಿ ಸರಸ್ವತಿ ಚಂಡಿ ದುರ್ಗಿಯರೆಂಬ ನಾಮದಲಿ
ಚರಿಸುತಿಹೆ ನಿನ್ನೇಕ ಮೂರ್ತಿಯ
ಪರಿಯನರಿವವರಾರೆನುತ ತ
ಚ್ಚರಣಯುಗಳಕ್ಕೆರಗಿ ಪುಳಕಿತನಾದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಮೂರು ಲೋಕಗಳ ಮಾತೆಯಾದ ಪಾರ್ವತೀದೇವಿಯೇ, ಪರಮ ಕರುಣಾಮೂರ್ತಿಯೇ, ನನ್ನನ್ನು ಕಾಪಾಡು, ಲಕ್ಷ್ಮಿ, ಸರಸ್ವತಿ, ಚಂಡಿ, ದುರ್ಗಿಯರೆಂಬ ಹೆಸರುಗಳಿಂದ ಮೆರೆಯುವ ನೀನೊಬ್ಬಳೇ ಆದರೂ ಹಲವು ರೀತಿಗಳಿಂದ ಭಕ್ತರನ್ನುದ್ಧರಿಸುತ್ತಿರುವೆ, ನಿನ್ನ ರೀತಿಯನ್ನು ತಿಳಿಯ ಬಲ್ಲವರಾರು? ಎಂದು ಪಾರ್ವತಿಯನ್ನು ಅರ್ಜುನನು ಸ್ತುತಿಸಿ, ದೇವಿಯ ಪಾದಗಳಿಗೆ ನಮಸ್ಕರಿಸಿ ರೋಮಾಂಚನಗೊಂಡನು.

ಅರ್ಥ:
ಗಿರಿಜೆ: ಪಾರ್ವತಿ; ತ್ರಿ: ಮೂರು; ಜಗತ್ತು: ಪ್ರಪಂಚ; ಮಾತೆ: ತಾಯಿ; ರಕ್ಷಿಸು: ಕಾಪಾಡು; ಪರಮ: ಶ್ರೇಷ್ಠ; ಕರುಣೆ: ದಯೆ; ಮೂರ್ತಿ: ಸ್ವರೂಪ; ಸಿರಿ: ಐಶ್ವರ್ಯ; ಸರಸ್ವತಿ: ಶಾರದೆ; ನಾಮ: ಹೆಸರು; ಚರಿಸು: ನಡೆ; ಪರಿ: ರೀತಿ; ಅರಿ: ತಿಳಿ; ಚರಣ: ಪಾದ; ಎರಗು: ನಮಸ್ಕರಿಸು; ಪುಳಕಿತ: ರೋಮಾಂಚನ;

ಪದವಿಂಗಡಣೆ:
ಗಿರಿಜೆ +ತ್ರಿಜಗನ್ಮಾತೆ+ ರಕ್ಷಿಸು
ಪರಮ +ಕರುಣಾಮೂರ್ತಿ +ಜಗದೊಳು
ಸಿರಿ+ ಸರಸ್ವತಿ+ ಚಂಡಿ +ದುರ್ಗಿಯರೆಂಬ+ ನಾಮದಲಿ
ಚರಿಸುತಿಹೆ+ ನಿನ್+ಏಕ+ ಮೂರ್ತಿಯ
ಪರಿಯನ್+ಅರಿವವರ್+ಆರೆನುತ+ ತ
ಚ್ಚರಣಯುಗಳಕ್+ಎರಗಿ +ಪುಳಕಿತನಾದನ್+ಆ+ ಪಾರ್ಥ

ಅಚ್ಚರಿ:
(೧) ಪಾರ್ವತಿಯ ನಾಮ – ಜಗದೊಳು ಸಿರಿ ಸರಸ್ವತಿ ಚಂಡಿ ದುರ್ಗಿಯರೆಂಬ ನಾಮದಲಿ
(೨) ಪಾರ್ವತಿಯನ್ನು ಕರೆದ ಪರಿ – ಗಿರಿಜೆ, ತ್ರಿಜಗನ್ಮಾತೆ, ಪರಮ ಕರುಣಾಮೂರ್ತಿ

ಪದ್ಯ ೧೦೩: ಶಿವನು ಅರ್ಜುನನಿಗೆ ವರವನ್ನು ನೀಡಲು ಯಾರನ್ನು ಕರೆದನು?

ಧರೆಗೆಸೆವ ಧರ್ಮಾರ್ಥ ಕಾಮೋ
ತ್ಕರವನನುಪಮ ಮೋಕ್ಷಪದವನು
ಧುರದೊಳಹಿತರ ಗೆಲುವ ಶೌರ್ಯೋನ್ನತಿಯ ಸಾಹಸವ
ಕರುಣಿಸಿದನಪ್ಪಿದನು ಕರೆದನು
ಗಿರಿತನುಜೆ ನೀನುದ್ಧರಿಪುಗೀ
ಪರಮಭಕ್ತನನೆನಲು ಕರುಣದೊಳೀಕ್ಷಿಸಿದಳಗಜೆ (ಅರಣ್ಯ ಪರ್ವ, ೭ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವ ಶೌರ್ಯಾಸಾಹಸಗಳನ್ನೂ ಶಿವನು ಅರ್ಜುನನಿಗೆ ಕರುಣಿಸಿ ಅಪ್ಪಿಕೊಂಡನು. ಬಳಿಕ ಶಿವನು ಗೌರಿದೇವಿಯನ್ನು ಕರೆದು, ಈ ಪರಮ ಭಕ್ತನನ್ನು ನೀನು ಉದ್ಧರಿಸು ಎಂದು ಹೇಳಲು, ಗಿರಿಜೆಯು ಕರುಣಾ ಕಟಾಕ್ಷದಿಂದ ಅರ್ಜುನನನ್ನು ನೋಡಿದಳು.

ಅರ್ಥ:
ಧರೆ: ಭೂಮಿ; ಎಸೆ: ಒಗೆ, ಹೊಡೆ; ಧರ್ಮ: ಧಾರಣ ಮಾಡಿದುದು, ನಿಯಮ; ಅರ್ಥ: ಪುರುಷಾರ್ಥ, ಸಂಪತ್ತು; ಕಾಮ: ಆಸೆ, ಬಯಕೆ; ಉತ್ಕರ: ರಾಶಿ, ಸಮೂಹ; ಅನುಪಮ: ಉತ್ಕೃಷ್ಟವಾದುದು; ಮೋಕ್ಷ: ಬಿಡುಗಡೆ, ವಿಮೋಚನೆ, ಮುಕ್ತಿ; ಪದ: ಸ್ಥಾನ; ಧುರ: ಕಾಳಗ; ಅಹಿತ: ವೈರಿ; ಗೆಲು: ಜಯಿಸು; ಶೌರ್ಯ: ಶಕ್ತಿ; ಉನ್ನತಿ: ಏಳಿಗೆ; ಸಾಹಸ: ಪರಾಕ್ರಮ, ಶೌರ್ಯ; ಕರುಣೆ: ದಯೆ; ಅಪ್ಪು: ಆಲಿಂಗನ; ಕರೆ: ಬರೆಮಾಡು; ಗಿರಿ: ಬೆಟ್ಟ; ತನುಜೆ: ಮಗಳು; ಗಿರಿತನುಜೆ: ಪಾರ್ವತಿ; ಉದ್ಧಾರ: ಮೇಲಕ್ಕೆ ಎತ್ತುವುದು; ಪರಮ: ಶ್ರೇಷ್ಠ; ಭಕ್ತ: ಆರಾಧಕ; ಕರುಣೆ: ದಯೆ; ಈಕ್ಷಿಸು: ನೋಡು ಅಗಜೆ: ಪಾರ್ವತಿ; ಅಗ:ಬೆಟ್ಟ;

ಪದವಿಂಗಡಣೆ:
ಧರೆಗೆಸೆವ+ ಧರ್ಮಾರ್ಥ +ಕಾಮ
ಉತ್ಕರವನ್+ಅನುಪಮ +ಮೋಕ್ಷ+ಪದವನು
ಧುರದೊಳ್ +ಅಹಿತರ +ಗೆಲುವ +ಶೌರ್ಯ+ಉನ್ನತಿಯ +ಸಾಹಸವ
ಕರುಣಿಸಿದನ್+ಅಪ್ಪಿದನು +ಕರೆದನು
ಗಿರಿತನುಜೆ+ ನೀನ್+ಉದ್ಧರಿಪುಗ್+ಈ
ಪರಮ+ಭಕ್ತನನ್+ಎನಲು +ಕರುಣದೊಳ್+ಈಕ್ಷಿಸಿದಳ್+ಅಗಜೆ

ಅಚ್ಚರಿ:
(೧) ಗಿರಿತನುಜೆ, ಅಗಜೆ – ಪಾರ್ವತಿಯನ್ನು ಕರೆದ ಪರಿ

ಪದ್ಯ ೧೦೨: ಅರ್ಜುನನು ಯಾವುದರಲ್ಲಿ ಓಲಾಡಿದನು?

ಸುರಮುನೀಶರ ವೇದ ಮಂತ್ರೋ
ಚ್ಚರಣ ನಾದದ ಗರುಡ ಗಂಧ
ರ್ವರ ಮಹಾ ಸ್ತುತಿರವದ ತುಂಬುರ ನಾರದಾದಿಗಳ
ವರರಸಾನ್ವಿತ ಗೀತದೂರ್ವಶಿ
ಯರ ಸುನೃತ್ಯದ ದಿವ್ಯವಾದ್ಯದ
ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಶಿವನು ಅರ್ಜುನನನ್ನು ಅನುಗ್ರಹಿಸಿದ ಶುಭ ಸಂದರ್ಭದಲ್ಲಿ ದೇವರ್ಷಿಗಳು ವೇದ ಘೋಷ ಮಾಡಿದರು. ಗರುಡ ಗಂಧರ್ವರು ಮಹಾಸ್ತೋತ್ರಗಳಿಂದ ಶಿವನನ್ನು ಸ್ತುತಿಸಿದರು. ತುಂಬುರನಾರದರು ದಿವ್ಯ ಗೀತೆಯನ್ನು ಹಾಡಿದರು. ಊರ್ವಶಿಯೇ ಮೊದಲಾದ ಅಪ್ಸರೆಯರು ನರ್ತಿಸಿದರು. ಶಿವನ ಕರುಣಾ ಸಮುದ್ರದಲ್ಲಿ ಅರ್ಜುನನು ಸುಖದಿಂದ ವಿಹರಿಸಿದನು.

ಅರ್ಥ:
ಸುರ: ದೇವತೆ; ಮುನಿ: ಋಷಿ; ಈಶ: ಒಡೆಯ, ಪ್ರಭು; ವೇದ: ಜ್ಞಾನ; ಮಂತ್ರ: ಛಂದೋಬದ್ಧವಾದ ದೇವತಾ ಸ್ತುತಿ; ಸ್ತುತಿ: ಸ್ತೋತ್ರ, ಹೊಗಳಿಕೆ; ರವ: ಶಬ್ದ; ಆದಿ: ಮುಂತಾದ; ವರ: ಶ್ರೇಷ್ಠ; ರಸ: ಸಾರ; ಅನ್ವಿತ: ಒಡಗೂಡಿದ; ಗೀತ: ಹಾಡು; ಊರ್ವಶಿ: ಅಪ್ಸರೆಯ ಹೆಸರು; ನೃತ್ಯ: ನಾಟ್ಯ; ದಿವ್ಯ: ಶ್ರೇಷ್ಠ; ವಾದ್ಯ: ಸಂಗೀತದ ಸಾಧನ; ಹರ: ಶಿವ; ಕರುಣೆ: ದಯೆ; ಅಂಬುಧಿ: ಸಾಗರ; ಓಲಾಡು: ಸುಖದಿಂದ ಆಡು; ಕಲಿ: ಶೂರ;

ಪದವಿಂಗಡಣೆ:
ಸುರ+ಮುನೀಶರ+ ವೇದ +ಮಂತ್ರ
ಉಚ್ಚರಣ +ನಾದದ +ಗರುಡ +ಗಂಧ
ರ್ವರ +ಮಹಾ +ಸ್ತುತಿ+ರವದ +ತುಂಬುರ +ನಾರದಾದಿಗಳ
ವರ+ರಸಾನ್ವಿತ+ ಗೀತದ್+ ಊರ್ವಶಿ
ಯರ+ ಸುನೃತ್ಯದ +ದಿವ್ಯ+ವಾದ್ಯದ
ಹರನ+ ಕರುಣಾಂಬುಧಿಯಲ್+ಓಲಾಡಿದನು +ಕಲಿಪಾರ್ಥ

ಅಚ್ಚರಿ:
(೧) ಶಿವನ ಕರುಣೆಯನ್ನು ವಿವರಿಸುವ ಪರಿ – ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ