ಪದ್ಯ ೯೯: ಅರ್ಜುನನು ಪಾಶುಪತಾಸ್ತ್ರವನ್ನು ಹೇಗೆ ಪಡೆದನು?

ಸರಸಿಯಲಿ ಮೀಂದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿಂದನು ಭಾವಶುದ್ಧಿಯಲಿ
ಸರಳ ಸಾಂಗೋಪಾಂಗ ಮಂತ್ರೋ
ಚ್ಚರಣ ಸಂಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ (ಅರಣ್ಯ ಪರ್ವ, ೭ ಸಂಧಿ, ೯೯ ಪದ್ಯ)

ತಾತ್ಪರ್ಯ:
ಸರೋವರದಲ್ಲಿ ಸ್ನಾನಮಾಡಿ, ಆಚಮನವನ್ನು ಮಾಡಿ ಅರ್ಜುನನು ಶಿವನ ಚರಣಕ್ಕೆ ನಮಸ್ಕರಿಸಿ ಭಾವ ಶುದ್ಧಿಯಿಂದ ಎದ್ದು ನಿಂತನು. ಪಾಶುಪತಾಸ್ತ್ರ ಮಂತ್ರವನ್ನು ಅಂಗ ಉಪಾಂಗಗಳ ಸಹಿತವಾಗಿ, ಉಚ್ಚರಣೆ ಸಂಹೃತಿ ಮೋಕ್ಷಗಳ ಸಹಿತವಾಗಿ ಶಿವನು ಅರ್ಜುನನಿಗೆ ರಹಸ್ಯವಾಗಿ ಬೋಧಿಸಿದನು.

ಅರ್ಥ:
ಸರಸಿ: ನೀರು; ಮಿಂದು: ಮುಳುಗು; ಆಚಮನ: ವೈದಿಕಕರ್ಮಗಳನ್ನು ಮಾಡುವಾಗ ಶುದ್ಧಿಗಾಗಿ ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಕುಡಿಯುವುದು; ವಿಸ್ತರ: ವಿಸ್ತಾರ, ವಿವರವಾಗಿ; ಶೂಲಿ: ಶಿವ; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ನಿಂದು: ನಿಲ್ಲು; ಭಾವ: ಮನೋಧರ್ಮ, ಭಾವನೆ; ಶುದ್ಧ: ನಿರ್ಮಲ; ಸರಳ: ಬಾಣ; ಸಾಂಗೋಪಾಂಗ: ವಿಧಿವತ್ತಾದುದು, ಶಾಸ್ತ್ರೋಕ್ತವಾದುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಚ್ಚರಣ: ಹೇಳುವಿಕೆ; ಸಂಹೃತಿ: ನಾಶ, ಸಂಹಾರ; ಮೋಕ್ಷ: ಬಿಡುಗಡೆ; ವಿಸ್ತರಿಸು: ವಿವರವಾಗಿ ಹೇಳು; ರಹಸ್ಯ: ಗುಪ್ತ; ಕೊಟ್ಟು: ನೀಡು; ಶರ: ಬಾಣ;

ಪದವಿಂಗಡಣೆ:
ಸರಸಿಯಲಿ +ಮಿಂದ್+ಆಚಮನ +ವಿ
ಸ್ತರಣೆಯೆಲ್ಲವ+ ಮಾಡಿ +ಶೂಲಿಯ
ಚರಣದಲಿ+ ಮೈಯಿಕ್ಕಿ+ ನಿಂದನು +ಭಾವ+ಶುದ್ಧಿಯಲಿ
ಸರಳ+ ಸಾಂಗೋಪಾಂಗ+ ಮಂತ್ರೋ
ಚ್ಚರಣ+ ಸಂಹೃತಿ +ಮೋಕ್ಷವನು +ವಿ
ಸ್ತರಿಸುತ +ರಹಸ್ಯದಲಿ+ ಕೊಟ್ಟನು +ಪಾಶುಪತ+ ಶರವ

ಅಚ್ಚರಿ:
(೧) ಚರಣ ಪದದ ಬಳಕೆ – ಶೂಲಿಯ ಚರಣ, ಮಂತ್ರೋ ಚ್ಚರಣ
(೨) ವಿಸ್ತರಣೆ, ವಿಸ್ತರಿಸು – ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ