ಪದ್ಯ ೯೮: ಪಾಶುಪತಾಸ್ತ್ರದ ಮಹತ್ವವೇನು?

ಸವಡಿನುಡಿಯುಂಟೇ ಚತುರ್ದಶ
ಭುವನದಾಹವ ದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ (ಅರಣ್ಯ ಪರ್ವ, ೭ ಸಂಧಿ, ೯೮ ಪದ್ಯ)

ತಾತ್ಪರ್ಯ:
ಆರ್ಜುನನ ಬೇಡಿಕೆಯನ್ನು ಕೇಳಿ, ಕೊಟ್ಟ ಮಾತಿಗೆ ಎರಡುಂಟೆ ಅರ್ಜುನ ಎಂದು ಹೇಳುತ್ತಾ, ಹದಿನಾಲ್ಕು ಲೋಕಗಳನ್ನು ಯುದ್ಧದಲ್ಲಿ ಮಣಿಸುವ ಶಕ್ತಿಯುಳ್ಳ ಬ್ರಹ್ಮ ಶಿರೋಸ್ತ್ರವನ್ನು ಕೊಡುವೆ, ದೇವ ದೈತ್ಯ ಸರ್ಪಗಳೆ ಮೊದಲಾದವರು ಎದುರಿಸಿದರೂ ಇದು ಆ ಶಕ್ತಿಗಿಂತ ಹೆಚ್ಚಾಗಿ ಇದಿರು ನಿಂತವರನ್ನು ಮಣಿಸುತ್ತದೆ, ನೀನು ಉದ್ದೇಶಿಸಿದುದೇ ಇದಕ್ಕೆ ಆಹುತಿ, ಅಷ್ಟು ಬಲಶಾಲಿಯಾದ ಅಸ್ತ್ರವಿದು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ಸವಡಿ: ಸುಳ್ಳು; ನುಡಿ: ಮಾತು; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಆಹವ: ಯುದ್ಧ; ದಕ್ಷ: ಸಮರ್ಥ; ಬಾಣ: ಶರ; ಕೊಟ್ಟೆ: ನೀಡು; ಮಗ: ಸುತ; ಬೊಮ್ಮ: ಬ್ರಹ್ಮ; ಮಹಾ: ಶ್ರೇಷ್ಠ; ಶರ: ಬಾಣ; ದಿವಿಜ: ದೇವತೆ; ದನುಜ: ದಾನವ, ರಾಕ್ಷಸ; ಭುಜಂಗ: ಹಾವು, ಉರಗ; ಆದಿ: ಮೊದಲಾದ; ಅವಗಡಿಸು: ಕಡೆಗಣಿಸು, ಸೋಲಿಸು; ಉರೆ: ಅತಿಶಯವಾಗಿ; ಹೆಚ್ಚು: ಜಾಸ್ತಿ; ಸಂಭವಿಸು: ಉಂಟಾಗು, ಒದಗಿಬರು; ಆಹುತಿ: ಬಲಿ; ಉದ್ದಂಡ: ಪ್ರಬಲವಾದ, ಶ್ರೇಷ್ಠ; ಬಲ: ಶಕ್ತಿ;

ಪದವಿಂಗಡಣೆ:
ಸವಡಿ+ನುಡಿಯುಂಟೇ +ಚತುರ್ದಶ
ಭುವನದ್+ಆಹವ+ ದಕ್ಷವ್+ಈ+ ಬಾ
ಣವನು +ಕೊಟ್ಟೆನು +ಮಗನೆ+ ಬೊಮ್ಮಶಿರೋ+ಮಹಾಶರವ
ದಿವಿಜ+ ದನುಜ+ ಭುಜಂಗಮ್+ಆದಿಗಳ್
ಅವಗಡಿಸಲ್+ಉರೆ +ಹೆಚ್ಚುವುದು +ಸಂ
ಭವಿಸಿದ್+ಆಹುತಿಯೆಂದು+ ಶರವ್+ಉದ್ದಂಡ+ ಬಲವೆಂದ

ಅಚ್ಚರಿ:
(೧) ಪಾಶುಪತಾಸ್ತ್ರ ಎಂದು ಹೇಳಲು – ಬೊಮ್ಮಶಿರೋಮಹಾಶರವ
(೨) ಪಾಶುಪತಾಸ್ತ್ರದ ಮಹಿಮೆ – ಸಂಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ

ನಿಮ್ಮ ಟಿಪ್ಪಣಿ ಬರೆಯಿರಿ