ಪದ್ಯ ೧೦೧: ಶಿವನ ಸ್ಪರ್ಶದಿಂದ ಅರ್ಜುನನು ಹೇಗೆ ಹೊಳೆದನು?

ಹರನ ಕೋಮಲಪಾಣಿ ಕಮಲ
ಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗದಂದದಲಿ
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಛವಿಯ ಚಾರು
ಸ್ಫುರಣದಲಿ ಬೋಳೈಸಿದುದು ಸುರನರರ ಕಣ್ಮನವ (ಅರಣ್ಯ ಪರ್ವ, ೭ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಶಿವನ ಕೋಮಲ ಹಸ್ತ ಕಮಲಗಳ ಸ್ಪರ್ಶದ ಅಮೃತದಿಂದ ಆವೃತವಾದ ಅರ್ಜುನನ ದೇಹವು ಪೊರೆ ಕಳಚಿದ ಹಾವಿನಂತೆ ಕಾಣಿಸಿತು. ದಿವ್ಯ ತೇಜಸ್ಸಿನ ಲಹರಿಯ ಕಾಂತಿಯು ಸ್ಫುರಿಸುತ್ತಿರಲು ಅರ್ಜುನನ ಕಾಂತಿಯು ನೋಡುತ್ತಿದ್ದ ದೇವತೆಗಳ ಮನುಷ್ಯರ ನೋಟಗಳನ್ನು ಆಕರ್ಷಿಸಿತು.

ಅರ್ಥ:
ಹರ: ಶಿವ; ಕೋಮಲ: ಮೃದು; ಪಾಣಿ: ಹಸ್ತ; ಕಮಲ: ಪದ್ಮ; ಸ್ಪರುಷ: ತಾಗು; ಪೀಯೂಷ: ಅಮೃತ, ಸುಧೆ; ಮುಳುಗು: ಮಿಂದು; ನರ: ಅರ್ಜುನ; ತನು: ದೇಹ; ನಿರ್ಮೋಕ: ಪೊರೆಬಿಡುವುದು; ಮುಕ್ತ: ಬಿಡುಗಡೆ ಹೊಂದಿದವನು; ಭುಜಂಗ: ಹಾವು; ಕಿರಣ: ರಶ್ಮಿ; ಲಹರಿ: ಅಲೆ, ರಭಸ; ಲಳಿ: ರಭಸ, ಆವೇಗ; ದಿವ್ಯ: ಶ್ರೇಷ್ಠ; ಉತ್ಕರ: ರಾಶಿ, ಸಮೂಹ; ಚಪಲ: ಚಂಚಲ; ಚ್ಛವಿ: ಕಾಂತಿ; ಚಾರು: ಸುಂದರ; ಸ್ಫುರಣ: ಹೊಳೆಯುವುದು, ಮಿನುಗು; ಬೋಳೈಸು: ಸಂತೈಸು, ಸಮಾಧಾನ ಮಾಡು; ಸುರ: ದೇವತೆ; ನರ: ಮನುಷ್ಯ; ಕಣ್ಣು: ನಯನ; ಮನ: ಮನಸ್ಸು;

ಪದವಿಂಗಡಣೆ:
ಹರನ +ಕೋಮಲಪಾಣಿ +ಕಮಲ
ಸ್ಪರುಶ +ಪೀಯೂಷದಲಿ +ಮುಳುಗಿದ
ನರನ +ತನು+ ನಿರ್ಮೋಕ +ಮುಕ್ತ +ಭುಜಂಗದಂದದಲಿ
ಕಿರಣ+ ಲಹರಿಯ +ಲಳಿಯ +ದಿವ್ಯೋ
ತ್ಕರದ+ ಚಪಲ+ಚ್ಛವಿಯ +ಚಾರು
ಸ್ಫುರಣದಲಿ+ ಬೋಳೈಸಿದುದು +ಸುರ+ನರರ+ ಕಣ್ಮನವ

ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಪಲಚ್ಛವಿಯ ಚಾರುಸ್ಫುರಣದಲಿ
(೨) ಉಪಮಾನದ ಪ್ರಯೋಗ – ಹರನ ಕೋಮಲಪಾಣಿ ಕಮಲಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗದಂದದಲಿ

ಪದ್ಯ ೧೦೦: ಅರ್ಜುನನ ಮನದಮೇಲೆ ಯಾರು ದಾಳಿ ಮಾಡಿದರು?

ಜಗವುಘೇಯೆಂದುದು ಜಯಧ್ವನಿ
ಗಗನದಲಿ ಗಾಢಿಸಿತು ಹೂವಿನ
ಮುಗುಳ ಸರಿವಳೆ ಸುರಿದುದೀಶ್ವರನಂಘ್ರಿಕಮಲದಲಿ
ಢಗೆಯತಳಿ ಮುರಿದುದು ಮನೋರಥ
ದಗಳು ತುಂಬಿತು ನರನ ಮನ ಬು
ದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ (ಅರಣ್ಯ ಪರ್ವ, ೭ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಈ ಅಮೋಘ ಯೋಗವನ್ನು ಕಂಡು ಜಗತ್ತು ಉಘೇ ಉಘೇ ಎಂದು ಜಯಘೋಷವನ್ನು ಕೂಗಿತು, ಜಯಧ್ವನಿಯು ಆಗಸದಲ್ಲಿ ಮೊಳಗಿತು, ಹೂಮೊಗ್ಗುಗಳ ಮಳೆ ಶಿವನ ಪಾದಕಮಲಗಳ ಮೇಲೆ ಬಿದ್ದವು. ಅರ್ಜುನನ ಆಯಾಸ ಹಾರಿಹೋಯಿತು, ಅವನ ಮನೋರಥದ ಅಗಳು ತುಂಬಿತು, ಹರ್ಷೋತ್ಸವಗಳು ಅರ್ಜುನನ ಮನಸ್ಸು ಬುದ್ಧಿಗಳನ್ನು ತುಂಬಿದವು.

ಅರ್ಥ:
ಜಗವು: ಪ್ರಪಂಚ; ಉಘೇ: ಜಯ; ಧ್ವನಿ: ಶಬ್ದ, ರವ; ಗಗನ: ಆಗಸ; ಗಾಢಿಸು: ಮೊಳಗು, ತುಂಬಿಕೊಳ್ಳು; ಹೂವು: ಪುಷ್ಪ; ಮುಗುಳ: ಮೂಡು, ಮೊಳೆ; ಸರಿವಳೆ: ಸುರಿ; ಈಶ್ವರ: ಶಂಕರ; ಅಂಘ್ರಿ: ಪಾದ; ಕಮಲ: ಪದ್ಮ; ಢಗೆ: ಕಾವು, ದಗೆ; ಮುರಿ: ಸೀಳು, ಬಿರುಕು; ಮನೋರಥ: ಇಚ್ಛೆ, ಆಸೆ; ಅಗಳು: ಕೋಟೆಯ ಕಂದಕ; ತುಂಬು: ಪೂರ್ಣಗೊಳ್ಳು; ನರ: ಅರ್ಜುನ; ಮನ: ಮನಸ್ಸು, ಚಿತ್ತ; ಬುದ್ಧಿ: ತಿಳಿವು, ಅರಿವು; ನೆರೆ: ಸಮೀಪ; ಸಿಲುಕು: ಬಂಧನಕ್ಕೊಳಗಾದುದು; ಹರುಷ: ಸಂತಸ; ಉತ್ಸವ: ಹಬ್ಬ; ದಾಳಿ: ಆಕ್ರಮಣ, ಮುತ್ತಿಗೆ;

ಪದವಿಂಗಡಣೆ:
ಜಗುವ್+ ಉಘೇಯೆಂದುದು+ ಜಯಧ್ವನಿ
ಗಗನದಲಿ+ ಗಾಢಿಸಿತು+ ಹೂವಿನ
ಮುಗುಳ +ಸರಿವಳೆ+ ಸುರಿದುದ್+ಈಶ್ವರನ್+ಅಂಘ್ರಿ+ಕಮಲದಲಿ
ಢಗೆಯತಳಿ+ ಮುರಿದುದು +ಮನೋರಥದ್
ಅಗಳು +ತುಂಬಿತು +ನರನ +ಮನ +ಬು
ದ್ಧಿಗಳು+ ನೆರೆ +ಸಿಲುಕಿತ್ತು+ ಹರುಷೋತ್ಸವದ+ ದಾಳಿಯಲಿ

ಅಚ್ಚರಿ:
(೧) ಜಯ, ಉಘೇ – ಸಮನಾರ್ಥಕ ಪದ
(೨) ಮನೋರಥ ಈಡೇರಿರುವುದನ್ನು ವಿವರಿಸುವ ಪರಿ – ನರನ ಮನ ಬುದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ

ಪದ್ಯ ೯೯: ಅರ್ಜುನನು ಪಾಶುಪತಾಸ್ತ್ರವನ್ನು ಹೇಗೆ ಪಡೆದನು?

ಸರಸಿಯಲಿ ಮೀಂದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿಂದನು ಭಾವಶುದ್ಧಿಯಲಿ
ಸರಳ ಸಾಂಗೋಪಾಂಗ ಮಂತ್ರೋ
ಚ್ಚರಣ ಸಂಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ (ಅರಣ್ಯ ಪರ್ವ, ೭ ಸಂಧಿ, ೯೯ ಪದ್ಯ)

ತಾತ್ಪರ್ಯ:
ಸರೋವರದಲ್ಲಿ ಸ್ನಾನಮಾಡಿ, ಆಚಮನವನ್ನು ಮಾಡಿ ಅರ್ಜುನನು ಶಿವನ ಚರಣಕ್ಕೆ ನಮಸ್ಕರಿಸಿ ಭಾವ ಶುದ್ಧಿಯಿಂದ ಎದ್ದು ನಿಂತನು. ಪಾಶುಪತಾಸ್ತ್ರ ಮಂತ್ರವನ್ನು ಅಂಗ ಉಪಾಂಗಗಳ ಸಹಿತವಾಗಿ, ಉಚ್ಚರಣೆ ಸಂಹೃತಿ ಮೋಕ್ಷಗಳ ಸಹಿತವಾಗಿ ಶಿವನು ಅರ್ಜುನನಿಗೆ ರಹಸ್ಯವಾಗಿ ಬೋಧಿಸಿದನು.

ಅರ್ಥ:
ಸರಸಿ: ನೀರು; ಮಿಂದು: ಮುಳುಗು; ಆಚಮನ: ವೈದಿಕಕರ್ಮಗಳನ್ನು ಮಾಡುವಾಗ ಶುದ್ಧಿಗಾಗಿ ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಕುಡಿಯುವುದು; ವಿಸ್ತರ: ವಿಸ್ತಾರ, ವಿವರವಾಗಿ; ಶೂಲಿ: ಶಿವ; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ನಿಂದು: ನಿಲ್ಲು; ಭಾವ: ಮನೋಧರ್ಮ, ಭಾವನೆ; ಶುದ್ಧ: ನಿರ್ಮಲ; ಸರಳ: ಬಾಣ; ಸಾಂಗೋಪಾಂಗ: ವಿಧಿವತ್ತಾದುದು, ಶಾಸ್ತ್ರೋಕ್ತವಾದುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಚ್ಚರಣ: ಹೇಳುವಿಕೆ; ಸಂಹೃತಿ: ನಾಶ, ಸಂಹಾರ; ಮೋಕ್ಷ: ಬಿಡುಗಡೆ; ವಿಸ್ತರಿಸು: ವಿವರವಾಗಿ ಹೇಳು; ರಹಸ್ಯ: ಗುಪ್ತ; ಕೊಟ್ಟು: ನೀಡು; ಶರ: ಬಾಣ;

ಪದವಿಂಗಡಣೆ:
ಸರಸಿಯಲಿ +ಮಿಂದ್+ಆಚಮನ +ವಿ
ಸ್ತರಣೆಯೆಲ್ಲವ+ ಮಾಡಿ +ಶೂಲಿಯ
ಚರಣದಲಿ+ ಮೈಯಿಕ್ಕಿ+ ನಿಂದನು +ಭಾವ+ಶುದ್ಧಿಯಲಿ
ಸರಳ+ ಸಾಂಗೋಪಾಂಗ+ ಮಂತ್ರೋ
ಚ್ಚರಣ+ ಸಂಹೃತಿ +ಮೋಕ್ಷವನು +ವಿ
ಸ್ತರಿಸುತ +ರಹಸ್ಯದಲಿ+ ಕೊಟ್ಟನು +ಪಾಶುಪತ+ ಶರವ

ಅಚ್ಚರಿ:
(೧) ಚರಣ ಪದದ ಬಳಕೆ – ಶೂಲಿಯ ಚರಣ, ಮಂತ್ರೋ ಚ್ಚರಣ
(೨) ವಿಸ್ತರಣೆ, ವಿಸ್ತರಿಸು – ಪದದ ಬಳಕೆ

ಪದ್ಯ ೯೮: ಪಾಶುಪತಾಸ್ತ್ರದ ಮಹತ್ವವೇನು?

ಸವಡಿನುಡಿಯುಂಟೇ ಚತುರ್ದಶ
ಭುವನದಾಹವ ದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ (ಅರಣ್ಯ ಪರ್ವ, ೭ ಸಂಧಿ, ೯೮ ಪದ್ಯ)

ತಾತ್ಪರ್ಯ:
ಆರ್ಜುನನ ಬೇಡಿಕೆಯನ್ನು ಕೇಳಿ, ಕೊಟ್ಟ ಮಾತಿಗೆ ಎರಡುಂಟೆ ಅರ್ಜುನ ಎಂದು ಹೇಳುತ್ತಾ, ಹದಿನಾಲ್ಕು ಲೋಕಗಳನ್ನು ಯುದ್ಧದಲ್ಲಿ ಮಣಿಸುವ ಶಕ್ತಿಯುಳ್ಳ ಬ್ರಹ್ಮ ಶಿರೋಸ್ತ್ರವನ್ನು ಕೊಡುವೆ, ದೇವ ದೈತ್ಯ ಸರ್ಪಗಳೆ ಮೊದಲಾದವರು ಎದುರಿಸಿದರೂ ಇದು ಆ ಶಕ್ತಿಗಿಂತ ಹೆಚ್ಚಾಗಿ ಇದಿರು ನಿಂತವರನ್ನು ಮಣಿಸುತ್ತದೆ, ನೀನು ಉದ್ದೇಶಿಸಿದುದೇ ಇದಕ್ಕೆ ಆಹುತಿ, ಅಷ್ಟು ಬಲಶಾಲಿಯಾದ ಅಸ್ತ್ರವಿದು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ಸವಡಿ: ಸುಳ್ಳು; ನುಡಿ: ಮಾತು; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಆಹವ: ಯುದ್ಧ; ದಕ್ಷ: ಸಮರ್ಥ; ಬಾಣ: ಶರ; ಕೊಟ್ಟೆ: ನೀಡು; ಮಗ: ಸುತ; ಬೊಮ್ಮ: ಬ್ರಹ್ಮ; ಮಹಾ: ಶ್ರೇಷ್ಠ; ಶರ: ಬಾಣ; ದಿವಿಜ: ದೇವತೆ; ದನುಜ: ದಾನವ, ರಾಕ್ಷಸ; ಭುಜಂಗ: ಹಾವು, ಉರಗ; ಆದಿ: ಮೊದಲಾದ; ಅವಗಡಿಸು: ಕಡೆಗಣಿಸು, ಸೋಲಿಸು; ಉರೆ: ಅತಿಶಯವಾಗಿ; ಹೆಚ್ಚು: ಜಾಸ್ತಿ; ಸಂಭವಿಸು: ಉಂಟಾಗು, ಒದಗಿಬರು; ಆಹುತಿ: ಬಲಿ; ಉದ್ದಂಡ: ಪ್ರಬಲವಾದ, ಶ್ರೇಷ್ಠ; ಬಲ: ಶಕ್ತಿ;

ಪದವಿಂಗಡಣೆ:
ಸವಡಿ+ನುಡಿಯುಂಟೇ +ಚತುರ್ದಶ
ಭುವನದ್+ಆಹವ+ ದಕ್ಷವ್+ಈ+ ಬಾ
ಣವನು +ಕೊಟ್ಟೆನು +ಮಗನೆ+ ಬೊಮ್ಮಶಿರೋ+ಮಹಾಶರವ
ದಿವಿಜ+ ದನುಜ+ ಭುಜಂಗಮ್+ಆದಿಗಳ್
ಅವಗಡಿಸಲ್+ಉರೆ +ಹೆಚ್ಚುವುದು +ಸಂ
ಭವಿಸಿದ್+ಆಹುತಿಯೆಂದು+ ಶರವ್+ಉದ್ದಂಡ+ ಬಲವೆಂದ

ಅಚ್ಚರಿ:
(೧) ಪಾಶುಪತಾಸ್ತ್ರ ಎಂದು ಹೇಳಲು – ಬೊಮ್ಮಶಿರೋಮಹಾಶರವ
(೨) ಪಾಶುಪತಾಸ್ತ್ರದ ಮಹಿಮೆ – ಸಂಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ

ಪದ್ಯ ೯೭: ಅರ್ಜುನನು ಶಂಕರನನ್ನು ಏನು ಬೇಡಿದನು?

ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವಂಜದಿರಿನ್ನು ಸಾಕೆನೆ
ಸುಲಭ ನೀ ಭಕ್ತರಿಗೆ ಭಯವಿನ್ನೇಕೆ ನಮಗೆನುತ
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬ್ರಹ್ಮ ಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆಂದನು ನಗುತ ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೯೭ ಪದ್ಯ)

ತಾತ್ಪರ್ಯ:
ನೀನು ಬೇಡಿದ ವರವನ್ನು ನಾನು ಖಂಡಿತ ನೀಡುತ್ತೇನೆ ಎಂದು ಶಿವನು ಹೇಳಲು, ಅರ್ಜುನನು ನಗುತ್ತಾ ನನಗೆ ಪಾಶುಪತಾಸ್ತ್ರವನ್ನೂ, ಬ್ರಹ್ಮ ಶಿರೋಸ್ತ್ರವನ್ನೂ ಕೃಪೆಯಿಂದ ಕರುಣಿಸು ಎಂದು ಕೇಳಿದನು. ಶಂಕರನೇ, ನೀನು ಭಕ್ತಪರಾಧೀನ, ಭಕ್ತರಿಗೆ ಸುಲಭವಾಗಿ ಒಲಿಯುವವನು ಎಂದು ಸಂತಸದಿಂದ ಬಣ್ಣಿಸಿದನು.

ಅರ್ಥ:
ಸಲಿಸು: ದೊರಕಿಸಿ ಕೊಡು, ಪೂರೈಸು; ಬೇಡು: ಕೇಳು; ನಿಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಅಂಜು: ಹೆದರು; ಸಾಕು: ಕೊನೆ, ಬೆಳೆಸು; ಸುಲಭ: ಕಷ್ಟವಲ್ಲದುದು, ಸರಾಗ; ಭಕ್ತ: ಆರಾಧಕ; ಭಯ: ಅಂಜಿಕೆ; ಅಸ್ತ್ರ: ಶಸ್ತ್ರ; ವೆಗ್ಗಳ: ಶ್ರೇಷ್ಠ; ಶಿರಸ್ಸು: ತಲೆ; ಕೈಗೊಳಿಸು: ನೀಡು; ಕೃಪೆ: ದಯೆ; ನಗು: ಸಂತಸ; ಕಲಿ: ಶೂರ;

ಪದವಿಂಗಡಣೆ:
ಸಲಿಸುವೆನು +ನೀ +ಬೇಡಿದುದ+ ನಿ
ಸ್ಖಲಿತವ್+ಅಂಜದಿರ್+ಇನ್ನು +ಸಾಕೆನೆ
ಸುಲಭ+ ನೀ +ಭಕ್ತರಿಗೆ+ ಭಯವಿನ್ನೇಕೆ +ನಮಗೆನುತ
ಸಲಿಸು+ ಪಾಶುಪತಾಸ್ತ್ರವನು +ವೆ
ಗ್ಗಳದ +ಬ್ರಹ್ಮ +ಶಿರೋಸ್ತ್ರವನು +ಕೈ
ಗೊಳಿಸುವುದು +ಕೃಪೆಯುಳ್ಳೊಡೆಂದನು+ ನಗುತ+ ಕಲಿಪಾರ್ಥ

ಅಚ್ಚರಿ:
(೧) ಪಾಶುಪತಾಸ್ತ್ರ, ಬ್ರಹ್ಮಶಿರೋಸ್ತ್ರ – ಅಸ್ತ್ರಗಳನ್ನು ವಿವರಿಸುವ ಪರಿ