ಪದ್ಯ ೯೬: ಶಿವನು ಅರ್ಜುನನಿಗೆ ಏನನ್ನು ಹಿಂದಿರುಗಿಸಿದನು?

ನರನು ನೀ ಪೂರ್ವದಲಿ ಪೀತಾಂ
ಬರನ ವಿಮಲಾಂಶ ಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿಂತೆ ಬೇಡಿನ್ನು
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆಂ
ದುರುತರ ಪ್ರೇಮದಲಿ ಕೊಟ್ಟನು ಖಡ್ಗಶರಧನುವ (ಅರಣ್ಯ ಪರ್ವ, ೭ ಸಂಧಿ, ೯೬ ಪದ್ಯ)

ತಾತ್ಪರ್ಯ:
ಅರ್ಜುನ, ನೀನು ಹಿಂದೆ ವಿಷ್ಣುವಿನ ಅಂಶದಿಂದ ಅವತರಿಸಿದ್ದ ನರಮಹರ್ಷಿ. ನೀನು ನಮ್ಮ ಪರಮ ಭಕ್ತನು. ನಿನಗೆ ವರಗಳನ್ನು ಕೊಡುತ್ತೇನೆ. ಅದಕ್ಕೆ ಮೊದಲು ಯುದ್ಧದಲ್ಲಿ ಕಳೆದುಕೊಂಡ ನಿನ್ನ ಆಯುಧಗಳನ್ನೆಲ್ಲಾ ತೆಗೆದುಕೋ ಎಂದು ಗಾಂಡೀವಾದಿ ಸಮಸ್ತ ಆಯುಧಗಳನ್ನು ಹಿಂದಿರುಗಿಸಿದನು.

ಅರ್ಥ:
ನರ: ಅರ್ಜುನ; ಪೂರ್ವ: ಹಿಂದೆ; ಪೀತಾಂಬರ: ರೇಷ್ಮೆಯ ಬಟ್ಟೆ; ವಿಮಲ: ಶುದ್ಧ; ಅಂಶ: ಭಾಗ, ವಿವರ; ಪ್ರಸೂತ: ಜನಿಸು; ಪರಮ: ಶ್ರೇಷ್ಠ; ಋಷಿ: ಮುನಿ; ಭಕ್ತ: ಆರಾಧಕ; ಚಿಂತೆ: ಯೋಚನೆ; ಬೇಡ: ತೊರೆ; ಮಗ: ಸುತ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಮುನ್ನ: ಮೊದಲು; ಉರುತರ: ಹೆಚ್ಚು; ಪ್ರೇಮ: ಒಲವು; ಖಡ್ಗ: ಕತ್ತಿ; ಶರ: ಬಾಣ; ಧನು: ಧನಸ್ಸು;

ಪದವಿಂಗಡಣೆ:
ನರನು +ನೀ +ಪೂರ್ವದಲಿ +ಪೀತಾಂ
ಬರನ +ವಿಮಲಾಂಶ +ಪ್ರಸೂತನು
ಪರಮಋಷಿ+ ನೀನೆನ್ನ+ ಭಕ್ತನು +ಚಿಂತೆ +ಬೇಡಿನ್ನು
ವರದನಾದೆನು +ಮಗನೆ+ ಶಸ್ತ್ರ
ಉತ್ಕರವನ್+ಇದನ್+ಈ+ ಮುನ್ನ +ಕೊಳ್ಳೆಂದ್
ಉರುತರ +ಪ್ರೇಮದಲಿ +ಕೊಟ್ಟನು +ಖಡ್ಗ+ಶರ+ಧನುವ

ಪದ್ಯ ೯೫: ಶಿವನು ಅರ್ಜುನನಿಗೆ ಏನು ಹೇಳಿದನು?

ಕೂಡೆ ಮೈದಡವಿದನು ಮಿಗೆಮುಂ
ಡಾಡಿದನು ಮನನೋಯದಿರು ನೀ
ಮಾಡಿದುಪಹತಿಯೆಂಬುದೆಮಗರ್ಚನೆ ನಮಸ್ಕಾರ
ಕೋಡದಿರು ಕೊಂಕದಿರು ಭಕ್ತಿಗೆ
ನಾಡೆ ಮೆಚ್ಚಿದೆನೆನ್ನ ಚಿತ್ತಕೆ
ಖೋಡಿಯಿಲ್ಲೆಲೆ ಮಗನೆ ಗುಹಗಣಪತಿಗಳಾಣೆಂದ (ಅರಣ್ಯ ಪರ್ವ, ೭ ಸಂಧಿ, ೯೫ ಪದ್ಯ)

ತಾತ್ಪರ್ಯ:
ಅರ್ಜುನನ ಮೈದಡವಿ ತಲೆಯನ್ನು ನೇವರಿಸಿ, ಅರ್ಜುನ, ನೀನು ಮನನೋಯಬೇಡ, ಭಯಪಡಬೇಡ, ಏನೋ ಎಂತೋ ಎಂದು ಶಂಕಿಸಬೇಡ, ನೀನು ಯುದ್ಧದಲ್ಲಿ ನನ್ನ ಮೇಲೆ ಹೊಡೆದ ಹೊಡೆತಗಳೆಲ್ಲವೂ ನನಗೆ ಪೂಜೆ ನಮಸ್ಕಾರಗಳೆಂದು ಭಾವಿಸಿದ್ದೇನೆ. ನಿನ್ನ ಭಕ್ತಿಗೆ ಬಹಳವಾಗಿ ಮೆಚ್ಚಿದ್ದೇನೆ, ಗಣಪತಿ ಷಣ್ಮುಖರಾಣೆಯಾಗಿಯೂ ನಿನ್ನ ಮೇಲೆ ಸ್ವಲ್ಪವೂ ಕೋಪವಿಲ್ಲ ಎಂದು ಶಿವನು ಹೇಳಿದನು.

ಅರ್ಥ:
ಕೂಡೆ: ಜೊತೆ; ಮೈ: ತನು; ತಡವು: ನೇವರಿಸು; ಮುಂಡಾಡು: ಪ್ರೀತಿಸು; ಮನ: ಮನಸ್ಸು; ನೋವು: ಬೇನೆ, ಶೂಲೆ; ಉಪಹತಿ: ಹೊಡೆತ; ಅರ್ಚನೆ: ಪೂಜೆ; ನಮಸ್ಕಾರ: ವಂದನೆ; ಕೋಡು: ಕುಗ್ಗು; ಕೊಂಕು: ಡೊಂಕು, ವಕ್ರತೆ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮೆಚ್ಚು: ಒಲುಮೆ, ಪ್ರೀತಿ, ಇಷ್ಟ; ಚಿತ್ತ: ಮನಸ್ಸು; ಖೋಡಿ: ದುರುಳತನ, ನೀಚತನ; ಗುಹ: ಸುಬ್ರಹ್ಮಣ್ಯ; ಆಣೆ: ಪ್ರಮಾಣ; ಮಿಗೆ: ಮತ್ತು, ಅಧಿಕವಾದ;

ಪದವಿಂಗಡಣೆ:
ಕೂಡೆ +ಮೈದಡವಿದನು+ ಮಿಗೆ+ಮುಂ
ಡಾಡಿದನು+ ಮನನೋಯದಿರು+ ನೀ
ಮಾಡಿದ್+ಉಪಹತಿ+ಎಂಬುದ್+ಎಮಗ್+ಅರ್ಚನೆ +ನಮಸ್ಕಾರ
ಕೋಡದಿರು +ಕೊಂಕದಿರು+ ಭಕ್ತಿಗೆ
ನಾಡೆ+ ಮೆಚ್ಚಿದೆನ್+ಎನ್ನ +ಚಿತ್ತಕೆ
ಖೋಡಿಯಿಲ್ಲೆಲೆ +ಮಗನೆ +ಗುಹ+ಗಣಪತಿಗಳ್+ಆಣೆಂದ

ಅಚ್ಚರಿ:
(೧) ಶಿವನು ಭಕ್ತಿಪ್ರಿಯ ಎಂದು ಹೇಳಲು – ನೀಮಾಡಿದುಪಹತಿಯೆಂಬುದೆಮಗರ್ಚನೆ ನಮಸ್ಕಾರ

ಪದ್ಯ ೯೪: ಶಿವನು ಅರ್ಜುನನ್ನೇಕೆ ಅಪ್ಪಿಕೊಂಡನು?

ಧರಣಿಪತಿ ಕೇಳೀಶನೀತನ
ಹೊರೆಗೆ ಬಿಜಯಂಗೈದು ಪಾರ್ಥನ
ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು
ಮರುಳು ಮಗನೆ ಮಹಾ ತಪಸ್ಸಂ
ಚರಣೆಯಲಿನೊಂದೈಯೆನುತ ಕಡು
ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ (ಅರಣ್ಯ ಪರ್ವ, ೭ ಸಂಧಿ, ೯೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶಿವನು ಅರ್ಜುನನ ಬಳಿಗೆ ಬಂದು ಅರ್ಜುನನ ತಲೆಯನ್ನು ಹಿಡಿದು ಮೇಲಕ್ಕೆತ್ತಿ, ಅರ್ಜುನನನ್ನು ತನ್ನೆಡೆಗೆ ಸೆಳೆದುಕೊಂಡು ಬಿಗಿಯಪ್ಪಿ, ಮಗನೇ, ಮಹಾತಪಸ್ಸನ್ನು ಮಾಡಿ ನೊಂಡಿರುವೆ, ಇದೆಂತಹ ಹುಚ್ಚು, ಎನ್ನುತ್ತಾ ಕರುಣೆಯ ಸಮುದ್ರದಲ್ಲಿ ಅರ್ಜುನನನ್ನು ಅದ್ದಿದನು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಕೇಳು: ಆಲಿಸು; ಈಶ: ಶಂಕರ; ಹೊರೆ: ರಕ್ಷಣೆ, ಆಶ್ರಯ; ಬಿಜಯಂಗೈ: ದಯಮಾಡಿಸು, ಶಿರ: ತಲೆ; ಹಿಡಿ: ಬಂಧನ, ಸೆರೆ; ಬಿಗಿ: ಭದ್ರವಾಗಿ; ಅಪ್ಪು: ಆಲಂಗಿಸು; ಮರುಳು: ಹುಚ್ಚು, ಬುದ್ಧಿಭ್ರಮೆ; ಮಗ: ಸುತ; ಮಹಾ: ದೊಡ್ಡ; ತಪಸ್ಸು: ಧ್ಯಾನ; ಆಚರಣೆ: ಅನುಸರಿಸುವುದು; ನೊಂದು: ನೋವು, ಕಷ್ಟ; ಕಡು: ಬಹಳ; ಕರುಣೆ: ದಯೆ; ಅಮೃತ: ಸುಧೆ; ಸಮುದ್ರ: ಸಾಗರ; ಅದ್ದು: ತೋಯು; ನರ: ಅರ್ಜುನ;

ಪದವಿಂಗಡಣೆ:
ಧರಣಿಪತಿ +ಕೇಳ್+ಈಶನ್+ಈತನ
ಹೊರೆಗೆ +ಬಿಜಯಂಗೈದು +ಪಾರ್ಥನ
ಶಿರವ +ಹಿಡಿದೆತ್ತಿದನು +ಬಿಗಿಯಪ್ಪಿದನು+ ಬರಸೆಳೆದು
ಮರುಳು +ಮಗನೆ +ಮಹಾ +ತಪಸ್ಸಂ
ಚರಣೆಯಲಿನೊಂದೈಯೆನುತ ಕಡು
ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ

ಅಚ್ಚರಿ:
(೧) ಕರುಣಾದೃಷ್ಟಿ ತೋರಿದನು ಎಂದು ಹೇಳಲು – ಕಡುಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ

ಪದ್ಯ ೯೩: ಅರ್ಜುನನು ಶಿವನನನ್ನು ಹೇಗೆ ಹೊಗಳಿದನು?

ಹರನೆ ಗಂಗಾಧರನೆ ಗಿರಿಜಾ
ವರನೆ ಶಶಿಶೇಖರನೆ ದಕ್ಷಾ
ಧ್ವರಹರನೆ ಶಂಕರನೆ ನಿಜಭಕ್ತರ ಮನೋಹರನೆ
ಕರುಣಿಸುವುದುದ್ಧರಿಸುವುದು ಸಂ
ಹರಿಸು ಮತ್ಪರಿಭವವನೆಂದುರು
ತರದ ಭಕ್ತಿಯಲಂದು ಸೈಗೆಡೆದಿರ್ದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೯೩ ಪದ್ಯ)

ತಾತ್ಪರ್ಯ:
ಶಿವನೇ, ದೋಷಗಳನ್ನು ನಾಶಮಾಡುವ ಹರನೇ, ಗಂಗೆಯನ್ನು ಜಟೆಯಲ್ಲಿ ಧರಿಸಿದವನೇ, ಪಾರ್ವತೀಪತಿಯೇ, ಚಂದ್ರಶೇಖರನೇ, ದಕ್ಷಯಜ್ಞವನ್ನು ನಾಶಪಡಿಸಿದವನೇ, ಸುಖವನ್ನು ಮಂಗಳವನ್ನುಂಟುಮಾಡುವವನೇ, ಭಕ್ತರ ಮನೋಹರನೇ, ಕರುಣಿಸು, ಉದ್ಧರಿಸು, ನನ್ನ ಪರಿಭವವನ್ನು ಹೋಗಲಾಡಿಸು ಎಂದು ಬೇಡುತ್ತಾ ಅರ್ಜುನನು ಮಹಾಭಕ್ತಿಯಿಂದ ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು.

ಅರ್ಥ:
ಹರ: ಶಿವ; ಗಂಗಾಧರ: ಗಂಗೆಯನ್ನು ಧರಿಸಿರುವ; ಗಿರಿಜ: ಪಾರ್ವತಿ; ಶಶಿ: ಚಂದ್ರ; ಶೇಖರ: ಶಿರಸ್ಸಿನಲ್ಲಿ ಉಳ್ಳವ; ಅಧ್ವರ: ಯಾಗ; ಶಂಕರ: ಒಳ್ಳೆಯದನ್ನು ಮಾಡುವ; ನಿಜ: ದಿಟ; ಭಕ್ತ: ಆರಾಧಕ; ಮನೋಹರ: ಸುಂದರವಾದುದು; ಕರುಣಿಸು: ದಯೆತೋರು; ಉದ್ಧಾರ: ಏಳಿಗೆ; ಸಂಹರ: ನಾಶಪಡಿಸು; ಪರಿಭವ: ಸೋಲು; ಉರುತರ: ಅತಿಶ್ರೇಷ್ಠ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಸೈಗೆಡೆ:ಅಡ್ಡಬೀಳು;

ಪದವಿಂಗಡಣೆ:
ಹರನೆ +ಗಂಗಾಧರನೆ+ ಗಿರಿಜಾ
ವರನೆ +ಶಶಿಶೇಖರನೆ+ ದಕ್ಷ
ಅಧ್ವರ+ಹರನೆ +ಶಂಕರನೆ+ ನಿಜಭಕ್ತರ+ ಮನೋಹರನೆ
ಕರುಣಿಸುವುದ್+ಉದ್ಧರಿಸುವುದು +ಸಂ
ಹರಿಸು +ಮತ್+ಪರಿಭವವನೆಂದ್+ಉರು
ತರದ +ಭಕ್ತಿಯಲ್+ಅಂದು +ಸೈಗೆಡೆದಿರ್ದನಾ +ಪಾರ್ಥ

ಅಚ್ಚರಿ:
(೧) ಶಿವನನ್ನು ಕರೆದ ಬಗೆ – ಹರ, ಗಂಗಾಧರ, ಗಿರಿಜಾವರನೆ, ಶಶಿಶೇಖರ, ದಕ್ಷಾಧ್ವರಹರ, ಶಂಕರ

ಪದ್ಯ ೯೨: ಅರ್ಜುನನು ಶಿವನನ್ನು ಹೇಗೆ ಸ್ತುತಿಸಿದನು?

ದೇವ ಸುರ ದನುಜೇಶ ವಂದಿತ
ದೇವ ಮನು ಮುನಿ ನಿಕರ ಪೂಜಿತ
ದೇವ ತತ್ತ್ವಾಧಾರ ಭಾವಿಪೊಡತಿ ನಿರಾಕಾರ
ದೇವ ಸಾಕಾರದಲಿ ನಿಜ ಭ
ಕ್ತಾವಳಿಯನುದ್ಧರಿಪ ಶಿವ ಮಹ
ದೇವ ಕರುಣಿಸಿದೈಯನಾಥಂಗೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೯೨ ಪದ್ಯ)

ತಾತ್ಪರ್ಯ:
ಮಾನವೇಂದ್ರ, ದೇವೇಂದ್ರ, ರಾಕ್ಷಸೇಂದ್ರರಿಂದ ವಂದಿತನಾದ ದೇವನೇ, ಮನು, ಮುನಿಗಳಿಂದ ಪೂಜಿತನಾದ ದೇವನೇ, ತತ್ತ್ವಗಳಿಗೆ ಆಧಾರನಾದರೂ ವಿಚಾರಿಸಿದರೆ ನಿರಾಕಾರಾನಾದ ದೇವನೇ, ನಿನ್ನ ಭಕ್ತರನ್ನು ಉದ್ಧರಿಸಲೆಂದು ಆಕಾರ ಸಹಿತನಾಗಿ ಬಂದ ಶಿವನೇ ಮಹಾದೇವನೇ ಅನಾಥನಾದ ನನ್ನ ಮೇಲೆ ಕರುಣೆಯನ್ನು ತೋರಿಸಿದೆಯಲ್ಲವೇ ಎಂದು ಶಿವನನ್ನು ಸ್ತುತಿಸಿದನು.

ಅರ್ಥ:
ದೇವ: ಭಗವಂತ; ಸುರ: ದೇವ; ದನುಜ: ರಾಕ್ಷಸ; ಈಶ: ಒಡೆಯ; ವಂದಿತ: ನಮಸ್ಕರಿಸಲ್ಪಡುವ; ಮುನಿ: ಋಷಿ; ನಿಕರ: ಗುಂಪು; ಪೂಜೆ: ಆರಾಧನೆ; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ; ಆಧಾರ: ಆಶ್ರಯ; ಭಾವಿತ: ಆಲೋಚಿಸಿದ; ನಿರಾಕಾರ: ಆಕಾರ ವಿಲ್ಲದ; ಸಾಕಾರ: ಆಕಾರವನ್ನು ಹೊಂದಿರುವಿಕೆ; ನಿಜ: ದಿಟ; ಭಕ್ತ: ಆರಾಧಕ; ಆವಳಿ: ಗುಂಪು; ಉದ್ಧಾರ: ಮೇಲಕ್ಕೆ ಎತ್ತುವುದು, ಏಳಿಗೆ; ಕರುಣೆ: ದಯೆ;

ಪದವಿಂಗಡಣೆ:
ದೇವ +ಸುರ+ ದನುಜೇಶ+ ವಂದಿತ
ದೇವ +ಮನು +ಮುನಿ +ನಿಕರ+ ಪೂಜಿತ
ದೇವ +ತತ್ತ್ವ+ಆಧಾರ+ ಭಾವಿಪೊಡತಿ+ ನಿರಾಕಾರ
ದೇವ+ ಸಾಕಾರದಲಿ+ ನಿಜ +ಭ
ಕ್ತಾವಳಿಯನ್+ಉದ್ಧರಿಪ +ಶಿವ +ಮಹ
ದೇವ +ಕರುಣಿಸಿದೈ+ಅನಾಥಂಗ್+ಎಂದನಾ +ಪಾರ್ಥ

ಅಚ್ಚರಿ:
(೧) ದೇವ – ಮೊದಲನೇ ಪದವಾಗಿ ೫ ಬಾರಿ ಪ್ರಯೋಗ
(೨) ನಿಕರ, ಆವಳಿ – ಸಮನಾರ್ಥಕ ಪದ
(೩) ಸಾಕಾರ, ನಿರಾಕಾರ – ವಿರುದ್ಧ ಪದಗಳು