ಪದ್ಯ ೯೧: ಅರ್ಜುನನು ಶಿವನ ಕೃಪೆಯನ್ನು ಹೇಗೆ ಹೊಗಳಿದನು?

ಹರಹರಾತ್ರೈಮೂರ್ತಿ ರೂಪನು
ಧರಿಸಿ ಯತುಳ ಮಹಾಷ್ಟಮೂರ್ತಿಯ
ಧರಿಸಿಯನುಪಮ ವಿಶ್ವಮೂರ್ತಿಯ ಧರಿಸಿರಂಜಿಸುವ
ಪರಿಯನರಿವವರಾರು ದೇವಾ
ಸುರ ಮುನೀಶರಿಗರಿದು ಕೃಪೆಯಿಂ
ಕರುಣಿಸಲು ಬಂದೈ ಮಹಾದೇವೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೯೧ ಪದ್ಯ)

ತಾತ್ಪರ್ಯ:
ಅರ್ಜುನನು ಶಿವನ ಗುಣಮಹಿಮೆಯನ್ನು ಹೇಳುತ್ತಾ, ಶಿವ ಶಿವಾ ನೀನು ಬ್ರಹ್ಮ ವಿಷ್ಣು ರುದ್ರರೆಂಬ ತ್ರಿಮೂರ್ತಿಗಳ ರೂಪನು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ, ಸೂರ್ಯ, ಚಂದ್ರ, ಸಚೇತನ ಪ್ರಾಣಿಗಳು ಎಂಬ ಅಷ್ಟ ಮೂರ್ತಿಗಳ ರೂಪವನ್ನು ಧರಿಸಿ ಹೋಲಿಕೆಗೆ ನಿಲುಕದ ವಿಶ್ವದ ರೂಪವನ್ನು ಧರಿಸಿ ರಂಜಿಸುವ ನಿನ್ನ ನಿಜವನ್ನು ಅರಿಯುವರಾರು! ದೇವತೆಗಳು, ರಾಕ್ಷಸರು, ಋಷಿ ಮುಖ್ಯರಿಗೂ ಅದು ಸಾಧ್ಯವಿಲ್ಲ. ಇಂತಹ ನೀನು ನನ್ನ ಮೇಲೆ ಕೃಪೆಯಿಟ್ಟು ಕರುಣಿಸಲು ಬಂದೆಯಲ್ಲಾ ಎಂದನು.

ಅರ್ಥ:
ಹರ: ಶಂಕರ; ತ್ರೈಮೂರ್ತಿ: ತ್ರಿಮೂರ್ಥಿಗಳು (ಬ್ರಹ್ಮ, ವಿಷ್ಣು, ಮಹೇಶ್ವರ); ರೂಪ: ಆಕಾರ; ಧರಿಸು: ತೊಡು; ಅತುಳ: ತುಂಬ; ಮಹಾ: ದೊಡ್ಡ; ಅಷ್ಟ: ಎಂಟು; ಅನುಪಮ: ಉತ್ಕೃಷ್ಟವಾದುದು; ವಿಶ್ವ: ಜಗತ್ತು; ಮೂರ್ತಿ: ರೂಪ; ರಂಜಿಸು: ಹೊಳೆ, ಪ್ರಕಾಶಿಸು; ಪರಿ: ರೀತಿ; ಅರಿ: ತಿಳಿ; ಅಸುರ: ರಾಕ್ಷಸ; ಮುನಿ: ಋಷಿ; ಅರಿ: ತಿಳಿ; ಕೃಪೆ: ದಯೆ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ಹರಹರಾ+ತ್ರೈಮೂರ್ತಿ +ರೂಪನು
ಧರಿಸಿ +ಅತುಳ +ಮಹ+ಅಷ್ಟ+ಮೂರ್ತಿಯ
ಧರಿಸಿ+ಅನುಪಮ +ವಿಶ್ವಮೂರ್ತಿಯ +ಧರಿಸಿ+ರಂಜಿಸುವ
ಪರಿಯನ್+ಅರಿವವರ್+ಆರು+ ದೇವ
ಅಸುರ +ಮುನೀಶರಿಗ್+ಅರಿದು +ಕೃಪೆಯಿಂ
ಕರುಣಿಸಲು+ ಬಂದೈ +ಮಹಾದೇವೆಂದನಾ +ಪಾರ್ಥ

ಅಚ್ಚರಿ:
(೧) ತ್ರೈಮೂರ್ತಿ, ಅಷ್ಟಮೂರ್ತಿ, ವಿಶ್ವಮೂರ್ತಿ – ಪದಗಳ ಬಳಕೆ

ಪದ್ಯ ೯೦: ಅರ್ಜುನನು ಈಶ್ವರನನ್ನು ಹೇಗೆ ಸ್ತುತಿಸಿದನು?

ವಾಮದೇವ ದುರಂತ ವಿಮಲ
ವ್ಯೋಮಕೇಶ ಕೃತಾಂತಹರ ನಿ
ಸ್ಸೀಮ ಮೃತುಂಜಯ ಸಮಂಜಸ ಸರ್ವತೋಭದ್ರ
ಭೀಮ ಭರ್ಗ ಕಪರ್ದಿ ಕಲ್ಪಿತ
ನಾಮರೂಪತ್ರಯ ವೃಷಧ್ವಜ
ಕಾಮಹರ ಕರುಣಾ ಮಹಾರ್ಣವ ಕರುಣಿಸುವುದೆಂದ (ಅರಣ್ಯ ಪರ್ವ, ೭ ಸಂಧಿ, ೯೦ ಪದ್ಯ)

ತಾತ್ಪರ್ಯ:
ವಾಮದೇವನೇ, ದುರಂತವನ್ನು ತಪ್ಪಿಸುವವನೇ, ಕಾಣುವ ವಿಶ್ವದ ಲಯ ಕರ್ತನೇ, ಗಂಗಾನದಿಯನ್ನು ತಡೆಯುವಾಗ ಆಕಾಶವನ್ನೆಲ್ಲಾ ಕೂದಲುಗಳಿಂದ ಮುಚ್ಚಿದವನೇ, ಯಮನನ್ನು ಗೆಲಿದವನೇ, ಎಲ್ಲೆಯಿಲ್ಲದವನೇ, ಸಮಂಜಸನೇ, ಎಲ್ಲೆಡೆಯಲ್ಲೂ ಮಂಗಳಕರನೇ, ರಾಕ್ಷಸರಿಗೆ ಭಯಂಕರನಾದವನೇ, ಭರ್ಗ ಕಪರ್ದವೆಂಬ ಜಟೆಯುಳ್ಳವನೇ, ನಾಮ ರೂಪ ಕ್ರಿಯೆಗಳನ್ನು ಕಲ್ಪಿಸಿದವನೇ, ವೃಷಭಧ್ವಜನೇ, ಮನ್ಮಥನನ್ನು ಸಂಹರಿಸಿದವನೇ, ಕರುಣಾ ಸಾಗರನೇ ಕರುಣಿಸು ಎಂದು ಅರ್ಜುನನು ಸ್ತುತಿಸಿದನು.

ಅರ್ಥ:
ವಾಮದೇವ: ಸುಂದರಪುರುಷ-ಶಿವ; ದುರಂತ: ದುಃಖಾಂತ, ಕೊನೆ ಇಲ್ಲದ, ಎಂದಿಗೂ ಮುಗಿಯದ; ವಿಮಲ: ನಿರ್ಮಲ; ವ್ಯೋಮ: ಆಗಸ; ವ್ಯೋಮಕೇಶ: ಶಿವ; ಕೃತಾಂತ: ಯಮ; ಹರ: ನಾಶಮಾಡುವವನು; ನಿಸ್ಸೀಮ: ಎಲ್ಲೆಯಿಲ್ಲದುದು; ಮೃತ್ಯುಂಜಯ: ಮೃತ್ಯುವನ್ನು ಜಯಿಸಿದ, ಶಿವ; ಸಮಂಜಸ: ಯೋಗ್ಯವಾದುದು; ಸರ್ವತೋ: ಅಖಿಲ; ಭದ್ರ: ಶ್ರೇಯಸ್ಸು; ಭೀಮ: ಭಯಂಕರವಾದುದು; ಭರ್ಗ: ಕಾಂತಿ, ಶೋಭೆ; ಕಪರ್ದಿ: ಜಟಾಜೂಟವುಳ್ಳವ; ಕಲ್ಪಿತ: ಸಜ್ಜುಗೊಳಿಸಿದ, ಊಹಿಸಿದ; ನಾಮ: ಹೆಸರು; ರೂಪ: ಆಕಾರ; ತ್ರಯ: ಮೂರು; ವೃಷ: ಎತ್ತು; ಧ್ವಜ: ಪತಾಕೆ; ಕಾಮ: ಮನ್ಮಥ; ಕರುಣೆ: ದಯೆ; ಮಹಾರ್ಣವ: ದೊಡ್ಡ ಸಮುದ್ರ;

ಪದವಿಂಗಡಣೆ:
ವಾಮದೇವ +ದುರಂತ +ವಿಮಲ
ವ್ಯೋಮಕೇಶ +ಕೃತಾಂತಹರ+ ನಿ
ಸ್ಸೀಮ +ಮೃತುಂಜಯ +ಸಮಂಜಸ +ಸರ್ವತೋಭದ್ರ
ಭೀಮ +ಭರ್ಗ +ಕಪರ್ದಿ +ಕಲ್ಪಿತ
ನಾಮರೂಪತ್ರಯ+ ವೃಷಧ್ವಜ
ಕಾಮಹರ+ ಕರುಣಾ +ಮಹಾರ್ಣವ +ಕರುಣಿಸುವುದೆಂದ

ಅಚ್ಚರಿ:
(೧) ಕರುಣಾಸಾಗರ ಎಂದು ಹೇಳಲು – ಕರುಣಾ ಮಹಾರ್ಣವ ಪದದ ಬಳಕೆ
(೨) ಕೃತಾಂತಹರ, ಕಾಮಹರ – ಹರ ಪದದ ಬಳಕೆ

ಪದ್ಯ ೮೯: ಅರ್ಜುನನು ಶಿವನ ಗುಣಗಳನ್ನು ಹೇಗೆ ಹೊಗಳಿದನು?

ನಿರವಧಿಕ ನಿರ್ಮಾಯ ನಿಸ್ಪೃಹ
ನಿರುಪಮಿತ ನಿರ್ದ್ವಂದ್ವ ನಿರ್ಗುಣ
ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ
ನಿರುಪಮ ನಿರಾಮಯ ನಿರಂತರ
ನಿರವಶೇಷ ನಿರಂಗ ನಿರ್ಮಲ
ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆಂದ (ಅರಣ್ಯ ಪರ್ವ, ೭ ಸಂಧಿ, ೮೯ ಪದ್ಯ)

ತಾತ್ಪರ್ಯ:
ಅತಿಶಯ ಸ್ವರೂಪನೇ, ಮಾಯಾರಹಿತನೇ, ಏನನ್ನೂ ಬಯಸದವನೇ, ಉಪಮಾರಹಿತನೇ, ತನಗೆ ಎರಡನೆಯದಿಲ್ಲದವನೇ, ಗುಣರಹಿತನೇ, ಕರ್ಮದ ಲೇಪವಿಲ್ಲದವನೇ, ಆತಂಕ ಅಡ್ಡಿ ಪ್ರತಿಬಂಧಕಗಳಿಲ್ಲದವನೇ, ಆಧಾರವಿಲ್ಲದವನೇ, ಉಪಮೇಯವಿಲ್ಲದವನೇ, ಉಪದ್ರವಗಳಿಲ್ಲದವನೇ, ಎಂದೆಂದೂ ಇರುವವನೇ, ಸಂಪೂರ್ಣನೇ, ಅಂಗರಹಿತನೇ, ನಿರ್ಮಲನೇ ಹೆಚ್ಚಿನದಿಲ್ಲದವನೇ ಕಳಾತೀತನೇ ಮಹೇಶ್ವರನೇ ಕರುಣಿಸು ಎಂದು ಅರ್ಜುನನು ಶಿವನನ್ನು ಬೇಡಿದನು.

ಅರ್ಥ:
ನಿರವಧಿಕ: ಹೆಚ್ಚಾದುದು; ಮಾಯ: ಇಂದ್ರಜಾಲ; ನಿಸ್ಪೃಹ: ಏನನ್ನು ಬಯಸದ; ನಿರುಪಮಿತ: ಹೋಲಿಕೆ ಇಲ್ಲದವ; ದ್ವಂದ್ವ: ಎರಡು, ಪರಸ್ಪರ ವಿರುದ್ಧ ವಸ್ತುಗಳ ಜೋಡಿ; ಗುಣ: ನಡತೆ, ಸ್ವಭಾವ; ನಿರ್ಗುಣ: ಗುಣವಿಲ್ಲದ; ಅವಯವ: ದೇಹದ ಒಂದು ಭಾಗ, ಅಂಗ; ಗ್ರಹ: ಹಿಡಿಯುವುದು, ಹಿಡಿತ; ಆಧಾರ: ಆಶ್ರಯ; ನಿರುಪಮ:ಸಾಟಿಯಿಲ್ಲದ; ನಿರಂತರ: ಯಾವಾಗಲು; ಅವಶೇಷ: ಉಳಿಕೆ; ಅಂಗ: ದೇಹ, ಶರೀರ; ನಿರ್ಮಲ: ಶುದ್ಧ; ನಿರತಿಶಯ: ಅತಿಶಯವಲ್ಲದ; ನಿಷ್ಕಳ: ಕಳಾತೀತ; ಮಹೇಶ್ವರ: ಶಂಕರ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ನಿರವಧಿಕ+ ನಿರ್ಮಾಯ +ನಿಸ್ಪೃಹ
ನಿರುಪಮಿತ +ನಿರ್ದ್ವಂದ್ವ +ನಿರ್ಗುಣ
ನಿರವಯವ +ನಿರ್ಲೇಪ +ನಿರವಗ್ರಹ+ ನಿರಾಧಾರ
ನಿರುಪಮ +ನಿರಾಮಯ +ನಿರಂತರ
ನಿರವಶೇಷ +ನಿರಂಗ +ನಿರ್ಮಲ
ನಿರತಿಶಯ +ನಿಷ್ಕಳ+ ಮಹೇಶ್ವರ+ ಕರುಣಿಸುವುದೆಂದ

ಅಚ್ಚರಿ:
(೧) ಶಿವನ ಗುಣಗಾನ ನಿ ಕಾರ ಪದಗಳಿಂದ – ೧೮ ಬಾರಿ