ಪದ್ಯ ೮೨: ಅರ್ಜುನನು ಶಿವನನ್ನು ಹೇಗೆ ಪ್ರಾರ್ಥಿಸಿದನು?

ದೇವ ದೇವ ಕೃಪಾಂಬುನಿಧಿ ಭ
ಕ್ತಾವಲಂಬನ ಭಕ್ತದೇಹಿಕ
ಸೇವಕ ಪ್ರಿಯ ಭೂತಭಾವನ ಭಾವನಾತೀತ
ದೇವವಂದಿತ ಕಾಲ ರೂಪಮ
ಹಾವಿಭವ ಭವರಹಿತ ಪಾವನ
ಪಾವಕಾಂಬಕ ಶ್ರುತಿ ಕುಟುಂಬಿಕ ಕರುಣಿಸುವುದೆಂದ (ಅರಣ್ಯ ಪರ್ವ, ೭ ಸಂಧಿ, ೮೨ ಪದ್ಯ)

ತಾತ್ಪರ್ಯ:
ದೇವ ದೇವನೇ, ಕೃಪಾ ಸಾಗರನೇ, ಭಕ್ತರಿಗೆ ಅಶ್ರಯವನ್ನು ನೀಡುವವನೇ, ಭಕ್ತರೇ ದೇಹವಾಗಿರುವವನೇ, ಸೇವಕರಿಗೆ ಪ್ರೀತಿ ಪಾತ್ರನೇ, ಜೀವಭಾವದಿಮ್ದ ಇದ್ದರೂ ಭಾವನೆಯ ಆಚೆಗಿರುವವನೇ, ದೇವತೆಗಳ ನಮಸ್ಕಾರವನ್ನು ಪಡೆಯುವವನೇ, ಕಾಲದ ರೂಪವಾಗಿರುವವನೇ, ಮಹಾವೈಭವಶಾಲಿಯೇ, ಸಂಸಾರ ದುರನೇ, ಪವಿತ್ರನೇ, ಹಣೆಯಲ್ಲಿ ಅಗ್ನಿನೇತ್ರವನ್ನು ಧರಿಸಿದವನೇ, ಶ್ರುತಿಗಳನ್ನೇ ಕುಟುಂಬವಾಗಿ ಉಳ್ಳವನೇ, ಕರುಣಿಸು, ಎಂದು ಅರ್ಜುನನು ಪ್ರಾರ್ಥಿಸಿದನು.

ಅರ್ಥ:
ದೇವ: ಭಗವಂತ; ಕೃಪೆ: ದಯೆ, ಕರುಣೆ; ಅಂಬುನಿಧಿ: ಸಾಗರ; ಅಂಬು: ನೀರು; ಭಕ್ತ: ಆರಾಧಕ; ಅವಲಂಬನ: ಹೊಂದಿಕೆ, ಆಶ್ರಯ; ದೇಹಿಕ: ಬೇಡುವವ; ಸೇವಕ: ದಾಸ, ಆಳು; ಪ್ರಿಯ: ಪ್ರೀತಿ, ವಾತ್ಸಲ್ಯ; ಭಾವನ: ಮನಸ್ಸಿನ ಭಾವನೆ; ಭೂತ: ಚರಾಚರಾತ್ಮಕ ಜೀವರಾಶಿ; ವಂದಿತ: ಪೂಜಿಸಲ್ಪಡುವ; ಕಾಲ: ಸಮಯ; ರೂಪ: ಆಕಾರ; ಭವ: ಇರುವಿಕೆ, ಅಸ್ತಿತ್ವ; ಪಾವನ: ಶುದ್ಧವಾದುದು; ಪಾವಕ: ಅಗ್ನಿ, ಬೆಂಕಿ; ಅಂಬಕ: ಕಣ್ಣು; ಶ್ರುತಿ: ವೇದ; ಕುಟುಂಬ: ಸಂಸಾರ; ಕರುಣೆ: ದಯೆ;

ಪದವಿಂಗಡಣೆ:
ದೇವ ದೇವ +ಕೃಪಾಂಬುನಿಧಿ+ ಭ
ಕ್ತಾವಲಂಬನ +ಭಕ್ತದೇಹಿಕ+
ಸೇವಕ ಪ್ರಿಯ +ಭೂತಭಾವನ+ ಭಾವನಾತೀತ
ದೇವವಂದಿತ +ಕಾಲ ರೂಪ+ಮ
ಹಾವಿಭವ +ಭವರಹಿತ +ಪಾವನ
ಪಾವಕ+ಅಂಬಕ +ಶ್ರುತಿ +ಕುಟುಂಬಿಕ+ ಕರುಣಿಸುವುದೆಂದ

ಅಚ್ಚರಿ:
(೧) ಜೋಡಿ ಪದಗಳು – ಭಕ್ತಾವಲಂಬನ ಭಕ್ತದೇಹಿಕ; ಭೂತಭಾವನ, ಭಾವನಾತೀತ; ಮಹಾವಿಭವ ಭವರಹಿತ; ಪಾವನ ಪಾವಕಾಂಬಕ; ದೇವ ದೇವ
(೨) ಭಕ್ತದೇಹಿಕ, ಕುಟುಂಬಿಕ, ಪಾವಕಾಂಬಕ, ಸೇವಕ

ಪದ್ಯ ೮೧: ಅರ್ಜುನನು ತನ್ನನ್ನು ಯಾರಿಗೆ ಹೋಲಿಸಿಕೊಂಡನು?

ಅರಿದರಿದು ಮತಿಗೆಟ್ಟ ಮಾನವ
ಕುರಿಯಲಾ ನೆರೆ ಕಂಡು ಕಂಡೆ
ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲ
ಬರಿಮನದ ಬಾಹಿರನೊಳೆನ್ನಲಿ
ಮರೆವುದಪರಾಧವನು ನಿನ್ನನೆ
ಮೆರೆವುದೈ ಕಾರುಣ್ಯ ನಿಧಿ ಕೈಗಾಯಬೇಕೆಂದ (ಅರಣ್ಯ ಪರ್ವ, ೭ ಸಂಧಿ, ೮೧ ಪದ್ಯ)

ತಾತ್ಪರ್ಯ:
ತಿಳಿದೂ ತಿಳಿದು ಮತಿಗೆಟ್ಟ ಮನುಷ್ಯ ಕುರಿಯಲ್ಲವೇ? ನಾನಾದರೂ? ಚೆನ್ನಾಗಿ ನೋಡಿಯೂ ಎಚ್ಚೆತ್ತುಕೊಳ್ಳದ ಖೂಳನಲ್ಲವೇ? ವಿವೇಕವನ್ನು ಮಾರಿಕೊಂಡವನಲ್ಲವೇ? ಮನಸ್ಸು ಬರಿದಾಗಿ ಸನ್ಮಾರ್ಗಕ್ಕೆ ಹೊರಗಾದ ನನ್ನ ಅಪರಾಧವನ್ನು ಮರೆತು, ನಿನ್ನ ಹಿರಿಮೆಯನ್ನು ಮೆರೆದು, ಓ ಶಂಕರ ಕರುಣಾಸಾಗರನೇ ನನ್ನನು ಕೈಹಿಡಿದು ರಕ್ಷಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ಅರಿ: ತಿಳಿದು; ಮತಿ: ಬುದ್ಧಿ; ಕೆಟ್ಟು: ಹಾಳು; ಮಾನವ: ಮನುಷ್ಯ; ಕುರಿ: ಮೇಷ; ನೆರೆ: ಪಕ್ಕ, ಪಾರ್ಶ್ವ; ಕಂಡು: ನೋಡಿ; ಎಚ್ಚರ: ಜೋಪಾನ, ಹುಷಾರು; ಖೂಳ: ದುಷ್ಟ, ದುರುಳ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಮೂಗು:ನಾಸಿಕ; ಮಾರು: ವಿಕ್ರಯಿಸು; ಬರಿ: ಕೇವಲ; ಮನ: ಮನಸ್ಸು; ಬಾಹಿರ: ಹೊರಗಡೆ; ಮರೆ: ನೆನಪಿನಿಂದ ದೂರ ಮಾಡು; ಅಪರಾಧ: ತಪ್ಪು, ದಂಡ; ಮೆರೆ: ಹೊಳೆ, ಪ್ರಕಾಶಿಸು; ಕಾರುಣ್ಯ: ದಯೆ; ನಿಧಿ: ಐಶ್ವರ್ಯ, ಆಶ್ರಯಸ್ಥಾನ; ಕೈಗಾಯ್: ರಕ್ಷಿಸು;

ಪದವಿಂಗಡಣೆ:
ಅರಿದ್+ಅರಿದು +ಮತಿಗೆಟ್ಟ+ ಮಾನವ
ಕುರಿಯಲಾ +ನೆರೆ +ಕಂಡು +ಕಂಡ್
ಎಚ್ಚರದ +ಖೂಳನಲಾ +ವಿವೇಕದ +ಮೂಗು +ಮಾರಿಯಲ
ಬರಿಮನದ +ಬಾಹಿರನೊಳ್+ಎನ್ನಲಿ
ಮರೆವುದ್+ಅಪರಾಧವನು +ನಿನ್ನನೆ
ಮೆರೆವುದೈ+ ಕಾರುಣ್ಯನಿಧಿ+ ಕೈಗಾಯ+ಬೇಕೆಂದ

ಅಚ್ಚರಿ:
(೧) ಮನುಷ್ಯರನ್ನು ಕುರಿಗೆ ಹೋಲಿಸುವ ಪರಿ – ಅರಿದರಿದು ಮತಿಗೆಟ್ಟ ಮಾನವ ಕುರಿಯಲಾ

ಪದ್ಯ ೮೦: ಅರ್ಜುನನು ಶಿವನನ್ನು ಏನೆಂದು ಬೇಡಿಕೊಂಡನು?

ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾಂಧಕೂಪ ಜಲಾವಗಾಹದಲಿ
ಸ್ತಿಮಿತನನು ದುರ್ಬೋಧ ಭೇದ
ಭ್ರಮಿತನನು ಕಲ್ಯಾಣ ಪದ ನಿ
ರ್ಗಮಿತನನು ಕಾರುಣ್ಯ ನಿಧಿ ಕೈಗಾಯಬೇಕೆಂದ (ಅರಣ್ಯ ಪರ್ವ, ೭ ಸಂಧಿ, ೮೦ ಪದ್ಯ)

ತಾತ್ಪರ್ಯ:
ನಾನು ಸುಭಟನೆಂಬ ವೃಥ ಅಭಿಮಾನದಿಂದ ಭ್ರಮಿತನಾಗಿದ್ದೆ. ಮೋಹವೆಂಬ ಕತ್ತಲುಗುಂಡಿಯ ನೀರಿನಲ್ಲಿ ನಿಂತ ನನ್ನನ್ನು ತಿಳಿವಿಲ್ಲದೆ ಭೇದ ಭ್ರಮಿತನಾದ ನನ್ನನ್ನು ಸರಿಯಾದ ಜ್ಞಾನವಿಲ್ಲದೆ ಭ್ರಾಂತನಾದ ನನ್ನನ್ನು ಕಲ್ಯಾಣ ಪದಕ್ಕೆ ದೂರವಾದ ನನ್ನನ್ನು ಸರ್ವೇಶ್ವರ, ಸರ್ವೋತ್ತಮನೇ ನನ್ನನ್ನು ಕ್ಷಮಿಸು, ಕರುಣಾನಿಧಿಯೇ ನನ್ನನ್ನು ಕೈಹಿಡಿದು ಕಾಪಾಡು ಎಂದು ಬೇಡಿದನು.

ಅರ್ಥ:
ಕ್ಷಮೆ: ಇತರರ ತಪ್ಪನ್ನು ಮನ್ನಿಸುವ ಗುಣ, ಸೈರಣೆ; ಸರ್ವೇಶ: ಎಲ್ಲರ ಒಡೆಯ; ಸರ್ವೋತ್ತಮ: ಎಲ್ಲರಿಗೂ ಉತ್ತಮನಾದವ, ಶ್ರೇಷ್ಠನಾದವ; ವೃಥಾ: ಸುಮ್ಮನೆ; ಸುಭಟ: ಸೈನಿಕ, ಸೇವಕ, ಶೂರ; ಅಭಿಮಾನ: ಹೆಮ್ಮೆ, ಅಹಂಕಾರ; ಭ್ರಮಿತ: ಭ್ರಮೆ, ಭ್ರಾಂತಿ, ಉನ್ಮಾದ; ಮೋಹ: ಭ್ರಾಂತಿ, ಭ್ರಮೆ, ಮೈಮರೆಯುವಿಕೆ; ಅಂಧ: ಅಜ್ಞಾನ, ಅಂಧಕಾರ; ಕೂಪ: ಬಾವಿ; ಜಲ: ನೀರು; ಅವಗಾಹ: ಮಗ್ನವಾಗಿರುವಿಕೆ; ಸ್ತಿಮಿತ: ಭದ್ರವಾದ ನೆಲೆ, ಸ್ಥಿರತೆ; ದುರ್ಬೋಧ: ಭೇದಿಸಲಾಗದ; ಭೇದ: ಒಡೆಯುವುದು, ಬಿರುಕು; ಕಲ್ಯಾಣ: ಶುಭ, ಅದೃಷ್ಟ; ಪದ: ಸ್ಥಾನ; ನಿರ್ಗಮನ: ಹೋಗುವಿಕೆ; ಕಾರುಣ್ಯ: ದಯೆ; ನಿಧಿ: ಐಶ್ವರ್ಯ, ಆಶ್ರಯಸ್ಥಾನ; ಕೈಗಾಯ್: ರಕ್ಷಿಸು;

ಪದವಿಂಗಡಣೆ:
ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾಂಧಕೂಪ ಜಲಾವಗಾಹದಲಿ
ಸ್ತಿಮಿತನನು ದುರ್ಬೋಧ ಭೇದ
ಭ್ರಮಿತನನು ಕಲ್ಯಾಣ ಪದ ನಿ
ರ್ಗಮಿತನನು ಕಾರುಣ್ಯ ನಿಧಿ ಕೈಗಾಯಬೇಕೆಂದ

ಅಚ್ಚರಿ:
(೧) ಅರ್ಜುನನ ಬ್ರಮೆಯನ್ನು ವಿವರಿಸುವ ಪರಿ – ವೃಥಾ ಸುಭಟಾಭಿಮಾನ ಭ್ರಮಿತನನು ಮೋಹಾಂಧಕೂಪ ಜಲಾವಗಾಹದಲಿ
(೨) ಶಿವನನ್ನು ಹೊಗಳುವ ಪರಿ – ಸರ್ವೇಶ, ಸರ್ವೋತ್ತಮ, ಕಾರುಣ್ಯನಿಧಿ

ಪದ್ಯ ೭೯: ಅರ್ಜುನನು ಶಿವನಿಗೆ ಹೇಗೆ ನಮಸ್ಕರಿಸಿದನು?

ಹರಹಿನಲಿ ಹೊದರೆದ್ದು ಹರುಷದ
ಹೊರಳಿಯಲಿ ಹೊಡಕರಿಸಿ ಚಿತ್ತವ
ತಿರುಹಿ ಹಿಡಿದನು ಮನಕೆ ಬುದ್ಧಿಯ ಹಮ್ಮುಹಮ್ಮುಗೆಯ
ಕೊರಳುಗೊಳಿಸಿ ಕುಲಾಲ ಚಕ್ರದ
ಪರಿಬವಣಿಗೆಯ ಪಾಡಿನಲಿ ಕಾ
ತರಿಸುತವನಿಗೆ ಮೈಯನಿತ್ತನು ನೀಡಿ ಭುಜಯುಗವ (ಅರಣ್ಯ ಪರ್ವ, ೭ ಸಂಧಿ, ೭೯ ಪದ್ಯ)

ತಾತ್ಪರ್ಯ:
ಹರ್ಷಾತಿರೇಕದ ಹೊದರಿನಲ್ಲಿ ಸೇರಿ, ಆನಂದ ಪ್ರವಾಹದಲ್ಲಿ ತೇಲಿ, ಮನಸ್ಸನ್ನು ಬುದ್ಧಿಯ ಹಿಡಿತದಲ್ಲಿ ತೆಗೆದುಕೊಂಡು, ಕುಂಬಾರನ ಚಕ್ರದಂತೆ ತಿರುಗುತ್ತಾ, ಕಾತರಿಸುತ್ತಾ, ಭೂಮಿಗೆ ಭುಜಗಳನ್ನು ನೀಡಿ ಅರ್ಜುನನು ಶಿವನಿಗೆ ನಮಸ್ಕರಿಸಿದನು.

ಅರ್ಥ:
ಹರಹು: ವಿಸ್ತಾರ, ವೈಶಾಲ್ಯ; ಹೊದರು: ತೊಡಕು, ತೊಂದರೆ; ಎದ್ದು: ಮೇಲೇಳು; ಹರುಷ: ಸಂತಸ; ಹೊರಳು: ತಿರುವು, ಬಾಗು; ಹೊರಳಿ: ಆಧಿಕ್ಯ, ಗುಂಪು; ಹೊಡಕರಿಸು: ಕಾಣಿಸು, ಬೇಗಬೆರೆಸು; ಚಿತ್ತ: ಮನಸ್ಸು; ತಿರುಹು: ಸುತ್ತು; ಹಿಡಿ: ಬಂಧಿಸು; ಮನ: ಮನಸ್ಸು; ಬುದ್ಧಿ: ತಿಳಿವು, ಅರಿವು; ಹಮ್ಮು: ಬಂಧಿಸು, ಕಟ್ಟು; ಕೊರಳುಗೊಳಿಸು: ಒಪ್ಪು; ಕುಲಾಲ: ಕುಂಬಾರ; ಚಕ್ರ: ಗಾಲಿ; ಬವಣೆ: ಸುತ್ತಾಟ, ಸಂಚಾರ; ಪಾಡು: ರೀತಿ; ಕಾತರಿಸು: ತವಕಗೊಳ್ಳು; ಮೈಯನಿಕ್ಕು: ನಮಸ್ಕರಿಸು; ನೀಡಿ: ಕೊಡು; ಭುಜ: ಬಾಹು; ಭುಜಯುಗ: ಎರಡು ಬಾಹುಗಳು;

ಪದವಿಂಗಡಣೆ:
ಹರಹಿನಲಿ +ಹೊದರೆದ್ದು +ಹರುಷದ
ಹೊರಳಿಯಲಿ +ಹೊಡಕರಿಸಿ+ ಚಿತ್ತವ
ತಿರುಹಿ +ಹಿಡಿದನು +ಮನಕೆ +ಬುದ್ಧಿಯ +ಹಮ್ಮು+ಹಮ್ಮುಗೆಯ
ಕೊರಳುಗೊಳಿಸಿ+ ಕುಲಾಲ+ ಚಕ್ರದ
ಪರಿಬವಣಿಗೆಯ +ಪಾಡಿನಲಿ +ಕಾ
ತರಿಸುತವನಿಗೆ+ ಮೈಯನಿತ್ತನು +ನೀಡಿ +ಭುಜಯುಗವ

ಅಚ್ಚರಿ:
(೧) ಹ ಕಾರದ ಸಾಲು ಪದ – ಹರಹಿನಲಿ ಹೊದರೆದ್ದು ಹರುಷದ ಹೊರಳಿಯಲಿ ಹೊಡಕರಿಸಿ
(೨) ಉಪಮಾನದ ಪ್ರಯೋಗ – ಕೊರಳುಗೊಳಿಸಿ ಕುಲಾಲ ಚಕ್ರದ ಪರಿಬವಣಿಗೆಯ ಪಾಡಿನಲಿ

ಪದ್ಯ ೭೮: ಅರ್ಜುನನು ರೋಮಾಂಚನಗೊಳ್ಳಲು ಕಾರಣವೇನು?

ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮಪುಳಕದಲಿ
ಬಿಟ್ಟು ಹಿಡಿದನು ಹರನ ಕಾಣದೆ
ತೊಟ್ಟ ಜಗೆಗಳ ರೋಮ ಹರುಷದ
ಲಟ್ಟೆಡೆಯ ಮೈದವಕದರ್ಜುನ ನಿಂದು ಬೆರಗಾದ (ಅರಣ್ಯ ಪರ್ವ, ೭ ಸಂಧಿ, ೭೮ ಪದ್ಯ)

ತಾತ್ಪರ್ಯ:
ಅರ್ಜುನನು ಬಹುಬೇಗ ಹರ್ಷಗೊಂಡು ಮನಸ್ಸು ಕೊಟ್ಟು ತದೇಕ ದೃಷ್ಟಿಯಿಂದ ಈಶ್ವರನನ್ನೇ ನೋಡುತ್ತಿದ್ದನು. ರೋಮಾಂಚನಗೊಂಡು ಆನಂದದ ಕಣ್ಣೀರು ತುಂಬಿ ಶಿವನ ರೂಪವು ಕಾಣಿಸದಾಯಿತು. ಆಗ ಅರ್ಜುನನ ಮೈ ಸಂಕೋಚಿಸಿತು. ರೋಮಾಂಚನವಾಗುತ್ತಲೇ ಇತ್ತು. ಅರ್ಜುನನು ಬೆರಗಾಗಿ ತವಕದಿಂದ ನಿಂತನು.

ಅರ್ಥ:
ಬಿಡು: ವಿರಾಮ, ತೊರೆ; ಸೂಟಿ: ವೇಗ, ರಭಸ; ಎದ್ದು: ಮೇಲೇಳು; ಹರುಷ: ಸಂತಸ; ಕೊಟ್ಟು: ನೀಡು; ಮನ: ಮನಸ್ಸು; ನೋಡು: ವೀಕ್ಷಿಸು; ನಟ್ಟ: ಏಕಾಗ್ರತೆಯಿಂದ; ದೃಷ್ಟಿ: ನೋಟ; ಒಗು: ಚೆಲ್ಲು, ಸುರಿ ; ಜಲ: ನೀರು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಬಿಟ್ಟು: ತೊರೆ; ಹಿಡಿ: ಬಂಧಿಸು; ಹರ: ಶಿವ; ಕಾಣು: ತೋರು; ತೊಟ್ಟು: ಧರಿಸು, ಹಾಕಿಕೊಳ್ಳು; ಜಗೆ: ಕಾಂತಿ, ಒಂದು ಬಗೆಯ ಉಡುಪು; ಮೈ: ತನು, ದೇಹ; ತವಕ: ಅವಸರ, ತ್ವರೆ, ಹಂಬಲ; ನಿಂದು: ನಿಲ್ಲು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಬಿಟ್ಟ +ಸೂಟಿಯೊಳ್+ಎದ್ದು+ ಹರುಷಕೆ
ಕೊಟ್ಟು +ಮನವನು+ ನೋಡುತಿರ್ದನು
ನಟ್ಟ +ದೃಷ್ಟಿಯೊಳ್+ಒಗುವ +ಜಲದಲಿ+ ರೋಮ+ಪುಳಕದಲಿ
ಬಿಟ್ಟು +ಹಿಡಿದನು +ಹರನ +ಕಾಣದೆ
ತೊಟ್ಟ +ಜಗೆಗಳ +ರೋಮ +ಹರುಷದಲ್
ಅಟ್ಟೆಡೆಯ+ ಮೈ+ತವಕದ್+ಅರ್ಜುನ +ನಿಂದು +ಬೆರಗಾದ

ಅಚ್ಚರಿ:
(೧) ಬಿಟ್ಟ, ನಟ್ಟ, ತೊಟ್ಟ – ಪ್ರಾಸ ಪದಗಳು
(೨) ರೋಮಾಂಚನವನ್ನು ಚಿತ್ರಿಸುವ ಪರಿ – ಬಿಟ್ಟ ಸೂಟಿಯೊಳೆದ್ದು ಹರುಷಕೆ ಕೊಟ್ಟು ಮನವನು ನೋಡುತಿರ್ದನು ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮಪುಳಕದಲಿ

ಪದ್ಯ ೭೭: ಶಿವನ ಜಯಘೋಷವು ಹೇಗಿತ್ತು?

ಜಯಜಯೆಂದುದು ನಿಖಿಳ ಜಗವ
ಕ್ಷಯನ ದರುಶನಕೆಂದು ಶ್ರುತಿಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಘಲ್ಲಣೆಗೆ
ನಿಯತವೇನೋ ಜನ್ಮಶತಸಂ
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ (ಅರಣ್ಯ ಪರ್ವ, ೭ ಸಂಧಿ, ೭೭ ಪದ್ಯ)

ತಾತ್ಪರ್ಯ:
ಲೋಕವೆಲ್ಲವೂ ಜಯಘೋಷದಲ್ಲಿ ಮುಳುಗಿತು. ಶಿವನ ದರ್ಶನಕ್ಕೆಂದು ಬಂದು ಅವರನ್ನು ಹೊಗಳಲು ಹೋದ ವೇದ ಘೋಷವು ಸಾಧ್ಯವಾಗದೆ ಗಾಸಿಗೊಂಡಿತು. ದೇವತೆಗಳು ಆಕಾಶದಲ್ಲಿ ಸೇರಿ ಅದೆಷ್ಟು ಜನ್ಮಗಳಲ್ಲಿ ಪುಣ್ಯವನ್ನು ಕೂಡಿಟ್ಟುಕೊಂಡಿದ್ದನೋ ಅರ್ಜುನನು ಈಗ ಶಿವನ ದರ್ಶನದಿಂದ ಕೃತಾರ್ಥನಾದ ಎಂದು ಹೊಗಳಿ ಭೇರಿಗಳನ್ನು ಬಾರಿಸಿದರು.

ಅರ್ಥ:
ಜಯ: ಉಘೇ; ನಿಖಿಳ: ಎಲ್ಲಾ; ಜಗ: ಪ್ರಪಂಚ; ಅಕ್ಷಯ: ಕ್ಷಯವಿಲ್ಲದುದು, ಪರಮಾತ್ಮ; ದರುಶನ: ನೋಟ; ಶ್ರುತಿ: ವೇದ; ಕೋಟಿ: ಲೆಕ್ಕವಿಲ್ಲದ; ಗಡಾವಣೆ: ಗಟ್ಟಿಯಾದ ಶಬ್ದ; ಗಾಸಿ: ತೊಂದರೆ, ಕಷ್ಟ; ಹರ: ಶಿವ; ಫಲ್ಲಣೆ: ಘಲ್ ಘಲ್ ಎಂಬ ಶಬ್ದ; ನಿಯತ: ನಿಶ್ಚಿತವಾದುದು; ಜನ್ಮ: ಹುಟ್ಟು; ಶತ: ನೂರು; ಸಂಚಯ: ಗುಂಪು, ಸಮೂಹ; ಕೃತಾರ್ಥ: ಧನ್ಯ; ಮೊಳಗು: ಧ್ವನಿ, ಸದ್ದು; ಭೇರಿ: ನಗಾರಿ, ದುಂದುಭಿ; ಅಮರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಜಯಜಯ+ಎಂದುದು +ನಿಖಿಳ +ಜಗವ್
ಅಕ್ಷಯನ +ದರುಶನಕೆಂದು +ಶ್ರುತಿ+ಕೋ
ಟಿಯ +ಗಡಾವಣೆ +ಗಾಸಿಯಾದುದು +ಹರನ +ಘಲ್ಲಣೆಗೆ
ನಿಯತವೇನೋ+ ಜನ್ಮ+ಶತ+ಸಂ
ಚಯದೊಳ್+ಅರರೆ+ ಕೃತಾರ್ಥನ್+ಅರ್ಜುನ
ಜಯವೆನಲು +ಮೊಳಗಿದವು+ ಭೇರಿಗಳ್+ಅಮರ +ಕಟಕದಲಿ

ಅಚ್ಚರಿ:
(೧) ಜಯ, ಸಂಚಯ, ಅಕ್ಷಯ – ಪ್ರಾಸ ಪದಗಳು