ಪದ್ಯ ೭೧: ಶಿವನು ಅಘೋರ ರೂಪದಲ್ಲಿ ಹೇಗೆ ತೋರಿದನು?

ಕಾಳಮೇಘ ಸುವರ್ಣದುರುದಂ
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಶ್ರುತಿ ಮುಖದ ಪಾಶಾಂಕುಶದ ಡಮರುಗದ
ಶೂಲ ಘನ ಖಟ್ವಾಂಗ ದ್ರುಹಿಣಕ
ಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರ ರೂಪದಲಿ (ಅರಣ್ಯ ಪರ್ವ, ೭ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕರಿಮೋಡದ ಬಣ್ಣ, ಭಯಂಕರವಾದ ದಾಡೆಗಳು, ಶುಭ್ರವಾದ ಜಪಮಣಿಮಾಲೆ, ಶ್ರುತಿಯೇ ಮುಖ, ಪಾಶ, ಅಂಕುಶ ಡಮರುಗ, ಶೂಲ, ಖಟ್ವಾಂಗ, ಬ್ರಹ್ಮ, ಕಪಾಲ ಸರ್ಪಭೂಷಣ, ರುಂಡಮಾಲೆಗಳನ್ನು ಧರಿಸಿದ ಮಹೋಗ್ರವಾದ ಅಘೋರ ರೂಪದಿಂದ ಶಿವನು ಕಾಣಿಸಿಕೊಂಡನು.

ಅರ್ಥ:
ಕಾಳಮೇಘ: ಕರಿಮೋಡ; ಸುವರ್ಣ: ಚಿನ್ನ, ಹೇಮ; ದಂಷ್ಟ್ರ: ಕೋರೆಹಲ್ಲು, ದಾಡೆ; ಆಳಿ: ಸಾಲು; ಭೀಷಣ: ಭಯಂಕರವಾದ, ಭೀಕರ; ಅಮಳ: ನಿರ್ಮಲ; ಜಪಮಣಿ: ಅಕ್ಷಮಾಲಾ; ಶ್ರುತಿ: ವೇದ; ಮುಖ: ಆನನ; ಪಾಶ: ಹಗ್ಗ; ಅಂಕುಶ: ಹಿಡಿತ, ಹತೋಟಿ, ಆಯುಧ; ಡಮರು: ಒಂದು ಬಗೆಯ ಚರ್ಮವಾದ್ಯ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಘನ: ಗಟ್ಟಿ; ಖಟ್ವಾಂಗ: ತಲೆಬುರುಡೆಯ ತುದಿಯನ್ನುಳ್ಳ ಶಿವನ ಗದೆ; ದ್ರುಹಿಣ: ಶಿವ; ಕಪಾಲ: ಕೆನ್ನೆ; ಫಣಿ: ಹಾವು; ಕರೋಟಿ: ತಲೆಬುರುಡೆ; ಮಾಲೆ: ಹಾರ; ಮಹ: ಶ್ರೇಷ್ಠ, ದೊಡ್ಡ; ಉಗ್ರ: ತೀಕ್ಷ್ಣ, ಭಯಂಕರ; ರೂಪ: ಆಕಾರ;

ಪದವಿಂಗಡಣೆ:
ಕಾಳಮೇಘ +ಸುವರ್ಣದ್+ಉರು+ದಂ
ಷ್ಟ್ರಾಳಿ +ಭೀಷಣದ್+ಅಮಳ +ಜಪಮಣಿ
ಮಾಲಿಕೆಯ+ ಶ್ರುತಿ +ಮುಖದ+ ಪಾಶಾಂಕುಶದ+ ಡಮರುಗದ
ಶೂಲ +ಘನ +ಖಟ್ವಾಂಗ +ದ್ರುಹಿಣ+ಕ
ಪಾಲ +ಫಣಿವಲಯದ +ಕರೋಟೀ
ಮಾಲೆಯಿಂದ +ಮಹೋಗ್ರನ್+ಎಸೆದನ್+ಅಘೋರ+ ರೂಪದಲಿ

ಅಚ್ಚರಿ:
(೧) ಶಿವನ ಅಘೋರ ರೂಪ – ಶೂಲ ಘನ ಖಟ್ವಾಂಗ ದ್ರುಹಿಣಕಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರ ರೂಪದಲಿ

ಪದ್ಯ ೭೦: ಶಿವನು ವಾಮದೇವನ ರೂಪದಲ್ಲಿ ಹೇಗೆ ಶೋಭಿಸಿದನು?

ಹೊಳೆಪ ಕುಂಕುಮ ಕಾಂತಿಯಲಿ ಥಳ
ಥಳಿಪ ತನು ಗಜಚರ್ಮದುಡುಗೆಯ
ಲಲಿತ ದಂತ ಪ್ರಭೆಯ ದರಹಸಿತಾನನಾಂಬುಜದ
ವಿಲಸಿತಾಭಯ ವರದಕರ ಪರಿ
ಲುಳಿತ ಪರಶು ದೃಢಾಕ್ಷಮಾಲಾ
ವಳಿಗಳೊಪ್ಪಿರೆ ವಾಮದೇವಾನನದಿ ರಂಜಿಸಿದ (ಅರಣ್ಯ ಪರ್ವ, ೭ ಸಂಧಿ, ೭೦ ಪದ್ಯ)

ತಾತ್ಪರ್ಯ:
ಕುಂಕುಮ ಕಾಂತಿಯಿಂದ ಥಳಥಳಿಸಿ ಹೊಳೆಯುವ ದೇಹ ಪ್ರಭೆ ಗಜಚರ್ಮದ ಉಡಿಗೆ, ಸುಂದರವಾದ ದಂತಗಳ ಪ್ರಭೆ, ನಗುವುನಿಂದರಳಿದ ಮುಖಕಮಲ, ಅಭಯ ವರದ ಕರಗಳು, ಗಂಡುಗೊಡಲಿ ಅಕ್ಷಮಾಲೆಗಳು ಶೋಭಿಸುತ್ತಿರಲು ಶಿವನು ವಾಮದೇವ ಮುಖದಿಂದ ಶೋಭಿಸಿದನು.

ಅರ್ಥ:
ಹೊಳೆ: ಪ್ರಕಾಶಿಸು; ಕುಂಕುಮ: ಕೆಂಪು; ಕಾಂತಿ: ಪ್ರಕಾಶ; ಥಳಥಳ:ಹೊಳೆವ; ತನು: ದೇಹ; ಗಜ: ಆನೆ; ಚರ್ಮ: ದೊಗಲು; ಉಡುಗೆ: ವಸ್ತ್ರ, ಬಟ್ಟೆ; ಲಲಿತ: ಸುಂದರ, ಚೆಲುವು; ದಂತ: ಹಲ್ಲು; ಪ್ರಭೆ: ಪ್ರಕಾಶ; ದರ: ಸ್ವಲ್ಪ, ಕೊಂಚ, ನಸು; ಹಸಿತ: ನಗೆ, ಹಾಸ; ಆನನ: ಮುಖ; ಅಂಜುಜ: ಕಮಲ; ವಿಲಸಿತ: ಅರಳಿದ, ಶುದ್ಧ; ಅಭಯ: ನಿರ್ಭಯತೆ; ವರ: ಶ್ರೇಷ್ಠ, ಅನುಗ್ರಹ; ಕರ: ಹಸ್ತ; ಪರಿಲುಳಿತ: ಸೇರಿದ; ಪರಶು: ಕೊಡಲಿ, ಕುಠಾರ; ದೃಢ: ಗಟ್ಟಿಯಾದುದು; ಅಕ್ಷಮಾಲೆ: ಜಪಮಾಲೆ; ಆವಳಿ: ಸಾಲು, ಗುಂಪು; ಒಪ್ಪು: ಚೆಲವು, ಹಿರಿಮೆ; ವಾಮದೇವ: ಸುಂದರಪುರುಷ-ಶಿವ; ರಂಜಿಸು: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಹೊಳೆಪ +ಕುಂಕುಮ +ಕಾಂತಿಯಲಿ +ಥಳ
ಥಳಿಪ +ತನು +ಗಜಚರ್ಮದ್+ಉಡುಗೆಯ
ಲಲಿತ +ದಂತ+ ಪ್ರಭೆಯ+ದರ+ಹಸಿತ+ಆನನ+ಅಂಬುಜದ
ವಿಲಸಿತ+ಅಭಯ +ವರದಕರ +ಪರಿ
ಲುಳಿತ +ಪರಶು +ದೃಢ+ಅಕ್ಷಮಾಲಾ
ವಳಿಗಳ್+ಒಪ್ಪಿರೆ +ವಾಮದೇವ+ಆನನದಿ +ರಂಜಿಸಿದ

ಅಚ್ಚರಿ:
(೧) ಶಿವನು ತೋರಿದ ಪರಿ – ಹೊಳೆಪ ಕುಂಕುಮ ಕಾಂತಿಯಲಿ ಥಳಥಳಿಪ ತನು ಗಜಚರ್ಮದುಡುಗೆಯ ಲಲಿತ ದಂತ ಪ್ರಭೆಯ ದರಹಸಿತಾನನಾಂಬುಜದ

ಪದ್ಯ ೬೯: ಶಿವನು ಯಾವ ರೂಪದಲ್ಲಿ ದರುಶನವನ್ನು ನೀಡಿದನು?

ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯ
ಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ
ಹೊಳೆವ ಹರಿಣನಕ್ಷಮಾಲಾ
ವಲಯಾಭಯ ವರದಕರ ಪರಿ
ಕಲಿತನೆಸೆದನು ಶಂಭುಸದ್ಯೋಜಾತ ರೂಪಿನಲಿ (ಅರಣ್ಯ ಪರ್ವ, ೭ ಸಂಧಿ, ೬೯ ಪದ್ಯ)

ತಾತ್ಪರ್ಯ:
ಚೆನ್ನಾಗಿ ಬೆಳೆದ ಚಂದ್ರನ ಬೆಳುದಿಂಗಳಿನಂತೆ ಹೊಳೆಹೊಳೆಯುವ ಕಾಂತಿ, ವ್ಯಾಘ್ರಾಜಿನ, ಕೆಂಜೆಡೆಯಲ್ಲಿ ಸೇರಿಸಿದ ಚಂದ್ರ, ನಾಗರಾಜನನ್ನು ಭೂಷಣವಾಗಿ ತೋರುವ, ಕೈಯಲ್ಲಿ ಹಿಡಿದ ಜಿಂಕೆ, ಕೊರಳಲ್ಲಿ ಧರಿಸಿದ ಮಣಿಮಾಲೆ, ವರದ ಅಭಯ ಮುದ್ರೆಯನ್ನು ತೋರಿಸುವ ಕೈಗಳು, ಇವುಗಳಿಂದ ಶಿವನು ಸದ್ಯೋಜಾತ ರೂಪಿನಿಂದ ದರುಶನವನ್ನಿತ್ತನು.

ಅರ್ಥ:
ಬಲಿದ: ಚೆನ್ನಾಗಿ ಬೆಳೆದ; ಚಂದ್ರಿಕೆ: ಬೆಳದಿಂಗಳು; ಎರಕ: ಸುರಿ, ತುಂಬು; ತೊಳತೊಳಗು: ಹೊಳೆವ; ಬೆಳಗು: ಹೊಳಪು, ಕಾಂತಿ; ಕಾಯ: ದೇಹ; ಕಾಂತಿ: ಹೊಳಪು; ಪುಲಿ: ಹುಲಿ; ದೊಗಲು: ಚರ್ಮ; ಕೆಂಜಡೆ: ಕೆಂಪಾದ ಜಟೆ; ಕೇವಣ: ಕುಂದಣ, ಕೂಡಿಸುವುದು; ಫಣಿಪತಿ: ನಾಗರಾಜ; ಹೊಳೆ: ಪ್ರಕಾಶಿಸು; ಹರಿಣ: ಜಿಂಕೆ; ಅಕ್ಷಮಾಲ: ಜಪಮಾಲೆ; ವಲಯ: ಕಡಗ, ಬಳೆ; ಅಭಯ: ನಿರ್ಭಯತೆ; ವರ: ಶ್ರೇಷ್ಠ; ಕರ: ಹಸ್ತ; ಪರಿಕಲಿತ: ಕೂಡಿದುದು, ಸೇರಿದುದು; ಎಸೆ: ತೋರು; ಶಂಭು: ಶಂಕರ; ಸದ್ಯೋಜಾತ: ಶಿವನ ಪಂಚಮುಖಗಳಲ್ಲಿ ಒಂದು; ರೂಪ: ಆಕಾರ;

ಪದವಿಂಗಡಣೆ:
ಬಲಿದ +ಚಂದ್ರಿಕೆ+ಎರಕವೆನೆ +ತೊಳ
ತೊಳಗಿ +ಬೆಳಗುವ +ಕಾಯ+ಕಾಂತಿಯ
ಪುಲಿದೊಗಲ+ ಕೆಂಜಡೆಯ +ಕೇವಣರಿಂದು +ಫಣಿಪತಿಯ
ಹೊಳೆವ +ಹರಿಣನ್+ಅಕ್ಷಮಾಲಾ
ವಲಯ+ಅಭಯ +ವರದ+ಕರ +ಪರಿ
ಕಲಿತನ್+ಎಸೆದನು +ಶಂಭು+ಸದ್ಯೋಜಾತ +ರೂಪಿನಲಿ

ಅಚ್ಚರಿ:
(೧) ಶಿವನ ರೂಪವನ್ನು ವರ್ಣಿಸುವ ಪರಿ – ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ

ಪದ್ಯ ೬೮: ಶಿವನ ರೂಪವನ್ನು ಯಾರು ನೋಡಿದರು?

ಅರಸ ಕೇಳೈ ನಿಮ್ಮ ಪಾರ್ಥನ
ಪರಮ ಪುಣ್ಯೋದಯವನೀಶನ
ಕರುಣವನು ಶುಕ ಸನಕ ಸಿದ್ಧಾದ್ಯರಿಗಗೋಚರದ
ನಿರುಪಮಿತ ನಿಜರೂಪವನು ವಿ
ಸ್ತರಿಸಿದನು ವಿವಿಧ ಪ್ರಭಾವೋ
ತ್ಕರದ ನಿರಿಗೆಯ ತೋರಿದನು ಸುರಕೋಟಿ ಕೈಮುಗಿಯೆ (ಅರಣ್ಯ ಪರ್ವ, ೭ ಸಂಧಿ, ೬೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ಪರಮ ಪುಣ್ಯೋದಯವನ್ನೂ ಶಿವನ ಕರುಣೆಯನ್ನೂ ಹೇಳುತ್ತೇನೆ, ಕೇಳು; ಶುಕ ಸನಕಾದಿ ಸಿದ್ಧರಿಗೂ ಕಾಣಿಸದ ಹೋಲಿಕೆಯಿಲ್ಲದ ತನ್ನ ರೂಪವನ್ನು ಅರ್ಜುನನಿಗೆ ತೋರಿಸಿದನು. ಅಸಂಖ್ಯಾತ ದೇವತೆಗಳು ಶಿವನಿಗೆ ನಮಸ್ಕರಿಸಿದರು

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪರಮ: ಶ್ರೇಷ್ಠ; ಪುಣ್ಯ: ಸದಾಚಾರ, ಉತ್ಕೃಷ್ಟವಾದ; ಉದಯ: ಹುಟ್ಟು; ಅವನೀಶ: ರಾಜ; ಕರುಣ: ದಯೆ; ಅಗೋಚರ: ಕಾಣಿಸದ; ನಿರುಪಮ: ಸಾಟಿಯಿಲ್ಲದ; ನಿಜ: ದಿಟ; ರೂಪ: ಆಕಾರ; ವಿಸ್ತರಿಸು: ಹರಡು; ವಿವಿಧ: ಹಲವಾರು; ಪ್ರಭಾವ: ಬಲ, ಪರಾಕ್ರಮ; ಉತ್ಕರ: ಸಮೂಹ; ನೀರಿಗೆ: ವಿವರ; ತೋರು: ಕಾಣು; ಸುರ: ದೇವತೆಗಳು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಅರಸ +ಕೇಳೈ +ನಿಮ್ಮ +ಪಾರ್ಥನ
ಪರಮ +ಪುಣ್ಯೋದಯವನ್+ಈಶನ
ಕರುಣವನು +ಶುಕ +ಸನಕ +ಸಿದ್ಧಾದ್ಯರಿಗ್+ಅಗೋಚರದ
ನಿರುಪಮಿತ+ ನಿಜರೂಪವನು+ ವಿ
ಸ್ತರಿಸಿದನು +ವಿವಿಧ+ ಪ್ರಭಾವೋ
ತ್ಕರದ +ನಿರಿಗೆಯ +ತೋರಿದನು +ಸುರಕೋಟಿ +ಕೈಮುಗಿಯೆ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪಾರ್ಥನ ಪರಮ ಪುಣ್ಯೋದಯವನೀಶನ
(೨) ನಿರುಪಮಿತ, ನಿಜರೂಪ, ನಿರಿಗೆ – ಪದಗಳ ಬಳಕೆ

ಪದ್ಯ ೬೭: ಶಿವನು ಅರ್ಜುನನ ಮನಸ್ತಾಪವನ್ನು ಹೇಗೆ ಹೋಗಲಾಡಿಸಿದನು?

ಈ ಪರಿಯಲರ್ಜುನನ ಮನದನು
ತಾಪವನು ಕಾಣುತಾ ಶಾಬರ
ರೂಪರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪರಸದಲಿ ನರನ ಚಿತ್ತದ
ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ (ಅರಣ್ಯ ಪರ್ವ, ೭ ಸಂಧಿ, ೬೭ ಪದ್ಯ)

ತಾತ್ಪರ್ಯ:
ಈ ರೀತಿ ಅರ್ಜುನನು ಶಿವನ ಬಗ್ಗೆ ತನ್ನ ಮನಸ್ಸಿನಲ್ಲಿದ್ದುದನ್ನು ತೋಡಿಕೊಂಡು ದುಃಖಪಡುವುದನ್ನು ಕಂಡು, ಅವನ ಮನಸ್ಸಿನ ಅನುತಾಪವನ್ನು ತಿಳಿದು, ಕಿರಾತರೂಪಿನ ಮರೆಯಲ್ಲಿದ್ದ ತನ್ನ ಉನ್ನತವಾದ ನಾಶವಿಲ್ಲದ ತರುಣ ರೂಪವನ್ನು ಶಿವನು ತೋರಿಸಿ ಅರ್ಜುನನ ಮನಸ್ಸಿನ ತಾಪವನ್ನು ಹೋಗಲಾಡಿಸಿದನು.

ಅರ್ಥ:
ಪರಿ: ರೀತಿ; ಮನ: ಮನಸ್ಸು; ಅನುತಾಪ: ಪಶ್ಚಾತ್ತಾಪ, ದುಃಖ; ಕಾಣು: ತೋರು; ಶಾಬರ: ಬೇಡ; ರೂಪ: ಆಕಾರ; ರಚನೆ: ನಿರ್ಮಾಣ; ತೆರೆ: ಬಿಚ್ಚುವಿಕೆ; ಮರೆ: ಗುಟ್ಟು, ರಹಸ್ಯ; ಮೆರೆ: ಹೊಳೆ, ಪ್ರಕಾಶಿಸು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅವ್ಯಾಹತ: ತಡೆಯಿಲ್ಲದ, ಎಡೆಬಿಡದ; ನಿಜ: ದಿಟ; ಉನ್ನತ: ಶ್ರೇಷ್ಠ; ರಸ: ಸಾರ; ನರ: ಅರ್ಜುನ; ಚಿತ್ತ: ಮನಸ್ಸು; ತಾಪ: ಬಿಸಿ, ಉಷ್ಣತೆ; ಅಡಗು: ಅವಿತುಕೊಳ್ಳು, ಮರೆಯಾಗು; ತಂಪು: ತಣಿವು, ಶೈತ್ಯ; ಎರೆ: ಸುರಿ; ತರುಣ: ಹರೆಯದವನು, ಯುವಕ ; ಶಶಿ: ಚಂದ್ರ; ಮೌಳಿ: ಶಿರ;

ಪದವಿಂಗಡಣೆ:
ಈ ಪರಿಯಲ್+ಅರ್ಜುನನ +ಮನದ್+ಅನು
ತಾಪವನು +ಕಾಣುತಾ +ಶಾಬರ
ರೂಪರಚನೆಯ+ ತೆರೆಯ+ ಮರೆಯಲಿ +ಮೆರೆವ +ಚಿನ್ಮಯದ
ರೂಪನ್+ಅವ್ಯಾಹತ +ನಿಜೋನ್ನತ
ರೂಪ+ರಸದಲಿ+ ನರನ +ಚಿತ್ತದ
ತಾಪವ್+ಅಡಗಲು +ತಂಪನ್+ಎರೆದನು +ತರುಣ +ಶಶಿಮೌಳಿ

ಅಚ್ಚರಿ:
(೧) ರೂಪ – ೩ ಸಾಲಿನ ಮೊದಲ ಪದ
(೨) ರೂಪ, ತಾಪ – ಪ್ರಾಸ ಪದಗಳು
(೩) ಶಿವನ ತೋರಿದ ಪರಿ – ನರನ ಚಿತ್ತದ ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ