ಪದ್ಯ ೬೬: ಅರ್ಜುನನು ಯಾರೊಂದಿಗೆ ಯುದ್ಧಮಾಡಿ ಕೊರಗಿದನು?

ಸರಸಿಜಾಸನ ವಿಷ್ಣುರುದ್ರೇ
ಶ್ವರ ಸದಾಶಿವರಾವಳೊಬ್ಬಳ
ಚರಣ ಸೇವಾಸಂಗದಲ್ಲಿಯೆ ಸುಪ್ರತಿಷ್ಠಿತರು
ಪರಮಶಕ್ತಿಯಾದವನಂಘ್ರಿಗೆ
ಶಿರವನೊಡ್ಡುವಳಾ ಪರಾತ್ಪರ
ಪರಮಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೬ ಪದ್ಯ)

ತಾತ್ಪರ್ಯ:
ಬ್ರಹ್ಮ, ವಿಷ್ಣು, ರುದ್ರದೇವರು, ಈಶ್ವರ, ಸದಾಶಿವರೆಂಬ ಪಂಚ ಪುರುಷರು, ಪರಮ ಶಕ್ತಿಯಾದ ದೇವಿಯ ಚರಣಸೇವೆಯಲ್ಲೇ ನಿರತಉ. ಅಂತಹ ಪರಮ ಶಕ್ತಿಯೂ ಯಾರ ಪಾದಗಳಿಗೆ ತಲೆಬಾಗುವಳೋ ಅಂತಹ ಶ್ರೇಷ್ಠರಲ್ಲಿ ಅತಿ ಶ್ರೇಷ್ಠನಾದ ಪರಶಿವನಲ್ಲಿ ನಾನು ಯುದ್ಧ ಮಾಡಿದೆನೇ ಶಿವ ಶಿವಾ ಎಂದು ಕೊರಗಿದನು.

ಅರ್ಥ:
ಸರಸಿಜ: ಕಮಲ; ಸರಸಿಜಾಸನ: ಕಮಲವನ್ನು ಆಸನವನ್ನಾಗಿಸಿರುವ (ಬ್ರಹ್ಮ); ವಿಷ್ಣು: ಶೌರಿ; ರುದ್ರ: ಶಿವ; ಸದಾಶಿವ: ಶಂಕರ; ಚರಣ: ಪಾದ; ಸೇವೆ: ಪೂಜೆ, ಉಪಾಸನೆ; ಸಂಗ: ಜೊತೆ; ಪ್ರತಿಷ್ಠರು: ಶ್ರೇಷ್ಠವಾದವರು; ಪರಮ: ಶ್ರೇಷ್ಠ; ಶಕ್ತಿ: ಬಲ, ದೇವತೆ; ಅಂಘ್ರಿ: ಪಾದ; ಶಿರ: ತಲೆ; ಒಡ್ಡು: ನೀಡು; ಪರಾತ್ಪರ: ಶ್ರೇಷ್ಠನಾದವನು, ಪರಮಪುರುಷ; ಸೆಣಸು: ಜಗಳವಾಡು;

ಪದವಿಂಗಡಣೆ:
ಸರಸಿಜಾಸನ +ವಿಷ್ಣು+ರುದ್ರ
ಈಶ್ವರ +ಸದಾಶಿವರ್+ಆವಳೊಬ್ಬಳ
ಚರಣ+ ಸೇವಾ+ಸಂಗದಲ್ಲಿಯೆ+ ಸುಪ್ರತಿಷ್ಠಿತರು
ಪರಮಶಕ್ತಿಯಾದವನ್+ಅಂಘ್ರಿಗೆ
ಶಿರವನ್+ಒಡ್ಡುವಳ್+ಆ+ಪರಾತ್ಪರ
ಪರಮಶಿವನಲಿ+ ಸೆಣಸಿದೆವಲಾ+ ಶಿವ+ ಶಿವಾಯೆಂದ

ಅಚ್ಚರಿ:
(೧) ಚರಣ, ಅಂಘ್ರಿ – ಸಮನಾರ್ಥಕ ಪದ
(೨) ಪರಾತ್ಪರ, ಪರಮಶಿವ, ಪರಮಶಕ್ತಿ – ಪರ ಪದದ ಬಳಕೆ
(೩) ಪಂಚ ಮೂಲ ಪುರುಷರು – ಬ್ರಹ್ಮ, ವಿಷ್ಣು, ರುದ್ರ, ಶಿವ, ಸದಾಶಿವ

ಪದ್ಯ ೬೫: ಶಿವನ ಗುಣಗಾನವನ್ನು ಅರ್ಜುನನು ಹೇಗೆ ಮಾಡಿದನು?

ಸ್ಫುರದಕಾರಾದಿಯಹಕಾರೋ
ತ್ತರದ ಶಬ್ದ ಬ್ರಹ್ಮಮಯ ವಿ
ಸ್ತರದಹಂತತ್ತ್ವದ ಮಹತ್ತತ್ತ್ವಾತಿಶಯ ಪದದ
ಪುರುಷ ಮೂಲ ಪ್ರಕೃತಿಗಳನು
ತ್ತರಿಸಿ ತೊಳತೊಳತೊಳಗಿ ಬೆಳಗುವ
ಪರಮ ಶಿವನಲಿ ಸೆಣಸಿದೆವಲಾ ಶಿವಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೫ ಪದ್ಯ)

ತಾತ್ಪರ್ಯ:
ಅಕಾರದಿಮ್ದ ಹಕಾರದವರೆಗಿನ ಅಕ್ಷರಗಳಿಂದಾದ ಶಬ್ದ ಬ್ರಹ್ಮವೂ, ಅಹಂಕಾರ ಮತ್ತು ಮಹತತ್ವಗಳನ್ನೂ, ಮೂಲಪ್ರಕೃತಿ ಮತ್ತು ಪುರುಷ ತತುವಗಳನ್ನೂ ಮೀರಿ ಸ್ವಯಂ ಜ್ಯೋತಿ ಸ್ವರೂಪನಾದ ಪರಶಿವನೊಡನೆ ನಾನು ಸೆಣಸಿದೆನೇ ಶಿವ ಶಿವಾಯೆಂದು ಅರ್ಜುನನು ತನ್ನ ಮೂರ್ಖತನವನ್ನು ಹಳಿದುಕೊಂಡನು.

ಅರ್ಥ:
ಸ್ಪುರಿತ: ಹೊಳೆವ, ಗೋಚರಿಸಿದ; ಆದಿ: ಮೊದಲು; ಉತ್ತರ: ಮುಂದೆ; ಶಬ್ದ: ರವ; ಬ್ರಹ್ಮ:ಪರಮಾತ್ಮ, ಪರತತ್ವ; ವಿಸ್ತರ: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಅಹಂ: ಅಹಂಕಾರ; ತತ್ವ:ಸಿದ್ಧಾಂತ, ನಿಯಮ; ಮಹತ್: ಶ್ರೇಷ್ಠ; ಅತಿಶಯ: ಹೆಚ್ಚು; ಪದ: ಸರಿಯಾದ ಸ್ಥಿತಿ, ಅವಸ್ಥೆ; ಪುರುಷ: ಬ್ರಹ್ಮ; ಮೂಲ: ಆದಿ; ಪ್ರಕೃತಿ: ಸಹಜ ಸ್ಥಿತಿಯಲ್ಲಿರುವುದು; ಉತ್ತರ: ಮುಂದಿನದು, ಬಿನ್ನಹ; ತೊಳಸು: ಪ್ರಕಾಶಿಸು; ಬೆಳಗು: ಹೊಳೆವ; ಪರಮ: ಶ್ರೇಷ್ಠ; ಸೆಣಸು: ಜಗಳವಾಡು;

ಪದವಿಂಗಡಣೆ:
ಸ್ಫುರದ್+ಅಕಾರಾದಿಯ+ಹಕಾರ
ಉತ್ತರದ +ಶಬ್ದ +ಬ್ರಹ್ಮಮಯ +ವಿ
ಸ್ತರದ್+ಅಹಂತತ್ತ್ವದ +ಮಹತ್+ತತ್ತ್ವ+ ಅತಿಶಯ +ಪದದ
ಪುರುಷ+ ಮೂಲ +ಪ್ರಕೃತಿಗಳನ್
ಉತ್ತರಿಸಿ +ತೊಳತೊಳತೊಳಗಿ +ಬೆಳಗುವ
ಪರಮ +ಶಿವನಲಿ +ಸೆಣಸಿದೆವಲಾ +ಶಿವ+ಶಿವಾಯೆಂದ

ಅಚ್ಚರಿ:
(೧) ಅಹಂತತ್ವ, ಮಹತ್ತತ್ವ, ತೊಳತೊಳತೊಳಗಿ – ಪದಗಳ ಬಳಕೆ

ಪದ್ಯ ೬೪: ಶಿವನ ಗುಣಗಾನವನ್ನು ಅರ್ಜುನ ಹೇಗೆ ಮಾಡಿದನು?

ಸೇವ್ಯನನು ಸತ್ಕ್ರಿಯೆಗಳಲಿ ದ್ರ
ಷ್ಟವ್ಯನನು ದೃಢ ಚಿತ್ತದಲಿ ಶ್ರೋ
ತವ್ಯನನು ಮಂತವ್ಯನನು ಸಂಕೀರ್ತಿತವ್ಯನನು
ಅವ್ಯಯನನಕ್ಷಯನನಭವನ
ನವ್ಯಸನನಜ್ಞಾನದಲಿ ಯೋ
ದ್ಧವ್ಯನೆಂದೇ ಸೆಣಸಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೪ ಪದ್ಯ)

ತಾತ್ಪರ್ಯ:
ಸತ್ಕರ್ಮಗಳಿಂದ ಸೇವಿಸಬೇಕಾದವನನ್ನೂ, ದೃಢ ಚಿತ್ತದಲ್ಲಿ ನೋಡಬಲ್ಲವನನ್ನೂ, ಯಾರನ್ನೇ ಸದಾ ಕೇಳಬೇಕಾದವನನ್ನೂ, ಯಾರನ್ನೇ ಮನನ ಮಾಡಬೇಕೋ ಅವನನ್ನೂ ಯಾರನ್ನೇ ಸಂಕೀರ್ತಿಸಬೇಕೋ ಅವನನ್ನೂ, ಹುಟ್ಟದವನನ್ನೂ, ದುಃಖರಹಿತನಾದವನನ್ನೂ, ಅಜ್ಞಾನದಿಂದ ಯುದ್ಧಮಾಡಿ ಗೆಲ್ಲುವೆನೆಂದು ಹೋರಾಡಿದೆನಲ್ಲವೇ ಶಿವ ಶಿವಾ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಸೇವ್ಯ: ಸೇವೆಗೆ ಅರ್ಹನಾದ; ಕ್ರಿಯೆ: ಕೆಲಸ, ಕಾರ್ಯ; ದ್ರಷ್ಟ: ಕಣ್ಣು ಕಾಣುವವನು; ದೃಢ: ಗಟ್ಟಿಯಾದುದು; ಚಿತ್ತ: ಮನಸ್ಸು; ಶ್ರೋತ: ಕೇಳು; ಮಂತವ್ಯ: ಮನನ ಮಾಡಬೇಕಾದುದು; ಸಂಕೀರ್ತನೆ: ಗುಣಗಳ ಕೀರ್ತನೆ; ಅವ್ಯಯ: ನಾಶವಿಲ್ಲದವನು; ಅಕ್ಷಯ: ಬರಿದಾಗದುದು; ಅಭವ: ಹುಟ್ಟಿಲ್ಲದುದು; ವ್ಯಸನ: ದುಃಖ, ಗೀಳು; ಅಜ್ಞಾನ: ಅರಿವಿಲ್ಲದ ಸ್ಥಿತಿ; ಯೋದ್ಧವ್ಯ: ಯುದ್ಧಮಾಡು; ಸೆಣಸು: ಹೋರಾಡು;

ಪದವಿಂಗಡಣೆ:
ಸೇವ್ಯನನು +ಸತ್ಕ್ರಿಯೆಗಳಲಿ+ ದ್ರ
ಷ್ಟವ್ಯನನು+ ದೃಢ+ ಚಿತ್ತದಲಿ +ಶ್ರೋ
ತವ್ಯನನು+ ಮಂತವ್ಯನನು+ ಸಂಕೀರ್ತಿತವ್ಯನನು
ಅವ್ಯಯನನ್+ಅಕ್ಷಯನನ್+ಅಭವನನ್
ಅವ್ಯಸನನ್+ಅಜ್ಞಾನದಲಿ +ಯೋ
ದ್ಧವ್ಯನೆಂದೇ +ಸೆಣಸಿದೆವಲಾ+ ಶಿವ+ ಶಿವಾಯೆಂದ

ಅಚ್ಚರಿ:
(೧) ಶಿವನ ಗುಣಗಾನ – ಸೇವ್ಯನ್, ದ್ರಷ್ಟವ್ಯನ್, ಶ್ರೋತವ್ಯನ್, ಅವ್ಯಯನ್, ಅಕ್ಷಯನ್, ಅಭವನ್, ಅಯ್ವಸನನ್

ಪದ್ಯ ೬೩: ಶಿವನ ಮಹಿಮೆಯನ್ನು ಅರ್ಜುನ ಹೇಗೆ ವಿವರಿಸಿದ?

ಆವನೊಬ್ಬನಣೊರಣೀಯನ
ದಾವನುರು ಮಹತೋ ಮಹೀಯನ
ದಾವನುರುತರ ದೃಷ್ಟಿ ಸಂಗತ ವಿಶ್ವಸಮಯದಲಿ
ಆವನೊಬ್ಬನು ನಾಮ ರೂಪಗು
ಣಾವಲಂಬನನಲ್ಲದೀಶ್ವರ
ನಾವನಾತನ ಕೂಡೆ ತೋಟಿಯೆ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೩ ಪದ್ಯ)

ತಾತ್ಪರ್ಯ:
ಯಾವನು ಅಣುವಿಗೂ ಅಣುವೋ, ಮಹತ್ತಿಗೂ ಮಹತ್ತೋ, ವಿಶ್ವರೂಪದಿಂದ ಯಾವನು ಕಾಣಿಸಿಕೊಳ್ಳುವವನೋ, ಯಾವನು ರೂಪ ನಾಮ ಗುಣಗಳಿಲ್ಲದ ಈಶ್ವರನೋ, ಶಿವ ಶಿವಾ ನಾನು ಅವನ ಜೊತೆಗೆ ಯುದ್ಧ ಮಾಡಿದೆನಲ್ಲವೇ ಎಂದು ಅರ್ಜುನನು ಕೊರಗಿದನು.

ಅರ್ಥ:
ಅಣು: ಅತ್ಯಂತ ಚಿಕ್ಕದ್ದು; ಉರು:ಅತಿದೊಡ್ಡ, ಶ್ರೇಷ್ಠ; ಮಹತ್: ದೊಡ್ಡ; ಉರುತರ: ಬಹಳ ಶ್ರೇಷ್ಠ, ಅತಿಶ್ರೇಷ್ಠ; ದೃಷ್ಟಿ: ನೋಟ; ಸಂಗತ: ಸೇರಿದ, ಒಟ್ಟಾದ; ವಿಶ್ವ: ಜಗತ್ತು; ಸಮಯ: ಕಾಲ; ನಾಮ: ಹೆಸರು; ರೂಪ: ಆಕಾರ; ಗುಣ: ನಡತೆ, ಸ್ವಭಾವ; ಅವಲಂಬನ: ಹೊಂದಿಕೆ, ಆಶ್ರಯ; ಈಶ್ವರ: ಶಂಕರ; ಕೂಡೆ: ಜೊತೆ; ತೋಟಿ: ಜಗಳ;

ಪದವಿಂಗಡಣೆ:
ಆವನ್+ಒಬ್ಬನ್+ಅಣೊರಣೀಯನದ್
ಆವನ್+ಉರು +ಮಹತೋ ಮಹೀಯನದ್
ಆವನ್+ಉರುತರ+ ದೃಷ್ಟಿ +ಸಂಗತ+ ವಿಶ್ವಸಮಯದಲಿ
ಆವನ್+ಒಬ್ಬನು +ನಾಮ +ರೂಪಗು
ಣಾವಲಂಬನನಲ್ಲದ್+ಈಶ್ವರನ್
ಆವನ್+ಆತನ+ ಕೂಡೆ +ತೋಟಿಯೆ +ಶಿವ+ ಶಿವಾಯೆಂದ

ಅಚ್ಚರಿ:
(೧) ಅಣೋರಣೀಯ, ಮಹತೋ ಮಹೀಯನ್ – ಪದಗಳ ಬಳಕೆ

ಪದ್ಯ ೬೨: ಅರ್ಜುನನಿಗೆ ಶಿವನೆದುರು ನಿಲ್ಲುವ ಶಕ್ತಿಯಿದೆಯೆ?

ಎವಗೆರಡು ಕಣ್ವಿಶ್ವತಶ್ಚ
ಕ್ಷಿವಿನೊಡನೆ ಸಕ್ರೋಧದರುಶನ
ವೆವಗೆರಡುಭುಜ ವಿಶ್ವತೋಭುಜನೊಡನೆ ಸಂಗ್ರಾಮ
ಭುವನ ಚರಣನ ವಿಶ್ವತೋಮುಖ
ಶಿವನ ನಮ್ಮೀ ಕಾಲು ನಾಲಿಗೆ
ಯವಗಡಿಸಿ ನಿಲಲಾವ್ ಸಮರ್ಥರೆ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ನನಗೆ ಎರಡು ಕಣ್ಣು, ಎರಡು ಭುಜ, ಶಿವನಿಗೆ ವಿಶ್ವದಲ್ಲೆಲ್ಲಾ ಕಣ್ಣುಗಳು, ವಿಶ್ವತೋಭುಜ, ಅವನನ್ನು ನಾನು ಕೋಪದಿಂದ ನಿಟ್ಟಿಸಿ ಹೋರಾಡಿದೆ. ಭೂಮಿಯೇ ಅವನ ಚರಣ, ನಾನು ಅವನನ್ನು ಕಾಲಿನಿಂದ ಪ್ರತಿಭಟಿಸಿದೆ. ಅವನು ಅನಂತಮುಖ ನನಗಿರುವುದು ಒಂದೇ ಮುಖ, ನನಗಿರುವ ನಾಲಿಗೆಯಿಂದ ಅವನನ್ನು ಮೂದಲಿಸಿದೆ, ಬೈದೆ ತಿರಸ್ಕರಿಸಿದೆ. ಅವನನ್ನು ಎದುರಿಸಿ ನಿಲ್ಲುವ ಶಕ್ತಿ ನನಗಿದೆಯೇ ಶಿವ ಶಿವಾ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಕಣ್ಣು: ನಯನ; ಎರಡು: ದ್ವಂದ್ವ; ವಿಶ್ವ: ಜಗತ್ತು; ಚಕ್ಷು: ಕಣ್ಣು; ಕ್ರೋಧ: ಕೋಪ; ದರುಶನ: ನೋಟ; ಭುಜ: ಬಾಹು; ವಿಶ್ವ: ಜಗತ್ತು; ಸಂಗ್ರಾಮ: ಯುದ್ಧ; ಭುವನ: ಲೋಕ; ಚರಣ: ಪಾದ; ಮುಖ: ಆನನ; ಕಾಲು: ಪಾದ; ನಾಲಿಗೆ: ಜಿಹ್ವೆ; ಅವಗಡಿಸು: ಕಡೆಗಣಿಸು, ಸೋಲಿಸು; ಸಮರ್ಥ: ಬಲಶಾಲಿ, ಗಟ್ಟಿಗ; ನಿಲ್ಲು: ತಡೆ;

ಪದವಿಂಗಡಣೆ:
ಎವಗ್+ಎರಡು+ ಕಣ್+ವಿಶ್ವತಶ್
ಚಕ್ಷುವಿನೊಡನೆ +ಸಕ್ರೋಧ+ದರುಶನವ್
ಎವಗ್+ಎರಡು+ಭುಜ +ವಿಶ್ವತೋ+ಭುಜನೊಡನೆ +ಸಂಗ್ರಾಮ
ಭುವನ +ಚರಣನ+ ವಿಶ್ವತೋಮುಖ
ಶಿವನ +ನಮ್ಮೀ +ಕಾಲು +ನಾಲಿಗೆ
ಅವಗಡಿಸಿ+ ನಿಲಲಾವ್ +ಸಮರ್ಥರೆ +ಶಿವ+ ಶಿವಾಯೆಂದ

ಅಚ್ಚರಿ:
(೧) ಶಿವನ ವರ್ಣನೆ – ವಿಶ್ವತಶ್ಚಕ್ಷು, ವಿಶ್ವತೋಭುಜ, ವಿಶ್ವತೋಮುಖ