ಪದ್ಯ ೫೬: ಕಿರಾತನೊಡನೆ ಯುದ್ಧ ಮಾಡಿ ಅರ್ಜುನನೇಕೆ ನೊಂದನು?

ಲೋಕವಾವನ ಮಾಯೆಯೀ ಜಗ
ದಾಕೆವಾಲರದಾರು ಚಂದ್ರದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ
ಲೋಕರಚನಾರಕ್ಷೆ ಸಂಹೃತಿ
ಯಾಕರಣೆ ತಾನಾರದಾ ಜಗ
ದೇಕದೈವದ ಕೂಡೆ ಕದನವೆ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೫೬ ಪದ್ಯ)

ತಾತ್ಪರ್ಯ:
ಯಾರ ಮಾಯೆಯೇ ಈ ಲೋಕವೋ, ಈ ಲೋಕವನ್ನು ನಡೆಸುವ ವೀರನು ಯಾರೋ, ಚಂದ್ರ ಸೂರ್ಯ ಗ್ರಹಗಳು ನಕ್ಷತ್ರಗಳು ಯಾರ ತೇಜಸ್ಸಿನಿಂದ ಬೆಳಗುವವೋ, ಲೋಕದ ಸೃಷ್ಟಿ ರಕ್ಷಣೆ ಸಂಹಾರಗಳನ್ನು ಮಾಡುವವನಾರೋ ಅಂತಹ ಜಗದೇಕ ದೈವದ ಜೊತೆ ನಾನು ಯುದ್ಧ ಮಾಡಲು ಹೋದೆನಲ್ಲಾ, ಶಿವ ಶಿವಾ ಎಂದು ಅರ್ಜುನನು ಪಶ್ಚಾತ್ತಾಪ ಪಟ್ಟನು.

ಅರ್ಥ:
ಲೋಕ: ಜಗತ್ತು; ಮಾಯೆ: ಗಾರುಡಿ, ಇಂದ್ರಜಾಲ; ಜಗ: ಜಗತ್ತು, ಪ್ರಪಂಚ; ಆಕೆವಾಳ: ವೀರ, ಪರಾಕ್ರಮಿ; ಚಂದ್ರ: ಶಶಿ; ದಿವಾಕರ: ಸೂರ್ಯ; ಗ್ರಹ: ಆಕಾಶಚರಗಳು; ರಾಶಿ: ಗುಂಪು; ತಾರೆ: ನಕ್ಷತ್ರ; ತೇಜ: ಕಾಂತಿ; ರಚನೆ: ನಿರ್ಮಾಣ, ಸೃಷ್ಟಿ; ಸಂಹೃತಿ: ನಾಶ, ಸಂಹಾರ; ದೈವ: ಭಗವಂತ; ಕೂಡೆ: ಜೊತೆ; ಕದನ: ಯುದ್ಧ;

ಪದವಿಂಗಡಣೆ:
ಲೋಕವ್+ಆವನ +ಮಾಯೆಯ್+ಈ+ ಜಗದ್
ಆಕೆವಾಲರ್+ಅದಾರು +ಚಂದ್ರ+ದಿ
ವಾಕರ+ ಗ್ರಹರಾಶಿ+ ತಾರೆಗಳ್+ಆರ +ತೇಜದಲಿ
ಲೋಕರಚನಾರಕ್ಷೆ+ ಸಂಹೃತಿ
ಆಕರಣೆ +ತಾನಾರದ್+ಆ+ ಜಗ
ದೇಕದೈವದ +ಕೂಡೆ +ಕದನವೆ +ಶಿವ+ ಶಿವಾಯೆಂದ

ಅಚ್ಚರಿ:
(೧) ಶಿವನ ಗುಣಗಾನ – ಲೋಕವಾವನ ಮಾಯೆಯೀ ಜಗದಾಕೆವಾಲರದಾರು ಚಂದ್ರದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ, ಜಗದೇಕದೈವ

ಪದ್ಯ ೫೫: ಅರ್ಜುನನು ಕೊರಗಲು ಕಾರಣವೇನು?

ಆವನನು ಜಪಯಜ್ಞದಲಿ ಸಂ
ಭಾವಿಸುವರಾವನ ಪದಾಂಬುಜ
ಸೇವೆಯಲಿ ಸನಕಾದಿಗಳ್ ಧನ್ಯಾಭಿಮಾನಿಗಳು
ಆವನೊಬ್ಬನು ನಾದ ಬಿಂದುಕ
ಳಾ ವಿಶೇಷಾತೀತನೀತ ನೊ
ಳಾವು ಸಮರಕೆ ಸೆಣಸಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೫೫ ಪದ್ಯ)

ತಾತ್ಪರ್ಯ:
ಜಪಯಜ್ಞಗಳಿಂದ ಯಾರನ್ನು ಆರಾಧಿಸುವರೋ, ಯಾರ ಪಾದ ಸೇವೆಯಿಂದ ತಾವು ಧನ್ಯರಾದೆವೆಂದು ಸನಕಾದಿಗಳು ಅಭಿಮಾನ ಪದುವರೋ, ಯಾರು ನಾದ ಬಿಂದು ಕಳೆಗಳೆಂಬ ವಿಶೇಷಗಳ ಆಚೆಗಿರುವನೋ ಶಿವ ಶಿವಾ ಅವನೊಡನೆ ನಾನು ಯುದ್ಧ ಮಾಡಿದೆನಲಾ ಎಂದು ಕೊರಗಿದನು.

ಅರ್ಥ:
ಜಪ: ತಪ, ಧ್ಯಾನ; ಯಜ್ಞ: ಕ್ರತು; ಸಂಭಾವನೆ: ಮನ್ನಣೆ; ಪದಾಂಬುಜ: ಪಾದ ಪದ್ಮ; ಸೇವೆ: ಉಪಚಾರ, ಪೂಜೆ; ಧನ್ಯ: ಪುಣ್ಯವಂತ, ಕೃತಾರ್ಥ; ಅಭಿಮಾನಿ: ಪ್ರೀತಿಯುಳ್ಳವನು; ನಾದ: ಧ್ವನಿ, ಶಬ್ದ; ಬಿಂದು:ರೂಪ; ಕಳ: ಮಧುರವಾದ, ಇಂಪಾದ; ಸಮರ: ಯುದ್ಧ; ಸೆಣಸು: ಹೋರಾಡು;

ಪದವಿಂಗಡಣೆ:
ಆವನನು+ ಜಪ+ಯಜ್ಞದಲಿ +ಸಂ
ಭಾವಿಸುವರ್+ಆವನ +ಪದಾಂಬುಜ
ಸೇವೆಯಲಿ +ಸನಕಾದಿಗಳು+ ಧನ್ಯ+ಅಭಿಮಾನಿಗಳು
ಆವನೊಬ್ಬನು +ನಾದ +ಬಿಂದುಕ
ಳಾ +ವಿಶೇಷಾತೀತನ್+ಈತನೊಳ್
ಆವು +ಸಮರಕೆ +ಸೆಣಸಿದೆವಲಾ +ಶಿವ +ಶಿವಾಯೆಂದ

ಅಚ್ಚರಿ:
(೧) ಶಿವನ ಮಹಿಮೆ – ನಾದ ಬಿಂದುಕಳಾ ವಿಶೇಷಾತೀತನು

ಪದ್ಯ ೫೪: ಅರ್ಜುನನು ಯಾರೊಡನೆ ಯುದ್ಧಮಾಡಿದೆನೆಂದು ನೊಂದನು?

ಆವನನು ಜಪಯಜ್ಞಕರ್ಮದೊ
ಳಾವನನು ನಿಯಮಾದಿಯೋಗದೊ
ಳಾವನನು ವಿವಿಧಾರ್ಚನಾಂಕಿತ ಭಕ್ತಿಮಾರ್ಗದಲಿ
ಆವನನು ಜೀವಾತ್ಮ ಚೈತ
ನ್ಯಾವಲಂಬನನೆಂದು ಭಜಿಸುವ
ರಾವು ರಣದಲಿ ಸೆಣಸಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೫೪ ಪದ್ಯ)

ತಾತ್ಪರ್ಯ:
ಯಾರನ್ನು ಜಪ, ತಪ, ಯಜ್ಞ, ಕರ್ಮ, ಯೋಗ, ವಿವಿಧ ಅರ್ಚನಾ ಸಹಿತವಾದ ಭಕ್ತಿಗಳಿಂದ ಭಜಿಸುವವರೋ, ಯಾರನ್ನು ಜೀವ, ಆತ್ಮರಿಬ್ಬರಲ್ಲೂ ಏಕರೂಪವಾದ ಚೈತನ್ಯವೆಂದು ಅನುಸಂಧಾನ ಮಾಡುವರೋ ಅಂತಹ ಶಂಕರನೊಡನೆ ನಾನು ಯುದ್ಧ ಮಾಡಿದೆನಲ್ಲಾ ಶಿವ ಶಿವಾ ಎಂದು ಕೊರಗಿದನು.

ಅರ್ಥ:
ಜಪ: ತಪ; ಯಜ್ಞ: ಕ್ರತು; ಕರ್ಮ: ಕಾರ್ಯ; ನಿಯಮ: ವ್ರತ, ನೇಮ; ಆದಿ: ಮುಂತಾದ; ಯೋಗ: ಧ್ಯಾನ; ವಿವಿಧ: ಹಲವಾರು; ಅರ್ಚನೆ: ಆರಾಧನೆ; ಅಂಕಿತ: ಗುರುತು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮಾರ್ಗ: ದಾರಿ; ಜೀವಾತ್ಮ: ಜೀವಿಗಳಲ್ಲೆಲ್ಲ ಇರುವ ಆತ್ಮ; ಚೈತನ್ಯ: ಜೀವಂತಿಕೆ; ಅವಲಂಬನೆ: ಆಸರೆ; ಭಜಿಸು: ಆರಾಧಿಸು; ರಣ: ಯುದ್ಧ; ಸೆಣಸು: ಹೋರಾಡು;

ಪದವಿಂಗಡಣೆ:
ಆವನನು +ಜಪ+ಯಜ್ಞ+ಕರ್ಮದೊಳ್
ಆವನನು +ನಿಯಮ+ಆದಿ+ಯೋಗದೊಳ್
ಆವನನು +ವಿವಿಧ+ಅರ್ಚನ+ಅಂಕಿತ +ಭಕ್ತಿಮಾರ್ಗದಲಿ
ಆವನನು +ಜೀವಾತ್ಮ +ಚೈತನ್ಯ
ಅವಲಂಬನನೆಂದು+ ಭಜಿಸುವರ್
ಆವು +ರಣದಲಿ+ ಸೆಣಸಿದೆವಲಾ+ ಶಿವ+ ಶಿವಾಯೆಂದ

ಅಚ್ಚರಿ:
(೧) ಆವನನು – ನಾಲ್ಕು ಸಾಲಿನ ಮೊದಲ ಪದ

ಪದ್ಯ ೫೩: ಅರ್ಜುನನ ಮನಸ್ಸಿಗೆ ಯಾವ ಜಾಡ್ಯ ಆವರಿಸಿತೆಂದ್ ಹೇಳಿದನು?

ಏಸು ಬಾಣದೊಳೆಚ್ಚೊಡೆಯು ಹೊರ
ಸೂಸಿದವು ತಾನರಿದುದಿಲ್ಲ ಮ
ಹಾಶರವ ಕಳುಹಿದರೆ ನುಂಗಿದನೊಡನರಿಯೆ ನಾನು
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚೆತ್ತೆನೇ ಹಿಂ
ದೇಸು ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ (ಅರಣ್ಯ ಪರ್ವ, ೭ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಷ್ಟು ಬಾಣಗಳನ್ನು ಬಿಟ್ಟರೂ ಅವು ನಾಟದೆ ಹೊರಕ್ಕೆ ಹೋದವು. ಆಗ ನಾನು ತಿಳಿದುಕೊಳ್ಳಲಿಲ್ಲ. ದಿವ್ಯಾಸ್ತ್ರಗಳಿಂದ ಹೊಡೆದರೆ ಅವನ್ನು ನುಂಗಿ ಬಿಟ್ಟ ಆಗಲೂ ನನಗೆ ತಿಳಿಯಲಿಲ್ಲ. ಗಾಂಡೀವ ಧನುಸ್ಸನ್ನೇ ಸೆಳೆದುಕೊಂಡರೂ, ಖಡ್ಗವನ್ನೂ ಸೆಳೆದುಕೊಂಡರೂ ನನಗೆ ಎಚ್ಚರ ಬರೈಲ್ಲ. ಎಷ್ಟು ಜನ್ಮದ ಜಾಡ್ಯವು ನನ್ನ ಮತಿಗೆ ಮುಸುಕು ಹಾಕಿತೋ ಏನೋ ಎಂದು ಅರ್ಜುನನು ಹಲುಬಿದನು.

ಅರ್ಥ:
ಏಸು: ಎಷ್ಟು; ಬಾಣ: ಶರ; ಎಚ್ಚು: ಬಾಣ ಬಿಡು; ಹೊರ: ಆಚೆ; ಸೂಸು: ಎರಚು, ಚಲ್ಲು; ಅರಿ: ತಿಳಿ; ಮಹಾಶರ: ಶ್ರೇಷ್ಠವಾದ ಬಾಣ; ಕಳುಹು: ಹೊರಹಾಕು, ಬಿಡು; ನುಂಗು: ತಿನ್ನು; ಒಡನೆ: ಕೂಡಲೆ; ಅರಿ: ತಿಳಿ; ಶರಾಸನ: ಬಿಲ್ಲು; ಖಡ್ಗ: ಕತ್ತಿ; ಕೊಳಲು: ತೆಗೆದುಕೊ; ಎಚ್ಚರ: ನಿದ್ರೆಯಿಂದ ಏಳುವುದು; ಹಿಂದೆ: ಪೂರ್ವ; ಜನ್ಮ: ಜನನ; ಜಾಡ್ಯ: ಸೋಮಾರಿತನ; ಜವನಿಕೆ: ತೆರೆ, ಪರದೆ;

ಪದವಿಂಗಡಣೆ:
ಏಸು +ಬಾಣದೊಳ್+ಎಚ್ಚೊಡೆಯು +ಹೊರ
ಸೂಸಿದವು +ತಾನ್+ಅರಿದುದಿಲ್ಲ +ಮ
ಹಾಶರವ+ ಕಳುಹಿದರೆ+ ನುಂಗಿದನ್+ಒಡನ್+ಅರಿಯೆ+ ನಾನು
ಆ +ಶರಾಸನ +ಖಡ್ಗವನು+ ಕೊಳಲ್
ಐಸರೊಳಗ್+ಎಚ್ಚೆತ್ತೆನೇ +ಹಿಂದ್
ಏಸು +ಜನ್ಮದ +ಜಾಡ್ಯ +ಜವನಿಕೆಯೋದುದ್+ಎನಗೆಂದ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ
(೨) ಎಚ್ಚೊಡೆ, ಎಚ್ಚೆತ್ತು – ಪದಗಳ ಬಳಕೆ
(೩) ಶರಾಸನ – ಬಿಲ್ಲಿಗೆ ಬಳಸಿದ ಪದ

ಪದ್ಯ ೫೨: ಅರ್ಜುನನ ಮನಸ್ಥಿತಿ ಹೇಗಿತ್ತು?

ಸ್ವೇದ ಜಲದಲಿ ಮೀಂದು ಪುನರಪಿ
ಖೇದ ಪಂಕದೊಳದ್ದು ಬಹಳ ವಿ
ಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧ ಭಾವದ
ಭೇದದಲಿ ಮನ ಮುಂದುಗೆಡುತ್ರಿದುದು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬೆವರಿನಲ್ಲಿ ಮಿಂದು, ದುಃಖದ ಕೆಸರಿನಲ್ಲಿ ಮುಳುಗಿ, ವಿಷಾದದ ಧೂಳಿನಲ್ಲಿ ಹೊರಳಾಡಿ, ಭಯದ ನದಿಯಲ್ಲಿ ಈಜಾಡಿ, ಹೊರ ಬಂದು ಯಾವ ಭಾವವೂ ಇಲ್ಲದೆ ಮರಗಟ್ಟಿನಿಂದು ದಿಕ್ಕು ದಿಕ್ಕಿಗೆ ನುಗ್ಗುತ್ತಾ ಅನೇಕ ಭಾವನೆಗಳನ್ನು ತಾಳುತ್ತಾ ಅರ್ಜುನನ ಮನಸ್ಸು ಮುಂದುಗೆಡುತ್ತಿತ್ತು.

ಅರ್ಥ:
ಸ್ವೇದ: ಬೆವರು; ಜಲ: ನೀರು; ಮಿಂದು: ಮುಳುಗು; ಪುನರಪಿ: ಮತ್ತೆ; ಖೇದ: ದುಃಖ; ಪಂಕ: ಕೆಸರು; ಅದ್ದು: ಮುಳುಗಿಸು; ಬಹಳ: ತುಂಬ; ವಿಷಾದ: ದುಃಖ; ರಜ: ಕೊಳೆ; ಹೊರಳು: ಉರುಳಾಡು; ಭಯ: ಅಂಜಿಕೆ; ರಸ: ಸಾರ; ನದಿ: ಸರೋವರ; ಈಸಾಡು: ಈಜು; ಮೈ: ತನು; ತೆಗೆ: ಹೊರತರು; ಮರ: ತರು; ದೆಸೆ: ದಿಕ್ಕು; ಬೀದಿ: ಮಾರ್ಗ; ಅರಿ: ತಿಳಿ; ವಿವಿಧ: ಹಲವಾರು; ಭಾವ: ಭಾವನೆ, ಚಿತ್ತವೃತ್ತಿ; ಭೇದ: ಮುರಿ, ಒಡೆ; ಮನ: ಮನಸ್ಸು; ಕೆಡು: ಹದಗೆಡು;

ಪದವಿಂಗಡಣೆ:
ಸ್ವೇದ+ ಜಲದಲಿ +ಮಿಂದು +ಪುನರಪಿ
ಖೇದ+ ಪಂಕದೊಳದ್ದು+ ಬಹಳ +ವಿ
ಷಾದ +ರಜದಲಿ +ಹೊರಳಿ +ಭಯರಸ+ ನದಿಯೊಳ್+ಈಸಾಡಿ
ಮೈ+ತೆಗೆದು +ಮರನಾಗಿ+ ದೆಸೆಯಲಿ
ಬೀದಿವ್+ಅರಿವುತ +ವಿವಿಧ +ಭಾವದ
ಭೇದದಲಿ +ಮನ +ಮುಂದುಗೆಡುತ್ತಿದುದು +ಧನಂಜಯನ

ಅಚ್ಚರಿ:
(೧) ಉಪಮಾನಗಳ ಬಳಕೆ – ಸ್ವೇದ ಜಲದಲಿ ಮೀಂದು ಪುನರಪಿ ಖೇದ ಪಂಕದೊಳದ್ದು ಬಹಳ ವಿಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ ಮೈದೆಗೆದು ಮರನಾಗಿ
(೨) ಭೇದ, ಸ್ವೇದ, ಖೇದ, ವಿಷಾದ – ಪ್ರಾಸ ಪದಗಳು