ಪದ್ಯ ೫೧: ಅರ್ಜುನನೇಕೆ ಘಾಸಿಯಾದನು?

ಹೃದಯವಿಬ್ಬಗಿಯಾಯ್ತು ಕಂಗಳು
ಬೆದರಿದವು ವೈವರ್ಣ್ಯದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮಹರುಷದಲಿ
ಉದುರಿದವು ನೇತ್ರಾಂಬು ಬಿಂಕದ
ಬೆದರಿಕೆಯ ಮೂಢತೆಯ ತಿಳಿವಿನ
ಮುದದ ಖೇದದ ಗಾಯಘಾತಿಗೆ ಪಾರ್ಥನೊಳಗಾದ (ಅರಣ್ಯ ಪರ್ವ, ೭ ಸಂಧಿ, ೫೧ ಪದ್ಯ)

ತಾತ್ಪರ್ಯ:
ಮನಸ್ಸು ಎರಡು ಬಗೆಯಾಯಿತು. ಕಣ್ಣುಗಳು ಹೆದರಿ ಬಣ್ಣ ಕಳೆದುಕೊಂಡವು. ಮೈ ಗದಗದನೆ ನಡುಗಿತು. ಸಂತೋಷದಿಂದ ರೋಮಾಂಚನಗೊಂಡಿತು. ಕಣ್ಣೀರು ಸುರಿಯಿತು. ಹೆಮ್ಮೆ, ಭಯ, ದಡ್ಡತನ, ತಿಳಿವು, ಸಂತೋಷ ದುಃಖಗಳು ಮತ್ತೆ ಮತ್ತೆ ಸರದಿಯಿಂದ ಬಂದು ಹೊಡೆದುದರಿಂದ ಅರ್ಜುನನ ಪೆಟ್ಟು ತಿಂದನು.

ಅರ್ಥ:
ಹೃದಯ: ವಕ್ಷಸ್ಥಳ; ಇಬ್ಬಗೆ: ಎರಡು ಹೋಳು; ಕಂಗಳು: ಕಣ್ಣು; ಬೆದರು: ಹೆದರು; ವೈವರ್ಣ್ಯ: ಬಣ್ಣ ಕಳೆದುಕೊಳ್ಳು; ತನು: ದೇಹ; ಗದಗದಿಸು: ನಡುಗು; ಅಡಿಗಡಿಗೆ: ಮತ್ತೆ ಮತ್ತೆ; ಜಡಿ: ಗದರಿಸು, ಬೆದರಿಸು; ರೋಮ: ಕೂದಲು; ಹರುಷ: ಸಂತಸ; ಉದುರು: ಕೆಳಕ್ಕೆ ಬೀಳು; ನೇತ್ರಾಂಬು: ಕಣ್ಣೀರು; ಬಿಂಕ: ಗರ್ವ, ಜಂಬ; ಬೆದರಿಕೆ: ಹೆದರಿಕೆ; ಮೂಢ:ತಿಳಿವಳಿಕೆಯಿಲ್ಲದವನು; ತಿಳಿವು: ಅರಿವು; ಮುದ: ಸಂತಸ; ಖೇದ: ದುಃಖ; ಘಾತಿ: ಹೊಡೆತ;

ಪದವಿಂಗಡಣೆ:
ಹೃದಯವ್+ಇಬ್ಬಗಿಯಾಯ್ತು +ಕಂಗಳು
ಬೆದರಿದವು +ವೈವರ್ಣ್ಯದಲಿ +ತನು
ಗದಗದಿಸಿತ್+ಅಡಿಗಡಿಗೆ +ಜಡಿದುದು +ರೋಮ+ಹರುಷದಲಿ
ಉದುರಿದವು +ನೇತ್ರಾಂಬು +ಬಿಂಕದ
ಬೆದರಿಕೆಯ +ಮೂಢತೆಯ +ತಿಳಿವಿನ
ಮುದದ +ಖೇದದ +ಗಾಯಘಾತಿಗೆ+ ಪಾರ್ಥನೊಳಗಾದ

ಅಚ್ಚರಿ:
(೧) ಮುದ, ಖೇದ – ವಿರುದ್ಧ ಪದಗಳು
(೨) ಹರುಷ, ಮುದ – ಸಮನಾರ್ಥಕ ಪದ
(೩) ಕಣ್ಣೀರು ಎನ್ನಲು – ಉದುರಿದವು ನೇತ್ರಾಂಬು

ಪದ್ಯ ೫೦: ಅರ್ಜುನನೇಕೆ ಮರುಗಿದನು?

ಶಿವನಲಾ ಸಾಕ್ಷಾಚ್ಚತುರ್ದಶ
ಭುವನ ಕರ್ತೃವಲಾ ಕಿರಾತ
ವ್ಯವಹರಣೆಯಲಿ ಸುಳಿದನಸ್ಮದನುಗ್ರಹಾರ್ಥವಲಾ
ಎವಗಿದನಶನ ತಪದ ಪಿತ್ತದ
ಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವೆನುತ ಮರುಗಿದನಂದು ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೫೦ ಪದ್ಯ)

ತಾತ್ಪರ್ಯ:
ಹದಿನಾಲ್ಕು ಲೋಕಗಳ ಕರ್ತೃವಾದ ಶಿವನೇ, ಕಿರಾತ ವೇಷವನ್ನು ಧರಿಸಿ ನನ್ನನ್ನು ಅನುಗ್ರಹಿಸಲು ಬಂದಿರುವನಲ್ಲವೇ, ಆದರೆ ನಾನು ಆಹಾರವಿಲ್ಲದ ತಪಸ್ಸನ್ನು ಮಾಡಿದುದರಿಂದ ಪಿತ್ಥವು ಏರಿ ಏನೂ ತಿಳಿಯದಂತೆ ತಲೆ ತಿರುಗಿ ಬಿಟ್ಟಿತಲ್ಲವೇ ಶಿವ ಶಿವಾ ಮಹಾದೇವ ಎನ್ನುತ್ತಾ ಅರ್ಜುನನು ಮರುಗಿದನು.

ಅರ್ಥ:
ಶಿವ: ಶಂಕರ; ಸಾಕ್ಶಾತ್: ಸ್ವಯಂ; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಕರ್ತೃ: ಒಡೆಯ, ಪ್ರಭು; ವ್ಯವಹರಣ: ಉದ್ಯೋಗ; ಸುಳಿ: ಗೋಚರವಾಗು; ಅನುಗ್ರಹ: ಕೃಪೆ, ದಯೆ; ಅಶನ: ಆಹಾರ; ಎವಗ್: ನನಗೆ; ತಪ: ತಪಸ್ಸು; ಮರುಗು: ತಳಮಳ, ಸಂಕಟ; ಕಲಿ: ಶೂರ;

ಪದವಿಂಗಡಣೆ:
ಶಿವನಲಾ+ ಸಾಕ್ಷಾತ್+ ಚತುರ್ದಶ
ಭುವನ +ಕರ್ತೃವಲಾ +ಕಿರಾತ
ವ್ಯವಹರಣೆಯಲಿ +ಸುಳಿದನ್+ಅಸ್ಮದ್+ಅನುಗ್ರಹಾರ್ಥವಲಾ
ಎವಗಿದನ್+ಅಶನ +ತಪದ +ಪಿತ್ತದ
ಬವಣೆ +ತಲೆಗೇರಿದುದಲಾ +ಶಿವ
ಶಿವ+ ಮಹಾದೇವ+ಎನುತ +ಮರುಗಿದನ್+ಅಂದು +ಕಲಿಪಾರ್ಥ

ಅಚ್ಚರಿ:
(೧) ಅರ್ಜುನನು ಮರುಗಳು ಕಾರಣ – ಎವಗಿದನಶನ ತಪದ ಪಿತ್ತದಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವೆನುತ ಮರುಗಿದನಂದು ಕಲಿಪಾರ್ಥ
(೨) ಶಿವನನ್ನು ಹೊಗಳುವ ಪರಿ – ಶಿವನಲಾ ಸಾಕ್ಷಾಚ್ಚತುರ್ದಶ ಭುವನ ಕರ್ತೃವಲಾ

ಪದ್ಯ ೪೯: ಧನಂಜಯನ ಕಣ್ಣುಗಳು ಯಾವ ರಸದಲ್ಲಿ ಮುಳುಗಿದವು?

ಮತ್ತೆ ಕಂಡನು ಖಂಡಪರುಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದವು ಕೌತುಕವ ರಂಜಿಸಿ
ಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕಿರಾತನ ತಲೆಯ ಮೇಲೆ ತಾನು ಪೂಜಿಸಿದ ಹೂಗಳನ್ನು ಮತ್ತೆ ನೋಡಿದನು. ಇತ್ತ ತಿರುಗಿದರೆ ಆ ಹೂಗಳು ಲಿಂಗದ ಮೇಲಿರಲಿಲ್ಲ. ಅರ್ಜುನನ ಕಣ್ಣುಗಳು ಕೌತುಕಗೊಂಡು, ಇದು ಅದ್ಭುತವೆಂದುಕೊಳ್ಳುತ್ತಿದ್ದಂತೆಯೇ, ಅವನ ಕಣ್ಣುಗಳು ಭಯಾನಕ ರಸದಲ್ಲಿ ಮುಳುಗಿದವು.

ಅರ್ಥ:
ಕಂಡು: ನೋಡು; ಖಂಡಪರುಶು: ಶಿವ;ಉತ್ತಮಾಂಗ: ಶಿರ; ಲಿಂಗ: ಶಿವನ ಒಂದು ಪ್ರತೀಕ ಸ್ಥಾವರ ಲಿಂಗ; ಕಾಣು: ತೋರು; ಕುಸುಮ: ಹೂವು; ಮಂಜರಿ: ಗೊಂಚಲು; ತುತ್ತು: ಅನುಭವ, ಅಡಗಿಸು; ಕೌತುಕ: ಆಶ್ಚರ್ಯ; ರಂಜಿಸು: ಹೊಳೆ, ಪ್ರಕಾಶಿಸು, ಶೋಭಿಸು; ಅದುಭುತ: ಆಶ್ಚರ್ಯ; ಭಯಾನಕ: ಭಯಂಕರ, ಘೋರ; ರಸ: ಸಾರ; ಮುಳುಗು: ತೋಯು; ಕಂಗಳು: ಕಣ್ಣು;

ಪದವಿಂಗಡಣೆ:
ಮತ್ತೆ+ ಕಂಡನು +ಖಂಡಪರುಶುವಿನ್
ಉತ್ತಮಾಂಗದಲ್+ಈಚೆಯಲಿ +ಲಿಂಗ
ಉತ್ತಮಾಂಗದ+ ಮೇಲೆ +ಕಾಣನು +ಕುಸುಮ +ಮಂಜರಿಯ
ತುತ್ತಿದವು +ಕೌತುಕವ +ರಂಜಿಸಿ
ಹೊತ್ತವ್+ಅದುಭುತವನು +ಭಯಾನಕ
ವೆತ್ತ+ರಸದಲಿ +ಮುಳುಗಿದವು+ ಕಂಗಳು +ಧನಂಜಯನ

ಅಚ್ಚರಿ:
(೧) ಅರ್ಜುನನಿಗಾದ ಭಾವನೆ: ತುತ್ತಿದವು ಕೌತುಕವ ರಂಜಿಸಿಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ

ಪದ್ಯ ೪೮: ಅರ್ಜುನನು ಮತ್ತೆ ಹೇಗೆ ಪರೀಕ್ಷಿಸಿದನು?

ಆಗಲಿದನಾರೈವೆನೆನುತವೆ
ಆಗಮೋಕ್ತದಿ ಮತ್ತೆ ಲಿಂಗದ
ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ
ಹೂಗಳನು ತಿರಿದೊಟ್ಟಿ ಕರುಣಾ
ಸಾಗರನ ಬಲವಂದು ದಕ್ಷನ
ಯಾಗಹರನೆ ನಮಃ ಶಿವಾಯೆನುತಿತ್ತ ಮುಂದಾದ (ಅರಣ್ಯ ಪರ್ವ, ೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ಇದೇನು, ಪರೀಕ್ಷಿಸಿ ನೋಡುತ್ತೇನೆ ಎಂದು ತಿರುಗಿ ಲಿಂಗದ ಮೇಲಿನ ಹೂವುಗಳನ್ನು ತೆಗೆದಿಟ್ಟು ಆಗಮೋಕ್ತವಾಗಿ ಪೂಜಿಸಿದನು. ಹೂಗಳನ್ನು ಬಿಡಿಸಿ ತಂದು ಲಿಂಗವನ್ನು ಅರ್ಚಿಸಿ, ಶಿವನನ್ನು ಪ್ರದಕ್ಷಿಣೆ ಮಾಡಿ, ದಕ್ಷಯಾಗಸಂಹರನೇ, ಶಿವನೇ ನಿನಗೆ ನಮಸ್ಕಾರಗಳು ಎನ್ನುತ್ತಾ ವಂದಿಸಿ ಕಿರಾತನ ಸುಮ್ಮುಖಕ್ಕೆ ಬಂದನು.

ಅರ್ಥ:
ಆಗಮ: ಶಾಸ್ತ್ರ ಗ್ರಂಥ; ಉಕ್ತಿ: ನುಡಿ; ಮತ್ತೆ: ಪುನಃ; ಲಿಂಗ: ಶಿವನ ಒಂದು ಪ್ರತೀಕ ಸ್ಥಾವರ ಲಿಂಗ; ಮೇಗರೆ: ಮೇಲೆ ಮೇಲೆ; ನಿರ್ಮಾಲ್ಯ: ದೇವರಿಗೆ ಅರ್ಪಿಸಿ ತೆಗೆದ ಹೂವು; ಬೇರೆ: ಅನ್ಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಹೂವು: ಕುಸುಮ; ತಿರಿ: ಹೊಸೆದುದು; ತೊಡು: ಧರಿಸು; ಕರುಣಾ: ದಯೆ; ಸಾಗರ: ಸಮುದ್ರ; ಬಲ: ಶಕ್ತಿ; ಯಾಗ: ಕ್ರತು; ಹರ: ಸಂಹರ; ಮುಂದಾಗು: ಚಲಿಸು;

ಪದವಿಂಗಡಣೆ:
ಆಗಲ್+ಇದನಾರೈವೆನ್+ಎನುತವೆ
ಆಗಮೋಕ್ತದಿ +ಮತ್ತೆ +ಲಿಂಗದ
ಮೇಗರೆಯ+ ನಿರ್ಮಾಲ್ಯವನು +ಬೇರಿರಿಸಿ +ಭಕ್ತಿಯಲಿ
ಹೂಗಳನು+ ತಿರಿದೊಟ್ಟಿ +ಕರುಣಾ
ಸಾಗರನ +ಬಲವಂದು +ದಕ್ಷನ
ಯಾಗಹರನೆ+ ನಮಃ+ ಶಿವಾಯೆನುತ್+ಇತ್ತ +ಮುಂದಾದ

ಅಚ್ಚರಿ:
(೧) ಪಂಚಾಕ್ಷರಿಯ ಪ್ರಯೋಗ – ನಮಃ ಶಿವಾಯೆನುತಿತ್ತ ಮುಂದಾದ

ಪದ್ಯ ೪೭: ಅರ್ಜುನನೇಕೆ ತಳಮಳಗೊಂಡನು?

ಕಂಡನರ್ಜುನನೀ ಕಿರಾತನ
ಮಂಡೆಯಲಿ ತಾ ಮಳಲ ಲಿಂಗದ
ಮಂಡೆಯಲಿ ಪೂಜಿಸಿದ ಬಹುವಿಧ ಕುಸುಮಮಂಜರಿಯ
ಕಂಡನಿತ್ತಲು ಮುರಿದು ಪುನರಪಿ
ಕಂಡನೀ ಶಬರಂಗಿದೆತ್ತಣ
ದಂಡಿಯೊ ಹಾಯೆನುತ ಸೈವೆರಗಾದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅರ್ಜುನನು ಮರಳ ಲಿಂಗಕ್ಕೆ ಪೂಜೆ ಸಲ್ಲಿಸಿದ ಹೂವುಗಳನ್ನು ಅರ್ಪಿಸಿದ್ದನು. ಹಾಗೆ ನೋಡಿದ ಅರ್ಜುನನು, ಈಗ ತಾನೆ ಪೂಜಿಸಿ ಲಿಂಗಕ್ಕೆ ಅರ್ಪಸಿದ್ದ ಹೂಗಳು ಕಿರಾತನ ತಲೆಯ ಮೇಲೆ ನೋಡಿದನು. ತಿರುಗಿ ಲಿಂಗವನ್ನು ನೋಡಿ ಮತ್ತೆ ಕಿರಾತನನ್ನು ನೋಡಿ ಅವನ ತಲೆಯ ಮೇಲೆ ಹೂಗಳನ್ನು ಕಂಡ ತಳಮಳಗೊಂಡನು.

ಅರ್ಥ:
ಕಂಡನು: ನೋಡಿದನು; ಕಿರಾತ: ಬೇಡ; ಮಂಡೆ: ತಲೆ; ಮಳಲ: ಮರಳು; ಲಿಂಗ: ಶಿವನ ಒಂದು ಪ್ರತೀಕ ಸ್ಥಾವರ ಲಿಂಗ; ಪೂಜಿಸು: ಆರಾಧಿಸು; ಬಹುವಿಧ: ಬಹಳ; ಕುಸುಮ: ಹೂವು; ಮಂಜರಿ: ಗೊಂಚಲು, ಗುಚ್ಛ; ಮುರಿ: ಸೀಳು; ಪುನರಪಿ: ಪುನಃ; ದಂಡಿ: ಘನತೆ, ಹಿರಿಮೆ, ಶಕ್ತಿ; ಸೈವೆರಗು: ಆತಿಯಾದ ತಳಮಳ;

ಪದವಿಂಗಡಣೆ:
ಕಂಡನ್+ಅರ್ಜುನನ್+ಈ+ ಕಿರಾತನ
ಮಂಡೆಯಲಿ +ತಾ +ಮಳಲ +ಲಿಂಗದ
ಮಂಡೆಯಲಿ +ಪೂಜಿಸಿದ+ ಬಹುವಿಧ +ಕುಸುಮ+ಮಂಜರಿಯ
ಕಂಡನಿತ್ತಲು +ಮುರಿದು +ಪುನರಪಿ
ಕಂಡನ್+ಈ+ ಶಬರಂಗಿದ್+ಎತ್ತಣ
ದಂಡಿಯೊ +ಹಾಯೆನುತ+ ಸೈವೆರಗಾದನಾ+ ಪಾರ್ಥ

ಅಚ್ಚರಿ:
(೧) ಮಂಡೆಯಲಿ – ಪದದ ಬಳಕೆ
(೨) ಲಿಂಗಕ್ಕೆ ಮಾಡಿದ ಅಲಂಕಾರ – ತಾ ಮಳಲ ಲಿಂಗದ ಮಂಡೆಯಲಿ ಪೂಜಿಸಿದ ಬಹುವಿಧ ಕುಸುಮಮಂಜರಿಯ