ಪದ್ಯ ೪೧: ಅರ್ಜುನನೇಕೆ ಮಂದಭಾಗ್ಯನೆಂದು ಚಿಂತಿಸಿದ?

ಹಂದಿಯೈತರಲೇಕೆ ಬನದ ಪು
ಳಿಂದನಲಿ ಸೆಣಸಾಗಲೇಕೆ ಪು
ಳಿಂದರವಮಾನಕರು ತಾವವಮಾನ್ಯರಾದೆವಲೆ
ಇಂದು ಮೌಳಿಯುಪೇಕ್ಷೇಯೋ ತಾ
ನಿಂದು ಶಿವಪದ ಭಕ್ತಿಶೂನ್ಯನೊ
ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ (ಅರಣ್ಯ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಈ ಹಂದಿಯು ಏಕೆ ಬಂತು? ಕಾಡಿನ ಈ ಶಬರನೊಂದಿಗೆ ಯುದ್ಧವೇಕೆ ಸಂಭವಿಸಿತು? ಈ ಶಬರನೇ ಮಾನ್ಯನಾದ, ನಾನು ಅವಮಾನಿತನಾದೆನಲ್ಲಾ? ಶಿವನು ನನ್ನನ್ನು ಕಡೆಗಣಿಸಿದನೇ? ನನಗೆ ಶಿವನ ಪಾದಗಳ ಮೇಲೆ ಭಕ್ತಿ ಇಲ್ಲದಿರಬಹುದೇ? ಅಯ್ಯೋ ನಾನು ಅದೃಷ್ಟಹೀನನಾದೆನೇ ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಹಂದಿ: ಸೂಕರ; ಐತರು: ಬಂದು ಸೇರು; ಬನ: ಕಾದು; ಪುಳಿಂದ: ಬೇಡ; ಸೆಣಸು: ಹೋರಾಡು; ಮಾನ್ಯ: ಶ್ರೇಷ್ಠ; ಅವಮಾನ್ಯ: ಅಗೌರವ; ಇಂದು: ಚಂದ್ರ; ಮೌಳಿ: ಶಿರ; ಉಪೇಕ್ಷೆ: ಕಡೆಗಣಿಸುವಿಕೆ; ಶಿವ: ಶಂಕರ; ಪದ: ಚರಣ; ಭಕ್ತಿ: ಭಗವಂತನಲ್ಲಿರುವ ನಿಷ್ಠೆ; ಶೂನ್ಯ: ಬರಿದಾದುದು; ಮಂದ: ನಿಧಾನ ಗತಿಯುಳ್ಳದು; ಭಾಗ್ಯ: ಮಂಗಳ, ಶ್ರೇಯಸ್ಸು; ಚಿಂತಿಸು: ಯೋಚಿಸು;

ಪದವಿಂಗಡಣೆ:
ಹಂದಿ+ಐತರಲೇಕೆ +ಬನದ +ಪು
ಳಿಂದನಲಿ +ಸೆಣಸಾಗಲೇಕೆ+ ಪು
ಳಿಂದರವ+ಮಾನಕರು+ ತಾವ್+ಅವಮಾನ್ಯರ್+ಆದೆವಲೆ
ಇಂದು +ಮೌಳಿ+ಉಪೇಕ್ಷೆಯೋ +ತಾನ್
ಇಂದು +ಶಿವಪದ+ ಭಕ್ತಿಶೂನ್ಯನೊ
ಮಂದಭಾಗ್ಯನು+ ತಾನಲಾ+ ಹಾಯೆನುತ +ಚಿಂತಿಸಿದ

ಅಚ್ಚರಿ:
(೧) ಳಿಂದರವಮಾನಕರು ತಾವವಮಾನ್ಯರಾದೆವಲೆ – ಪದಗಳ ರಚನೆ
(೨) ಅರ್ಜುನನು ವ್ಯಥೆಪಟ್ಟ ಬಗೆ – ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ

ಪದ್ಯ ೪೦: ಅರ್ಜುನನು ಶಬರನ ನಿಜಸ್ವರೂಪ ತಿಳಿದನೇ?

ಅರಿದನೇ ಶಿವನೆಂದು ದೈವದ
ಸರಿಯ ಬಲುಹನು ಕಂಡೊಡೆಯು ದಿಟ
ವರಿಯ ಬಹುದೆ ರಹಸ್ಯ ಮಾಯಾ ಗೋಪಿಕಾತ್ಮಜನ
ಅರುಹಿಕೊಡವೇ ವೇದಶಿರ ವೆ
ಚ್ಚರಿಸಿ ತನ್ನನಖಂಡ ಚಿನ್ಮಯ
ದರಿವು ತಾನೆಂದಾವನರಿವನು ರಾಯ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಈ ಶಬರನು ಶಿವನೇ ಎನ್ನುವುದನ್ನು ಅರ್ಜುನನು ಅರಿತುಕೊಂಡನೇ? ದೇವನಿಗೆ ಸಮಾನವಾದ ಶಕ್ತಿ ಈ ಕಿರಾತನಿಗೆ ಹೇಗೆ ಬಂದಿತು ಎಂಬ ಆಲೋಚನೆಯನ್ನು ಮಾಡಿದನೇ? ಮಾಯೆಯಿಂದ ಆವೃತವಾದ ಬ್ರಹ್ಮದ ರಹಸ್ಯವನ್ನು ತಿಳಿಯಲು ಎಲ್ಲಾದರೂ ಸಾಧ್ಯವೇ? ಉಪನಿಷತ್ತುಗಳು ನೀನೇ ಪರಬ್ರಹ್ಮವಾಗಿರುವೆ ಎಂದು ಸಾರಿಹೇಳಿದರೂ ತಾನು ಅಖಂಡ ಚಿನ್ಮಯನೆಂದು ಯಾರಿಗೆ ತಿಳಿಯುತ್ತದೆ ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.

ಅರ್ಥ:
ಅರಿ: ತಿಳಿ; ಶಿವ: ಶಂಕರ; ದೈವ: ಭಗವಂತ; ಸರಿ: ಸಮಾನ; ಬಲುಹು: ಬಲ, ಶಕ್ತಿ; ಕಂಡೊಡೆ: ನೋಡಿ; ದಿಟ: ಸತ್ಯ; ರಹಸ್ಯ: ಗುಟ್ಟು; ಮಾಯ: ಗಾರುಡಿ, ಇಂದ್ರಜಾಲ; ಆತ್ಮಜ: ಮಗ; ಅರುಹು: ತಿಳಿಸು, ಹೇಳು; ವೇದ: ಶೃತಿ, ಜ್ಞಾನ; ಶಿರ: ಮೌಳಿ, ತಲೆ; ಎಚ್ಚರ: ನಿದ್ರೆಯಿಂದ ಏಳುವುದು; ಅಖಂಡ: ಸಂಪೂರ್ಣವಾದ; ಚಿನ್ಮಯ: ಪರಬ್ರಹ್ಮ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಿದನೇ +ಶಿವನೆಂದು +ದೈವದ
ಸರಿಯ +ಬಲುಹನು +ಕಂಡೊಡೆಯು +ದಿಟವ್
ಅರಿಯ +ಬಹುದೆ +ರಹಸ್ಯ+ ಮಾಯಾ +ಗೋಪಿಕ+ಆತ್ಮಜನ
ಅರುಹಿಕೊಡವೇ+ ವೇದಶಿರವ್
ಎಚ್ಚರಿಸಿ +ತನ್ನನ್+ಅಖಂಡ +ಚಿನ್ಮಯದ್
ಅರಿವು +ತಾನೆಂದ್+ಆವನ್+ಅರಿವನು +ರಾಯ +ಕೇಳೆಂದ

ಅಚ್ಚರಿ:
(೧) ಗೋಪಿಕಾತ್ಮಜ – ಪರಬ್ರಹ್ಮನೆಂದು ಹೇಳುವ ಪರಿ
(೨) ಪರಬ್ರಹ್ಮವನ್ನು ಅರಿಯಲು ಕಷ್ಟವೆಂದು ಹೇಳುವ ಪರಿ – ದಿಟವರಿಯ ಬಹುದೆ ರಹಸ್ಯ ಮಾಯಾ ಗೋಪಿಕಾತ್ಮಜನ

ಪದ್ಯ ೩೯: ಅರ್ಜುನನೇಕೆ ಕುಂತೀಪುತ್ರನಲ್ಲ ಎಂದು ಚಿಂತಿಸಿದ?

ಈತ ದಿಟಕೆ ಪುಳಿಂದನೇ ವಿ
ಖ್ಯಾತ ನರತಾನಲ್ಲಲೇ ದಿಟ
ಜಾತ ಪಾರ್ಥನೆ ತಾ ನಿಧಾನಿಸೆ ಶಬರನಿವನಲ್ಲ
ಈತ ಪಲ್ಲಟವಾದನೋ ಮೇಣ್
ಶ್ವೇತ ತುರಗನ ಪಲ್ಲಟವೊ ಕುಂ
ತೀತನುಜ ತಾನಲ್ಲ ನಿಶ್ಚಯವೆಂದು ಚಿಂತಿಸಿದ (ಅರಣ್ಯ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಇವನು ನಿಜವಾಗಿಯೂ ಬೇಡನೇ? ಅವನೇ ಅರ್ಜುನನಾಗಿರಬೇಕಲ್ಲವೇ? ಅಥವಾ ಅರ್ಜುನನಾಗಿ ಹುಟ್ಟಿದವನು ನಾನು ತಾನೆ? ಒಂದಂತು ಸತ್ಯ, ಇವನು ಬೇಡನಲ್ಲ, ಅರ್ಜುನನು ಸೋತನೋ, ಈ ಬೇಡನು ಸೋತನೋ, ತಿಳಿಯದು ಆದರೆ ನಾನು ಸೋತಿರುವುದರಿಂದ ಖಂಡಿತವಾಗಿಯೂ ನಾನು ಕುಂತೀ ಪುತ್ರ ಅರ್ಜುನನಲ್ಲ ಎಂದು ಚಿಂತಿಸಿದ.

ಅರ್ಥ:
ದಿಟ: ನಿಜ; ಪುಳಿಂದ: ಬೇಡ; ವಿಖ್ಯಾತ: ಪ್ರಸಿದ್ಧ; ನರ: ಅರ್ಜುನ; ಜಾತ: ಹುಟ್ಟಿದ; ಪಾರ್ಥ: ಅರ್ಜುನ; ನಿಧಾನಿಸು: ಪರೀಕ್ಷಿಸು, ವಿಚಾರಮಾಡು; ಪಲ್ಲಟ: ಮಾರ್ಪಾಟು, ಬದಲಾವಣೆ; ಶ್ವೇತ: ಬಿಳಿ; ತುರಗ: ಕುದುರೆ; ಶ್ವೇತ ತುರಗನ: ಅರ್ಜುನನ; ತನುಜ: ಮಗ; ನಿಶ್ಚಯ: ಖಂಡಿತ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಈತ +ದಿಟಕೆ+ ಪುಳಿಂದನೇ +ವಿ
ಖ್ಯಾತ +ನರ+ತಾನಲ್ಲಲೇ +ದಿಟ
ಜಾತ +ಪಾರ್ಥನೆ +ತಾ +ನಿಧಾನಿಸೆ+ ಶಬರನ್+ಇವನಲ್ಲ
ಈತ +ಪಲ್ಲಟವಾದನೋ +ಮೇಣ್
ಶ್ವೇತ ತುರಗನ+ ಪಲ್ಲಟವೊ+ ಕುಂ
ತೀ+ತನುಜ +ತಾನಲ್ಲ +ನಿಶ್ಚಯವೆಂದು +ಚಿಂತಿಸಿದ

ಅಚ್ಚರಿ:
(೧) ಅರ್ಜುನನನ್ನು ಶ್ವೇತ ತುರಗನ, ಕುಂತೀತನುಜ, ನರ, ಪಾರ್ಥ ಎಂದು ಕರೆದಿರುವುದು
(೨) ಅರ್ಜುನನು ಸೋಲಲಾರ ಎಂದು ಹೇಳುವ ಪರಿ – ಕುಂತೀತನುಜ ತಾನಲ್ಲ ನಿಶ್ಚಯವೆಂದು ಚಿಂತಿಸಿದ

ಪದ್ಯ ೩೮: ಅರ್ಜುನನು ಹೇಗೆ ದುಃಖಿಸಿದನು?

ಆವ ಸುವ್ರತ ಭಂಗವೋ ಮೇ
ಣಾವ ದೈವದ್ರೋಹವೋ ತಾ
ನಾವ ಶಿವಭಕ್ತಾಪರಾಧವೊ ಪೂರ್ವಜನ್ಮದಲಿ
ಆವ ಹಿರಿಯರ ಹಳಿದೆನೋ ತಾ
ನಾವ ಧರ್ಮವನಳಿದೆನೋ ತನ
ಗೀವಿಧಿಯ ಪರಿಭವ ಮಹೀರುಹ ಫಲಿತವಾಯ್ತೆಂದ (ಅರಣ್ಯ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಪೂರ್ವಜನ್ಮದಲ್ಲಿ ಯಾವ ವ್ರತವನ್ನು ಭಂಗಗೊಳಿಸಿದೆನೋ? ಯಾವ ದೈವ ದ್ರೋಹವನ್ನು ಮಾಡಿದೆನೋ? ಯಾವ ಶಿವ ಭಕ್ತರಿಗೆ ಅಪರಾಧವನ್ನೆಸಗಿದೆನೋ? ಯಾವ ಹಿರಿಯರನ್ನು ನಿಂದಿಸಿದೆನೋ? ಯಾವ ಕರ್ತವ್ಯವನ್ನು ಕೆಡಿಸಿದೆನೋ? ಈಗ ಈ ರೀತಿಯಲ್ಲಿ ಸೋಲಿನ ಮರ ಹಣ್ಣು ನೀಡಿದೆ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಸುವ್ರತ: ಶ್ರೇಷ್ಠವಾದ ವ್ರತ; ವ್ರತ: ನಿಯಮ; ಭಂಗ: ಮುರಿಯುವಿಕೆ, ಚೂರು ಮಾಡುವಿಕೆ; ಮೇಣ್: ಅಥವ, ಮತ್ತು; ದೈವ: ಭಗವಂತ; ದ್ರೋಹ: ವಿಶ್ವಾಸಘಾತ, ವಂಚನೆ; ಭಕ್ತ: ಆರಾಧನೆ; ಅಪರಾಧ: ತಪ್ಪು; ಪೂರ್ವ: ಹಿಂದಿನ; ಜನ್ಮ: ಹುಟ್ಟು; ಹಿರಿಯ: ದೊಡ್ಡವ; ಹಳಿ: ಅನ್ಯಾಯದ ಆರೋಪ, ನಿಂದೆ; ಧರ್ಮ: ಧಾರಣೆ ಮಾಡಿದುದು; ಅಳಿ: ನಾಶ; ವಿಧಿ: ಆಜ್ಞೆ, ಆದೇಶ; ಪರಿಭವ: ಸೋಲು; ಮಹೀರುಹ: ವೃಕ್ಷ, ಮರ; ಫಲಿತ: ಹಣ್ಣಾಗುವುದು;

ಪದವಿಂಗಡಣೆ:
ಆವ +ಸುವ್ರತ +ಭಂಗವೋ +ಮೇಣ್
ಆವ +ದೈವದ್ರೋಹವೋ+ ತಾನ್
ಆವ +ಶಿವಭಕ್ತ+ಅಪರಾಧವೊ +ಪೂರ್ವಜನ್ಮದಲಿ
ಆವ+ ಹಿರಿಯರ+ ಹಳಿದೆನೋ+ ತಾನ್
ಆವ +ಧರ್ಮವನ್+ಅಳಿದೆನೋ +ತನಗ್
ಈ+ವಿಧಿಯ +ಪರಿಭವ +ಮಹೀರುಹ+ ಫಲಿತವಾಯ್ತೆಂದ

ಅಚ್ಚರಿ:
(೧) ಸೋತೆನು ಎಂದು ಹೇಳುವ ಪರಿ – ಪರಿಭವ ಮಹೀರುಹ ಫಲಿತವಾಯ್ತೆಂದ
(೨) ಭಂಗ, ದ್ರೋಹ, ಅಪರಾಧ, ಹಳಿ, ಅಳಿ – ಪದಗಳ ಬಳಕೆ

ಪದ್ಯ ೩೭: ಅರ್ಜುನನೇಕೆ ಬೆಂಡಾಗಿ ಬಿದ್ದನು?

ಬಿರಿದುದೀತನ ಗರ್ವ ಗಿರಿ ಮಡ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿಂದ್ರಿಯ ವರ್ಗ ನೆಗ್ಗಿತು ನೆನಹಿನೊಡ್ದವಣೆ
ಹರಿದುದಂಗಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತುಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆಂಡಾದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನ ಗರ್ವದ ಬೆಟ್ಟವು ಬಿರಿಯಿತು. ಶಕ್ತಿಯ ಕಾಲು ಮುರಿಯಿತು. ಇಂದ್ರಿಯ ಶಕ್ತಿಯು ಉಡುಗಿತು. ಗೆಲ್ಲಬೇಕೆಂಬ ಆಲೋಚನೆಯು ಹಾರಿತು. ದೇಹದಲ್ಲೆಲ್ಲಾ ಬೆವರು ಹರಿಯಿತು. ಆವೇಶ, ಸೊಕ್ಕು ಹರಿದು ಹೋಯಿತು, ಪರಮಾಶ್ಚರ್ಯವಾಗುವಂತೆ ವಿರಹ ವೇದನೆಯಲ್ಲಿ ಸಿಲುಕುವಂತೆ ಅರ್ಜುನನು ಬೆಂಡಾಗಿ ಬಿದ್ದನು.

ಅರ್ಥ:
ಬಿರಿ: ಬಿರುಕು, ಸೀಳು; ಗರ್ವ: ಅಹಂಕಾರ; ಗಿರಿ: ಬೆಟ್ಟ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮುರಿ: ಸೀಳು; ಶಕ್ತಿ: ಬಲ; ಸಲೆ: ಪೂರ್ಣ, ತಕ್ಕಂತೆ; ಟೆಬ್ಬರಿಸು: ಶಕ್ತಿಗುಂದಿಸು, ಕುಗ್ಗಿಸು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವರ್ಗ: ಗುಂಪು; ನೆಗ್ಗು: ಕುಗ್ಗು, ಕುಸಿ; ನೆನಹು: ನೆನಪು; ಒಡ್ಡವಣೆ: ಗುಂಪು, ಸನ್ನಾಹ; ಹರಿ: ಪ್ರವಾಹ, ಓಡು, ಧಾವಿಸು, ಪ್ರವಹಿಸು; ಅಂಗ: ದೇಹ, ಶರೀರ, ಅವಯವ; ಸ್ವೇದಜಲ: ಬೆವರು; ಕಾಹುರ: ಆವೇಶ, ಸೊಕ್ಕು; ನಿಬ್ಬರ: ಅತಿಶಯ, ಹೆಚ್ಚಳ; ಬೆರಗು: ವಿಸ್ಮಯ, ಸೋಜಿಗ; ಬೇಟ: ವಿರಹ; ಬೆಂಡು: ತಿರುಳಿಲ್ಲದುದು, ಪೊಳ್ಳು;

ಪದವಿಂಗಡಣೆ:
ಬಿರಿದುದ್+ಈತನ +ಗರ್ವ +ಗಿರಿ +ಮಡ
ಮುರಿದುದ್+ ಈತನ +ಶಕ್ತಿ+ ಸಲೆ +ಟೆ
ಬ್ಬರಿಸಿತ್+ಇಂದ್ರಿಯ +ವರ್ಗ +ನೆಗ್ಗಿತು +ನೆನಹಿನ್+ಒಡ್ದವಣೆ
ಹರಿದುದ್+ಅಂಗ+ಸ್ವೇದಜಲ+ ಕಾ
ಹುರತೆ +ಕಾಲ್ವೊಳೆಯಾಯ್ತುಂ+ಅತಿ+ ನಿ
ಬ್ಬರದ +ಬೆರಗಿನ+ ಬೇಟದಲಿ+ ಬೆಂಡಾದನಾ +ಪಾರ್ಥ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೆರಗಿನ ಬೇಟದಲಿ ಬೆಂಡಾದನಾ
(೨) ಉಪಮಾನದ ಪ್ರಯೋಗ – ಬಿರಿದುದೀತನ ಗರ್ವ ಗಿರಿ, ಮಡ ಮುರಿದುದೀತನ ಶಕ್ತಿ ಸಲೆ, ಟೆಬ್ಬರಿಸಿತಿಂದ್ರಿಯ ವರ್ಗ, ನೆಗ್ಗಿತು ನೆನಹಿನೊಡ್ದವಣೆ