ಪದ್ಯ ೩೧: ಶಿವನು ಅರ್ಜುನನನ್ನು ಹೇಗೆ ತಿವಿದನು?

ಗಾಯವುಂಟೇ ತೋರು ನಿನಗಡು
ಪಾಯೊ ಬಿಡು ಚೊಕ್ಕೆಯವನೆನುತಲ
ಜೇಯನೊಡನಿದಿರೆದ್ದು ತಿವಿದನು ಹರನ ಪೇರುರವ
ಗಾಯ ಘಾತಿಗೆ ನಿಮ್ಮ ಮತವೆಮ
ಗಾಯಿತೆನುತ ಪುರಾರಿ ಕಡು ಪೂ
ರಾಯದಲಿ ಕರವೆತ್ತಿ ನಸು ತಿವಿದನು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ನೀನು ನನ್ನನ್ನು ಹೊಡೆಯುವ ಬಗೆಯನ್ನರಿತಿದ್ದರೆ ಅದನ್ನು ತೋರಿಸು, ಈ ಪಟ್ಟುಗಳಿಂದ ನೀನು ಏನೂ ಮಾಡಲಾರೆ ಬಿಡು ಎನ್ನುತ್ತಾ ಅರ್ಜುನನು ಕಿರಾತನ ವಿಶಾಲವಾದ ಎದೆಗೆ ಗುದ್ದಿದನು. ಹಾಗೋ ಹೊಡೆತ ಕೊಡಲು ನೀನು ಹೇಳಿದ್ದೇ ನನ್ನ ಅಭಿಪ್ರಾಯ ಎಂದು ಶಿವನು ಕೈಯನ್ನು ಪೂರಾ ಎತ್ತಿ ಅರ್ಜುನನನ್ನು ಸ್ವಲ್ಪವೇ ತಿವಿದನು.

ಅರ್ಥ:
ಗಾಯ: ಪೆಟ್ಟು; ತೋರು: ಗೋಚರ, ಪ್ರದರ್ಶಿಸು; ಅಡುಪಾಯ: ಮಲ್ಲಯುದ್ಧದ ಒಂದು ವರಸೆ; ಬಿಡು: ತೊರೆ, ತ್ಯಜಿಸು; ಚೊಕ್ಕೆಯ: ಮಲ್ಲಯುದ್ಧದಲ್ಲಿ ಒಂದು ಪಟ್ಟು; ಅಜೇಯ: ಗೆಲ್ಲಲಾಗದವನು; ಇದಿರು: ಎದುರು; ಎದ್ದು: ಮೇಲೇಳು; ತಿವಿ: ಚುಚ್ಚು; ಹರ: ಶಂಕರ; ಉರ: ಎದೆ; ಘಾತಿ: ಹೊಡೆತ; ಮತ: ವಿಚಾರ;ಪುರಾರಿ: ಶಿವ; ಅರಿ: ವೈರಿ; ಕಡು: ಬಹಳ; ಪೂರಾಯ: ಪರಿಪೂರ್ಣ; ಕರ: ಹಸ್ತ; ನಸು: ಸ್ವಲ್ಪ; ತಿವಿ: ಚುಚ್ಚು;

ಪದವಿಂಗಡಣೆ:
ಗಾಯವುಂಟೇ +ತೋರು +ನಿನಗ್+ಅಡು
ಪಾಯೊ +ಬಿಡು +ಚೊಕ್ಕೆಯವನ್+ಎನುತಲ್
ಅಜೇಯನೊಡನ್+ಇದಿರೆದ್ದು+ ತಿವಿದನು +ಹರನ+ ಪೇರ್+ಉರವ
ಗಾಯ +ಘಾತಿಗೆ +ನಿಮ್ಮ +ಮತವ್+ಎಮಗ್
ಆಯಿತೆನುತ +ಪುರಾರಿ +ಕಡು +ಪೂ
ರಾಯದಲಿ +ಕರವೆತ್ತಿ+ ನಸು +ತಿವಿದನು +ಧನಂಜಯನ

ಅಚ್ಚರಿ:
(೧) ಅಡುಪಾಯ, ಚೊಕ್ಕೆಯ – ಮಲ್ಲಯುದ್ಧದ ವರಸೆಗಳು
(೨) ಅಜೇಯ, ಪುರಾರಿ, ಹರ – ಶಿವನನ್ನು ಕರೆದ ಬಗೆ

ಪದ್ಯ ೩೦: ಅರ್ಜುನ ಮತ್ತು ಶಿವನ ಮಲ್ಲಯುದ್ಧ ಹೇಗೆ ನಡೆಯಿತು?

ಮುರಿವ ಬಿಡಿಸುವ ಢಗೆಯ ಸೈರಿಸಿ
ತೆರಳಿಚುವ ತಳಮೇಲುಗಳಲು
ತ್ತರಿಸುವೇಳುವ ಬೀಳ್ವ ಹತ್ತುವ ಸುಳಿವ ವಂಚಿಸುವ
ಹೊರಳ್ವ ತನು ಹೋರಟೆಯ ಸತ್ವೋ
ತ್ಕರುಷ ಸರಿಯೆನೆ ಶಂಭು ಶಿಷ್ಯಗೆ
ಪರಿವಿಡಿಯ ತೋರಿಸುವವೊಲಿದ್ದನು ಭೂಪ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಇದಿರಾಳಿಯನ್ನು ಸೋಲಿಸುವ ಪಟ್ಟನ್ನು ಒಬ್ಬರು ಹಾಕಿದರೆ ಇನ್ನೊಬ್ಬರು ಅದನ್ನು ಬಿಡಿಸಿಕೊಳ್ಳುವರು. ಒಮ್ಮೆ ಕೆಳಗೆ ಒಮ್ಮೆ ಮೇಲೆ ಬರುವರು, ಹೊರಳುವರು, ಬೀಳುವರು, ಮೇಲೇಳುವರು, ಅತ್ತಿತ್ತ ಸುಳಿಯುವರು, ಇನ್ನೊಬ್ಬರಿಂದ ತಪ್ಪಿಸಿಕೊಳ್ಳುವರು, ಹೋರಾಟದಲ್ಲಿ ಇಬ್ಬರ ಸತ್ವವೂ ಸರಿಯೆನ್ನಿಸುತ್ತಿತ್ತು. ಶಿವನು ತನ್ನ ಶಿಷ್ಯನಿಗೆ ಮಲ್ಲಯುದ್ಧದ ಕ್ರಮವನ್ನು ಹೇಳಿಕೊಡುವನೋ ಎಂಬಂತೆ ಅವರ ಹೋರಾಟ ನಡೆಯುತ್ತಿತ್ತು.

ಅರ್ಥ:
ಮುರಿ: ಸೀಳು; ಬಿಡಿಸು: ಕಳಚು, ಸಡಿಲಿಸು; ಢಗೆ: ಕಾವು, ದಗೆ; ಸೈರಿಸು: ತಾಳು, ಸಹಿಸು; ತೆರಳು: ಹೊರಡು; ತಳಮೇಲು: ತಲೆಕೆಳಗು, ಅಡಿಮೇಲು; ಉತ್ತರಿಸು: ಕತ್ತರಿಸು, ದಾಟಿಸು; ಬೀಳು: ಕೆಳಗೆ ಕುಸಿ; ಹತ್ತು: ಮೇಲೇರು; ಸುಳಿ: ಗೋಚರವಾಗು; ವಂಚಿಸು: ವಂಚನೆಗೊಳಿಸು, ಮೋಸಮಾಡು; ಹೊರಳು: ತಿರುವು, ಬಾಗು; ತನು: ದೇಹ; ಹೋರಟೆ: ಕಾಳಗ, ಯುದ್ಧ; ಸತ್ವ: ಶಕ್ತಿ, ಬಲ; ಉತ್ಕರ್ಷ: ಹೆಚ್ಚಳ, ಮೇಲ್ಮೆ; ಸರಿ: ಹೋಗು, ಗಮಿಸು; ಶಂಭು: ಶಂಕರ; ಶಿಷ್ಯ: ವಿದ್ಯಾರ್ಥಿ; ಪರಿವಿಡಿ: ವ್ಯವಸ್ಥಿತವಾದ ಕ್ರಮ, ಅನುಕ್ರಮ; ತೋರಿಸು: ಗೋಚರ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುರಿವ +ಬಿಡಿಸುವ +ಢಗೆಯ +ಸೈರಿಸಿ
ತೆರಳಿಚುವ +ತಳಮೇಲುಗಳಲ್
ಉತ್ತರಿಸುವ್+ಏಳುವ +ಬೀಳ್ವ +ಹತ್ತುವ +ಸುಳಿವ +ವಂಚಿಸುವ
ಹೊರಳ್ವ+ ತನು +ಹೋರಟೆಯ +ಸತ್ವೋ
ತ್ಕರುಷ+ ಸರಿಯೆನೆ +ಶಂಭು +ಶಿಷ್ಯಗೆ
ಪರಿವಿಡಿಯ +ತೋರಿಸುವವೊಲ್+ಇದ್ದನು +ಭೂಪ +ಕೇಳೆಂದ

ಅಚ್ಚರಿ:
(೧) ಏಳು, ಬೀಳು – ವಿರುದ್ಧಪದಗಳು
(೨) ಮಲ್ಲಯುದ್ಧ ನಡೆದ ಪರಿ – ಶಂಭು ಶಿಷ್ಯಗೆ ಪರಿವಿಡಿಯ ತೋರಿಸುವವೊಲಿದ್ದನು

ಪದ್ಯ ೨೯: ಮಲ್ಲಯುದ್ಧದ ಯಾವ ವರಸೆಗಳನ್ನು ಶಿವ ಮತ್ತು ಅರ್ಜುನ ಪ್ರದರ್ಶಿಸಿದರು?

ಕರವಳಯ ತಳಹತ್ತ ಡೊಕ್ಕರ
ಶಿರವ ಧಣು ಧಣು ವಟ್ಟತಳ ಖೊ
ಪ್ಪರಿದುವಂಗುಲ ಕಂದಡೊಕ್ಕರ ತೋರಹತ್ತದಲಿ
ಸರಿಸವಂಕಡ ಬಂಧ ಪಟ್ಟಸ
ಉರಗ ಬಂಧನ ಬಾಹುದಣು ವಂ
ತರಲಗಡಿಯೆಂಬಿನಿತರಲಿ ತೋರಿದರು ಕೌಶಲವ (ಅರಣ್ಯ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ತೋಳನ್ನು ಸುತ್ತುವುದು, ಕೆಳಗೈ ಹಕಿ ಎತ್ತುವುದು, ಡೊಕ್ಕರ, ತಲೆಯನ್ನು ಬಡಿಯುವುದು, ಖೊಪ್ಪರ, ಕಂದಡೊಕ್ಕರ, ತೋರಹತ್ತ, ಅಂಕಡ ಪಟ್ಟಸ ಬಂಧನ, ಉರಗ ಬಂಧನ, ಅಂತರ ಲಗಡಿ ಮೊದಲಾದ ಪಟ್ಟುಗಳನ್ನು ಪ್ರಯೋಗಿಸಿ ಮಲ್ಲಯುದ್ಧವನ್ನು ಮಾಡಿದರು.

ಅರ್ಥ:
ಕರ: ಹಸ್ತ; ತಳ: ಕೆಳಗು, ಪಾತಾಳ; ಡೊಕ್ಕರ: ಮಲ್ಲಯುದ್ಧದಲ್ಲಿ ಒಂದು ವರಸೆ; ಶಿರ: ತಲೆ; ಧಣುಧಣು: ಕೊಂಡಾಟದ ನುಡಿ; ಖೊಪ್ಪರಿಸು: ಮೀರು, ಹೆಚ್ಚು; ಅಟ್ಟು: ಹಿಂಬಾಲಿಸು; ಅಂಗುಲ: ಬೆರಳು; ತೋರು: ಪ್ರದರ್ಶಿಸು; ಸರಿಸ: ನೇರ, ಸಮವಾದ, ಸಮೀಪ; ಬಂಧ: ಬಂಧಿಸು; ಉರಗ: ಹಾವು; ಬಾಹು: ಭುಜ, ತೋಳು; ಅಂತರ: ದೂರ; ಇನಿತು: ಇಷ್ಟು; ಕೌಶಲ: ಚದುರು, ಜಾಣತನ;

ಪದವಿಂಗಡಣೆ:
ಕರವಳಯ +ತಳಹತ್ತ+ ಡೊಕ್ಕರ
ಶಿರವ +ಧಣು ಧಣು+ ವಟ್ಟತಳ+ ಖೊ
ಪ್ಪರಿದುವ್+ಅಂಗುಲ +ಕಂದ+ಡೊಕ್ಕರ +ತೋರ+ಹತ್ತದಲಿ
ಸರಿಸವಂಕಡ +ಬಂಧ +ಪಟ್ಟಸ
ಉರಗ+ ಬಂಧನ+ ಬಾಹುದಣುವ್+
ಅಂತರಲಗಡಿಯೆಂಬ್+ಇನಿತರಲಿ+ ತೋರಿದರು+ ಕೌಶಲವ

ಅಚ್ಚರಿ:
(೧) ಪಟ್ಟಸ, ಉರಗ ಬಂಧ, ಸರಸವಂಕಡ ಬಂಧ – ಮಲ್ಲಯುದ್ಧದ ವರಸೆಗಳು

ಪದ್ಯ ೨೮: ಅರ್ಜುನ ಮತ್ತು ಶಿವ ಮಲ್ಲಯುದ್ಧವನ್ನು ಹೇಗೆ ಆಡಿದರು?

ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊಂಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹೊರವಡುವ
ಚಿಗಿವ ತೊಡಚುವ ಬಿಗಿವ ಬಿಡಿಸುವ
ಬಗಿವ ಬಳಸುವ ಬಂದ ಗತಿಯತಿ
ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು (ಅರಣ್ಯ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಬ್ಬರನ್ನೊಬ್ಬರು ತೋಳುಗಳಿಂದ ಬಿಗಿಯುತ್ತಿದ್ದರು. ಅದನ್ನು ಬಿಡಿಸಿಕೊಳ್ಳುತ್ತಿದ್ದರು, ತಕ್ಷಣವೇ ಮತ್ತೆ ಎಲೆಯುತ್ತಿದ್ದರು. ಆ ಹಿಡಿತವನ್ನು ತಪ್ಪಿಸುತ್ತಿದ್ದರು, ಬೇಗವಾಗಿ ಹೊಕ್ಕು ಆಕ್ರಮಿಸುತ್ತಿದ್ದರು. ಅದನ್ನು ತಪ್ಪಿಸಿಕೊಂಡು ಹೊರ ಬರುತ್ತಿದ್ದರು, ಹಾರುತ್ತಿದ್ದರು, ಹಿಡಿಯುತ್ತಿದ್ದರು, ಬಿಡಿಸಿಕೊಳ್ಳುತ್ತಿದ್ದರು, ಲಗಡಿಯೆಂಬ ವರಸೆ ಹಾಕುತ್ತಿದ್ದರು. ಹೀಗೆ ಶಿವನೂ ಅರ್ಜುನನೂ ಮಲ್ಲಯುದ್ಧದಲ್ಲಿ ಸೆಣಸಿದರು.

ಅರ್ಥ:
ಬಿಗಿ: ಕಟ್ಟು, ಬಂಧಿಸು; ಬಿಡಿಸು: ಕಳಚು, ಸಡಿಲಿಸು; ಕ್ಷಣ: ಸಮಯ; ತೆಗೆ: ಈಚೆಗೆ ತರು, ಹೊರತರು; ಕಳಚು: ಬೇರ್ಪಡಿಸು, ಬೇರೆಮಾಡು; ಲಳಿ: ರಭಸ, ಅವೇಶ; ಹೊಗು: ಒಳಸೇರು, ಪ್ರವೇಶಿಸು; ಹತ್ತು: ಸೇರು, ಕೂಡು; ಲವಣೆ: ಚಂದ; ಚೆಲುವು; ಲವಣಿ: ಕಾಂತಿ; ಲಾಗಿಸು: ಹಾರು, ಲಂಘಿಸು; ಹೊರವಡು: ಚಿಗಿ:ನೆಗೆ, ಹಾರು; ತೊಡಚು: ಕಟ್ಟು, ಬಂಧಿಸು; ಬಿಗಿ: ಬಂಧಿಸು; ಬಗಿ: ಸೀಳು, ಹೋಳು ಮಾಡು; ಬಳಸು: ಆವರಿಸುವಿಕೆ, ಸುತ್ತುವರಿಯುವಿಕೆ; ಗತಿ: ವೇಗ; ಲಗಡಿ: ಕುಸ್ತಿಯ ಒಂದು ವರಸೆ; ಲೋಕ: ಜಗತ್ತು; ವೀರ: ಪರಾಕ್ರಮ; ಹೊಕ್ಕು: ಸೇರು; ಹೆಣಗು: ಹೋರಾಡು, ಕಾಳಗ ಮಾಡು;

ಪದವಿಂಗಡಣೆ:
ಬಿಗಿವ +ಬಿಡಿಸುವ +ಬಿಡಿಸಿದಾಕ್ಷಣ
ತೆಗೆವ+ ಕಳಚುವ +ಕೊಂಬ +ಲಳಿಯಲಿ
ಹೊಗುವ +ಹತ್ತುವ +ಲವಣಿಯಲಿ +ಲಾಗಿಸುವ +ಹೊರವಡುವ
ಚಿಗಿವ+ ತೊಡಚುವ +ಬಿಗಿವ +ಬಿಡಿಸುವ
ಬಗಿವ+ ಬಳಸುವ+ ಬಂದ +ಗತಿ+ಅತಿ
ಲಗಡಿಸುವ +ಲೋಕೈಕ+ ವೀರರು +ಹೊಕ್ಕು +ಹೆಣಗಿದರು

ಅಚ್ಚರಿ:
(೧) ಬ ಕಾರದ ಸಾಲು ಪದ – ಬಿಗಿವ ಬಿಡಿಸುವ ಬಗಿವ ಬಳಸುವ ಬಂದಗತಿ
(೨) ಬಿಗಿವ ಬಿಡಿಸುವ – ೧, ೪ ಸಾಲಿನಲ್ಲಿ ಬಳಸಿದ ಪದಗಳು
(೩) ಲಳಿ, ಲಗಡಿಸು, ಲಾಗಿಸು, ಲವಣಿ – ಲ ಕಾರದ ಪದಗಳ ಬಳಕೆ

ಪದ್ಯ ೨೭: ಶಿವ ಮತ್ತು ಅರ್ಜುನನ ಮಲ್ಲಯುದ್ಧ ಹೇಗಿತ್ತು?

ಕೊಡುವೆನೀತಂಗೆಮ್ಮ ಶರವನು
ಮಡದಿ ಮತ್ತೆಯು ನೋಡು ಪಾರ್ಥನ
ಕಡುಹನೆನುತಿದಿರಾಂತು ಬಾಹಪ್ಪಳಿಸಿ ಬೊಬ್ಬಿಡುತ
ಹಿಡಿದರಿಬ್ಬರು ಕೈಗಳನು ಹೊ
ಕ್ಕೊಡನೆ ಹತ್ತಾಹತ್ತಿಯಲಿ ಮಿಗೆ
ಜಡಿತೆಯಲಿ ಚಾಳೈಸಿದರು ಬಹುವಿಧದ ಬಿನ್ನಣವ (ಅರಣ್ಯ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಇವನಿಗೆ ನನ್ನ ಪಾಶುಪತಾಸ್ತ್ರವನ್ನು ಕೊಡುತ್ತೇನೆ. ಇವನ ಸಾಮರ್ಥ್ಯವನ್ನು ನೋಡು, ಎನ್ನುತ್ತಾ ಶಿವನು ಅರ್ಜುನನಿಗಿದಿರಾಗಿ ತೋಳನ್ನು ತಟ್ಟಿದನು. ಇಬ್ಬರೂ ಕೈಗಳನ್ನು ಹಿಡಿದು ಒಳಹೊಕ್ಕು ತೋಳುಗಳಿಂದ ಹೋರಾಡಿದರು.

ಅರ್ಥ:
ಕೊಡು: ನೀಡು; ಶರ: ಬಾಣ; ಮಡದಿ: ಹೆಂಡತಿ; ನೋಡು: ವೀಕ್ಷಿಸು; ಕಡುಹು: ಸಾಹಸ, ಪರಾಕ್ರಮ; ಇದಿರು: ಎದುರು; ಬಾಹು: ತೋಳು; ಅಪ್ಪಳಿಸು: ತಟ್ಟು; ಬೊಬ್ಬಿಡು: ಗರ್ಜಿಸು; ಹಿಡಿ: ಬಂಧಿಸು; ಕೈ: ಹಸ್ತ; ಹೊಕ್ಕು: ಸೇರು; ಹತ್ತಾಹತ್ತಿ: ಮುಷ್ಟಾ ಮುಷ್ಟಿ; ಮಿಗೆ: ಅಧಿಕ; ಜಡಿತ: ಜೋಡಿಸಿದ, ಕುಂದಣಿಸಿದ; ಚಾಳೈಸು: ಚಲಿಸುವಂತೆ ಮಾಡು; ಬಿನ್ನಣ: ವಿಜ್ಞಾಪನೆ;

ಪದವಿಂಗಡಣೆ:
ಕೊಡುವೆನ್+ಈತಂಗ್+ಎಮ್ಮ+ ಶರವನು
ಮಡದಿ+ ಮತ್ತೆಯು+ ನೋಡು +ಪಾರ್ಥನ
ಕಡುಹನ್+ಎನುತ್+ಇದಿರಾಂತು +ಬಾಹ್+ಅಪ್ಪಳಿಸಿ+ ಬೊಬ್ಬಿಡುತ
ಹಿಡಿದರ್+ಇಬ್ಬರು +ಕೈಗಳನು +ಹೊ
ಕ್ಕೊಡನೆ +ಹತ್ತಾಹತ್ತಿಯಲಿ +ಮಿಗೆ
ಜಡಿತೆಯಲಿ +ಚಾಳೈಸಿದರು +ಬಹುವಿಧದ +ಬಿನ್ನಣವ

ಅಚ್ಚರಿ:
(೧) ಹತ್ತಾಹತ್ತಿ – ಪದದ ಬಳಕೆ
(೨) ಬ ಕಾರದ ಜೋಡಿ ಪದ ಬಹುವಿಧದ ಬಿನ್ನಣವ