ಪದ್ಯ ೨೨: ಶಿವನು ಅರ್ಜುನನಿಗೆ ಏನು ಹೇಳಿದನು?

ಮರನ ಹೆಗ್ಗೊಂಬುಗಳಲಿಟ್ಟನು
ತಿರುಹಿ ಕಲ್ಗುಂಡುಗಳ ಮಳೆಯಲಿ
ಹರನ ನಾದಿದನೇನನೆಂಬೆನು ಪಾರ್ಥನುರವಣೆಯ
ಸರಳ ಸಾರದಲಿನಿತುವನು ಕ
ತ್ತರಿಸಿ ಕರುಣಾಜಲಧಿ ನುಡಿದನು
ಮರುಳೆ ತಮ್ಮಡಿ ಕೈದುವುಳ್ಳರೆ ಕೊಂಡುಬಾಯೆಂದ (ಅರಣ್ಯ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮರದ ದೊಡ್ಡಕೊಂಬೆಗಳಿಂದ, ಕಲ್ಲುಗುಂಡುಗಳಿಂದ ಅರ್ಜುನನು ಶಿವನನ್ನು ಹೊಡೆದನು, ಕಿರಾತನು ಬಾಣಗಳಿಂದ ಅವೆಲ್ಲವನ್ನೂ ಕತ್ತರಿಸಿ, ಅಯ್ಯೋ ಹುಚ್ಚ ತಪಸ್ವಿ, ನಿನ್ನ ಬಳಿ ಬೇರೆ ಆಯುಧಗಳಿದ್ದರೆ ತೆಗೆದುಕೊಂಡು ಬಾ ಎಂದು ಹೇಳಿದನು.

ಅರ್ಥ:
ಮರ: ತರು; ಹೆಗ್ಗೊಂಬು: ದೊಡ್ಡ ಕೊಂಬೆಗಳು; ಇಟ್ಟನು: ಹೊಡೆದನು; ತಿರುಹಿ: ಮತ್ತೆ; ಕಲ್ಲು: ಶಿಲ; ಮಳೆ: ವರ್ಷಿಸು, ಧಾರೆ; ಹರ: ಶಿವ; ನಾದು: ತೋಯಿಸು; ಉರವಣೆ: ಆತುರ, ಅವಸರ; ಸರಳ: ಬಾಣ; ಸಾರು: ಬಳಿ ಸೇರು; ಕತ್ತರಿಸು: ಕಡಿ; ಕರುಣ: ದಯೆ; ಜಲಧಿ: ಸಾಗರ; ನುಡಿ: ಹೇಳು, ಮಾತಾಡು; ಮರುಳೆ: ಮೂಢ; ತಮ್ಮಡಿ: ನಿಮ್ಮ ಪಾದ; ಕೈದು: ಆಯುಧ, ಶಸ್ತ್ರ; ಕೊಂಡು: ತರು;

ಪದವಿಂಗಡಣೆ:
ಮರನ +ಹೆಗ್ಗೊಂಬುಗಳಲ್+ಇಟ್ಟನು
ತಿರುಹಿ +ಕಲ್ಗುಂಡುಗಳ+ ಮಳೆಯಲಿ
ಹರನ+ ನಾದಿದನ್+ಏನನೆಂಬೆನು +ಪಾರ್ಥನ್+ಉರವಣೆಯ
ಸರಳ +ಸಾರದಲ್+ಇನಿತುವನು +ಕ
ತ್ತರಿಸಿ+ ಕರುಣಾಜಲಧಿ +ನುಡಿದನು
ಮರುಳೆ +ತಮ್ಮಡಿ+ ಕೈದುವುಳ್ಳರೆ +ಕೊಂಡುಬಾಯೆಂದ

ಅಚ್ಚರಿ:
(೧) ಹೆಗ್ಗೊಂಬುಗಳ, ಕಲ್ಗುಂಡುಗಳ – ಪದಗಳ ಬಯಕೆ
(೨) ಕರುಣಾಜಲಧಿ – ಶಿವನನ್ನು ಕರೆದಬಗೆ

ನಿಮ್ಮ ಟಿಪ್ಪಣಿ ಬರೆಯಿರಿ