ಪದ್ಯ ೬೩: ಸೂರ್ಯನ ದಾರಿ ಯಾವುದು?

ಹರಿವ ಗಾಲಿಯ ನಾಭಿ ಮೂಲ
ಕ್ಕುರುವ ಚಾತುರ್ಮಾಸಗಳು ಘನ
ತರದ ಷಡುರುತುವಯನ ಚಕ್ರವು ಚಾರುಚತುರಯುಗ
ತರವಿಡಿದ ಸಂವತ್ಸರವು ಘನ
ತರದ ಪರಿವತ್ಸರ ವಿಡಾವ
ತ್ಸರವು ವಿದ್ವತ್ಸರವು ವತ್ಸರವೆಂದು ಮೊಳೆಯಾಯ್ತು (ಅರಣ್ಯ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಸೂರ್ಯನ ರಥದ ಚಕ್ರವೆಂದರೆ ನಾಲ್ಕು ಯುಗಗಳು. ಅದರ ಗುಂಬವು ಚಾತುರ್ಮಾಸಗಳು, ಆರು ಋತುಗಳೇ ಅದರ ದರಿ, ಸಂವತ್ಸರ, ಪರಿವತ್ಸರ, ಇಡಾವತ್ಸರ, ವಿದ್ವತ್ಸರ, ವತ್ಸರಗಳೆಂಬುವು ಮೊಳೆಗಳು.

ಅರ್ಥ:
ಹರಿ: ಚಲಿಸು; ಗಾಲಿ: ಚಕ್ರ; ನಾಭಿ: ಹೊಕ್ಕಳು; ಮೂಲ: ಬುಡ; ಉರುವ: ಶ್ರೇಷ್ಠ; ಮಾಸ: ತಿಂಗಳು; ಘನ: ಗಟ್ಟಿ, ಭಾರ ಷಡುರುತು: ೬ ಋತುಗಳು; ಚಕ್ರ: ಗಾಲಿ; ಚಾರು: ಸುಂದರ; ಚತುರ: ನಾಲ್ಕು; ಯುಗ: ದೀರ್ಘವಾದ ಕಾಲಾವಧಿ; ತರ: ಸಾಲು; ಸಂವತ್ಸರ: ವರ್ಷ; ಮೊಳೆ: ಕುಡಿ, ಮೊಳಕೆ;

ಪದವಿಂಗಡಣೆ:
ಹರಿವ +ಗಾಲಿಯ +ನಾಭಿ +ಮೂಲ
ಕ್ಕುರುವ +ಚಾತುರ್ಮಾಸಗಳು +ಘನ
ತರದ +ಷಡುರುತುವಯನ +ಚಕ್ರವು +ಚಾರು+ಚತುರಯುಗ
ತರವಿಡಿದ +ಸಂವತ್ಸರವು +ಘನ
ತರದ+ ಪರಿವತ್ಸರ +ವಿಡಾವ
ತ್ಸರವು +ವಿದ್ವತ್ಸರವು +ವತ್ಸರವೆಂದು +ಮೊಳೆಯಾಯ್ತು

ಅಚ್ಚರಿ:
(೧) ಸಂವತ್ಸರ, ಪರಿವತ್ಸರ, ವತ್ಸರ – ಸಮನಾರ್ಥಕ ಪದಗಳು

ಪದ್ಯ ೬೨: ಸೂರ್ಯನ ರಥದ ವಿಸ್ತಾರವೆಷ್ಟು?

ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊಂದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು
ಏಳುಲಕ್ಕದ ನೀಳ ರಥದ ವಿ
ಶಾಲವದು ಮುವ್ವತ್ತು ಸಾವಿರ
ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲಪಾಶದಲಿ (ಅರಣ್ಯ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ಸೂರ್ಯನ ರಥವು ಒಂದು ಕೋಟಿ ಐವತ್ತೇಳು ಲಕ್ಷ ಯೋಜನ ಉದ್ದವಾಗಿದೆ. ಮೂವತ್ತು ಸಾವಿರ ಯೋಜನ ವಿಸ್ತಾರವಾಗಿದೆ. ಹಿಮಾಲಯದಲ್ಲಿ ಅದನ್ನು ಬಿಗಿದಿರುವ ಅಚ್ಚಿದೆ, ಮಾನಸಗಿರಿಯ ಮೇಲೆ ತಿರುಗುತ್ತದೆ. ಧೃವ ಮಂಡಲಕ್ಕೆ ಅನಿಲ ಪಾಶದಿಂದ ಬಿಗಿದಿದೆ.

ಅರ್ಥ:
ಗಾಲಿ: ಚಕ್ರ; ಗಿರಿ: ಬೆಟ್ಟ; ಶಿಖರ: ತುದಿ, ಅಗ್ರ; ತಿರುಗು: ಸುತ್ತು; ಕಡೆ: ಕೊನೆ; ಸುರ: ದೇವತೆ; ಶೈಲ: ಬೆಟ್ಟ; ಲಕ್ಕ: ಲಕ್ಷ; ನೀಳ: ಉದ್ದ; ರಥ: ಬಂಡಿ; ವಿಶಾಲ: ವಿಸ್ತಾರ; ಸಾವಿರ: ಸಹಸ್ರ; ಮಂಡಲ: ಜಗತ್ತು, ವರ್ತುಲಾಕಾರ; ಬಿಗಿ: ಭದ್ರವಾಗಿರುವುದು; ಅನಿಲ: ವಾಯು; ಪಾಶ: ಹಗ್ಗ;

ಪದವಿಂಗಡಣೆ:
ಗಾಲಿ +ಮಾನಸ +ಗಿರಿಯ +ಶಿಖರದ
ಮೇಲೆ +ತಿರುಗುವುದೊಂದು +ಕಡೆ+ ಸುರ
ಶೈಲದಲಿ +ಬಿಗಿದಚ್ಚು +ಕೋಟಿಯ +ಮೇಲೆ+ಐವತ್ತು
ಏಳು+ಲಕ್ಷದ+ ನೀಳ +ರಥದ +ವಿ
ಶಾಲವದು +ಮುವ್ವತ್ತು +ಸಾವಿರ
ಮೇಲೆ +ಧ್ರುವ +ಮಂಡಲಕೆ+ ಬಿಗಿದಿಹುದ್+ಅನಿಲ+ಪಾಶದಲಿ

ಪದ್ಯ ೬೧: ಮಾತಲಿಯು ಅರ್ಜುನನಿಗೆ ಯಾವುದರ ಬಗ್ಗೆ ತಿಳಿಸಲು ಮುಂದಾದನು?

ಧರೆಯ ವರುಷ ದ್ವೀಪ ಗಿರಿಗಳ
ಶರಧಿಗಳ ಸುರಶೈಲದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬಂಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳೆಂದು ಮಾತಲಿ ನುಡಿದನರ್ಜುನಗೆ (ಅರಣ್ಯ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೂಮಿಯು ದ್ವೀಪಗಳು, ವರ್ಷಗಳು, ಪರ್ವತಗಳು, ಸಮುದ್ರಗಳು ಮೇರು ಪರ್ವತದ ಮೇಲಿರುವ ಬ್ರಹ್ಮ, ಶಿವ ಇವರ ನಗರಗಳು ಇರುವುದನ್ನು ತಿಳಿಸಿದ್ದೇನೆ. ಈಗ ಸೂರ್ಯನ ರಥವಿರುವ ಪರಿ, ಅದು ಚಲಿಸುವ ದಾರಿ, ನಕ್ಷತ್ರಗಳು ಇವನ್ನು ಕುರಿತು ಹೇಳುತ್ತೇನೆ ಕೇಳು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಧರೆ: ಭೂಮಿ; ವರುಷ: ಭೂಭಾಗ; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ಗಿರಿ: ಬೆಟ್ಟ; ಶರಧಿ: ಸಮುದ್ರ; ಸುರ: ದೇವತೆ; ಸುರಶೈಲ: ದೇವಗಿರಿ; ಅಗ್ರ: ತುದಿ, ಶ್ರೇಷ್ಠ; ಹರ: ಶಿವ; ಚತುರಾನನ: ಬ್ರಹ್ಮ; ಆನನ: ಮುಖ; ಪಟ್ಟಣ: ಊರು; ತಿಳುಹು: ತಿಳಿಸು; ಸರಸಿರುಹ: ಕಮಲ; ಬಂಧು: ನೆಂಟ, ಸಂಬಂಧಿಕ; ರಥ: ತೇರು; ಪರಿ: ರೀತಿ; ಚರಿಸು: ಚಲಿಸು; ಪಥ: ಮಾರ್ಗ; ತಾರೆ: ನಕ್ಷತ್ರ; ಕೇಳು: ಆಲಿಸು; ನುಡಿ: ಮಾತಾಡು;

ಪದವಿಂಗಡಣೆ:
ಧರೆಯ+ ವರುಷ +ದ್ವೀಪ +ಗಿರಿಗಳ
ಶರಧಿಗಳ +ಸುರಶೈಲದ್+ಅಗ್ರದ
ಹರನ +ಚತುರಾನನನ +ಪಟ್ಟಣದಿರವ+ ತಿಳುಹಿದೆನು
ಸರಸಿರುಹ +ಬಂಧುವಿನ +ರಥವಿಹ
ಪರಿಯ +ಚರಿಸುವ +ಪಥವ +ತಾರೆಗಳ್
ಇರವ +ನೀ +ಕೇಳೆಂದು +ಮಾತಲಿ +ನುಡಿದನ್+ಅರ್ಜುನಗೆ

ಅಚ್ಚರಿ:
(೧) ಸೂರ್ಯನನ್ನು ಸರಸಿರುಹಬಂಧು ಎಂದು ಕರೆದಿರುವುದು
(೨) ಶೈಲ, ಗಿರಿ – ಸಮನಾರ್ಥಕ ಪದ

ಪದ್ಯ ೬೦: ಭೂಮಿಯು ಹೇಗೆ ಶೋಭಿಸುತ್ತದೆ?

ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ (ಅರಣ್ಯ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಆದಿಶೇಷವು (ಹಾವು) ನಾಳವಾಗಿ, ಈ ಭೂಮಿಯು ಮಹಾವಿಷ್ಣುವಿನ ನಾಭೀಕಮಲದಂತಿದೆ. ಭೂಮಿಯು ಕರ್ಣಿಕೆ, ಇದನ್ನು ಸುತ್ತಿರುವ ಪರ್ವತಗಳೇ ಕುಸುರು. ಬ್ರಹ್ಮನು ಮಧ್ಯದಲ್ಲಿರಲು ಭೂಮಿಯು ವಿಷ್ಣುವಿನ ನಾಭೀಕಮಲದಂತಿದೆ.

ಅರ್ಥ:
ಉರಗ: ಹಾವು; ನಾಳ: ಟೊಳ್ಳಾದ ಕೊಳವೆ, ನಳಿಕೆ; ಅಂಬುಜ: ತಾವರೆ; ಕುಸುಮ: ಹೂವು; ಧರಣಿ: ಭೂಮಿ; ಕರ್ಣಿಕೆ: ಮಲದ ಮಧ್ಯ ಭಾಗ, ಬೀಜಕೋಶ; ಮೇರುಗಿರಿ: ಮೇರು ಪರ್ವತ; ಕೇಸರ: ಹೂವಿನಲ್ಲಿರುವ ಕುಸುರು, ಎಳೆ; ನಗ: ಬೆಟ್ಟ, ಪರ್ವತ; ಬಳಸು: ಆವರಿಸು; ಸೊಗ: ಚೆಲುವು; ಸರಸಿರುಹ: ಕಮಲ; ಸರಸಿರುಹಸಂಭವ: ಬ್ರಹ್ಮ; ಮಧ್ಯ: ನಡುವೆ; ಭೂತಲ: ಭೂಮಿ; ಐದೆ: ಸೇರು; ಮೆರೆ: ಶೋಭಿಸು; ಸಿರಿ: ಐಶ್ವರ್ಯ; ನಾಭಿ: ಹೊಕ್ಕಳು; ಕಮಲ: ತಾವರೆ;

ಪದವಿಂಗಡಣೆ:
ಉರಗ +ನಾಳ+ಅಂಬುಜ +ಕುಸುಮವ್+ಈ+
ಧರಣಿ +ಕರ್ಣಿಕೆ +ಮೇರುಗಿರಿ+ ಕೇ
ಸರ +ನಗಂಗಳು+ ಬಳಸಿ+ ಕೇಸರದಂತೆ +ಸೊಗಯಿಪವು
ಸರಸಿರುಹಸಂಭವನು+ ಮಧ್ಯದೊಳ್
ಇರಲು +ಭೂತಲವ್+ಐದೆ+ ಮೆರೆವುದು
ಸಿರಿ+ ಮಹಾವಿಷ್ಣುವಿನ+ ನಾಭೀ+ಕಮಲದಂದದಲಿ

ಅಚ್ಚರಿ:
(೧) ಅಂಬುಜ, ಕಮಲ, ಸರಸಿರುಹ – ಸಮನಾರ್ಥಕ ಪದ

ಪದ್ಯ ೫೯: ದಿಕ್ಪಾಲಕರ ನಗರಗಳಾವುವು?

ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸಂಯಮನಿಯೆಂಬಾ
ಪುರವು ಕಾಲನ ನಗರಿ ತೆಂಕಲು ಪಶ್ಚಿಮಾದ್ರಿಯಲಿ
ವರುಣನದು ಶುದ್ಧಿಮತಿ ಯಕ್ಷೇ
ಶ್ವರಗೆಸೆವುದಾ ಕಾಂತಿಮತಿ ಶಿಖಿ
ನಿರುತಿ ಮರುದೀಶಾನರಿಗೆಯವರವರ ನಾಮದಲಿ (ಅರಣ್ಯ ಪರ್ವ, ೮ ಸಂಧಿ, ೫೯ ಪದ್ಯ್)

ತಾತ್ಪರ್ಯ:
ದೇವೇಂದ್ರನ ನಗರವು ಅತ್ಯುತ್ತಮವಾದ ಸ್ವರ್ಗ. ಸಂಯಮನಿಯೆನ್ನುವುದು ಯಮನ ಊರು ಅದು ದಕ್ಷಿಣ ದಿಕ್ಕಿನಲ್ಲಿದೆ. ಪಶ್ಚಿಮದಲ್ಲಿ ವರುಣನಿರುವ ಶುದ್ಧಮತಿ ಎಂಬ ನಗರ. ಕುಬೇರನಿರುವುದು ಕಾಂತಿಮತಿ (ಅಲಕಾನಗರಿ), ಅಗ್ನಿ, ವಾಯು, ನಿರಋತಿ, ಈಶಾನರ ನಗರಗಳು ಅವರವರ ಹೆಸರನ್ನೇ ಹೊಂದಿವೆ.

ಅರ್ಥ:
ಸುರಪ: ದೇವತೆಗಳ ಒಡೆಯ, ಇಂದ್ರ; ಸ್ವರ್ಗ: ನಾಕ; ಸಾರ: ರಸ; ನಿರುತ: ನಿಶ್ಚಯ; ಕಾಲ: ಯಮನ್; ನಗರ: ಊರು; ತೆಂಕಲು: ದಕ್ಷಿಣ; ಪಶ್ಚಿಮ: ಪಡುವಣ; ಅದ್ರಿ: ಬೆಟ್ಟ; ವರುಣ: ನೀರಿನ ಅಧಿದೇವತೆ, ಪಶ್ಚಿಮ ದಿಕ್ಕಿನ ಒಡೆಯ; ಯಕ್ಷೇಶ್ವರ: ಕುಬೇರ; ಶಿಖಿ: ಅಗ್ನಿ; ಮರು: ಮಾರುತಿ, ವಾಯು; ನಾಮ: ಹೆಸರು;

ಪದವಿಂಗಡಣೆ:
ಸುರಪನದುವೇ +ಸ್ವರ್ಗ +ಸಾರವು
ನಿರುತದಲಿ +ಸಂಯಮನಿ+ಎಂಬ+ಆ
ಪುರವು +ಕಾಲನ +ನಗರಿ+ ತೆಂಕಲು+ ಪಶ್ಚಿಮಾದ್ರಿಯಲಿ
ವರುಣನದು +ಶುದ್ಧಿಮತಿ+ ಯಕ್ಷೇ
ಶ್ವರಗ್+ಎಸೆವುದ್+ಆ+ ಕಾಂತಿಮತಿ +ಶಿಖಿ
ನಿರುತಿ +ಮರುತ್+ಈಶಾನರಿಗೆ+ಅವರವರ +ನಾಮದಲಿ

ಅಚ್ಚರಿ:
(೧) ನಗರಗಳ ಹೆಸರು – ಸ್ವರ್ಗ, ಸಂಯಮನಿ, ಶುದ್ಧಿಮತಿ, ಕಾಂತಿಮತಿ

ಪದ್ಯ ೫೮: ಮಾನಸಗಿರಿಯ ಮೇಲೆ ಯಾರು ನೆಲೆಸಿದ್ದಾರೆ?

ವರುಷವೆರಡಾಗೊಪ್ಪುತಿಹ ಪು
ಷ್ಕರದ ನಡುವಣ ಮಾನಸೋತ್ತರ
ಗಿರಿಯುದಯವೈವತ್ತು ಸಾವಿರ ಹರವು ತದ್ವಿಗುಣ
ಪಿರಿದು ಪುಣ್ಯ ಶ್ಲೋಕ ಕೇಳಾ
ಗಿರಿಯ ಶಿಖರದ ಮೇಲೆ ದಿಗ್ದೇ
ವರ ಪುರಂಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು (ಅರಣ್ಯ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಪುಷ್ಕರದಲ್ಲಿ ಎರಡು ವರ್ಷಗಳಿವೆ. ಅದರ ನಡುವಿರುವ ಉತ್ತರ ಮಾನಸಗಿರಿಯ ಕೆಳಗೆ ಐವತ್ತು ಸಾವಿರ ಯೋಜನ ವಿಸ್ತಾರ, ಅದು ಒಂದು ಲಕ್ಷ ವಿಸ್ತಾರವಾಗಿ ಹರಡಿದೆ. ಆ ಗಿರಿಯ ಶಿಖರಗಳ ಮೇಲೆ ದಿಕ್ಪಾಲಕರ ಪುರಗಳಿವೆ.

ಅರ್ಥ:
ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಪುಷ್ಕರ: ತಾವರೆ; ನಡುವೆ: ಮಧ್ಯ; ಗಿರಿ: ಬೆಟ್ಟ; ಉದಯ: ಮೇಲೆ; ಹರವು: ವಿಸ್ತಾರ; ದ್ವಿಗುಣ: ಎರಡು ಪಟ್ಟು; ಪಿರಿ: ದೊಡ್ಡ; ಪುಣ್ಯ: ಸದಾಚಾರ; ಗಿರಿ: ಬೆಟ್ಟ; ಶಿಖರ: ತುದಿ; ದಿಕ್ಕು: ದಿಹ್ಸೆ; ದೇವರು: ಸುರರು; ಪುರ: ಊರು; ಸಿರಿ: ಐಶ್ವರ್ಯ; ನೆಲೆ: ವಾಸಸ್ಥಾನ; ಮೆರೆ: ಶೋಭಿಸು;

ಪದವಿಂಗಡಣೆ:
ವರುಷವ್+ಎರಡಾಗ್+ಒಪ್ಪುತಿಹ +ಪು
ಷ್ಕರದ+ ನಡುವಣ +ಮಾನಸೋತ್ತರ
ಗಿರಿ+ಉದಯವ್+ಐವತ್ತು+ ಸಾವಿರ+ ಹರವು +ತದ್ವಿಗುಣ
ಪಿರಿದು +ಪುಣ್ಯ +ಶ್ಲೋಕ +ಕೇಳ್+ಆ
ಗಿರಿಯ+ ಶಿಖರದ+ ಮೇಲೆ +ದಿಗ್
ದೇವರ +ಪುರಂಗಳು +ಸಿರಿಗೆ+ ನೆಲೆವನೆಯೆನಿಸಿ +ಮೆರೆದಿಹವು

ಪದ್ಯ ೫೭: ಜಂಬೂದ್ವೀಪದಲ್ಲಿ ಎಷ್ಟು ವರುಷಗಳಿವೆ?

ವರುಷವೊಂಬತ್ತಾಗಿಹುದು ವಿ
ಸ್ತರದ ಜಂಬೂದ್ವೀಪವೊಂದೇ
ವರುಷವೇಳಾಗಿಹವು ತಾ ಶತ ಸಂಖ್ಯೆಯಾದ್ವೀಪ
ನಿರುತಕಡೆಯದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ನಡುವಿಹುದು ಚಕ್ರದ ಕಂಬಿಯಂದದಲಿ (ಅರಣ್ಯ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜಂಬೂದ್ವೀಪದಲ್ಲಿ ಒಂಬತ್ತು ವರ್ಷಗಳಿವೆ. ಉಳಿದವುಗಳಲ್ಲಿ ಹಲವು ದ್ವೀಪಗಳಿವೆ. ಕಡೆಯ ದ್ವೀಪದಲ್ಲಿ ಎರಡು ವರ್ಷಗಳಿವೆ. ಅಲ್ಲಿ ಚಕ್ರದ ಕಂಬಿಯಂತೆ ಮಾನಸಗಿರಿಯಿದೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ವಿಸ್ತರ: ವಿಸ್ತಾರ, ಅಗಲ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ನಿರುತ: ನಿಶ್ಚಯ; ಗಿರಿ: ಬೆಟ್ಟ; ನಡು: ಮಧ್ಯ; ಚಕ್ರ: ಗಾಲಿ; ಕಂಬಿ: ಉಕ್ಕಿನ ಸಲಾಕಿ;

ಪದವಿಂಗಡಣೆ:
ವರುಷವ್+ಒಂಬತ್ತಾಗಿಹುದು +ವಿ
ಸ್ತರದ +ಜಂಬೂ+ದ್ವೀಪವ್+ಒಂದೇ
ವರುಷವ್+ಏಳಾಗಿಹವು +ತಾ +ಶತ+ ಸಂಖ್ಯೆಯಾ+ದ್ವೀಪ
ನಿರುತಕಡೆಯ+ ದ್ವೀಪವೆಂಬುದು
ವರುಷವ್+ಎರಡಾಗಿರಲು +ಮಾನಸ
ಗಿರಿ+ಅದರ +ನಡುವಿಹುದು +ಚಕ್ರದ +ಕಂಬಿಯಂದದಲಿ

ಪದ್ಯ ೫೬: ಭೂಮಿಯ ವಿಸ್ತಾರವೆಷ್ಟು?

ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮಂಧದುರ್ವರೆ
ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರ್ಯಂತ
ಇತ್ತಸುರಗಿರಿಯಿಂದ ಹಿಂದಿ
ಪ್ಪತ್ತು ಕೋಟಿಯ ಕೂಡಿನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹತ್ತೊಂಬತ್ತು ಕೋಟಿ ತೊಂಬತ್ತು ಲಕ್ಷ ಯೋಜನ ವಿಸ್ತಾರವಾಗಿ ಲೋಕಾಲೋಕ ಪರ್ವತದತ್ತ ಹಬ್ಬಿದೆ. ಮೇರು ಪರ್ವತದ ಹಿಂದಿರುವ ಇಪ್ಪತ್ತು ಕೋಟಿಯನ್ನು ಕೂಡಿದರೆ ಭೂಮಿಯ ವಿಸ್ತಾರ ಐವತ್ತು ಕೋಟಿ ಯೋಜನೆ.

ಅರ್ಥ:
ಹತ್ತು: ದಶ; ಹೀನ: ಕಳೆ, ಕಡಿಮೆಯಾಗು; ತಮಂಧ: ಅಂಧಕಾರ; ಬೆಳೆ: ವಿಸ್ತರಿಸು, ಹೆಚ್ಚಾಗು; ಉದಕ: ನೀರು; ಸುರಗಿರಿ: ಮೇರು ಪರ್ವತ; ಗಿರಿ: ಬೆಟ್ಟ; ಸುರ: ದೇವತೆ; ಹಿಂದೆ: ಹಿಂಭಾಗ; ಕೂಡು: ಸೇರಿಸು; ಧರಿತ್ರಿ: ಭೂಮಿ; ಲೆಕ್ಕ: ಎಣಿಕೆ;

ಪದವಿಂಗಡಣೆ:
ಹತ್ತು +ಲಕ್ಕವು +ಹೀನವಾಗ್
ಇಪ್ಪತ್ತು +ಕೋಟಿ +ತಮಂಧದುರ್ವರೆ
ಸುತ್ತುವರೆ+ ಬೆಳೆದಿಹುದು +ಗರ್ಭೋದಕದ +ಪರ್ಯಂತ
ಇತ್ತ+ಸುರಗಿರಿಯಿಂದ +ಹಿಂದ್
ಇಪ್ಪತ್ತು +ಕೋಟಿಯ +ಕೂಡಿನೋಡೆ +ಧ
ರಿತ್ರಿ +ತಾನೈವತ್ತು +ಕೋಟಿಯ +ಲೆಕ್ಕ +ನೋಡೆಂದ

ಅಚ್ಚರಿ:
(೧) ಭೂಮಿಯ ವಿಸ್ತಾರವನ್ನು ೫೦ ಕೋಟಿ ಯೋಜನೆ ಎಂದು ಹೇಳಿರುವುದು

ಪದ್ಯ ೫೫: ಮಿಕ್ಕ ಸಮುದ್ರಗಳ ವಿಸ್ತಾರವೆಷ್ಟು?

ಲಕ್ಕ ತಾನರವತ್ತು ನಾಲ್ಕಾ
ಗಿಕ್ಕು ಶಾಕ ಕ್ಷೀರ ಕೋಟಿಯ
ಲಕ್ಕ ವಿಪ್ಪತ್ತೆಂಟು ಪುಷ್ಕರ ಸುಜಲವೊಂದಾಗಿ
ಮಿಕ್ಕ ಕೋಟಿದ್ವಯದ ಮೇಲಣ
ಲಕ್ಕವೈವತ್ತಾರು ಯೋಜನ
ವಕ್ಕು ಹೇಮದ ಭೂಮಿ ಲೋಕಾಲೋಕಗಿರಿ ಸಹಿತ (ಅರಣ್ಯ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶಕದ್ವೀಪ ಕ್ಷೀರಾಬ್ಧಿಗಳು ಅರವತ್ತು ನಾಲ್ಕು ಲಕ್ಷ, ಪುಷ್ಕರ ಸಿಹಿ ನೀರು ಸಮುದ್ರಗಳ್ ಒಂದು ಕೋಟಿ ಇಪ್ಪತ್ತೆಂಟು ಲಕ್ಷ, ಲೋಕಾಲೋಕಗಿರಿಯನ್ನು ಸೇರಿಸಿ ಚಿನ್ನದಂತಹ ಭೂಮಿಯು ಎರಡು ಕೋಟಿ ಐವತ್ತಾರು ಲಕ್ಷ ಯೋಜನ ವಿಸ್ತಾರ.

ಅರ್ಥ:
ಲಕ್ಕ: ಲಕ್ಷ; ಕ್ಷೀರ: ಹಾಲು; ಪುಷ್ಕರ: ಕಮಲ; ಸುಜಲ: ನಿರ್ಮಲವಾದ ನೀರು; ದ್ವಯ: ಎರಡು; ಹೇಮ: ಚಿನ್ನ; ಭೂಮಿ: ಧರಿಣಿ; ಸಹಿತ: ಜೊತೆ;

ಪದವಿಂಗಡಣೆ:
ಲಕ್ಕ +ತಾನರವತ್ತು+ ನಾಲ್ಕಾ
ಗಿಕ್ಕು +ಶಾಕ +ಕ್ಷೀರ +ಕೋಟಿಯ
ಲಕ್ಕ +ವಿಪ್ಪತ್ತೆಂಟು +ಪುಷ್ಕರ+ ಸುಜಲವೊಂದಾಗಿ
ಮಿಕ್ಕ+ ಕೋಟಿ+ದ್ವಯದ +ಮೇಲಣ
ಲಕ್ಕವ್+ಐವತ್ತಾರು +ಯೋಜನ
ವಕ್ಕು +ಹೇಮದ +ಭೂಮಿ +ಲೋಕಾಲೋಕಗಿರಿ+ ಸಹಿತ

ಅಚ್ಚರಿ:
(೧) ೬೪, ೧೨೮, ೨೫೬ – ಸಂಖ್ಯೆಗಳ ಬಳಕೆ

ಪದ್ಯ ೫೪: ಸಮುದ್ರಗಳ ವಿಸ್ತಾರವೆಷ್ಟು?

ಲಕ್ಕ ಜಂಬೂದ್ವೀಪವಾಪರಿ
ಲಕ್ಕ ಲವಣ ಸಮುದ್ರ ನಾಲಕು
ಲಕ್ಕ ದ್ವೀಪ ಪ್ಲಕ್ಷ ವಿಕ್ಷು ಸಮುದ್ರವೊಂದಾಗಿ
ಲಕ್ಕವೆಂಟುಸುಶಾಲ್ಮಲಿಯು ಸುರೆ
ಲಕ್ಕ ಷೋಡಶ ಕುಶಘೃತಂಗಳು
ಲಕ್ಕಮೂವತ್ತೆರಡು ಕ್ರೌಂಚದ್ವೀಪ ದಧಿಗೂಡಿ (ಅರಣ್ಯ ಪರ್ವ, ೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ಜಂಬೂದ್ವೀಪ ಲವಣ ಸಮುದ್ರಗಳು ಒಂದೊಂದು ಲಕ್ಷ ಯೋಜನ ವಿಸ್ತಾರ. ಪ್ಲಕ್ಷ ಇಕ್ಷು ಸಮುದ್ರಗಳು ನಾಲ್ಕು ಲಕ್ಷ. ಶಾಲ್ಮಲಿದ್ವೀಪ ಸುರಾಸಮುದ್ರಗಳು ಎಂತು ಲಕ್ಷ, ಕುಶದ್ವೀಪ ಘೃತ ಸಮುದ್ರಗಳು ಹದಿನಾರು ಲಕ್ಷ, ಕ್ರೌಂಚದ್ವೀಪ ದಧಿಸಮುದ್ರಗಳು ಮುವತ್ತೆರಡು ಲಕ್ಷ.

ಅರ್ಥ:
ಲಕ್ಕ: ಲಕ್ಷ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ಲವಣ: ಉಪ್ಪು; ಸಮುದ್ರ: ಸಾಗರ; ಷೋಡಶ: ಹದಿನಾರು; ಘೃತ: ತುಪ್ಪ; ದಧಿ: ಮೊಸರು;

ಪದವಿಂಗಡಣೆ:
ಲಕ್ಕ +ಜಂಬೂ+ದ್ವೀಪವ್+ಆ+ಪರಿ
ಲಕ್ಕ +ಲವಣ+ ಸಮುದ್ರ +ನಾಲಕು
ಲಕ್ಕ+ ದ್ವೀಪ +ಪ್ಲಕ್ಷವ್+ಇಕ್ಷು+ ಸಮುದ್ರವೊಂದಾಗಿ
ಲಕ್ಕವ್+ಎಂಟು+ಸುಶಾಲ್ಮಲಿಯು +ಸುರೆ
ಲಕ್ಕ +ಷೋಡಶ +ಕುಶ+ಘೃತಂಗಳು
ಲಕ್ಕ+ಮೂವತ್ತೆರಡು +ಕ್ರೌಂಚ+ದ್ವೀಪ +ದಧಿಗೂಡಿ

ಅಚ್ಚರಿ:
(೧) ಲಕ್ಕ – ೬ ಸಾಲಿನ ಮೊದಲ ಪದ
(೨) ೧, ೨, ೪, ೮, ೧೬, ೩೨ – ಸಂಖ್ಯೆಗಳ ಬಳಕೆ