ಪದ್ಯ ೭: ಅರ್ಜುನನು ಹೇಗೆ ಕೋಪಗೊಂಡನು?

ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
ಉಸುರುಗಳ ಕರ್ಬೊಗೆಗಳಾಲಿಯ
ಬಿಸುಗುದಿಯ ಬಲುಕೆಂಡವಂಬಿನ
ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ ಖತಿಗೊಂಡ (ಅರಣ್ಯ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ನಿಮ್ಮವನಾದ ಅರ್ಜುನನು ಆಗ ತಿವಿದೆಬ್ಬಿಸಿದ ಹುಲಿಯೋ, ಗಾಯಗೊಂಡ ಹಂದಿಯೋ, ಹಸಿದ ನಾಗರಹಾವೋ, ಕಾಯಿಸಿದ ಉಕ್ಕಿನ ಕೂರ್ಪೋ ಎಂಬಂತೆ ರೋಷಗೊಂಡನು. ಅವನ ಉಸಿರು ಕರಿಹೊಗೆಯಂತಿತ್ತು. ಕಣ್ಣಿನ ಕೆಂಪು ಕೆಂಡದಂತಿತ್ತು. ಅವನು ತೆಗೆದ ಬಾಣವು ಉರಿಯಂತಿತ್ತು.

ಅರ್ಥ:
ಮಸಗು: ಹರಡು; ಕೆರಳು; ಎಬ್ಬಿಸು: ಎಚ್ಚರಗೊಳಿಸು; ಹುಲಿ: ವ್ಯಾಘ್ರ; ನೊಂದ: ಪೆಟ್ಟಾದ; ಹಂದಿ: ಸೂಕರ; ಹಸಿ: ಆಹಾರವನ್ನು ಬಯಸು, ಹಸಿವಾಗು; ಭುಜಗ: ಹಾವು; ಕಾದ: ಬಿಸಿಯಾದ; ಉಕ್ಕು: ಹದಮಾಡಿದ ಕಬ್ಬಿಣ, ಆಯುಧ; ಛಡಾಳ: ಹೆಚ್ಚಳ, ಆಧಿಕ್ಯ; ಉಸುರು: ಪ್ರಾಣ, ಗಾಳಿ; ಕರ್ಬೊಗೆ: ಕರಿಹೊಗೆ; ಆಲಿ: ಕಣ್ಣು; ಬಿಸು: ಸೇರಿಸು; ಕುದಿ: ಶಾಖದಿಂದ ಉಕ್ಕು, ಕೋಪಗೊಳ್ಳು; ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಅಂಬು: ಬಾಣ; ಹೊಸ: ನವೀನ; ಮಸೆ: ಹರಿತವಾದುದು, ಚೂಪಾದುದು; ಉರಿ: ಜ್ವಾಲೆ; ಝಾಡಿ: ಕಾಂತಿ; ಝಳ: ತಾಪ; ಖತಿ: ಕೋಪ;

ಪದವಿಂಗಡಣೆ:
ಮಸಗಿದನು +ನಿಮ್ಮಾತನ್+ಉಗಿದ್
ಎಬ್ಬಿಸಿದ +ಹುಲಿಯೋ +ನೊಂದ +ಹಂದಿಯೊ
ಹಸಿದ +ಭುಜಗನೊ+ ಕಾದಕಟ್+ಉಕ್ಕಿನ +ಛಡಾಳಿಕೆಯೊ
ಉಸುರುಗಳ+ ಕರ್ಬೊಗೆಗಳ್+ಆಲಿಯ
ಬಿಸು+ಕುದಿಯ +ಬಲು+ಕೆಂಡವ್+ಅಂಬಿನ
ಹೊಸಮಸೆಗಳ್+ಉರಿ +ಝಾಡಿ +ಝಳುಪಿಸೆ+ ಪಾರ್ಥ +ಖತಿಗೊಂಡ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಎಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
(೨) ಕೋಪವನ್ನು ವಿವರಿಸುವ ಪರಿ – ಉಸುರುಗಳ ಕರ್ಬೊಗೆಗಳಾಲಿಯ ಬಿಸುಗುದಿಯ ಬಲುಕೆಂಡವಂಬಿನ ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ

ನಿಮ್ಮ ಟಿಪ್ಪಣಿ ಬರೆಯಿರಿ