ಪದ್ಯ ೯: ದ್ರೌಪದಿಯು ಕೃಷ್ಣನ ಪಾದಗಳಲ್ಲಿ ಮೈಮರೆತಳೇಕೆ?

ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ (ಅರಣ್ಯ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಶ್ರೀಕೃಷ್ಣನನ್ನು ನೋಡಿ ಓಡೋಡಿ ಬಂದು ಅವನ ಪಾದಗಳ ಮೇಲೆ ಹೊರಳಾಡಿದಳು. ಅವಳ ಕೇಶರಾಶಿಯು ಅವಳನ್ನು ಮುಸುಕುತ್ತಿರಲು ಆಕೆಯು ಮೈಮರೆತಳು, ದುಃಖದಿಂದ ಕರಗಿ, ಕಳಾಹೀನಳಾಗಿ, ಹೆಚ್ಚಿನ ನೋವಿನಿಂದ ಕಣ್ಣೀರಿನ ಧಾರೆಯನ್ನು ಹರಿಯುತ್ತಿರಲು ಆಕೆಯು ಮಮ್ಮಲ ಮರುಗಿದಳು. ಕಣ್ಣಿರು ಮತ್ತೆ ಮತ್ತೆ ಉಕ್ಕಿತು.

ಅರ್ಥ:
ಒರಲು:ಗೋಳಿಡು; ದೆಸೆ: ಬಳಿ, ಸಮೀಪ; ಮಿಗೆ: ಅಧಿಕ; ಹೊರಳು: ಉರುಳಾಡು; ಹರಿ: ಕೃಷ್ಣ; ಪಾದ: ಚರಣ; ಮೈಮರೆ: ಪ್ರಜ್ಞೆಯನ್ನು ಕಳೆದುಕೊಳ್ಳು; ಅಂಗನೆ: ಹೆಣ್ಣು; ತನು: ದೇಹ; ಮುಸುಕು: ಆವರಿಸು; ಕೇಶ: ಕೂದಲು; ಪಾಶ: ಜಾಲ; ಕರಗು: ಕನಿಕರ ಪಡು, ನೀರಾಗಿಸು; ಕಂದು: ಕಳಾಹೀನ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ, ಸಂಕಟ; ಕರು: ಎತ್ತರ, ಹಿರಿಮೆ; ದೃಗುಜಲ: ಕಣ್ಣೀರು; ಒರತೆ: ಚಿಲುಮೆ; ಉಕ್ಕು: ಹೆಚ್ಚಾಗು; ಮಹೀಶ: ರಾಜ; ಅಂಗನೆ: ಹೆಣ್ಣು;

ಪದವಿಂಗಡಣೆ:
ಒರಲಿದಳು +ದೆಸೆಯೊಡನ್+ಒರಲೆ+ ಮಿಗೆ
ಹೊರಳಿದಳು+ ಹರಿಪಾದದಲಿ+ ಮೈ
ಮರೆದಳ್+ಅಂಗನೆ +ತನುವ +ಮುಸುಕಿದ +ಕೇಶ+ಪಾಶದಲಿ
ಕರಗಿದಳು +ಕಂದಿದಳು +ಮಮ್ಮಲ
ಮರುಗಿ +ಕರುಗಂದಿದಳು+ ದೃಗುಜಲದ್
ಒರತೆಯುಕ್ಕಿತು +ಮೇಲೆ +ಮೇಲೆ +ಮಹೀಶನ್+ಅಂಗನೆಗೆ

ಅಚ್ಚರಿ:
(೧) ದ್ರೌಪದಿಯನ್ನು ಮಹೀಶನಂಗನೆ ಎಂದು ಕರೆದಿರುವುದು
(೨) ದುಃಖದ ತೀವ್ರತೆಯನ್ನು ವಿವರಿಸುವ ಪರಿ – ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲದೊರತೆಯುಕ್ಕಿತು ಮೇಲೆ ಮೇಲೆ

ನಿಮ್ಮ ಟಿಪ್ಪಣಿ ಬರೆಯಿರಿ