ಪದ್ಯ ೬೦: ಭೀಮನ ಕೋಪಮಿಶ್ರಿತ ನುಡಿಗಳು ಹೇಗಿದ್ದವು?

ಸಾಲದೇ ನಿಮಗಿನ್ನು ಕೌರವ
ರೋಲಗದ ಫಲವಾಯ್ತಲಾ ವನ
ಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತಲೆ
ಬೀಳುಕೊಳಿರೇ ಬೊಪ್ಪನವರನು
ಮೇಲೆ ಮೋಹದ ತಾಯಲಾ ನಡೆ
ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ (ಸಭಾ ಪರ್ವ, ೧೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೀಮನು ತನ್ನ ಕೋಪಾಗ್ನಿಯನ್ನು ಸಂತೈಸಿ ಧರ್ಮರಾಯನ ಬಳಿ ಕೌರವರ ಸಭೆಗೆ ಬಂದುದು ಫಲವನ್ನು ಕೊಟ್ಟಿತಲ್ಲವೇ? ನಿಮಗಿನ್ನೂ ಸಾಕಾಗಲಿಲ್ಲವೇ? ತುಳಸೀಮಾಲೆಯು ಕೊರಳಿಗೆ ಆಭ್ರಣವಾಗುವುದರ ಬದಲು ಅರಣ್ಯಸಂಚಾರವು ಪಾದಗಳಿಗೆ ಆಭರಣವಾಯಿತಲ್ಲವೇ? ಇನ್ನೇಕೆ ತಡ, ದೊಡ್ಡಪ್ಪನನ್ನು ನೋಡಿ ಅವನಿಂದ ಬೀಳ್ಕೊಳ್ಳೋಣ, ಅಲ್ಲದೇ ಗಾಂಧಾರಿಯು ಪ್ರೀತಿಯ ತಾಯಿಯಲ್ಲವೇ? ಅವಳಿಗೆ ಹೇಳಿ ಅಪ್ಪಣೆ ಪಡೆದು ತೆರಳೋಣ ಎಂದು ಭೀಮನು ಧರ್ಮರಾಯನಿಗೆ ಹೇಳಿದನು.

ಅರ್ಥ:
ಸಾಲದೇ: ಸಾಕಾಗಲಿಲ್ಲವೇ; ಓಲಗ: ದರ್ಬಾರು; ಫಲ: ಪ್ರಯೋಜನ; ವನಮಾಲೆ: ತುಳಸೀಮಾಲೆ; ಕೊರಳು: ಕುತ್ತಿಗೆ; ಚರಣ: ಪಾದ; ಆಭರಣ: ಒಡವೆ; ಬೀಳುಕೊಳು: ಹೊರಡಲು ಅಪ್ಪಣೆ ಪಡೆ, ತೆರಳು; ಬೊಪ್ಪ: ತಂದೆ; ಮೋಹ: ಪ್ರೀತಿಯ; ತಾಯಿ: ಮಾತೆ; ನಡೆ: ಹೋಗು; ಹೇಳು: ತಿಳಿಸು; ಕಳುಹಿಸಿಕೊಂಬೆ: ಬೀಳ್ಕೊಡು; ಭೂಪತಿ: ರಾಜ;

ಪದವಿಂಗಡಣೆ:
ಸಾಲದೇ+ ನಿಮಗಿನ್ನು+ ಕೌರವರ್
ಓಲಗದ +ಫಲವಾಯ್ತಲಾ +ವನ
ಮಾಲೆ +ಕೊರಳಿಂಗಲ್ಲ+ ಚರಣಾಭರಣವಾಯಿತಲೆ
ಬೀಳುಕೊಳಿರೇ+ ಬೊಪ್ಪನವರನು
ಮೇಲೆ +ಮೋಹದ +ತಾಯಲಾ +ನಡೆ
ಹೇಳಿ +ಕಳುಹಿಸಿ+ಕೊಂಬೆವ್+ಎಂದನು +ಭೂಪತಿಗೆ+ ಭೀಮ

ಅಚ್ಚರಿ:
(೧) ಭೀಮನ ಕೋಪಮಿಶ್ರಿತ ನುಡಿ – ಬೀಳುಕೊಳಿರೇ ಬೊಪ್ಪನವರನು ಮೇಲೆ ಮೋಹದ ತಾಯಲಾ ನಡೆ ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ

ನಿಮ್ಮ ಟಿಪ್ಪಣಿ ಬರೆಯಿರಿ