ಪದ್ಯ ೪೨: ಧೃತರಾಷ್ಟ್ರನು ಧರ್ಮರಾಯನಿಗೆ ಏನು ಹೇಳಿದ?

ಸೋಲದಲಿ ಮನನೊಂದು ಹೋದುದು
ಹೋಲದೆಮ್ಮಭಿಮತಕೆ ನಿಮ್ಮೊಳು
ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ
ಲೀಲೆಯಲಿ ಮಾಡುವದು ಸದ್ಯೂ
ತಾಳಿಯಲಿ ರಮಿಸುವದು ಮನದ ವಿ
ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಹಿಂದೆ ನೀವು ಜೂಜಿನಲ್ಲಿ ಸೋತು ಮನನೊಂದು ಹೋದದ್ದು ನಮ್ಮ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಈಗ ನೀವೆರಡು ಪಕ್ಷದವರೂ ಜೊತೆಗೂಡಿ ಸ್ನಾನ, ಭೋಜನಾದಿಗಳನ್ನು ಮಾಡಿರಿ, ಒಳ್ಳೆಯ ವಿನೋದದ ದ್ಯೂತವನ್ನಾಡಿ ಸಂತೋಷದಿಂದಿರಿ, ನಿಮ್ಮ ನಿಮ್ಮಲಿ ಮನಃಕ್ಲೇಷವಿಲ್ಲದೆ ಬದುಕಿರಿ ಎಂದು ಧೃತರಾಷ್ಟ್ರನು ನುಡಿದನು.

ಅರ್ಥ:
ಸೋಲು: ಪರಾಭವ; ಮನ: ಮನಸ್ಸು; ನೊಂದು: ಬೇಜಾರು ಪಟ್ಟು; ಹೋದು: ಕಳೆದ; ಹೋಲದು: ಸರಿತೂಗದು; ಅಭಿಮತ: ಅಭಿಪ್ರಾಯ; ಮೇಳ: ಗುಂಪು, ಸೇರುವಿಕೆ; ಮಜ್ಜನ: ಸ್ನಾನ, ಜಳಕ; ಭೋಜನ: ಊಟ; ಆದಿ: ಮುಂತಾದ; ಲೀಲೆ: ಆಟ, ಕ್ರೀಡೆ, ಸಂತೋಷ; ದ್ಯೂತ: ಜೂಜು; ರಮಿಸು: ಆನಂದಿಸು; ವಿಟಾಳ: ಮಾಲಿನ್ಯ; ಬದುಕು: ಜೀವಿಸು; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಸೋಲದಲಿ +ಮನನೊಂದು +ಹೋದುದು
ಹೋಲದ್+ಎಮ್ಮ್+ಅಭಿಮತಕೆ+ ನಿಮ್ಮೊಳು
ಮೇಳದಿಂದ್+ಒಂದಾಗಿ +ಮಜ್ಜನ +ಭೋಜನಾದಿಗಳ
ಲೀಲೆಯಲಿ +ಮಾಡುವದು +ಸದ್ಯೂ
ತಾಳಿಯಲಿ +ರಮಿಸುವದು +ಮನದ +ವಿ
ಟಾಳವಿಲ್ಲದೆ +ಬದುಕಿ +ನಿಮ್ಮೊಳಗ್+ಎಂದ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರನು ತನ್ನ ತೋರಿಕೆಯ ಇಚ್ಛೆಯನ್ನು ಹೇಳುವ ಪರಿ – ಮನದ ವಿಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ

ನಿಮ್ಮ ಟಿಪ್ಪಣಿ ಬರೆಯಿರಿ