ಪದ್ಯ ೩: ವನದಲ್ಲಿ ಯಾವ ಮರಗಳಿದ್ದವು?

ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸಸು
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ
ಕುಂಬಿನಿಯೊಳುಳ್ಳಖಿಳ ವೃಕ್ಷಕ
ದಂಬದಲಿ ವನ ಮೆರೆದುದದನೇ
ನೆಂಬೆನೀ ಪರಿವಾರ ತುಂಬಿತುಲಲಿತನಂದನವ (ಅರಣ್ಯ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ತುಂಬುರು, ಅರಳಿ, ಲವಂಗ, ಪಾದರಿ, ನಿಂಬೆ, ಮಾವು, ಮುತ್ತುಗ, ಹಲಸು, ನೇರಳೆ, ಗುಗ್ಗುಳ, ಅಶೋಕ, ಆಲ, ಪುನ್ನಾಗ, ಸಂಪಿಗೆ ಮೊದಲಾದ ಭೂಮಿಯಲ್ಲಿರುವ ಸಮಸ್ತ ವೃಕ್ಷಗಳಿಂದ ಕೂಡಿದ ಆ ವನದಲ್ಲಿ ಧರ್ಮನಂದನನ ಪರಿವಾರವು ಬಂದು ಸೇರಿತು.

ಅರ್ಥ:
ಚೂತ: ಮಾವು; ಪನಸಸು: ಹಲಸು; ಜಂಬು: ನೇರಳೆ; ವಟ: ಆಲ; ಚಂಪಕ: ಸಂಪಿಗೆ; ಕುಂಭಿನಿ: ಭೂಮಿ; ಅಖಿಳ: ಎಲ್ಲಾ; ವೃಕ್ಷ: ಮರ; ಕದಂಬ: ಗುಂಪು; ವನ: ಕಾಡು; ಮೆರೆ: ಹೊಳೆ, ಪ್ರಕಾಶಿಸು; ಪರಿವಾರ: ಸುತ್ತಲಿನವರು; ಲಲಿತ: ಚೆಲುವಾದ, ಸುಂದರವಾದ; ನಂದನ: ಮಗ;

ಪದವಿಂಗಡಣೆ:
ತುಂಬುರ್+ಅರಳಿ +ಲವಂಗ +ಪಾದರಿ
ನಿಂಬೆ +ಚೂತ +ಪಲಾಶ +ಪನಸಸು
ಜಂಬು +ಗುಗ್ಗುಳ್+ಅಶೋಕ +ವಟ +ಪುನ್ನಾಗ +ಚಂಪಕದ
ಕುಂಬಿನಿಯೊಳ್+ಉಳ್ಳ್+ಅಖಿಳ+ ವೃಕ್ಷ+
ಕದಂಬದಲಿ+ ವನ +ಮೆರೆದುದದನ್
ಏನೆಂಬೆನ್+ಈ+ಪರಿವಾರ+ ತುಂಬಿತು+ಲಲಿತ+ನಂದನವ

ಅಚ್ಚರಿ:
(೧) ಮರಗಳ ಹೆಸರು: ೧೪ ಮರಗಳ ಹೆಸರು, ತುಂಬುರು,ಅರಳಿ, ಲವಂಗ, ಪಾದರಿ, ನಿಂಬೆ, ಚೂತ, ಪಲಾಶ, ಪನಸಸು, ಜಂಬು, ಗುಗ್ಗುಳ, ಅಶೋಕ, ವಟ, ಪುನ್ನಾಗ, ಚಂಪಕ

ಪದ್ಯ ೨: ಕಾಡಿನ ಪ್ರಕೃತಿ ಸೌಂದರ್ಯವು ಹೇಗಿತ್ತು?

ಬರಬರಲು ಮುಂದೊಂದು ವನದಲಿ
ಚರಿಪ ಪಕ್ಷಿ ಮೃಗಾಳಿ ತಳಿತಿಹ
ಬಿರಿಮುಗಳನೀಕ್ಷಿಸುವ ಮರಿದುಂಬಿಗಳ ಮೇಳವದ
ಪರಿಪರಿಯ ಹಣುಹಂಪಲುಗಳು
ಚರಿಸಿ ಕೊಡುತಿರೆ ಪಕ್ಷಿಮೃಗಕುಲ
ವೆರಸಿ ಮೆರೆದವು ವನದ ಸುತ್ತಲು ರಾಯ ಕೇಳೆಂದ (ಅರಣ್ಯ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರು ಕಾಡಿನಲ್ಲಿ ಬರುತ್ತಿರಲು, ಮುಂದೊಂದು ಕಾಡು ಕಂಡಿತು. ಅಲ್ಲಿ ಮೃಗಗಳು ಓಡಾಡುತ್ತಿದ್ದವು, ಪಕ್ಷಿಗಳು ಹಾರಾಡುತ್ತಿದ್ದವು, ಅರಳಿದ ಹೂಗಳನ್ನು ಮರಿದುಂಬಿಗಳು ಸುತ್ತುವರೆದು ಹಾರಾಡುತ್ತಿದ್ದವು, ವಿಧವಿಧವಾದ ಹಣ್ಣುಗಳಿಂದ ಕಾಡು ಕಂಗೊಳಿಸುತ್ತಿತ್ತು.

ಅರ್ಥ:
ಬರಬರಲು: ಮುಂದೆ ಬರುತ್ತಾ; ವನ: ಕಾಡು; ಚರಿಪ: ಸಂಚರಿಸು; ಪಕ್ಷಿ: ಖಗ; ಮೃಗಾಳಿ: ಪ್ರಾಣಿಗಳ ಗುಂಪು; ತಲಿತ: ಚಿಗುರು; ಬಿರಿಮುಗುಳು: ಅರಳಿದ ಮೊಗ್ಗು; ಈಕ್ಷಿಸು: ನೋಡು; ಮರಿ: ಚಿಕ್ಕ; ದುಂಬಿ: ಜೇನು ನೊಣ; ಮೇಳ: ಗುಂಪು; ಪರಿ: ಹಲವಾರು; ಹಣ್ಣು: ಫಲ; ಉಚ್ಚರಿಸು: ಹೇಳು; ಕೊಡು:ನೀಡು; ಕುಲ: ವಂಶ, ಸಂತತಿ; ಮೆರೆ: ಹೊಳೆ, ಪ್ರಕಾಶಿಸು; ವನ: ಕಾಡು; ಸುತ್ತಲು: ಎಲ್ಲಾ ಕಡೆ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಬರಬರಲು +ಮುಂದೊಂದು +ವನದಲಿ
ಚರಿಪ+ ಪಕ್ಷಿ+ ಮೃಗಾಳಿ+ ತಳಿತಿಹ
ಬಿರಿಮುಗಳನ್+ಈಕ್ಷಿಸುವ +ಮರಿದುಂಬಿಗಳ +ಮೇಳವದ
ಪರಿಪರಿಯ +ಹಣುಹಂಪಲುಗಳ್
ಉಚ್ಚರಿಸಿ +ಕೊಡುತಿರೆ +ಪಕ್ಷಿ+ಮೃಗ+ಕುಲವ್
ಎರಸಿ +ಮೆರೆದವು+ ವನದ +ಸುತ್ತಲು +ರಾಯ +ಕೇಳೆಂದ

ಅಚ್ಚರಿ:
(೧) ಪಕ್ಷಿ ಮೃಗಾಳಿ, ಪಕ್ಷಿ ಮೃಗಕುಲ – ಪದಗಳ ಬಳಕೆ

ಪದ್ಯ ೧: ಪಾಂಡವರು ಕಾಡಿನಲ್ಲಿ ಯಾವ ಪ್ರಾಣಿಗಳನ್ನು ನೋಡಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ (ಅರಣ್ಯ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಯುಧಿಷ್ಠಿರನು ತನ್ನ ತಮ್ಮಂದಿರು ದ್ರೌಪದಿ ಮತ್ತು ಮುನಿಗಳೊಡನೆ ಬಹು ಕಷ್ಟಕರವಾದ ಬೆಟ್ಟಗಳಲ್ಲಿ ಓಡಾಡುತ್ತಾ ಬಂದು ಕಾಡಿನಲ್ಲಿದ್ದ ಸರ್ಪ, ಆನೆ, ಹುಲಿ, ಸಿಂಹ ಮೊದಲಾದ ಪ್ರಾಣಿಗಳನ್ನು ನೋಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಸುತ: ಮಗ; ಮುನಿ: ಋಷಿ; ಜನ:
ಮನುಷ್ಯರ ಗುಂಪು; ಮೇಳ: ಗುಂಪು; ಹೊರವಂಟು: ಹೊರಟು; ಅನುಜ: ತಮ್ಮ; ಒಡಗೂಡು: ಜೊತೆ; ತಾಳಿಗೆ: ಗಂಟಲು; ತಲ್ಲಣ: ತಾಪ, ಸಂಕಟ; ಗಿರಿ: ಬೆಟ್ಟ; ಚರಿಸು: ಓಡಾಡು; ವಿಪಿನ: ಅರಣ್ಯ; ವ್ಯಾಳ: ಸರ್ಪ; ಗಜ: ಆನೆ; ಶಾರ್ದೂಲ: ಹುಲಿ; ಸಿಂಹ: ಕೇಸರಿ; ಈಕ್ಷಿಸು: ನೋಡು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಯಮಸುತ +ಮುನಿ+ಜನಂಗಳ
ಮೇಳದಲಿ+ ಹೊರವಂಟು+ ತನ್+ಅನುಜಾತರ್+ಒಡಗೂಡಿ
ತಾಳಿಗೆಯ +ತಲ್ಲಣದ+ ಗಿರಿಗಳ
ಮೇಲೆ +ಚರಿಸುತ+ ಬಂದು +ವಿಪಿನ
ವ್ಯಾಳ+ಗಜ+ ಶಾರ್ದೂಲ +ಸಿಂಹಾದಿಗಳನ್+ಈಕ್ಷಿಸುತ

ಅಚ್ಚರಿ:
(೧) ಕಷ್ಟಕರವಾದುದು ಎಂದು ಹೇಳಲು – ತಾಳಿಗೆಯ ತಲ್ಲಣದ ಗಿರಿಗಳ ಮೇಲೆ ಚರಿಸುತ

ನುಡಿಮುತ್ತುಗಳು: ಅರಣ್ಯ ಪರ್ವ ೪ ಸಂಧಿ

  • ತಾಳಿಗೆಯ ತಲ್ಲಣದ ಗಿರಿಗಳ ಮೇಲೆ ಚರಿಸುತ – ಪದ್ಯ
  • ವನಜ ಮುಗಿದವು ಚಕ್ರವಾಕದ ಮನಕೆ ಖತಿ ಕುಮುದಿನಿಗೆ ಮುದ ಯಾಮಿನಿಗೆ ಸುಮ್ಮಾನ – ಪದ್ಯ
  • ಕೊಡಹಿ ಬಿಸುಟನು ಕೇಸರಿಯ, ಕಾಲ್ವಿಡಿದು ಸೀಳಿದ ಕರಿಗಳನು, ಬೆಂಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ, ವಿನೋದದಿ ನಡೆಯೆ ಧರೆ ಕಂಪಿಸಿತು – ಪದ್ಯ ೧೧
  • ನೆನೆಯೆ ಲಕ್ಷ್ಮೀಕಾಂತ ಬಂದನು, ಘನದುರಿತ ದಾವಾಗ್ನಿ ಬಂದನು – ಪದ್ಯ ೨೪
  • ಕಾಳು ಮಾಡಿದಿರಕಟಕಟ ನೀವ್ ಮೇಲನರಿಯದೆ ಋಷಿಯ ಶಾಪವನಾಲಿಸದೆ ವರ ಮೂರ್ಖತನದಲಿ ನೆನೆದಿರನುಚಿತವ – ಪದ್ಯ ೨೬
  • ವಿಪ್ರ ನಿಕಾಯಕಾಮಂತ್ರಣವು ನವತೃಣ ಗೋಧನಾವಳಿಗೆ ಸ್ತ್ರೀಯರಿಗೆ ನಿಜಪತಿಯ ಬರವಿನ ಪ್ರೀಯದೊರೆಕೊಂಬಂತೆ – ಪದ್ಯ ೩೦
  • ಜೀವವಿತ್ತೀ ಧರೆಯಲಭಿಮಾನವನು ರಕ್ಷಿಪುದು – ಪದ್ಯ ೩೧
  • ಕಾಯವೆಂಬುದನಿತ್ಯ ಬೆಂಬತ್ತಿಹುದು ಬಲುಮೃತ್ಯು – ಪದ್ಯ ೩೨
  • ಅನುಜರಾಗಲಿ ಜನಕ ಸುತರಾರಾದೊಡಾಗಲಿ ವನಿತೆಯರ ಮನ ಭ್ರಮಿಸುವುದು – ಪದ್ಯ ೩೩
  • ಪೃಥುವಿಯಲಿ ಪರಪುರುಷರನು ದುರ್ಮತಿಯಲೊಡಬಡುವವಳು ಸತಿಯೇ – ಪದ್ಯ ೩೫

ಪದ್ಯ ೨೫: ಶ್ರೀಕೃಷ್ಣನು ಏನನ್ನು ನಿಶ್ಚೈಸಿದನು?

ಸಂತವಿಸಿ ಪಾಂಡವರನಾ ಮುನಿ
ಸಂತತಿಯ ಮನ್ನಿಸಿ ಮಹೀಭಾ
ರಾಂತರವ ನಿಶ್ಚೈಸಿ ಭಾರತಪಾರಿಶೇಷಿಕವ
ಅಂತರಾತ್ಮಕನೊಲವಿನಲಿ ಜಗ
ದಂತರಂಗಸ್ಥಾಯಿಲಕ್ಷ್ಮೀ
ಕಾಂತ ಬಿಜಯಂಗೈದು ಹೊಕ್ಕನು ದ್ವಾರಕಾಪುರವ (ಅರಣ್ಯ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮಸ್ತ ಜಗತ್ತಿನ ಅಂತರಾತ್ಮನಾದ ಶ್ರೀಕೃಷ್ಣನು ಪಾಂಡವರನ್ನು ಸಂತೈಸಿ ಮುನಿಗಳನ್ನು ಮನ್ನಿಸಿ ಭಾರತಕ್ಕೆ ಭೂಭಾರ ನಿವಾರಣೆಯೇ ಉಡುಗೊರೆ ಎಂದು ನಿಶ್ಚೈಸಿ, ಪಾಂಡವರಿದ್ದ ಕಾಡಿನಿಂದ ಹೊರಟು ದ್ವಾರಕೆಯನ್ನು ಸೇರಿದನು.

ಅರ್ಥ:
ಸಂತವಿಸು: ಸಮಾಧಾನಪಡಿಸು; ಮುನಿ: ಋಷಿ; ಸಂತತಿ: ಕುಲ; ಮನ್ನಿಸು: ಗೌರವಿಸು; ಮಹೀ: ಭೂಮಿ; ಭಾರಾಂಕ: ಮಹಾಯುದ್ಧ; ನಿಶ್ಚೈಸು: ನಿರ್ಧರಿಸು; ಪಾರಿಶೇಷಕ: ಪರಿಣಾಮ; ಅಂತರಾತ್ಮ: ಪರಮಾತ್ಮ; ಒಲವು: ಸ್ನೇಹ, ಪ್ರೀತಿ; ಜಗ: ಜಗತ್ತು, ಪ್ರಪಂಚ; ಅಂತರಂಗ: ಒಳಭಾಗ, ಮನಸ್ಸು; ಸ್ಥಾಯಿ: ಸ್ಥಿರವಾಗಿರುವುದು; ಲಕ್ಷ್ಮೀಕಾಂತ: ಲಕ್ಶ್ಮಿಯ ಪ್ರಿಯಕರ; ಬಿಜಯಂಗೈ: ಹೊರಡು; ಹೊಕ್ಕು: ಸೇರು; ಪುರ: ಊರು;

ಪದವಿಂಗಡಣೆ:
ಸಂತವಿಸಿ +ಪಾಂಡವರನ್+ಆ+ ಮುನಿ
ಸಂತತಿಯ +ಮನ್ನಿಸಿ +ಮಹೀಭಾ
ರಾಂತರವ +ನಿಶ್ಚೈಸಿ +ಭಾರತ+ಪಾರಿಶೇಷಿಕವ
ಅಂತರಾತ್ಮಕನ್+ಒಲವಿನಲಿ +ಜಗದ್
ಅಂತರಂಗಸ್ಥಾಯಿ+ಲಕ್ಷ್ಮೀ
ಕಾಂತ +ಬಿಜಯಂಗೈದು +ಹೊಕ್ಕನು +ದ್ವಾರಕಾಪುರವ

ಅಚ್ಚರಿ:
(೧) ಕೃಷ್ಣನ ನಿರ್ಧಾರ – ಮಹೀಭಾರಾಂತರವ ನಿಶ್ಚೈಸಿ ಭಾರತಪಾರಿಶೇಷಿಕವ
(೨) ಕೃಷ್ಣನನ್ನು ಕರೆದಿರುವ ಪರಿ – ಅಂತರಾತ್ಮಕ, ಅಂತರಂಗಸ್ಥಾಯಿ, ಲಕ್ಷ್ಮೀಕಾಂತ

ಪದ್ಯ ೨೪: ದ್ರೌಪದಿ ಕೃಷ್ಣನಿಗೆ ಯಾವ ಪ್ರಶ್ನೆ ಕೇಳಿದಳು?

ಬಳಿಕ ಪಾಂಡವರಾಯರನು ಬೀ
ಳ್ಕೊಳಲು ದ್ರೌಪದಿ ಲಲನೆ ನೆರೆ ಬಂದು
ರುಳಿದಳು ತಾ ಕೃಷ್ಣದೇವನ ಚರಣ ಕಮಲದಲಿ
ಎಲೆ ಮುರಾಂತಕ ಕೃಷ್ಣ ನಮ್ಮನು
ಹಳುವದಲಿ ನೀನಿರಿಸಿ ಹೋದರೆ
ಬಳಲೆವೇ ತಾವೆನಲು ನಗುತಸುರಾರಿಯಿಂತೆಂದ (ಅರಣ್ಯ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಬಳಿಕ, ಶ್ರೀ ಕೃಷ್ಣನು ಪಾಂಡವರಿಂದ ಬೀಳ್ಕೊಂಡು ಹೊರಡಲನುವಾದನು. ಆಗ ದ್ರೌಪದಿಯು ಬಂದು ನಮಸ್ಕರಿಸಿ ನಮ್ಮನು ಕಾಡಿನಲಿ ಬಿಟ್ಟು ಹೋಗುತ್ತಿರುಎ, ನಮಗೆ ಬಳಲಿಕೆಯಾಗುವುದಿಲ್ಲವೇ ಎಂದು ಕೇಳಿದಳು.

ಅರ್ಥ:
ಬಳಿಕ: ನಂತರ; ರಾಯ: ರಾಜ; ಬೀಳ್ಕೊಳು: ತೆರಳು, ಹೊರಡು; ಲಲನೆ: ಹೆಣ್ಣು; ನೆರೆ: ಜೊತೆ; ಚರಣ: ಪಾದ; ಕಮಲ: ತಾವರೆ; ಮುರಾಂತಕ: ಕೃಷ್ಣ; ಹಳುವು: ಕಾಡು; ಹೋಗು: ತೆರಳು; ಬಳಲು: ಆಯಾಸ, ದಣಿವು; ನಗುತ: ಸಂತಸ; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ); ಉರುಳು: ಕೆಳಕ್ಕೆ ಬೀಳು;

ಪದವಿಂಗಡಣೆ:
ಬಳಿಕ +ಪಾಂಡವರಾಯರನು +ಬೀ
ಳ್ಕೊಳಲು +ದ್ರೌಪದಿ +ಲಲನೆ +ನೆರೆ +ಬಂದ್
ಉರುಳಿದಳು+ ತಾ +ಕೃಷ್ಣದೇವನ+ ಚರಣ+ ಕಮಲದಲಿ
ಎಲೆ +ಮುರಾಂತಕ+ ಕೃಷ್ಣ +ನಮ್ಮನು
ಹಳುವದಲಿ+ ನೀನ್+ಇರಿಸಿ+ ಹೋದರೆ
ಬಳಲೆವೇ +ತಾವೆನಲು +ನಗುತ್+ಅಸುರಾರಿ+ಇಂತೆಂದ

ಅಚ್ಚರಿ:
(೧) ನಮಸ್ಕರಿಸಿದಳು ಎಂದು ಹೇಳುವ ಪರಿ – ಉರುಳಿದಳು ತಾ ಕೃಷ್ಣದೇವನ ಚರಣ ಕಮಲದಲಿ

ಪದ್ಯ ೨೩: ಜೈಮಿನಿ ಮುನಿಗಳು ಏನು ಹೇಳಿ ತಮ್ಮ ಆಶ್ರಮಕ್ಕೆ ಹೊರಟರು?

ನಮ್ಮ ಪಾಪದ ರಾಶಿ ಬೆಂದುದು
ಸುಮ್ಮನೀ ಪಾಂಡವರ ಗೃಹದಲಿ
ಯೊಮ್ಮೆಯನ್ನವನುಣಲಿಕೆನುತವೆ ನಡೆದನಾಶ್ರಮಕೆ
ಕರ್ಮಕರ್ತರ್ಪಣದಲನ್ನವ
ಬ್ರಹ್ಮರುದ್ರಾದಿಗಳು ಬಯಸುವ
ರೆಮ್ಮ ಪುಣ್ಯವ ನೋಡಿರೈಸಲೆ ಪಾಂಡುನಂದನರ (ಅರಣ್ಯ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜೈಮಿನಿ ಮುನಿಗಳು ಧನ್ಯತಾಭಾವದಿಂದ, ಶ್ರೀ ಕೃಷ್ಣನ ದರ್ಶನದಿಂದ ನಮ್ಮ ಪಾಪದ ರಾಶಿಯು ಸುಟ್ಟುಹೋಯಿತು. ಪಾಂಡವರ ಮನೆಯ ಅನ್ನವನ್ನು ನಾವು ಊಟಮಾಡಿದುದರಿಂದ ನಾವು ಅತ್ಯಂತ ಪುಣ್ಯಶಾಲಿಗಳಾದೆವು. ಕರ್ಮವನ್ನು ಸಾಂಗವಾಗಿ ಮಾಡಿ, ಕರ್ತೃವು ಪರಮೇಶ್ವರನಿಗೆ ಅರ್ಪಿಸಿದ ಅನ್ನವು ನಮಗೆ ಸಿಗಲಿ ಎಂದು ಬ್ರಹ್ಮನೇ ಮೊದಲಾದವರು ಬಯಸುತ್ತಾರೆ. ಶ್ರೀ ಕೃಷ್ಣನೇ ಕರೆಸಿ ನಮಗೆ ಊಟ ಮಾಡಿಸಿದನು. ನಮ್ಮ ಪಾಂಡವರ, ಪುಣ್ಯವನ್ನು ನೋಡಿರಿ ಎಂದು ಹೇಳಿ ತನ್ನ ಆಶ್ರಮಕ್ಕೆ ಹೊರಟನು.

ಅರ್ಥ:
ಪಾಪ: ಪುಣ್ಯವಲ್ಲದ ಕಾರ್ಯ, ಕೆಟ್ಟ ಕೆಲಸ; ರಾಶಿ: ಸಮೂಹ; ಬೆಂದು: ಸುಟ್ಟು; ಸುಮ್ಮನೆ: ಕಾರಣವಿಲ್ಲದೆ; ಗೃಹ: ಮನೆ; ಅನ್ನ: ಅಹಾರ; ಉಣಲು: ಊಟ ಮಾಡಲು; ಆಶ್ರಮ: ಋಷಿಗಳ ವಾಸಸ್ಥಾನ; ಕರ್ಮ: ಕಾರ್ಯ; ಕರ್ತ: ಮಾಡುವವನು; ಅರ್ಪಣೆ: ಒಪ್ಪಿಸುವುದು; ಬಯಸು: ಅಪೇಕ್ಷಿಸು; ಪುಣ್ಯ: ಸದಾಚಾರ; ಐಸಲೆ: ಅಲ್ಲವೇ; ನಂದನ: ಮಕ್ಕಳು;

ಪದವಿಂಗಡಣೆ:
ನಮ್ಮ+ ಪಾಪದ+ ರಾಶಿ+ ಬೆಂದುದು
ಸುಮ್ಮನೀ +ಪಾಂಡವರ +ಗೃಹದಲಿ
ಒಮ್ಮೆ+ಅನ್ನವನ್+ಉಣಲಿಕ್+ಎನುತವೆ+ ನಡೆದನ್+ಆಶ್ರಮಕೆ
ಕರ್ಮ+ಕರ್ತ+ಅರ್ಪಣದಲ್+ಅನ್ನವ
ಬ್ರಹ್ಮ+ರುದ್ರಾದಿಗಳು +ಬಯಸುವರ್
ಎಮ್ಮ +ಪುಣ್ಯವ +ನೋಡಿರ್+ಐಸಲೆ+ ಪಾಂಡುನಂದನರ

ಅಚ್ಚರಿ:
(೧) ದೇವರು ಅನ್ನವನ್ನು ಬಯಸುವ ರೀತಿ – ಕರ್ಮಕರ್ತರ್ಪಣದಲನ್ನವ ಬ್ರಹ್ಮರುದ್ರಾದಿಗಳು ಬಯಸುವರ್

ಪದ್ಯ ೨೨: ಜೈಮಿನಿ ಮುನಿಗಳ ಯಾವ ಸಮುದ್ರದಲ್ಲಿ ಮುಳುಗಿದರು?

ಬಳಿಕಲಾ ಪಾಂಡುವಿನ ಶ್ರಾದ್ಧದೆ
ನಳಿನನಾಭಾದಿಗಳು ಭೋಜಕ
ರೊಲಿದು ಹರಸಿದರಂದು ಪಾಂಡುಕುಮಾರರೈವರನು
ಕಳುಹಿದರು ಮುನಿವರರ ತಮ್ಮಯ
ನಿಳಯಕಾಗಲು ಬಳಿಕ ಜೈಮಿನಿ
ಮುಳುಗಿದನು ಪರಿತುಷ್ಟನಾದನು ಹರಿಕೃಪಾಬ್ಧಿಯಲಿ (ಅರಣ್ಯ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶ್ರಾದ್ಧ ಕಾರ್ಯಗಳೆಲ್ಲಾ ಮುಗಿದ ಮೇಲೆ, ಶ್ರೀಕೃಷ್ಣನೇ ಮೊದಲಾಗಿ ಎಲ್ಲರೂ ಊಟಮಾಡಿ, ಪಾಂಡವರನ್ನು ಆಶೀರ್ವದಿಸಿದರು. ನಂತರ ಋಷಿಗಳು ತಮ್ಮ ಆಶ್ರಮಕ್ಕೆ ಹಿಂದಿರುಗಿದರು, ಜೈಮಿನಿ ಮುನಿಗಳು ಶ್ರೀಕೃಷ್ಣನ ಕೃಪಾಸಾಗರದಲ್ಲಿ ಮುಳುಗಿ ಬಹಳವಾಗಿ ತುಷ್ಟಿಯನ್ನು ಅನುಭವಿಸಿದರು.

ಅರ್ಥ:
ಬಳಿಕ: ನಂತರ; ಶ್ರಾದ್ಧ: ತಿಥಿ; ನಳಿನನಾಭ: ವಿಷ್ಣು; ಆದಿ: ಮುಂತಾದ; ಭೋಜಕ: ಊಟಮಾದು; ಒಲಿ: ಸಮ್ಮತಿಸು; ಹರಸು: ಆಶೀರ್ವದಿಸು; ಕುಮಾರ: ಮಕ್ಕಳು; ಕಳುಹು: ಬೀಳ್ಕೊಡು; ಮುನಿ: ಋಷಿ; ನಿಳಯ: ಮನೆ; ಬಳಿಕ: ನಂತರ; ಮುಳುಗು: ಹುದುಗಿರು, ಒಳಸೇರು; ಪರಿತುಷ್ಟ: ತೃಪ್ತಿ; ಕೃಪ: ಕರುಣೆ; ಅಬ್ಧಿ: ಸಮುದ್ರ;

ಪದವಿಂಗಡಣೆ:
ಬಳಿಕಲಾ +ಪಾಂಡುವಿನ +ಶ್ರಾದ್ಧದೆ
ನಳಿನನಾಭ+ಆದಿಗಳು +ಭೋಜಕರ್
ಒಲಿದು +ಹರಸಿದರ್+ಅಂದು +ಪಾಂಡುಕುಮಾರರ್+ಐವರನು
ಕಳುಹಿದರು +ಮುನಿವರರ+ ತಮ್ಮಯ
ನಿಳಯಕಾಗಲು+ ಬಳಿಕ+ ಜೈಮಿನಿ
ಮುಳುಗಿದನು +ಪರಿತುಷ್ಟನಾದನು +ಹರಿಕೃಪಾಬ್ಧಿಯಲಿ

ಅಚ್ಚರಿ:
(೧) ನಳಿನನಾಭ, ಹರಿ – ಕೃಷ್ಣನನ್ನು ಕರೆದ ಬಗೆ

ಪದ್ಯ ೨೧: ಯಾರ ಆಶೀರ್ವಾದದಿಂದ ಕಾರ್ಯವು ಸಫಲವಾಯಿತು?

ಹರಿಯ ಕಾರುಣ್ಯಾವಲೋಕನ
ಸರಣಿಯಲಿ ಸಂಪೂರ್ಣವಾದುವು
ಧರಣಿಪತಿ ನಿಮ್ಮವರು ಮಾಡಿದ ಶ್ರಾದ್ಧಕರ್ಮಗಳು
ನಿರುತವಾದವು ಅಪ್ಪ ಶುದ್ಧಿಯ
ಕೊರತೆಯಿಲ್ಲದೆ ಪೂರ್ಣವಾದುವು
ಸರಸಿಜಾಕ್ಷನ ಚರಣ ದರುಶನ ಸಫಲವಾಯ್ತೆಂದ (ಅರಣ್ಯ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪಾಂಡು ಮಹಾರಾಜನ ಶ್ರಾದ್ಧದ ಅಂಗವಾದ ಕರ್ಮಗಳೆಲ್ಲವೂ ಶ್ರೀಕೃಷ್ಣನ ಕರುಣಾವಲೋಕನದಿಂದ ಸಾಂಗವಾಗಿ, ದೋಷವಿಲ್ಲದೆ ಸಂಪೂರ್ಣಗೊಂಡವು. ಶ್ರೀಕೃಷ್ಣನ ಪಾದದರ್ಶನದಿಂದಲೇ ಸಫಲವಾದವು.

ಅರ್ಥ:
ಹರಿ: ಕೃಷ್ಣ, ವಿಷ್ಣು; ಕಾರುಣ್ಯ: ದಯೆ, ಕರುಣೆ; ಅವಲೋಕನ: ನೋಟ; ಸರಣಿ: ದಾರಿ, ಗತಿ ; ಸಂಪೂರ್ಣ: ಎಲ್ಲಾ; ಧರಣಿಪತಿ: ರಾಜ; ಧರಣಿ: ಭೂಮಿ; ಶ್ರಾದ್ಧ: ತಿಥಿ; ಕರ್ಮ: ಕಾರ್ಯ; ನಿರುತ: ದಿಟ, ಸತ್ಯ; ಅಷ್ಟ: ಎಂಟು; ಶುದ್ಧಿ: ನಿರ್ಮಲ; ಕೊರತೆ: ನ್ಯೂನ್ಯತೆ; ಪೂರ್ಣ: ಸಮಗ್ರ; ಸರಸಿಜಾಕ್ಷ: ಕಮಲದಂತ ಕಣ್ಣುಳ್ಳ; ಚರಣ: ಪಾದ; ದರುಶನ: ನೋಟ; ಸಫಲ: ಫಲಕಾರಿ;

ಪದವಿಂಗಡಣೆ:
ಹರಿಯ +ಕಾರುಣ್ಯ+ಅವಲೋಕನ
ಸರಣಿಯಲಿ +ಸಂಪೂರ್ಣವಾದುವು
ಧರಣಿಪತಿ +ನಿಮ್ಮವರು +ಮಾಡಿದ +ಶ್ರಾದ್ಧಕರ್ಮಗಳು
ನಿರುತವಾದವು +ಅಪ್ಪ+ ಶುದ್ಧಿಯ
ಕೊರತೆಯಿಲ್ಲದೆ +ಪೂರ್ಣವಾದುವು
ಸರಸಿಜಾಕ್ಷನ+ ಚರಣ +ದರುಶನ +ಸಫಲವಾಯ್ತೆಂದ

ಅಚ್ಚರಿ:
(೧) ಸರಣಿ, ಧರಣಿ – ಪ್ರಾಸ ಪದಗಳು

ಪದ್ಯ ೨೦: ಪಾಂಡವರು ಶ್ರಾದ್ಧಕಾರ್ಯವನ್ನು ಹೇಗೆ ಸಂಪನ್ನಗೊಳಿಸಿದರು?

ಹರಿಯು ತಾ ಕೈಕೊಂಡು ಶ್ರಾದ್ಧದ
ನಿರುತರಕ್ಷೆಯ ಬಳಿಯ ಪಾಂಡವ
ರರಸಿ ಬಡಿಸಿದಳಂದು ದಿವ್ಯರಸಾನ್ನಪಾನಗಳ
ಅರಸ ಕೇಳೈ ಪಾಂಡುಪುತ್ರರು
ಹರಿಸಮರ್ಪಣೆಮಾಡಿ ಪಿತೃಗಳ
ಪೊರೆದರಗ್ನೌಕರಣ ಬ್ರಾಹ್ಮಣ ಭೋಜನಾಂತದಲಿ (ಅರಣ್ಯ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಶ್ರೀಕೃಷ್ಣನು ಶ್ರಾದ್ಧರಕ್ಷಣ ಮಾಡುತ್ತಿದ್ದನು. ದ್ರೌಪದಿಯು ದಿವ್ಯ ಅನ್ನ, ರಸ ಪಾನಗಳನ್ನು ಮಾದಿ ಬ್ರಾಹ್ಮಣರಿಗೆ ಬಡಿಸಿದಳು. ಪಾಂಡವರು ಬ್ರಾಹ್ಮನ ಭೋಜನ ಮಾಡಿಸಿ ಅಗ್ನೌಕರಣ ಮಾಡಿ, ನಂತರ ಕೃಷ್ಣನಿಗೆ ಶ್ರಾದ್ಧ ಕಾರ್ಯದ ಕರ್ಮಫಲವನ್ನು ಸಮರ್ಪಿಸಿದರು.

ಅರ್ಥ:
ಹರಿ: ವಿಷ್ಣು; ಕೈಕೊಂಡು: ಸ್ವೀಕರಿಸು; ಶ್ರಾದ್ಧ: ತಿಥಿ, ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ; ನಿರುತ: ದಿಟ, ಸತ್ಯ; ರಕ್ಷೆ: ರಕ್ಷಣೆ; ಬಳಿ: ಹತ್ತಿರ; ಅರಸಿ: ರಾಣಿ; ಬಡಿಸು: ನೀಡು; ದಿವ್ಯ: ಶ್ರೇಷ್ಠ; ರಸಾನ್ನ: ಭೋಜನ; ಪಾನ: ಕುಡಿಯುವಿಕೆ; ಅರಸ: ರಾಜ; ಪುತ್ರ: ಮಗ; ಸಮರ್ಪಣೆ: ನೀಡು; ಪಿತೃ:ಸ್ವರ್ಗಸ್ಥನಾದ ಹಿರಿಯ; ಪೊರೆ: ಪಾಲನೆ, ಪೋಷಣೆ; ಬ್ರಾಹ್ಮಣ: ಭೂಸುರ; ಭೋಜನ: ಊಟ: ಅಂತ: ಕೊನೆ;

ಪದವಿಂಗಡಣೆ:
ಹರಿಯು +ತಾ +ಕೈಕೊಂಡು +ಶ್ರಾದ್ಧದ
ನಿರುತ+ರಕ್ಷೆಯ +ಬಳಿಯ +ಪಾಂಡವರ್
ಅರಸಿ +ಬಡಿಸಿದಳ್+ಅಂದು +ದಿವ್ಯ+ರಸ+ಅನ್ನ+ಪಾನಗಳ
ಅರಸ+ ಕೇಳೈ+ ಪಾಂಡುಪುತ್ರರು
ಹರಿ+ಸಮರ್ಪಣೆಮಾಡಿ +ಪಿತೃಗಳ
ಪೊರೆದರ್+ಅಗ್ನೌಕರಣ+ ಬ್ರಾಹ್ಮಣ +ಭೋಜನ+ಅಂತದಲಿ

ಅಚ್ಚರಿ:
(೧) ಅರಸ ಅರಸಿ – ಪದಗಳ ಬಳಕೆ, ೩, ೪ ಸಾಲಿನ ಮೊದಲ ಪದ
(೨) ದ್ರೌಪದಿಯನ್ನು ಪಾಂಡವರರಸಿ ಎಂದು ಕರೆದಿರುವುದು