ಪದ್ಯ ೨೦: ಧೃತರಾಷ್ಟ್ರನ ಒಳ ಮನಸ್ಸು ಏನನ್ನು ಬಯಸುತ್ತದೆ?

ಮರುಳು ಮಗನೇ ಶಿವ ಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ (ಸಭಾ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಗ ದುರ್ಯೋಧನನೇ, ನಿನಗೆಲ್ಲೋ ಹುಚ್ಚು ಶಿವ ಶಿವಾ, ನಾನು ಬರಡು ಮನಸ್ಸಿನವನಲ್ಲ. ನನಗೆ ನಿಮ್ಮ ಐಶ್ವರ್ಯದ ಮೇಲೆ ದ್ವೇಷ ದಾಯಾದಿಗಳ ಅಭ್ಯುಯದಲ್ಲಿ ಸಂತೋಷವಿದೆಯೆಂದು ತಿಳಿದಿರುವೆಯಾ? ಅವರು ದುಷ್ಟರು, ದೈವ ಸದಾಜಾಗ್ರತವಾಗಿರುತ್ತದೆ, ಅವರು ಕೆಡುವುದಿಲ್ಲ ಎಂದು ಬಾಯಿತುದಿಯ ಮಾತಾಡುತ್ತಾ, ಸ್ನೇಹದ ಲೇಪವನ್ನು ನಾನು ನಟಿಸುತ್ತಿದ್ದೇನೆ ಎಂದನು.

ಅರ್ಥ:
ಮರುಳು: ಹುಚ್ಚು, ತಿಳಿಗೇಡಿ; ಮಗ: ಸುತ; ಮನ: ಮನಸ್ಸು; ಬರಡು: ಒಣಗಿದ್ದು, ನಿರುಪಯುಕ್ತ; ಅಕಟ: ಅಯ್ಯೋ; ಐಶ್ವರ್ಯ: ಸಿರಿ, ಸಂಪತ್ತು; ಹಗೆ: ವೈರ; ದಾಯಾದಿ: ಅಣ್ಣ ತಮ್ಮಂದಿರ ಮಕ್ಕಳು; ಅಭ್ಯುದಯ: ಏಳಿಗೆ; ಸೊಗಸು: ಚೆಲುವು; ದುರುಳ: ದುಷ್ತ; ಅವದಿರು: ಅವರು; ದೈವ: ಭಗವಂತ; ಮುಖ: ಆನನ; ಎಚ್ಚರ: ಜಾಗರೂಕತೆ; ಘನ: ಹಿರಿಯ, ದೊಡ್ಡ; ಕೆಡರು: ಹಾಳು; ಮೇಗರೆ: ವ್ಯರ್ಥವಾಗಿ; ಹೊರ: ಆಚೆ; ಮನ: ಮನಸ್ಸು; ಸೂಸು: ಎರಚು, ಚಲ್ಲು; ನೇಹ: ಗೆಳೆತನ, ಸ್ನೇಹ; ಅರಸು: ಹುಡುಕು;

ಪದವಿಂಗಡಣೆ:
ಮರುಳು +ಮಗನೇ +ಶಿವ+ ಶಿವಾ+ ಮನ
ಬರಡನೇ+ ತಾನ್+ಅಕಟ +ನಿಮ್
ಐಶ್ವರಿಯ +ಹಗೆ +ದಾಯಾದ್ಯರುಗಳ್+ಅಭ್ಯುದಯದಲಿ +ಸೊಗಸೆ
ದುರುಳರ್+ಅವದಿರು +ದೈವ+ಮುಖದೆ
ಚ್ಚರಿಕೆ+ ಘನ+ ಕೆಡರೆಂದು +ಮೇಗರೆ
ಹೊರಮನದ+ ಸೂಸಕದ+ ನೇಹವನ್+ಅರಸುತಿಹೆನೆಂದ

ಅಚ್ಚರಿ:
(೧) ಧೃತರಾಷ್ಟ್ರನ ಇಂಗಿತವನ್ನು ಹೇಳುವ ಪರಿ – ದೈವಮುಖದೆಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ

ಪದ್ಯ ೧೯: ದುರ್ಯೋಧನನು ಪಾಂಡವರನ್ನು ಸೋಲಿಸಲು ಯಾವ ಮಂತ್ರವನ್ನು ರೂಪಿಸಿದ್ದನು?

ಅನಿಲಜನ ಬಾಯ್ಬಡಿಕತನವ
ರ್ಜುನನ ಬರಿಬೊಬ್ಬಾಟ ಸಹದೇ
ವನ ಸಗರ್ವದ ಮಾತು ಮೈಯಿಕ್ಕುವುವು ಬಳಿಕಿನಲಿ
ಮನೆಮೊಗವ ಕಾಣಿಸದೆ ಘನ ಕಾ
ನನದೊಳಗೆ ಸುಳಿವಂತೆ ಮಂತ್ರವ
ನೆನೆದೆನಿದು ನಿಮ್ಮಡಿಯ ಚಿತ್ತಕೆ ಬಹಡೆ ಬೆಸಸೆಂದ (ಸಭಾ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭೀಮನ ಬಾಯಿಬಡಿಕತನವನ್ನು, ಅರ್ಜುನನ ವೃಥಾ ಕೂಗು, ಸಹದೇವನ ಅಹಂಕಾರವೆಲ್ಲವನ್ನು ಇಲ್ಲದಂತೆ ಮಾಡುತ್ತೇನೆ, ಅವರು ಮನೆಯ ಮುಖವನ್ನು ನೋಡದೇ ಕಾಡಿನಲ್ಲಿ ತಿರುಗಾಡುವಂತೆ ಮಾಡುವ ಉಪಾಯವನ್ನು ಯೋಚಿಸಿದ್ದೇನೆ, ನಿಮ್ಮ ಮನಸ್ಸಿಗೆ ಬಂದರೆ ಒಪ್ಪಿಕೊಳ್ಳಿ ಎಂದು ದುರ್ಯೋಧನನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಅನಿಲ: ವಾಯು, ಸಮೀರ; ಅನಿಲಜ: ವಾಯುಪುತ್ರ (ಭೀಮ); ಬಾಯ್ಬಡಿಕತನ: ಬಾಯಿಗೆ ಬಂದಂತೆ ಮಾತಾಡುವ; ಬೊಬ್ಬೆ: ಗರ್ಜಿಸು; ಗರ್ವ: ಅಹಂಕಾರ; ಮಾತು: ನುಡಿ; ಬಳಿಕ: ನಂತರ; ಮೈಯಿಕ್ಕು: ನಮಸ್ಕರಿಸು, ಬಾಗು; ಮನೆ: ಆಲಯ; ಮೊಗ; ಮುಖ; ಕಾಣಿಸು: ತೋರು; ಘನ: ದೊಡ್ಡ; ಕಾನನ: ಅರಣ್ಯ; ಸುಳಿ: ತಿರುಗಣಿ; ಮಂತ್ರ: ಉಪಾಯ; ನೆನೆ: ಜ್ಞಾಪಿಸು; ಅಡಿ: ಪಾದ; ಚಿತ್ತ: ಮನಸ್ಸು; ಬಹಡೆ: ಬರುವುದಾದರೆ; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಅನಿಲಜನ +ಬಾಯ್ಬಡಿಕತನವ್
ಅರ್ಜುನನ +ಬರಿಬೊಬ್ಬಾಟ+ ಸಹದೇ
ವನ+ ಸಗರ್ವದ+ ಮಾತು +ಮೈಯಿಕ್ಕುವುವು+ ಬಳಿಕಿನಲಿ
ಮನೆ+ಮೊಗವ+ ಕಾಣಿಸದೆ +ಘನ +ಕಾ
ನನದೊಳಗೆ +ಸುಳಿವಂತೆ +ಮಂತ್ರವ
ನೆನೆದೆನ್+ಇದು +ನಿಮ್ಮಡಿಯ +ಚಿತ್ತಕೆ +ಬಹಡೆ +ಬೆಸಸೆಂದ

ಅಚ್ಚರಿ:
(೧) ಮನೆಯನ್ನು ನೋಡದೆ ಎಂದು ಹೇಳುವ ಪರಿ – ಮನೆಮೊಗವ ಕಾಣಿಸದೆ
(೨) ದುರ್ಯೋಧನನಿಂದ ಪಾಂಡವರ ಗುಣಗಾನ – ಬಾಯ್ಬಡಿಕತನ, ಬರಿಬೊಬ್ಬಾಟ, ಸಗರ್ವದ