ಪದ್ಯ ೧೮: ದುರ್ಯೋಧನನ ವಿಚಾರವೇನು?

ಹುದುವ ಸೈರಿಸಿ ಬಳಸಿದರು ದುರು
ಪದಿಯನೈವರು ಈ ಧರಿತ್ರಿಯ
ಹುದುವ ಸೈರಿಸಲಾರೆನವರೊಡನಿಂದು ಮೊದಲಾಗಿ
ಒದೆದುಕಳೆ ನಮ್ಮಿನಿಬರನು ನೇ
ಹದಲಿ ಸಲಹೈವರನು ನೀ ನಿಂ
ದೊದೆವುದೈವರ ನಮ್ಮ ಹಿಡಿ ಬೇರಿಲ್ಲ ಮತವೆಂದ (ಸಭಾ ಪರ್ವ, ೧೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಂಡವರು ದ್ರೌಪದಿಯನ್ನು ಒಂದಾಗಿ ಸರದಿಯಲ್ಲಿ ಆಳಿದರು, ಆದರೆ ಇಂದು ಹಾಗು ಮೊದಲಿನಿಂದಲೂ ನನಗೆ ಅವರೊಡನೆ ಒಂದುಗೂಡಿ ಭೂಮಿಯನ್ನು ಹಂಚಿಕೊಂಡು ಆಳುವುದನ್ನು ಸೈರಿಸಲಾರೆ. ನಮ್ಮನ್ನು ಹೊರಹಾಕಿ ಅವರೊಡನೆ ಸ್ನೇಹದಿಂದ ಬಾಳು, ಇಲ್ಲವೇ ಅವರನ್ನು ದೂರಮಾಡಿ ನಮ್ಮನ್ನು ಸ್ವೀಕರಿಸು, ಇದೇ ನನ್ನ ಅಭಿಪ್ರಾಯ, ಇದು ಬಿಟ್ಟು ಬೇರೆ ದಾರಿ ಇಲ್ಲ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಹುದು: ಕೂಡುವಿಕೆ, ಸೇರುವಿಕೆ, ನಂಟು; ಸೈರಿಸು: ತಾಳು, ಸಹಿಸು; ಬಳಸು: ಉಪಯೋಗಿಸು; ದುರುಪದಿ: ದ್ರೌಪದಿ; ಧರಿತ್ರಿ: ಭೂಮಿ; ಮೊದಲು: ಮುಂಚೆ; ಒದೆ: ಆಚೆ ಹಾಕು, ತಳ್ಳು; ಇನಿಬರು: ಇಷ್ಟು ಜನ; ನೇಹ: ಗೆಳೆತನ, ಸ್ನೇಹ, ಪ್ರೀತಿ; ಸಲಹು: ರಕ್ಷಿಸು, ಕಾಪಾಡು; ಹಿಡಿ: ಗ್ರಹಿಸು; ಮತ: ವಿಚಾರ;

ಪದವಿಂಗಡಣೆ:
ಹುದುವ +ಸೈರಿಸಿ +ಬಳಸಿದರು +ದುರು
ಪದಿಯನ್+ಐವರು +ಈ +ಧರಿತ್ರಿಯ
ಹುದುವ +ಸೈರಿಸಲಾರೆನ್+ಅವರೊಡನ್+ಇಂದು+ ಮೊದಲಾಗಿ
ಒದೆದು+ಕಳೆ+ ನಮ್+ಇನಿಬರನು +ನೇ
ಹದಲಿ +ಸಲಹು+ಐವರನು +ನೀನ್+ಇಂದ್
ಒದೆವುದ್+ಐವರ+ ನಮ್ಮ +ಹಿಡಿ +ಬೇರಿಲ್ಲ+ ಮತವೆಂದ

ಅಚ್ಚರಿ:
(೧) ಹುದು, ಒದೆ – ೧,೩; ೪,೬ ಸಾಲಿನ ಮೊದಲ ಪದ

ಪದ್ಯ ೧೭: ದುರ್ಯೋಧನನು ಪಾಂಡವರೇ ಆಳಲಿ ಎಂದು ಏಕೆ ಹೇಳಿದ?

ನೊಂದರವರಗ್ಗಳಿಸಿ ಹೃದಯ ದೊ
ಳೊಂದಿ ಬೆರಸರು ತೆರಹು ಮರಹಿನೊ
ಳಂದಗೆಡಿಸಿದೊಡಲ್ಲದುಳುಹರು ನಿನ್ನ ಸಂತತಿಯ
ಒಂದು ಸತ್ತಿಗೆ ನಮ್ಮದಿಲ್ಲಿಗೆ
ನಿಂದುದೆನಿಸಲಿ ನಾವು ನಿಲಲವ
ರೊಂದು ಸತ್ತಿಗೆಯಾಗಿ ಸಲಹಲಿ ಸಕಲ ಭೂತಳವ (ಸಭಾ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ತಂದೆಯ ಮನಸ್ಸನ್ನು ಕರಗಿಸಿದ ಮೇಲೆ, ದುರ್ಯೋಧನನು ಹೇಳುತ್ತಾ, ಪಾಂಡವರು ಬಹಳವಾಗಿ ನೊಂದಿದ್ದಾರೆ, ಹೃತ್ಪೂರ್ವಕವಾಗಿ ನಮ್ಮೊಡನೆ ವ್ಯವಹರಿಸುವುದಿಲ್ಲ. ಗುಪ್ತವಾಗಿಯೋ ಬಹಿರಂಗವಾಗಿಯೋ ನಮ್ಮನ್ನು ಹಾಳುಮಾಡದೆ ಬಿಡುವುದಿಲ್ಲ. ಆದುದರಿಂದ ನಮ್ಮ ಶ್ವೇತಚ್ಛತ್ರವು ಇಂದಿನಿಂದ ಇಲ್ಲದಂತಾಗಲಿ, ಅವರು ಭೂಮಿಯನ್ನು ಏಕಚ್ಛತ್ರದಡಿಯಲ್ಲಿ ಪಾಲಿಸಲಿ ಎಂದು ಹೇಳಿದನು.

ಅರ್ಥ:
ನೊಂದು: ನೋವನ್ನು ಅನುಭವಿಸಿ; ಅಗ್ಗ: ಬಹಳ; ಹೃದಯ: ಎದೆ; ಬೆರಸು: ಕೂಡಿರುವಿಕೆ; ತೆರಹು: ಎಡೆ, ಜಾಗ, ತೆರೆ; ಮರಹು:ಮರವೆ, ವಿಸ್ಮೃತಿ; ಅಂದಗೆಡಿಸು: ಹಾಳುಮಾಡು; ಉಳುಹು: ಕಾಪಾಡು, ಸಂರಕ್ಷಿಸು; ಸಂತತಿ: ವಂಶ; ಸತ್ತು: ಇರುವಿಕೆ, ಅಸ್ತಿತ್ವ; ನಿಂದು: ನಿಲ್ಲಿಸು; ನಿಲಲು: ತಾಳು, ತಡೆ; ಸಲಹು: ಪಾಲಿಸು; ಸಕಲ: ಎಲ್ಲಾ; ಭೂತಳ: ಭೂಮಿ;

ಪದವಿಂಗಡಣೆ:
ನೊಂದರ್+ಅವರ್+ಅಗ್ಗಳಿಸಿ+ ಹೃದಯ+ ದೊಳ್
ಒಂದಿ +ಬೆರಸರು+ ತೆರಹು +ಮರಹಿನೊಳ್
ಅಂದ+ಕೆಸಿದೊಡಲ್ಲದ್+ಉಳುಹರು+ ನಿನ್ನ+ ಸಂತತಿಯ
ಒಂದು +ಸತ್ತಿಗೆ +ನಮ್ಮದ್+ಇಲ್ಲಿಗೆ
ನಿಂದುದ್+ಎನಿಸಲಿ +ನಾವು +ನಿಲಲ್+ಅವರ್
ಒಂದು +ಸತ್ತಿಗೆಯಾಗಿ +ಸಲಹಲಿ +ಸಕಲ +ಭೂತಳವ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸತ್ತಿಗೆಯಾಗಿ ಸಲಹಲಿ ಸಕಲ

ಪದ್ಯ ೧೬: ಧೃತರಾಷ್ಟ್ರನ ಅಂಧಪ್ರೀತಿ ಹೇಗಿತ್ತು?

ಏನು ಮಾಡುವೆವವರ ಕೆಡಿಸುವ
ಡೇನು ಹದನನು ಕಂಡೆ ದೈವಾ
ಧೀನ ನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ
ಏನು ನಿನ್ನಭಿಮತವು ನಿನ್ನೊಳ
ಗಾನು ಹೊರಗೇ ಕಂದ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ (ಸಭಾ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಅಂಧಪ್ರೀತಿ ಹೆಚ್ಚಿತು, ಮಗನೇ ನಾನೇನು ಮಾಡಬೇಕು, ಪಾಂಡವರನ್ನು ಹಾಳುಮಾಡಲು ಯಾವ ಮಾರ್ಗವನ್ನು ಹುಡುಕಿರುವೆ? ದೈವದ ರೀತಿಯು ಕಠಿಣವಾದುದು, ಅದನ್ನು ಅನ್ಯಾಯದ ಮಾರ್ಗದಲ್ಲಿ ಮುರಿಯಲಾಗುವುದಿಲ್ಲ, ನಾನು ನಿನ್ನಿಂದ ಬೇರೆಯವನೇ? ದುಃಖಿಸಬೇಡ, ಮನಸ್ಸಿನಲ್ಲಿರುವುದನ್ನು ಹೇಳು ಎಂದು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಾಡು: ಕಾರ್ಯರೂಪಕ್ಕೆ ತರು; ಕೆಡಿಸು: ಹಾಳುಮಾಡು; ಹದ: ರೀತಿ; ಕಂಡೆ: ನೋಡಿ; ದೈವ: ಭಗವಂತ; ಅಧೀನ: ವಶ; ನಿಷ್ಠ: ಶ್ರದ್ಧೆಯುಳ್ಳವನು; ನಿಷ್ಠುರ: ಕಠಿಣ; ಮುರಿ: ಸೀಳು; ಅರಿ: ತಿಳಿ; ಅನ್ಯಾಯ: ಸರಿಯಲ್ಲದ; ತಂತ್ರ: ಕುಟಿಲ ರಾಜಕಾರಣ; ಅಭಿಮತ: ಅಭಿಪ್ರಾಯ; ಆನು: ನಾನು; ಹೊರಗೆ: ಬೇರೆ; ಕಂದ: ಮಗು; ನುಡಿ: ಮಾತಾದು; ದುಮ್ಮಾನ: ದುಃಖ,ದುಗುಡ; ಬೇಡ: ತಡೆ, ನಿಲ್ಲಿಸು; ಆಣೆ: ಪ್ರಮಾಣ; ಸಂತೈಸು: ಸಮಾಧಾನಪಡಿಸು; ಮಗ: ಸುತ;

ಪದವಿಂಗಡಣೆ:
ಏನು +ಮಾಡುವೆವ್+ಅವರ +ಕೆಡಿಸುವಡ್
ಏನು +ಹದನನು+ ಕಂಡೆ +ದೈವಾ
ಧೀನ +ನಿಷ್ಠರ +ಮುರಿವುದರಿದ್+ಅನ್ಯಾಯ +ತಂತ್ರದಲಿ
ಏನು +ನಿನ್+ಅಭಿಮತವು+ ನಿನ್ನೊಳಗ್
ಆನು +ಹೊರಗೇ +ಕಂದ +ನುಡಿ +ದು
ಮ್ಮಾನ +ಬೇಡ್+ಎನ್ನಾಣೆನುತ+ ಸಂತೈಸಿದನು+ ಮಗನ

ಅಚ್ಚರಿ:
(೧) ಮಗನಮೇಲೆ ಪೀತಿಯನ್ನು ತೋರುವ ಪರಿ – ಏನು ನಿನ್ನಭಿಮತವು ನಿನ್ನೊಳಗಾನು ಹೊರಗೇ ಕಂದ ನುಡಿ ದುಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ

ಪದ್ಯ ೧೫: ಧೃತರಾಷ್ಟ್ರನ ಪುತ್ರ ಪ್ರೇಮ ಎಂತಹುದು?

ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೊರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದನು ಕುರು
ತಿಲಕ ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆಗೆ ಕರುಣೆ ಬರಲು ಹೊರಹೋಗುವ ನಾಟಕ ಫಲಿಸಿತು, ಧೃತರಾಷ್ಟ್ರನು ಮಗನ ಮಾತುಗಳನ್ನು ಕೇಳಿ, ಅವನ ಮನಸ್ಸು ಕಲಕಿತು, ಕಣ್ಣಿನ ಕುಣಿಗಳಲ್ಲಿ ನೀರು ತುಂಬಿತು, ಅವನು ಗಾಂಧಾರಿಗೆ, ಕರಿಯಾ ಆ ಪಾಪಿ ಮಗನನ್ನು ಕುರುಕುಲಕ್ಕೆ ಯಮನಂತಿರುವವನನ್ನೂ ಎಂದು ಹೇಳಲು, ಕರ್ಣ ಶಕುನಿಗಳು ದುರ್ಯೋಧನನನ್ನು ಕರೆದುಕೊಂಡು ಬಂದರು, ಧೃತರಾಷ್ಟ್ರನು ಅವನನ್ನು ಅಪ್ಪಿಕೊಂಡು ದುಃಖಿಸುತ್ತಾ ಕುರುಕುಲತಿಲಕ ನಿನ್ನನ್ನು ಬಿಟ್ಟು ಈ ದೇಹವನ್ನು ಹೇಗೆ ಹಿಡಿಯಲಿ ಎಂದು ದುಃಖಿಸಿದನು.

ಅರ್ಥ:
ಕಲಕು: ಬೆರಸು; ಅರಸ: ರಾಜ; ಕರಣ: ಕಿವಿ, ಮನಸ್ಸು; ಕಂಗಳು: ನಯನ; ಕುಳಿ:ತಗ್ಗು, ಕುಸಿ; ನೀರು: ಜಲ; ಒರೆ: ಬಳಿ; ಅಕಟಕಟ: ಅಯ್ಯೋ; ಕರೆ: ಬರೆಮಾಡು; ಪಾಪಿ: ದುಷ್ಟ; ಮಗ: ಸುತ; ಕುಲ: ವಂಶ; ಅಂತಕ: ನಾಶಮಾಡುವವ; ಸೆಳೆ: ಎಳೆತ; ಅಳಲು: ಕಣ್ಣೀರಿಡಲು, ದುಃಖಿತನಾಗಿ; ಅಪ್ಪು: ಆಲಿಂಗನ; ತಿಲಕ: ಶ್ರೇಷ್ಠ; ಉಳಿದು: ಬಿಡು, ತೊರೆ; ಒಡಲು: ದೇಹ; ಹೊರೆ: ಪೋಷಿಸು, ಸಲಹು; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಕಲಕಿತ್+ಅರಸನ +ಕರಣ +ಕಂಗಳ
ಕುಳಿಗಳಲಿ +ನೀರ್+ಒರೆತವ್+ಅಕಟಕಟ
ಎಲೆಗೆ+ ಕರೆಯಾ +ಪಾಪಿ +ಮಗನನು +ಕುರುಕುಲಾಂತಕನ
ಸೆಳೆದು +ತಂದರು +ಕರ್ಣ +ಶಕುನಿಗಳ್
ಅಳಲಿಗನ+ ತೆಗೆದ್+ಅಪ್ಪಿದನು +ಕುರು
ತಿಲಕ+ ನಿನ್ನುಳಿದ್+ಒಡಲ +ಹೊರೆವೆನೆ+ಎಂದನ್+ಅಂಧನೃಪ

ಅಚ್ಚರಿ:
(೧) ಮಗನನ್ನು ಕರೆದ ಬಗೆ – ಪಾಪಿ ಮಗನನು ಕುರುಕುಲಾಂತಕನ, ಕುರುತಿಲಕ
(೨) ಪುತ್ರಪ್ರೇಮ – ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ

ಪದ್ಯ ೧೪: ಸುಯೋಧನನು ಏನು ಹೇಳಿ ಹೊರಟನು?

ಬೇಹವರು ಸರಿರಾಜ್ಯಕದು ಸಂ
ದೇಹವೇ ಮೇಲವರು ಸತ್ವದ
ಸಾಹಸದ ಸತ್ಯದ ಸದಾಚಾರದ ನಿವಾಸರಲೆ
ಸ್ನೇಹಿತರು ನಿನಗವರ ಮೇಗವ
ಗಾಹಿಸಿದೆವನ್ಯಾಯದಲಿ ಸ
ದ್ರೋಹರಾವಿನ್ನೆಮಗೆ ನೇಮವೆಯೆನುತ ಹೊರವಂಟ (ಸಭಾ ಪರ್ವ, ೧೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನಿಗೆ ದುರ್ಯೋಧನನು ತಪ್ಪಿತಸ್ಥನಂತೆ ನಟಿಸುತ್ತಾ, ನಿನಗೆ ಪಾಂಡವರು ಬೇಕಾದವರು, ಅವರಿಗೆ ಅರ್ಧ ರಾಜ್ಯವನ್ನು ನೀಡಿರುವುದು ಸರಿಯಾದ ಕ್ರಮವೇಯಾಗಿದೆ, ಅವರು ಸಾಹಸಿಗಳು, ಸತ್ಯಮಾರ್ಗದಲ್ಲಿ ನಡೆವ ಸದಾಚಾರಿಗಳು, ಅವರಲ್ಲಿ ಒಳ್ಳೆಯ ಗುಣಗಳು ಮನೆಮಾಡಿವೆ, ಅವರು ನಿನ್ನಲ್ಲಿ ಸ್ನೇಹದಿಂದಿದ್ದಾರೆ, ನಾವು ಅವರಿಗೆ ಅನ್ಯಾಯ ಮಾದಿದ್ದೇವೆ, ದ್ರೋಹ ಬಗೆದಿದ್ದೇವೆ, ನಮಗೆ ತೆರಳಲು ಅಪ್ಪಣೆಯೇ ಎಂದು ಹೇಳಿ ದುರ್ಯೋಧನನು ಹೊರಹೊಂಟನು.

ಅರ್ಥ:
ಬೇಹ: ಬೇಕಾದ; ರಾಜ್ಯ: ರಾಷ್ಟ್ರ; ಸಂದೇಹ: ಸಂಶಯ; ಮೇಲು: ಉತ್ತಮ ವ್ಯಕ್ತಿ; ಸತ್ವ: ಸಾತ್ವಿಕ ಗುಣ; ಸಾಹಸ: ಪರಾಕ್ರಮ; ಸತ್ಯ: ದಿಟ; ಸದಾಚಾರ: ಒಳ್ಳೆಯ ನಡತೆ; ನಿವಾಸ: ಮನೆ; ಸ್ನೇಹಿತ: ಗೆಳೆಯ; ಗಾಹು: ಮೋಸ, ಕಪಟ; ಅನ್ಯಾಯ: ಯೋಗ್ಯವಲ್ಲದ; ದ್ರೋಹ: ಮೋಸ, ವಿಶ್ವಾಸಘಾತ; ನೇಮ: ನಿಯಮ, ಅಪ್ಪಣೆ; ಹೊರವಂಟ: ತೆರಳು;

ಪದವಿಂಗಡಣೆ:
ಬೇಹವರು+ ಸರಿರಾಜ್ಯಕದು+ ಸಂ
ದೇಹವೇ +ಮೇಲವರು+ ಸತ್ವದ
ಸಾಹಸದ+ ಸತ್ಯದ+ ಸದಾಚಾರದ +ನಿವಾಸರಲೆ
ಸ್ನೇಹಿತರು +ನಿನಗ್+ಅವರ +ಮೇಗವ
ಗಾಹಿಸಿದೆವ್+ಅನ್ಯಾಯದಲಿ +ಸ
ದ್ರೋಹರಾವ್+ಇನ್ನೆಮಗೆ +ನೇಮವೆ+ಎನುತ +ಹೊರವಂಟ

ಅಚ್ಚರಿ:
(೧) ಪಾಂಡವರನ್ನು ಹೊಗಳುವ ಪರಿ – ಮೇಲವರು ಸತ್ವದ ಸಾಹಸದ ಸತ್ಯದ ಸದಾಚಾರದ ನಿವಾಸರಲೆ
(೨) ತನ್ನನ್ನು ತೆಗಳುವ ಪರಿ – ಅವರ ಮೇಗವಗಾಹಿಸಿದೆವನ್ಯಾಯದಲಿ ಸದ್ರೋಹರಾವಿನ್ನೆಮಗೆ