ಪದ್ಯ ೧೩: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ಸರಿಹಸುಗೆಯಿಂದರ್ಧರಾಜ್ಯದ
ಸಿರಿಗೆ ಯೋಗ್ಯರು ಬಾಹು ಸತ್ವಕೆ
ಸುರರು ಸರಿಯಿಲ್ಲವರ ಪಾಡೇ ಮನುಜ ಜಂತುಗಳು
ಚರಿತವೆಂಬರೆ ಋಷಿಗಳಿಗೆ ಗೋ
ಚರಿಸದವರಾಚರಣೆ ನಿನಗೆಂ
ತರಿವಿನಾಶನ ಸಿದ್ಧಿಯೆಂದನು ಮಗಗೆ ಧೃತರಾಷ್ಟ್ರ (ಸಭಾ ಪರ್ವ, ೧೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರ ಪಾಲಿಗೆ ನ್ಯಾಯಬದ್ಧವಾಗಿ ಅರ್ಧಭಾಗ ರಾಜ್ಯವು ಸಲ್ಲುತ್ತದೆ, ಆ ರಾಜ್ಯದ ಸಿರಿಗೆ ಅವರು ಯೋಗ್ಯರು, ಅವರ ಪರಾಕ್ರಮಕ್ಕೆ ದೇವತೆಗಳೂ ಅಂಜುವರು, ಇನ್ನು ಹುಲು ಮಾನವರು ಅವರೆದುರು ನಿಲ್ಲಲು ಸಾಧ್ಯವೇ, ಅವರ ನಡವಳಿಕೆಯು ಋಷಿ ಮುನಿಗಳನ್ನೂ ಮೀರಿಸುತ್ತದೆ. ಹೀಗಿರುವಾಗ ನಿನ್ನ ಶತ್ರುಗಳಾದ ಪಾಂಡವರನ್ನು ನೀನು ಹೇಗೆ ಗೆಲ್ಲುವೆ ಹೇಳು ಎಂದು ಧೃತರಾಷ್ಟ್ರನು ದುರ್ಯೋಧನನನ್ನು ಪ್ರಶ್ನಿಸಿದನು.

ಅರ್ಥ:
ಹಸುಗೆ: ವಿಭಾಗ, ಹಂಚಿಕೆ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ರಾಜ್ಯ: ರಾಷ್ಟ್ರ; ಸಿರಿ: ಐಶ್ವರ್ಯ; ಯೋಗ್ಯ: ಅರ್ಹತೆ; ಬಾಹು: ಭುಜ, ಪರಾಕ್ರಮ; ಸತ್ವ: ಸಾರ; ಸುರ: ದೇವತೆ; ಸರಿಯಿಲ್ಲ: ಸಮಾನರಲ್ಲ; ಪಾಡು: ಸ್ಥಿತಿ; ಮನುಜ: ನರ, ಮನುಷ್ಯ; ಜಂತು: ಜೀವಿ; ಚರಿತ: ನಡವಳಿಕೆ; ಋಷಿ: ಮುನಿ; ಗೋಚರಿಸು: ನೋಡು, ತೋರು; ಆಚರಣೆ: ಅನುಸರಿಸುವುದು; ಅರಿ: ವೈರಿ; ವಿನಾಶ: ಹಾಳು; ಸಿದ್ಧ: ತಯಾರಾದ; ಮಗ: ಸುತ;

ಪದವಿಂಗಡಣೆ:
ಸರಿಹಸುಗೆಯಿಂದ್+ಅರ್ಧ+ರಾಜ್ಯದ
ಸಿರಿಗೆ +ಯೋಗ್ಯರು +ಬಾಹು +ಸತ್ವಕೆ
ಸುರರು +ಸರಿಯಿಲ್ಲ್+ಅವರ+ ಪಾಡೇ +ಮನುಜ+ ಜಂತುಗಳು
ಚರಿತವೆಂಬರೆ +ಋಷಿಗಳಿಗೆ +ಗೋ
ಚರಿಸದ್+ಅವರ್+ಆಚರಣೆ+ ನಿನಗೆಂತ್
ಅರಿ+ವಿನಾಶನ+ ಸಿದ್ಧಿಯೆಂದನು+ ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ಪಾಂಡವರ ಪರಾಕ್ರಮವನ್ನು ಹೇಳುವ ಪರಿ – ಬಾಹು ಸತ್ವಕೆ ಸುರರು ಸರಿಯಿಲ್ಲವರ ಪಾಡೇ ಮನುಜ ಜಂತುಗಳು

ಪದ್ಯ ೧೨: ಧೃತರಾಷ್ಟ್ರನು ಮಗನ ಬಗ್ಗೆ ಗಾಂಧಾರಿಗೆ ಏನು ಹೇಳಿದ?

ಏಕೆ ಬೆಸಗೊಳ್ಳಬಲೆ ಸುತರವಿ
ವೇಕ ವಿಷಮಗ್ರಹ ವಿಕಾರ
ವ್ಯಾಕರಣ ದುರ್ಲಲಿತ ದುಷ್ಕೃತವೀ ಪ್ರಳಾಪವಿದು
ಈ ಕುಲವನೀ ಪುರವನೀ ಲ
ಕ್ಷ್ಮೀಕರವನೀ ಜಗವನೀ ವಿಭ
ವಾ ಕೃತಿಯನಂಬುಧಿಯಲದ್ದುವ ನಿನ್ನ ಮಗನೆಂದ (ಸಭಾ ಪರ್ವ, ೧೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಸಹ ದುರ್ಯೋಧನನ ಮಾತುಗಳನ್ನು ಕೇಳಿ ಗಾಂಧಾರಿಗೆ, ಗ್ರಹಚಾರ ವಕ್ರವಾಗಿದ್ದಾಗ ಉಂಟಾಗುವ ವಿಕೃತವೂ ಪಾಪಕರವೂ ಆದ ಈ ಮಾತುಗಳು ನಿನ್ನ ಮಗನ ಬಾಯಿಂದ ಏಕೆ ಬರುತ್ತಿವೆ? ಈ ವಂಶ, ಊರು, ಐಶ್ವರ್ಯ, ಚಕ್ರಾಧಿಪತಿಯಾದ ಪದವಿ, ಜಗತ್ತು, ಈ ಎಲ್ಲಾ ವೈಭವಗಳನ್ನು ನಿನ್ನ ಮಗನು ಸಮುದ್ರದಲ್ಲಿ ಮುಳುಗಿಸಲು ಹೊರಟಿರುವನೇ ಎಂದು ಗಾಂಧಾರಿಗೆ ಕೇಳಿದನು.

ಅರ್ಥ:
ಬೆಸ: ಕೇಳುವುದು; ಅಬಲೆ: ಹೆಣ್ಣು; ಸುತ: ಮಗ; ಅವಿವೇಕ: ವಿಚಾರಹೀನವಾದ; ವಿಷಮ: ಪ್ರತಿಕೂಲ, ಏರುಪೇರು; ಗ್ರಹ: ಹಿಡಿಯುವುದು, ಹಿಡಿತ; ವಿಕಾರ: ಮನಸ್ಸಿನ ವಿಕೃತಿ; ವ್ಯಾಕರಣ: ನಿಯಮಗಳು; ದುರ್ಲಲಿತ: ಕುರೂಪ; ಲಲಿತ: ಸುಂದರವಾದ; ದುಷ್ಕೃತ: ಕೆಟ್ಟ ಕೆಲಸ; ಪ್ರಳಾಪ: ಅಸಂಬದ್ಧವಾದ ಮಾತು, ಪ್ರಲಾಪ; ಕುಲ: ವಂಶ; ಪುರ: ಊರು; ಲಕ್ಷ್ಮೀಕರ:ಐಶ್ವರ್ಯಭರಿತವಾದ; ಜಗ: ಪ್ರಪಂಚ; ವಿಭವ: ಸಿರಿ, ಸಂಪತ್ತು; ಕೃತಿ: ಕೆಲಸ; ಅಂಬುಧಿ: ಸಾಗರ; ಅದ್ದು: ಮುಳುಗಿಸು; ಮಗ: ಸುತ;

ಪದವಿಂಗಡಣೆ:
ಏಕೆ +ಬೆಸಗೊಳ್ಳ್+ಅಬಲೆ +ಸುತರ್+ಅವಿ
ವೇಕ+ ವಿಷಮಗ್ರಹ+ ವಿಕಾರ
ವ್ಯಾಕರಣ+ ದುರ್ಲಲಿತ +ದುಷ್ಕೃತವ್+ಈ+ ಪ್ರಳಾಪವಿದು
ಈ +ಕುಲವನ್+ಈ+ ಪುರವನ್+ಈ+ ಲ
ಕ್ಷ್ಮೀಕರವನ್+ಈ+ ಜಗವನ್+ಈ+ ವಿಭ
ವಾ +ಕೃತಿಯನ್+ಅಂಬುಧಿಯಲ್+ಅದ್ದುವ +ನಿನ್ನ +ಮಗನೆಂದ

ಅಚ್ಚರಿ:
(೧) ದುರ್ಯೋಧನನ ಮಾತುಗಳಿಗೆ ವ್ಯಂಗ್ಯವಾಡುವ ಪರಿ – ಸುತರವಿವೇಕ ವಿಷಮಗ್ರಹ ವಿಕಾರ
ವ್ಯಾಕರಣ ದುರ್ಲಲಿತ ದುಷ್ಕೃತವೀ ಪ್ರಳಾಪವಿದು

ಪದ್ಯ ೧೧: ದುರ್ಯೋಧನನು ತಾಯಿಯ ಬಳಿ ಬೀಳ್ಕೊಡಿ ಎಂದು ಏಕೆ ಕೇಳಿದ?

ತಾಯೆ ನೇಮವೆ ಹಗೆಯ ಕೈಯಲಿ
ಸಾಯಲಾರೆವು ಸಾಗರಾಂತ್ಯದ
ರಾಯರಿಲ್ಲಾ ಹೊರೆಯಲಾಪೆವು ಬೆಂದ ಬಸುರುಗಳ
ಕಾಯಿದನು ಕರುಣದಲಿ ತಂದೆ ಸ
ಹಾಯವಹ ಪಾಂಡವರ ಕೂಡಿಯೆ
ರಾಯ ಬದುಕಿರಲೆಮ್ಮ ಕಳುಹೆಂದೆರಗಿದನು ಪದಕೆ (ಸಭಾ ಪರ್ವ, ೧೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಕಪಟಚಾಲವನ್ನು ಮುಂದುವರೆಸುತ್ತಾ, ತಾಯಿಯಿಂದ ಕರುಣೆಗಿಟ್ಟಿಸಲು, ಮಾತೆ ಶತ್ರುಗಳಿಂದ ಸಾಯಲಾರೆವು, ಸಮುದ್ರವೇ ಎಲ್ಲೆಯಾಗಿರುವೆ ಈ ಭೂಮಿಯಲ್ಲಿ ಯಾರಾದರೂ ರಾಜರು ಹೊಟ್ಟೆ ಹೊರೆಯಲು ಸಹಾಯ ಮಾಡಿಯಾರು, ಅಪ್ಪನು ಕರುಣೆಯಿಂದ ಪಾಂಡವರನ್ನು ಕಾಪಾಡಿದ್ದಾನೆ, ಅಪಾನು ಅವರ ಜೊತೆಗೇ ಬದುಕಿರಲಿ, ನಾವು ಹೊರಟಿದ್ದೇವೆ ನಮ್ಮನ್ನು ಕಳುಹಿಸಿಕೊಡಿ ಎಂದು ಹೇಳುತ್ತಾ ದುರ್ಯೋಧನನು ಅಮ್ಮನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ತಾಯೆ: ಮಾತೆ; ನೇಮ: ನಿಯಮ; ಹಗೆ: ವೈರ; ಕೈ: ಹಸ್ತ; ಸಾವು: ಮರಣ; ಸಾಗರ: ಸಮುದ್ರ; ಅಂತ್ಯ: ಕೊನೆ; ರಾಯ: ರಾಜ; ಹೊರೆ: ಭಾರ; ಬೆಂದು: ನೊಂದು; ಬಸುರು: ಹೊಟ್ಟೆ; ಕಾಯಿದ; ಕಾಪಾಡು; ಕರುಣ: ದಯೆ; ತಂದೆ: ಪಿತ; ಸಹಾಯ: ನೆರವು; ಕೂಡಿ: ಜೊತೆ; ಬದುಕು: ಜೀವಿಸು; ಕಳುಹು: ಬೀಳ್ಕೊಡು, ತೆರಳು; ಎರಗು: ನಮಸ್ಕರಿಸು; ಪದ: ಪಾದ;

ಪದವಿಂಗಡಣೆ:
ತಾಯೆ +ನೇಮವೆ +ಹಗೆಯ +ಕೈಯಲಿ
ಸಾಯಲಾರೆವು +ಸಾಗರ+ಅಂತ್ಯದ
ರಾಯರಿಲ್ಲಾ +ಹೊರೆಯಲಾಪೆವು +ಬೆಂದ +ಬಸುರುಗಳ
ಕಾಯಿದನು +ಕರುಣದಲಿ+ ತಂದೆ +ಸ
ಹಾಯವಹ +ಪಾಂಡವರ+ ಕೂಡಿಯೆ
ರಾಯ+ ಬದುಕಿರಲ್+ಎಮ್ಮ +ಕಳುಹೆಂದ್+ಎರಗಿದನು +ಪದಕೆ

ಅಚ್ಚರಿ:
(೧) ರಾಯ, ಸಾಯ, ಸಹಾಯ – ಪ್ರಾಸ ಪದಗಳು

ಪದ್ಯ ೧೦: ಹಿರಿಯರಿಗೆ ಯಾವುದು ಸಹಜವೆಂದು ದುರ್ಯೋಧನನು ಹೇಳಿದನು?

ನಾವಲೇ ಹೊರಗವರ ಹೆಂಡಿರ
ಹೇವಗೆಡಿಸಿದೆವವರ ಸೋಲಿಸಿ
ಜೀವ ಮಾತ್ರವನುಳುಹಿ ಸೆಳೆದೆವು ಸಕಲ ವಸ್ತುಗಳ
ನೀವು ಕರುಣಿಸಿದಿರಿ ಕೃಪಾ ವಿ
ರ್ಭಾವ ಹಿರಿಯರಲುಂಟಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿಸಿದ ಶಿರವ (ಸಭಾ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ದುಃಖದ ಕಥೆಯನ್ನು ಮುಂದುವರೆಸುತ್ತಾ, ನಾವೇ ತಾನೆ ನಿಮಗೆ ಹೊರಗಿನವರು, ಅವರ ಹೆಂಡತಿಗೆ ಮಾನ ಹೋಗುವಂತೆ ಮಾಡಿದೆವು, ಅವರ ಉಸಿರೊಂದನ್ನು ಬಿಟ್ಟು ಅವರಲ್ಲಿದ್ದ ಎಲ್ಲವನ್ನೂ ನಾವು ಗೆದ್ದಿದ್ದೆವು, ನೀವು ಕರುಣೆಯಿಂದ ಅವೆಲ್ಲವನ್ನೂ ಅವರಿಗೆ ದಯಪಾಲಿಸಿದಿರಿ, ಹಿರಿಯರಿಗೆ ಇದು ಸಹಜ, ಇದರಲ್ಲಿ ತಪ್ಪೇನು ತಪ್ಪೇನು ಎಂದು ತನ್ನ ತಲೆಯನ್ನು ಆಲ್ಲಾಡಿಸುತ್ತಾ ಹೇಳಿದನು.

ಅರ್ಥ:
ಹೊರಗೆ: ಬಾಹಿರ; ಹೆಂಡಿರ: ಹೆಂಡತಿ; ಹೇವ: ಮಾನ; ಕೆಡಿಸು: ಹಾಳುಮಾಡು; ಸೋಲು: ಪರಾಭವ; ಜೀವ: ಉಸಿರು; ಮಾತ್ರ: ಕೇವಲ; ಉಳಿಹು: ಬಿಟ್ಟು; ಸೆಳೆ: ಪಡೆ; ಸಕಲ: ಎಲ್ಲಾ; ವಸ್ತು: ಪದಾರ್ಥ, ದ್ರವ್ಯ; ಕರುಣಿಸು: ದಯಪಾಲಿಸು; ಕೃಪ: ದಯೆ; ಆವಿರ್ಭಾವ: ಪ್ರಕಟವಾಗುವುದು; ಹಿರಿಯರು: ದೊಡ್ಡವರು; ಉಂಟು: ಇರುತ್ತದೆ; ತಪ್ಪು: ಸರಿಯಲ್ಲದ್ದು; ಅಲ್ಲಾಡಿಸು: ತೂಗು; ಶಿರ: ತಲೆ;

ಪದವಿಂಗಡಣೆ:
ನಾವಲೇ +ಹೊರಗ್+ಅವರ +ಹೆಂಡಿರ
ಹೇವಗೆಡಿಸಿದೆವ್+ಅವರ +ಸೋಲಿಸಿ
ಜೀವ+ ಮಾತ್ರವನ್+ಉಳುಹಿ +ಸೆಳೆದೆವು +ಸಕಲ +ವಸ್ತುಗಳ
ನೀವು +ಕರುಣಿಸಿದಿರಿ +ಕೃಪ +ಆವಿ
ರ್ಭಾವ +ಹಿರಿಯರಲ್+ಉಂಟಲೇ+ ತ
ಪ್ಪಾವುದೈ+ ತಪ್ಪಾವುದ್+ಎನುತ್+ಅಲ್ಲಾಡಿಸಿದ +ಶಿರವ

ಅಚ್ಚರಿ:
(೧) ನಿಮ್ಮದೇನು ತಪ್ಪಿಲ್ಲ ಎಂದು ಹೇಳುವ ಪರಿ – ಹಿರಿಯರಲುಂಟಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿಸಿದ ಶಿರವ
(೨) ಮಾನ ಕಳೆದೆವು ಎಂದು ಹೇಳುವ ಪರಿ – ಹೆಂಡಿರ ಹೇವಗೆಡಿಸಿದೆವವರ
(೩) ಹ ಕಾರದ ತ್ರಿವಳಿ ಪದ – ಹೊರಗವರ ಹೆಂಡಿರ ಹೇವಗೆಡಿಸಿದೆವವರ

ಪದ್ಯ ೯: ಗಾಂಧಾರಿಗೆ ದುರ್ಯೋಧನನು ಏನು ಹೇಳಿದನು?

ಅವರ ದಾಸ್ಯವ ಬಿಡಿಸಿ ನೀರಾ
ಜ್ಯವನು ಕರುಣಿಸಿ ನೀತಿಯಲಿ ನಿ
ಮ್ಮವರ ಕಳುಹಿದಿರೆಂದು ಕೇಳಿದೆವಾಯ್ತು ಪರಿತೋಷ
ಅವರುನಿವಗತಿ ಭಕ್ತರೈ ಬಾಂ
ಧವರಲೇ ತಪ್ಪೇನು ಧರ್ಮ
ಪ್ರವರರಿಗೆ ನೀವೊಲಿದಿರೆಂದನು ಕೌರವರ ರಾಯ (ಸಭಾ ಪರ್ವ, ೧೭ ಸಂಧಿ, ೯ ಪದ್ಯ)

ತಾತ್ಪರ್ಯ:
ಪಾಂಡವರ ದಾಸ್ಯವನ್ನು ಬಿಡಿಸಿ, ಅವರ ರಾಜ್ಯವನ್ನು ಮರಳಿ ಮತ್ತೆ ಅವರಿಗೆ ನೀಡಿದಿರಿ, ನ್ಯಾಯಸಮ್ಮತವಾದ ರೀತಿಯಲ್ಲಿ ನಿಮ್ಮವರನ್ನು ಕಳಿಸಿಕೊಟ್ಟಿರೆಂದು ಕೇಳಿ ನಮಗೆ ಬಹಳ ಸಂತೋಷವಾಯಿತು. ನಿಮಗವರು ಭಕ್ತರು, ಬಾಂಧವರು, ಆದುದರಿಂದ ನೀವು ಮಾದಿದುದರಲ್ಲಿ ತಪ್ಪೇನೂ ಇಲ್ಲ. ಧಾರ್ಮಿಕ ಶ್ರೇಷ್ಠರಿಗೆ ನೀವು ಒಲಿದಿರಿ ಎಂದು ದುರ್ಯೋಧನನು ತಾಯಿಯಾದ ಗಾಂಧಾರಿದೇವಿಗೆ ಹೇಳಿದನು.

ಅರ್ಥ:
ದಾಸ್ಯ: ಸೇವಕತನ; ಬಿಡಿಸು: ವಿಮೋಚನೆ, ಸ್ವತಂತ್ರ್ಯಗೊಳಿಸು; ರಾಜ್ಯ: ರಾಷ್ಟ್ರ; ಕರುಣಿಸು: ದಯಪಾಲಿಸು; ನೀತಿ: ಮಾರ್ಗ, ನಿಯಮ; ಕಳುಹು: ಬೀಳ್ಕೊಡು; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಭಕ್ತ: ಆರಾಧಕ; ಬಾಂಧವ: ಸಂಬಂಧಿಕ; ತಪ್ಪು: ಸರಿಯಿಲ್ಲದ್ದು; ಧರ್ಮ: ಧಾರಣೆಮಾಡಿದುದು; ಪ್ರವರ: ಪ್ರಧಾನ ವ್ಯಕ್ತಿ, ಶ್ರೇಷ್ಠ; ಒಲಿ: ಒಪ್ಪು, ಸಮ್ಮತಿಸು; ರಾಯ: ರಾಜ;

ಪದವಿಂಗಡಣೆ:
ಅವರ +ದಾಸ್ಯವ +ಬಿಡಿಸಿ +ನೀ+ರಾ
ಜ್ಯವನು +ಕರುಣಿಸಿ+ ನೀತಿಯಲಿ +ನಿ
ಮ್ಮವರ +ಕಳುಹಿದಿರೆಂದು +ಕೇಳಿದೆವಾಯ್ತು +ಪರಿತೋಷ
ಅವರು+ನಿವಗ್+ಅತಿ+ ಭಕ್ತರೈ +ಬಾಂ
ಧವರಲೇ +ತಪ್ಪೇನು +ಧರ್ಮ
ಪ್ರವರರಿಗೆ +ನೀವೊಲಿದಿರ್+ಎಂದನು +ಕೌರವರ+ ರಾಯ

ಅಚ್ಚರಿ:
(೧) ಜೋಡಿ ಪದಗಳಾಕ್ಷರ – ನೀತಿಯಲಿ ನಿಮ್ಮವರ, ಕಳುಹಿದಿರೆಂದು ಕೇಳಿದೆವಾಯ್ತು, ಭಕ್ತರೈ ಬಾಂಧವರಲೇ
(೨) ಪಾಂಡವರನ್ನು ಹೊಗಳುವ ಪರಿ – ಧರ್ಮಪ್ರವರ

ಪದ್ಯ ೮: ನಾಲ್ವರು ದುಷ್ಟರು ಯಾರ ಅರಮನೆಗೆ ಹೋದರು?

ಅರಸ ಕೇಳ್ ಧೃತರಾಷ್ಟ್ರ ಭೂಪತಿ
ಯರಮನೆಗೆ ನಡೆತಂದರೀ ನಾ
ಲ್ವರು ವಿಷಾದ ವಿಡಂಬ ವಿಹ್ವಲ ಕರಣ ವೃತ್ತಿಯಲಿ
ಪರಿಮಿತದಿ ಕುಳ್ಳಿರಿಸಿದರು ಸಹ
ಚರನ ಶೋಧಿಸಿ ಕಡು ರಹಸ್ಯದೊ
ಳರಸಿಯನು ಬರಹೇಳಿದರು ಗಾಂಧಾರಿದೇವಿಯನು (ಸಭಾ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಈ ನಾಲ್ವ ದುಷ್ಟ ಕೂಟವು ದುಃಖ ಪೂರಿತ ಹತಾಶಭಾವದ ಅಣಕ ಭಾವದೊಂದಿಗೆ ಧೃತರಾಷ್ಟ್ರನ ಅರಮನೆಯನ್ನು ತಲುಪಿದರು. ಇವರನ್ನು ಮಾತ್ರ ಒಂದೆಡೆ ಕುಳ್ಳಿರಿಸಿದರು. ಅಲ್ಲಿ ಒಬ್ಬ ಯೋಗ್ಯ ಸೇವಕನನ್ನು ಹುಡುಕಿ ಆತನನ್ನು ಕರೆದು, ಅತ್ಯಂತ ರಹಸ್ಯರೀತಿಯಲ್ಲಿ ಗಾಂಧಾರಿದೇವಿಯನ್ನು ಅರಮನೆಗೆ ಬರೆಮಾಡಿಕೊಂಡರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಭೂಪತಿ: ರಾಜ; ಅರಮನೆ: ರಾಜರ ವಾಸಸ್ಥಾನ, ಆಲಯ; ನಡೆ: ಚಲಿಸು; ವಿಷಾದ: ದುಃಖ; ವಿಡಂಬ:ನಟನೆ, ಅಣಕ; ವಿಹ್ವಲ: ಹತಾಶ; ಕರಣ: ಸನ್ನೆ, ಸಂಕೇತ; ವೃತ್ತಿ: ಕಾರ್ಯ; ಪರಿಮಿತ: ಸ್ವಲ್ಪ; ಕುಳ್ಳಿರಿಸು: ಆಸೀನನಾಗಿಸು; ಸಹಚರ: ಅನುಚರ, ಸೇವಕ; ಶೋಧಿಸು: ಹುಡುಕು; ಕಡು: ಬಹಳ; ರಹಸ್ಯ: ಗುಟ್ಟು; ಅರಸಿ: ರಾಣಿ;

ಪದವಿಂಗಡಣೆ:
ಅರಸ +ಕೇಳ್ +ಧೃತರಾಷ್ಟ್ರ +ಭೂಪತಿ
ಅರಮನೆಗೆ +ನಡೆತಂದರ್+ಈ+ ನಾ
ಲ್ವರು +ವಿಷಾದ +ವಿಡಂಬ +ವಿಹ್ವಲ+ ಕರಣ+ ವೃತ್ತಿಯಲಿ
ಪರಿಮಿತದಿ+ ಕುಳ್ಳಿರಿಸಿದರು+ ಸಹ
ಚರನ +ಶೋಧಿಸಿ +ಕಡು +ರಹಸ್ಯದೊಳ್
ಅರಸಿಯನು +ಬರಹೇಳಿದರು+ ಗಾಂಧಾರಿ+ದೇವಿಯನು

ಅಚ್ಚರಿ:
(೧) ಅರಸ, ಅರಸಿ – ಜೋಡಿ ಪದಗಳು
(೨) ಅರಸ, ಭೂಪತಿ – ಸಮನಾರ್ಥಕ ಪದ, ೧ ಸಾಲಿನ ಮೊದಲ ಕೊನೆ ಪದ
(೩) ವಿ ಕಾರದ ತ್ರಿವಳಿ ಪದ – ವಿಷಾದ ವಿಡಂಬ ವಿಹ್ವಲ