ಪದ್ಯ ೨: ಪಾಂಡವರು ಹೇಗೆ ಪ್ರಸಿದ್ಧರಾದರು?

ಎತ್ತಿತ್ತೀ ಪಾಳೆಯವು ನಿಜಪುರ
ದತ್ತ ತಿರುಗಿತು ಜನಜನಿತ ರಾ
ಜೋತ್ತಮನ ಕಡೆಯಾಯ್ತು ಸತ್ಯ ಕ್ಷಮೆ ಪರಾಕ್ರಮಕೆ
ಇತ್ತಲಡುಪಾಯ್ಬೇಗೆ ಬಿಸುಗುದಿ
ಕಿತ್ತಡವು ಕಾರ್ಪಣ್ಯ ಕಪಟ ಖ
ಳೋತ್ತಮರ ಹೃದಯದಲಿ ಮೂಡಿತು ನೃಪತಿ ಕೇಳೆಂದ (ಸಭಾ ಪರ್ವ, ೧೭ ಸಂಧಿ, ೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಪಾಂಡವರು ತಮ್ಮ ಊರು ಇಂದ್ರಪ್ರಸ್ಥಕ್ಕೆ ಮರಳಿ, ಸತ್ಯ, ಕ್ಷಮೆ, ಪರಾಕ್ರಮಗಳಿಂದ ರಾಜ್ಯವನ್ನಾಳಿ ಲೋಕಪ್ರಸಿದ್ಧರಾದರು, ಕೌರವರ ಮನಸ್ಸಿನಲ್ಲಿ ಬೇಗೆ, ಕುದಿತ, ದೈನ್ಯ, ಮೋಸಗಳು ಮೂಡಿ ಅವರು ವ್ಯಗ್ರರಾದರು.

ಅರ್ಥ:
ಎತ್ತು: ಮೇಲೇಳು; ಪಾಳೆ: ಗುಂಪು; ನಿಜ: ತಮ್ಮದಾದ, ದಿಟ; ಪುರ: ಊರು; ತಿರುಗು: ಹೊರಳು; ಜನಜನಿತ: ಪ್ರಸಿದ್ಧವಾದ ವಿಷಯ; ರಾಜ: ನೃಪ; ಉತ್ತಮ: ಶ್ರೇಷ್ಠ; ಕಡೆ: ಪಕ್ಕ; ಸತ್ಯ: ನಿಜ; ಕ್ಷಮೆ: ಇತರರ ತಪ್ಪನ್ನು ಮನ್ನಿಸುವ ಗುಣ, ಸೈರಣೆ, ತಾಳ್ಮೆ; ಪರಾಕ್ರಮ: ಶೌರ್ಯ; ಬೇಗೆ: ಉರಿ, ಜ್ವಾಲೆ, ತಳಮಳ; ಬಿಸು: ಹೊಂದಿಸು; ಕುದಿ: ಶಾಖದಿಂದ ಉಕ್ಕು; ಕಾರ್ಪಣ್ಯ: ಬಡತನ, ದೈನ್ಯ; ಕಪಟ: ಮೋಸ; ಕಿತ್ತಡ: ಮೋಸ; ಖಳ: ದುಷ್ಟ; ಹೃದಯ: ಎದೆ, ಮನಸ್ಸು; ಮೂಡು: ಕಾಣಿಸಿಕೋ; ನೃಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎತ್ತಿತ್+ಈ+ ಪಾಳೆಯವು +ನಿಜಪುರ
ದತ್ತ +ತಿರುಗಿತು +ಜನಜನಿತ+ ರಾ
ಜೋತ್ತಮನ +ಕಡೆಯಾಯ್ತು +ಸತ್ಯ+ ಕ್ಷಮೆ+ ಪರಾಕ್ರಮಕೆ
ಇತ್ತಲ್+ಅಡುಪಾಯ್+ಬೇಗೆ +ಬಿಸು+ಕುದಿ
ಕಿತ್ತಡವು+ ಕಾರ್ಪಣ್ಯ+ ಕಪಟ+ ಖ
ಳೋತ್ತಮರ+ ಹೃದಯದಲಿ +ಮೂಡಿತು +ನೃಪತಿ +ಕೇಳೆಂದ

ಅಚ್ಚರಿ:
(೧) ರಾಜೋತ್ತಮ, ಖಳೋತ್ತಮ – ಪದಗಳ ಬಳಕೆ

ಪದ್ಯ ೧: ಪಾಂಡವರ ತನಯರು ಯಾರನ್ನು ಬೈದರು?

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತಿಯ ನಂದನರು ತ
ಮ್ಮಾಳೊಡನೆ ಹೇಇದರು ಸೌಭದ್ರಾದಿ ತನಯರಿಗೆ
ಬಾಲಕಿಯ ಬೇಳಂಬವನು ಜೂ
ಜಾಳಿಗಳ ಜಜ್ಝಾರ ತನವನು
ಕೇಳಿ ಬೈದುದು ಸೇನೆ ಖತಿಯಲಿ ಖಳಚತುಷ್ಟಯವ (ಸಭಾ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯ ಮಹಾರಾಜರಿಗೆ ಮಹಾಭಾರತದ ಕಥೆಯನ್ನು ಮುಂದುವರೆಸುತ್ತಾ, ಕೇಳು ರಾಜ ನಿಮ್ಮ ಪೂರ್ವಜರಾದ ಪಾಂಡವರು ಹಿಂದಿರುಗಿ ಬರುತ್ತಾ, ಅಭಿಮನ್ಯು ಮೊದಲಾದ ತಮ್ಮ ಮಕ್ಕಳಿಗೆ ದ್ರೌಪದಿಗೊದಗಿದ ವಿಪತ್ತನ್ನೂ ಜೂಜಾಡಿದ ಕೌರವರ ದುರುದುಂಬಿತನವನ್ನೂ ಹೇಳಿದರು. ಅವರೆಲ್ಲರೂ ದುಷ್ಟ ಚತುಷ್ಕೂಟವನ್ನು (ದುಶ್ಯಾಸನ, ದುರ್ಯೋಧನ, ಶಕುನಿ, ಕರ್ಣ) ರನ್ನು ಬೈದರು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ನಂದನ: ಮಕ್ಕಳು; ತಮ್ಮೊಡನೆ: ಅವರವರಿಗೆ; ಹೇಳು: ತಿಳಿಸು; ಸೌಭದ್ರ: ಅಭಿಮನ್ಯು; ತನಯ: ಮಕ್ಕಳು; ಬಾಲಕಿ: ಹೆಣ್ಣು; ಬೇಳಂಬ:ವಿಪತ್ತು, ಗೊಂದಲ; ಜೂಜಾಳಿ: ದ್ಯೂತ; ಜಜ್ಝಾರ: ಉದ್ಧತ; ಕೇಳಿ: ತಿಳಿದು; ಬೈದು: ಜರೆ; ಸೇನೆ: ಸೈನ್ಯ; ಖತಿ: ಕೋಪ; ಖಳ: ದುಷ್ಟ; ಚತುಷ್ಟ: ನಾಲ್ಕು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುಂತಿಯ +ನಂದನರು +ತ
ಮ್ಮಾಳೊಡನೆ +ಹೇಳಿದರು+ ಸೌಭದ್ರಾದಿ +ತನಯರಿಗೆ
ಬಾಲಕಿಯ +ಬೇಳಂಬವನು +ಜೂ
ಜಾಳಿಗಳ +ಜಜ್ಝಾರ +ತನವನು
ಕೇಳಿ +ಬೈದುದು +ಸೇನೆ +ಖತಿಯಲಿ+ ಖಳ+ಚತುಷ್ಟಯವ

ಅಚ್ಚರಿ:
(೧) ಜೋಡಿ ಪದಗಳು- ಜಾಜಾಳಿಗಳ ಜಜ್ಝಾರ, ಖತಿಯಲಿ ಖಳಚತುಷ್ಟಯವ;