ಪದ್ಯ ೬೫: ದ್ರೌಪದಿಯು ಗಾಂಧಾರಿಗೆ ಏನು ಹೇಳಿದಳು?

ಮರೆದೆನಾಗಳೆ ವಿಗಡ ವಿಧಿಯೆ
ಚ್ಚರಿಸಿದರೆ ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ
ಹೆರರನೆಂಬುದು ಖೂಳತನವೇ
ನರಿಯದವರೇ ಪಾಂಡುಸುತರೆಂ
ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ (ಸಭಾ ಪರ್ವ, ೧೬ ಸಂಧಿ, ೬೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಗಾಂಧಾರಿಯನ್ನು ಉದ್ದೇಶಿಸುತ್ತಾ, ಹಿಂದಿನದೆಲ್ಲವನ್ನೂ ನಾನು ಮರೆತಿದ್ದೇನೆ, ನನ್ನ ಪೂರ್ವಕರ್ಮದ ಪ್ರಾರಬ್ಧವಾಗಿ ಪರಿಣಮಿಸಿದಾಗ ಹರಿಭಕ್ತಿಯಿಂದ ನಾನು ಪಾರಾದೆ. ನಮ್ಮ ಪ್ರಾರಬ್ಧಕ್ಕೆ ಇನ್ನೊಬ್ಬರನ್ನು ನಿಂದಿಸುವುದು ನೀಚತನ. ಪಾಂಡವರೇನೂ ತಿಳಿಗೇಡಿಗಳಲ್ಲ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮರೆದೆ: ನೆನಪಿನಿಂದ ಹೊರಹಾಕು; ವಿಗಡ: ಭೀಕರ; ವಿಧಿ:ಆಜ್ಞೆ, ಆದೇಶ, ನಿಯಮ; ಎಚ್ಚರ: ಹುಷಾರಾಗಿರುವಿಕೆ; ಹರಿ: ವಿಷ್ಣು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮುಖ: ಆನನ; ಮುರಿ: ಸೀಳು; ಪೂರ್ವ: ಹಿಂದಿನ; ದುಷ್ಪ್ರಾರಬ್ಧ: ಹಿಂದೆ ಮಾಡಿದ ಕೆಟ್ಟ ಪಾಪದ ಫಲ; ಕರ್ಮ: ಕೆಲಸ, ಕಾರ್ಯ; ಫಲ: ಪ್ರಯೋಜನ; ಹೆರರ: ಬೇರೆಯವರ; ಖೂಳ: ದುಷ್ಟ; ಅರಿ: ತಿಳಿ; ಸುತ: ಮಗ; ಉರುಬು:ಅತಿಶಯವಾದ ವೇಗ; ಬಿನ್ನಹ: ಮನ್ನಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಅಕ್ಷಿ: ಕಣ್ಣು;

ಪದವಿಂಗಡಣೆ:
ಮರೆದೆನ್+ಆಗಳೆ +ವಿಗಡ +ವಿಧಿ
ಎಚ್ಚರಿಸಿದರೆ +ಹರಿಭಕ್ತಿ+ ಮುಖದಲಿ
ಮುರಿದುದ್+ಎಮ್ಮಯ +ಪೂರ್ವ +ದುಷ್ಪ್ರಾರಬ್ಧ+ ಕರ್ಮಫಲ
ಹೆರರನ್+ಎಂಬುದು +ಖೂಳತನವೇನ್
ಅರಿಯದವರೇ+ ಪಾಂಡುಸುತರ್
ಎಂದ್+ಉರುಬೆಯಲಿ +ಬಿನ್ನವಿಸಿದಳು+ ಗಾಂಧಾರಿಗ್+ಅಬುಜಾಕ್ಷಿ

ಅಚ್ಚರಿ:
(೧) ಭಗವಂತನ ಆರಾಧನೆಯ ಮುಖ್ಯತೆಯನ್ನು ಹೇಳುವ ಪರಿ – ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ

ನಿಮ್ಮ ಟಿಪ್ಪಣಿ ಬರೆಯಿರಿ