ಪದ್ಯ ೫೪: ಕರ್ಣನು ದ್ರೌಪದಿಯನ್ನು ಹೇಗೆ ಹೊಗಳಿದನು?

ಪೂತುರೇ ಪಾಂಚಾಲಿ ಭುವನ
ಖ್ಯಾತೆಯಾದೆಲೆ ಜಾಗು ನಿನ್ನಯ
ಬೈತಲೆಯ ಮಣಿ ಮಾರುವೋದುದ ಮತ್ತೆ ಬಿಡಿಸಿದೆಲೆ
ಬೀತ ಮರ ಫಲವಾಯ್ತಲಾ ನಿ
ನ್ನಾತಗಳ ಬಹುಖೇದ ಜಲಧಿಗೆ
ಸೇತುವಾದೆಲೆ ನೀನೆನುತ ತಲೆದೂಗಿದನು ಕರ್ಣ (ಸಭಾ ಪರ್ವ, ೧೬ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ದ್ರೌಪದಿಗೆ ತನ್ನ ಹೊಗಳಿಕೆಯನ್ನು ಮುಂದುವರೆಸುತ್ತಾ, ಭಲೇ ದ್ರೌಪದಿ, ಲೋಕ ವಿಖ್ಯಾತೆಯಾದೆ, ನಿನ್ನ ಬೈತಲೆಯ ಸೌಭಾಗ್ಯದ ಮಣಿ ಮಾರಾಟವಾಗಿ ಹೋಗಿದುದನ್ನು ಮತ್ತೆ ಪಡೆದೆ. ಒಣಗಿದ ಮರ ಮತ್ತೆ ಚಿಗುರಿ ಫಲಕೊಡುವಂತೆ ಮಾದಿದೆ ನಿನ್ನ ಪತಿಗಳ ದುಃಖಸಮುದ್ರಕ್ಕೆ ಕಟ್ಟೆಯಾದೆ ಎಂದು ಹೊಗಳಿ ತಲೆದೂಗಿದನು.

ಅರ್ಥ:
ಪೂತು: ಭಲೆ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಜಾಗು: ಹೊಗಳಿಕೆ ಮಾತು; ಬೈತಲೆ: ಬಯ್ತಲೆ, ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ; ಮಣಿ: ರತ್ನ; ಮಾರು: ವಿಕ್ರಯಿಸು; ಮತ್ತೆ: ಪುನಃ; ಬಿಡಿಸು: ಹೋಗಲಾಡಿಸು; ಬೀತ: ಕಳೆದ; ಮರ: ತರು; ಫಲ: ಹಣ್ಣು; ಬಹು: ಬಹಳ; ಖೇದ: ದುಃಖ; ಜಲಧಿ; ಸಾಗರ; ಸೇತು: ಸೇತುವೆ, ಸಂಕ; ತಲೆ: ಶಿರ; ತೂಗು: ಅಲ್ಲಾಡಿಸು;

ಪದವಿಂಗಡಣೆ:
ಪೂತುರೇ +ಪಾಂಚಾಲಿ +ಭುವನ
ಖ್ಯಾತೆಯಾದೆಲೆ+ ಜಾಗು +ನಿನ್ನಯ
ಬೈತಲೆಯ +ಮಣಿ +ಮಾರುವೋದುದ +ಮತ್ತೆ +ಬಿಡಿಸಿದೆಲೆ
ಬೀತ+ ಮರ+ ಫಲವಾಯ್ತಲಾ+ ನಿನ್
ಆತಗಳ +ಬಹುಖೇದ+ ಜಲಧಿಗೆ
ಸೇತುವಾದೆಲೆ+ ನೀನೆನುತ+ ತಲೆದೂಗಿದನು+ ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೀತ ಮರ ಫಲವಾಯ್ತಲಾ
(೨) ಪೂತುರೆ, ಜಾಗು – ಹೊಗಳಿಕೆಯ ಮಾತು

ಪದ್ಯ ೬೭: ಪಾಂಡವರು ಏಕೆ ಸಂತೋಷಪಟ್ಟರು?

ಕಳೆದೆವೇ ಖಳರೊಡ್ಡಿದಿರುಬಿನ
ಕುಳಿಗಳನು ಕೈತಪ್ಪು ಮಾಡದೆ
ಸಲಹಿದೆವೆ ಸತ್ಯವನು ಸುಜನರ ಕಲೆಗೆ ಸಂದೆವಲೆ
ಕಳವಳದ ಕಡುಗಡಲೊಳಾಳದೆ
ಸುಳಿದೆವಿತ್ತಲು ಶಿವ ಶಿವಾ ಯದು
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಸಭಾ ಪರ್ವ, ೧೬ ಸಂಧಿ, ೬೭ ಪದ್ಯ)

ತಾತ್ಪರ್ಯ:
ಪಾಂಡವರು, ದುಷ್ಟರಾದ ಕೌರವರು ತೋಡಿದ್ದ ಗುಂಡಿಗಳನ್ನು ತಪ್ಪಿಸಿಕೊಂಡೆವು. ಸತ್ಯವನ್ನು ತಪ್ಪದೆ ಪರಿಪಾಲಿಸಿದೆವು, ಸಜ್ಜನರ ಮಾರ್ಗದಲ್ಲಿ ನಡೆದೆವು, ಶಿವ ಶಿವಾ ಕಳವಳದ ಸಮುದ್ರದಲ್ಲಿ ಬೀಳದೆ, ಯದುಕುಲತಿಲಕನಾದ ವೀರ ನಾರಾಯಣ ಶ್ರೀಕೃಷ್ಣನ ಕರುಣೆಯಿಂದ ಹಿಂದಿರುಗಿದೆವು ಎಂದು ಸಂತೋಷಿಸಿದರು.

ಅರ್ಥ:
ಕಳೆ:ತೊರೆ; ಖಳ: ದುಷ್ಟ; ಒಡ್ಡು: ಈಡುಮಾಡು; ಇರುಬು: ಇಕ್ಕಟ್ಟು; ಕುಳಿ: ಗುಂಡಿ; ಕೈತಪ್ಪು: ನುಣುಚಿಕೊಳ್ಳು; ಸಲಹು: ಕಾಪಾಡು; ಸತ್ಯ: ದಿಟ; ಸುಜನ: ಸಜ್ಜನ; ಕಲೆ: ಗುರುತು, ಸೇರು; ಸಂದ: ಕಳೆದ, ಹಿಂದಿನ; ಕಳವಳ: ಗೊಂದಲ; ಕಡು: ವಿಶೇಷ, ಅಧಿಕ; ಕಡಲು: ಸಾಗರ, ಸಮುದ್ರ; ಸುಳಿ: ಕಾಣಿಸಿಕೊಳ್ಳು, ಆವರಿಸು; ಯದುತಿಲಕ: ಯದು ವಂಶದ ಶ್ರೇಷ್ಠವಾದ; ಕರುಣ: ದಯೆ;

ಪದವಿಂಗಡಣೆ:
ಕಳೆದೆವೇ +ಖಳರ್+ಒಡ್ಡಿದ್+ಇರುಬಿನ
ಕುಳಿಗಳನು +ಕೈತಪ್ಪು +ಮಾಡದೆ
ಸಲಹಿದೆವೆ+ ಸತ್ಯವನು +ಸುಜನರ+ ಕಲೆಗೆ+ ಸಂದೆವಲೆ
ಕಳವಳದ+ ಕಡುಗಡಲೊಳ್+ಆಳದೆ
ಸುಳಿದೆವ್+ಇತ್ತಲು ಶಿವ ಶಿವಾ+ ಯದು
ತಿಲಕ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಳವಳದ ಕಡುಗಡಲೊಳಾಳದೆ ಸುಳಿದೆವಿತ್ತಲು

ಪದ್ಯ ೬೬: ಪಾಂಡವರು ಹೇಗೆ ಹಸ್ತಿನಾಪುರದಿಂದ ಹಿಂದಿರುಗಿದರು?

ಸಾಕು ನೇಮವ ಕೊಡಿಯೆನುತ ಕುಂ
ತೀಕುಮಾರರು ಬೀಳುಕೊಂಡರು
ನೂಕಿ ಹೊಕ್ಕುದು ದಾರವಟ್ಟದಲಿವರ ಪರಿವಾರ
ತೋಕಿದವು ಸೀಗುರಿಗಳೆಡ ಬಲ
ದಾಕೆಯಲಿ ಪಾಂಡವ ಕುಮಾರಾ
ನೀಕ ಬೆರಸಿತು ಗಜತುರಗ ರಥ ಪಾಯದಳ ಸಹಿತ (ಸಭಾ ಪರ್ವ, ೧೬ ಸಂಧಿ, ೬೬ ಪದ್ಯ)

ತಾತ್ಪರ್ಯ:
ಗಾಂಧಾರಿಯ ನುಡಿಗಳನ್ನು ಕೇಳಿ, ನಮಗೆ ಹೊರಡಲು ಅಪ್ಪಣೆ ನೀಡಿ ಎಂದು ಪಾಂದವರು ಧೃತರಾಷ್ಟ್ರ ಗಾಂಧಾರಿಯಿಂದ ಬೀಳ್ಕೊಂಡರು. ಅರಮನೆಯ ಮುಖ್ಯದ್ವಾರದಿಂದ ಹೊರಹೊರಟರು. ಅವರ ಎಡಬಲದಲ್ಲಿ ಚಾಮರಗಳು ಬೀಸುತ್ತಿದ್ದವು. ಅವರ ಎಡಬಲದಲ್ಲಿ ಪಾಂಡವರ ಕುಮಾರರೂ ಸೈನ್ಯವೂ ಬರುತ್ತಿದ್ದವು.

ಅರ್ಥ:
ಸಾಕು: ನಿಲ್ಲು; ನೇಮ: ನಿಯಮ; ಕೊಡಿ: ನೀಡಿ; ಕುಮಾರ:ಪುತ್ರ; ಬೀಳುಕೊಂಡು: ತೆರಳು; ನೂಕು: ತಳ್ಳು; ಹೊಕ್ಕು: ಸೇರು; ದಾರವಟ್ಟ: ಹೆಬ್ಬಾಗಿಲು; ಪರಿವಾರ: ಸುತ್ತಲಿನವರು, ಪರಿಜನ; ತೋಕು: ಪ್ರಯೋಗಿಸು; ಸೀಗುರಿ: ಚಾಮರ, ಚಮರಿ; ಎಡಬಲ: ಸುತ್ತಲು; ಬೆರಸು: ಸಹಿತ, ಒಡನೆ; ಗಜ: ಆನೆ; ತುರಗ: ಕುದುರೆ; ರಥ: ಬಂಡಿ; ಪಾಯದಳ: ಸೈನಿಕ; ಸಹಿತ: ಜೊತೆ;ಆನೀಕ: ಗುಂಪು, ಸೈನ್ಯ;

ಪದವಿಂಗಡಣೆ:
ಸಾಕು+ ನೇಮವ +ಕೊಡಿ+ಎನುತ +ಕುಂ
ತೀ+ಕುಮಾರರು +ಬೀಳುಕೊಂಡರು
ನೂಕಿ+ ಹೊಕ್ಕುದು +ದಾರವಟ್ಟದಲ್+ಇವರ +ಪರಿವಾರ
ತೋಕಿದವು +ಸೀಗುರಿಗಳ್+ಎಡ ಬಲದ್
ಆಕೆಯಲಿ +ಪಾಂಡವ +ಕುಮಾರ
ಅನೀಕ +ಬೆರಸಿತು +ಗಜ+ತುರಗ +ರಥ +ಪಾಯದಳ +ಸಹಿತ

ಅಚ್ಚರಿ:
(೧) ಕುಂತೀ ಕುಮಾರ, ಪಾಂಡವ ಕುಮಾರ – ಪದಗಳ ಬಳಕೆ

ಪದ್ಯ ೬೫: ದ್ರೌಪದಿಯು ಗಾಂಧಾರಿಗೆ ಏನು ಹೇಳಿದಳು?

ಮರೆದೆನಾಗಳೆ ವಿಗಡ ವಿಧಿಯೆ
ಚ್ಚರಿಸಿದರೆ ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ
ಹೆರರನೆಂಬುದು ಖೂಳತನವೇ
ನರಿಯದವರೇ ಪಾಂಡುಸುತರೆಂ
ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ (ಸಭಾ ಪರ್ವ, ೧೬ ಸಂಧಿ, ೬೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಗಾಂಧಾರಿಯನ್ನು ಉದ್ದೇಶಿಸುತ್ತಾ, ಹಿಂದಿನದೆಲ್ಲವನ್ನೂ ನಾನು ಮರೆತಿದ್ದೇನೆ, ನನ್ನ ಪೂರ್ವಕರ್ಮದ ಪ್ರಾರಬ್ಧವಾಗಿ ಪರಿಣಮಿಸಿದಾಗ ಹರಿಭಕ್ತಿಯಿಂದ ನಾನು ಪಾರಾದೆ. ನಮ್ಮ ಪ್ರಾರಬ್ಧಕ್ಕೆ ಇನ್ನೊಬ್ಬರನ್ನು ನಿಂದಿಸುವುದು ನೀಚತನ. ಪಾಂಡವರೇನೂ ತಿಳಿಗೇಡಿಗಳಲ್ಲ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮರೆದೆ: ನೆನಪಿನಿಂದ ಹೊರಹಾಕು; ವಿಗಡ: ಭೀಕರ; ವಿಧಿ:ಆಜ್ಞೆ, ಆದೇಶ, ನಿಯಮ; ಎಚ್ಚರ: ಹುಷಾರಾಗಿರುವಿಕೆ; ಹರಿ: ವಿಷ್ಣು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮುಖ: ಆನನ; ಮುರಿ: ಸೀಳು; ಪೂರ್ವ: ಹಿಂದಿನ; ದುಷ್ಪ್ರಾರಬ್ಧ: ಹಿಂದೆ ಮಾಡಿದ ಕೆಟ್ಟ ಪಾಪದ ಫಲ; ಕರ್ಮ: ಕೆಲಸ, ಕಾರ್ಯ; ಫಲ: ಪ್ರಯೋಜನ; ಹೆರರ: ಬೇರೆಯವರ; ಖೂಳ: ದುಷ್ಟ; ಅರಿ: ತಿಳಿ; ಸುತ: ಮಗ; ಉರುಬು:ಅತಿಶಯವಾದ ವೇಗ; ಬಿನ್ನಹ: ಮನ್ನಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಅಕ್ಷಿ: ಕಣ್ಣು;

ಪದವಿಂಗಡಣೆ:
ಮರೆದೆನ್+ಆಗಳೆ +ವಿಗಡ +ವಿಧಿ
ಎಚ್ಚರಿಸಿದರೆ +ಹರಿಭಕ್ತಿ+ ಮುಖದಲಿ
ಮುರಿದುದ್+ಎಮ್ಮಯ +ಪೂರ್ವ +ದುಷ್ಪ್ರಾರಬ್ಧ+ ಕರ್ಮಫಲ
ಹೆರರನ್+ಎಂಬುದು +ಖೂಳತನವೇನ್
ಅರಿಯದವರೇ+ ಪಾಂಡುಸುತರ್
ಎಂದ್+ಉರುಬೆಯಲಿ +ಬಿನ್ನವಿಸಿದಳು+ ಗಾಂಧಾರಿಗ್+ಅಬುಜಾಕ್ಷಿ

ಅಚ್ಚರಿ:
(೧) ಭಗವಂತನ ಆರಾಧನೆಯ ಮುಖ್ಯತೆಯನ್ನು ಹೇಳುವ ಪರಿ – ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ

ಪದ್ಯ ೬೪: ಗಾಂಧಾರಿಯು ದ್ರೌಪದಿಗೆ ಏನು ಹೇಳಿದಳು?

ನೋಡಲಾಗದು ಮಕ್ಕಳಿರ ಕುಲ
ಗೇಡಿಗರ ಕಪಟವನು ನಮ್ಮನು
ನೋಡಿ ಮರೆವುದು ಪಾಂಡುವೆಂದಿಹುದಂಧ ಭೂಪತಿಯ
ನಾಡಿ ನೊಂದೌ ತಾಯೆ ಬಾ ಮಗ
ಮಾಡಿದನುಚಿತ ಕರ್ಮವೆಲ್ಲವ
ಮಾಡಿದೆನು ತಾನೆಂದಳಾ ದ್ರೌಪದಿಗೆ ಗಾಂಧಾರಿ (ಸಭಾ ಪರ್ವ, ೧೬ ಸಂಧಿ, ೬೪ ಪದ್ಯ)

ತಾತ್ಪರ್ಯ:
ಗಾಂಧಾರಿಯು ಪಾಂಡವರೊಂದಿಗೆ ಮಾತನಾಡುತ್ತಾ, ಮಕ್ಕಳೇ ನಿಮ್ಮ ಸ್ಥಿತಿಯನ್ನು ನಾನು ನೋಡಲಾರೆ, ಕುಲಗೇಡಿಗಳಾದ ನಮ್ಮ ಮಕ್ಕಳ ವಂಚನೆಯನ್ನು ಧೃತರಾಷ್ಟ್ರನನ್ನು ನಿಮ್ಮ ತಂದೆಯಾದ ಪಾಂಡುವೆಂದು ತಿಳಿದು ಮರೆಯಿರಿ ಎಂದು ಹೇಳಿದಳು, ದ್ರೌಪದಿಯನ್ನುದ್ದೇಶಿಸಿ, ತಾಯೇ, ಬಹಳ ನೊಂದಿರುವೆ ನೀನು, ನನ್ನ ಮಗನು ಮಾಡಿದ ಅನುಚಿತ ಕಾರ್ಯವೆಲ್ಲವೂ ನಾನೇ ಮಾಡಿದೆ ಎಂದು ಭಾವಿಸಿ ಮರೆತುಬಿಡು ಎಂದು ಹೇಳಿದಳು.

ಅರ್ಥ:
ನೋಡು: ತೋರು; ಮಕ್ಕಳು: ಸುತರು; ಕುಲಗೇಡಿ: ವಂಶಕ್ಕೆ ಕೇಡುಬಗೆಯುವವರು; ಕಪಟ: ಮೋಸ; ಮರೆ: ನೆನಪಿನಿಂದ ದೂರವಿಡು; ಅಂಧ: ಕುರುಡು; ಭೂಪತಿ: ರಾಜ; ನೊಂದು: ಪೆಟ್ಟು, ನೋವು; ತಾಯೆ: ಮಾತೆ; ಬಾ: ಆಗಮಿಸು; ಮಗ: ಸುತ; ಅನುಚಿತ: ಸರಿಯಲ್ಲದ ಕರ್ಮ: ಕೆಲಸ;

ಪದವಿಂಗಡಣೆ:
ನೋಡಲಾಗದು+ ಮಕ್ಕಳಿರ+ ಕುಲ
ಗೇಡಿಗರ+ ಕಪಟವನು+ ನಮ್ಮನು
ನೋಡಿ +ಮರೆವುದು+ ಪಾಂಡುವೆಂದ್+ಇಹುದ್+ಅಂಧ +ಭೂಪತಿಯನ್
ಆಡಿ+ ನೊಂದೌ +ತಾಯೆ +ಬಾ +ಮಗ
ಮಾಡಿದ್+ಅನುಚಿತ +ಕರ್ಮವ್+ಎಲ್ಲವ
ಮಾಡಿದೆನು+ ತಾನೆಂದಳಾ +ದ್ರೌಪದಿಗೆ +ಗಾಂಧಾರಿ

ಅಚ್ಚರಿ:
(೧) ದುರ್ಯೋಧನನ್ನು ಬಯ್ಯುವ ಪರಿ – ಕುಲಗೇಡಿಗರ ಕಪಟವನು
(೨) ಕ್ಷಮೆಯಾಚಿಸುವ ಪರಿ – ನಮ್ಮನು ನೋಡಿ ಮರೆವುದು ಪಾಂಡುವೆಂದಿಹುದಂಧ ಭೂಪತಿಯ;

ಪದ್ಯ ೬೩: ಧೃತರಾಷ್ಟ್ರನು ದ್ರೌಪದಿಯನ್ನು ಹೇಗೆ ಬೀಳ್ಕೊಟ್ಟನು?

ತರಿಸಿದನು ಮಡಿವರ್ಗದಮಲಾಂ
ಬರವ ನಂಬುಜಮುಖಿಗೆ ರತ್ನಾ
ಭರಣವನು ವಿವಿಧಾನುಲೇಪನ ಚಿತ್ರ ಸಂಪುಟದ
ಅರಸನಿತ್ತನು ವೀಳೆಯವ ಕ
ರ್ಪುರದ ತವಲಾಯಿಗಳನಭ್ಯಂ
ತರಕಿವರ ಕಳುಹಿದನು ಗಾಂಧರಿಯನು ಕಾಣಿಸಿದ (ಸಭಾ ಪರ್ವ, ೧೬ ಸಂಧಿ, ೬೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಉತ್ತಮ ವಸ್ತ್ರಗಳನ್ನು ರತ್ನಾಭರಣಗಳನ್ನೂ ದ್ರೌಪದಿಗೆ ತರಿಸಿಕೊಟ್ಟನು. ಅನುಲೇಪನಗಳ ಚಿತ್ರವಿಚಿತ್ರ ಸಂಪುಟವನ್ನು ಕೊಟ್ಟನು. ಕರ್ಪೂರದ ಭರಣಿಗಳನ್ನು ಉಡುಗೊರೆಯಾಗಿತ್ತನು. ಬಳಿಕ ರಾಣಿವಾಸದೊಳಕ್ಕೆ ಕಳಿಸಿ ಗಾಂಧಾರಿಯನ್ನು ಕಾಣಲು ತಿಳಿಸಿದನು.

ಅರ್ಥ:
ತರಿಸು: ಬರೆಮಾಡು; ಮಡಿ: ಶುಭ್ರ; ಅಮಲ: ನಿರ್ಮಲ; ಅಂಬರ: ಬಟ್ಟೆ, ವಸ್ತ್ರ; ಅಂಬುಜ: ಕಮಲ; ಅಂಬುಜಮುಖಿ: ಕಮಲದಂತ ಮುಖವುಳ್ಳವಳು; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ವಿವಿಧ: ಹಲವಾರು; ಅನುಲೇಪ: ತೊಡೆತ, ಬಳಿಯುವಿಕೆ; ಚಿತ್ರ: ಆಶ್ಚರ್ಯ; ಸಂಪುಟ: ಕೈಪೆಟ್ಟಿಗೆ; ಅರಸ: ರಾಜ; ವೀಳೆ: ತಾಂಬೂಲ; ಕರ್ಪುರ: ಸುಗಂಧ ದ್ರವ್ಯ; ತವಲಾಯಿ: ಕರ್ಪೂರವನ್ನು ಹಾಕಿ ಇರಿಸುವ – ಕರಂಡ, ಭರಣಿ; ಅಭ್ಯಂತರ: ಅಂತರಾಳ, ಒಳಗೆ; ಕಳುಹು: ಬೀಳ್ಕೊಡು; ಕಾಣಿಸು: ತೋರಿಸು;

ಪದವಿಂಗಡಣೆ:
ತರಿಸಿದನು+ ಮಡಿವರ್ಗದ್+ಅಮಲ
ಅಂಬರವನ್ + ಅಂಬುಜಮುಖಿಗೆ+ ರತ್ನಾ
ಭರಣವನು+ ವಿವಿಧ+ಅನುಲೇಪನ +ಚಿತ್ರ +ಸಂಪುಟದ
ಅರಸನಿತ್ತನು +ವೀಳೆಯವ +ಕ
ರ್ಪುರದ +ತವಲಾಯಿಗಳನ್+ಅಭ್ಯಂ
ತರಕ್+ಇವರ+ ಕಳುಹಿದನು+ ಗಾಂಧರಿಯನು +ಕಾಣಿಸಿದ

ಅಚ್ಚರಿ:
(೧) ಮಡಿವರ್ಗದಮಲಾಂಬರವನಂಬುಜಮುಖಿಗೆ – ಒಂದೇ ಪದವಾಗಿ ರಚಿಸಿರುವುದು