ಪದ್ಯ ೬೨: ಧೃತರಾಷ್ಟ್ರನು ಧರ್ಮಜನಿಗೆ ಏನು ಹೇಳಿದನು?

ಪಾಲಿಸವನಿಯನೆನ್ನ ಮಕ್ಕಳ
ಖೂಳತನವನು ಮನಕೆ ತಾರದಿ
ರಾಲಿಸದಿರಪರಾಧಿ ವಾಚಾಳರ ವಚೋತ್ತರವ
ಕಾಲದೇಶಾಗಮನದ ನಿಗಮದ
ಡಾಳವರಿದೈಹಿಕ ಪರತ್ರ ವಿ
ಟಾಳಿಸದೆ ನಡೆಕಂದಯೆಂದನು ಮರಳಿ ತೆಗೆದಪ್ಪಿ (ಸಭಾ ಪರ್ವ, ೧೬ ಸಂಧಿ, ೬೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ನನ್ನ ಮಕ್ಕಳ ನೀಚತನವನ್ನು ಮರೆತು ಭೂಮಿಯನ್ನು ಪಾಲಿಸು. ಅಪರಾಧಿಗಳು ಬಾಯಿಬಡಿಕರೂ ಆದವರ ಮಾತನ್ನು ಕೇಳಬೇಡ. ಕಾಲ, ದೇಶ, ಆಗಮ, ವೇದಗಳ ರೀತಿ ಕ್ರಮಗಳಿಗನುಸಾರವಾಗಿ, ಈ ಲೋಕ ಪರಲೋಕಗಳ ಸೌಖ್ಯಕ್ಕೆ ತೊಂದರೆಯಾಗದಂತೆ ನಡೆ, ಎಂದು ಹೇಳಿ ಧರ್ಮಜನನ್ನು ಮತ್ತೆ ಆಲಿಂಗಿಸಿಕೊಂಡನು.

ಅರ್ಥ:
ಪಾಲಿಸು: ರಕ್ಷಿಸು, ಕಾಪಾಡು; ಅವನಿ: ಭೂಮಿ; ಮಕ್ಕಳು: ಸುತರು; ಖೂಳ: ದುಷ್ಟ, ದುರುಳ; ಮನ: ಮನಸ್ಸು; ತರು: ತೆಗೆದುಕೊಂಡು ಬರು; ಆಲಿಸು: ಮನಸ್ಸಿಟ್ಟು ಕೇಳು; ಅಪರಾಧ: ತಪ್ಪು; ವಾಚಾಳ: ಅತಿ ಮಾತಾಡುವವ; ವಚೋತ್ತರ: ಶ್ರೇಷ್ಠವಾದ ಮಾತು; ಕಾಲ: ಸಮಯ; ದೇಶ: ರಾಷ್ಟ್ರ; ಆಗಮ: ಸೇರುವುದು, ಬರುವುದು; ನಿಗಮ: ವೇದ, ಶ್ರುತಿ; ಡಾಳ: ಹೊಳಪು, ಪ್ರಭೆ; ದೈಹಿಕ: ಶರೀರಕ್ಕೆ ಸಂಬಂಧಿಸಿದ; ಪರತ್ರ: ಮುಕ್ತಿ; ವಿಟಾಳಿಸು: ಹರಡು; ನಡೆ: ಮುಂದೆಹೋಗು; ಕಂದ: ಮಗು; ಮರಳಿ: ಪುನಃ; ಅಪ್ಪು: ತಬ್ಬಿಕೋ;

ಪದವಿಂಗಡಣೆ:
ಪಾಲಿಸ್+ಅವನಿಯನ್+ಎನ್ನ +ಮಕ್ಕಳ
ಖೂಳತನವನು +ಮನಕೆ +ತಾರದಿರ್
ಆಲಿಸದಿರ್+ಅಪರಾಧಿ +ವಾಚಾಳರ +ವಚೋತ್ತರವ
ಕಾಲ+ದೇಶ+ಆಗಮನದ+ ನಿಗಮದ
ಡಾಳವರಿ+ದೈಹಿಕ+ ಪರತ್ರ+ ವಿ
ಟಾಳಿಸದೆ +ನಡೆ+ಕಂದಯೆಂದನು+ ಮರಳಿ+ ತೆಗೆದಪ್ಪಿ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಆಲಿಸದಿರಪರಾಧಿ ವಾಚಾಳರ ವಚೋತ್ತರವ

ಪದ್ಯ ೬೧: ಧೃತರಾಷ್ಟ್ರನು ಧರ್ಮರಾಯನಿಗೆ ಏನು ಕೇಳಿದ?

ರೂಢಿಗಗ್ಗದ ರಾಜಸೂಯದ
ಲೂಡಿ ನಿರ್ಜರಕಟಕವನು ಖಯ
ಖೋಡಿಯಿಲ್ಲದೆ ನಿಲಿಸಿದೈ ತ್ರಿದಿವದಲಿ ಪಾಂಡುವನು
ಮಾಡುವೆಯಲಾ ಮಗನೆಯೆನ್ನೀ
ಗೂಡ ಬಸುಟರೆ ಸುರರ ಸಂಗಡ
ವಾಡುವಂತಿರೆ ತನಗೆ ಗತಿ ನೀನಲ್ಲದಾರೆಂದ (ಸಭಾ ಪರ್ವ, ೧೬ ಸಂಧಿ, ೬೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರ ನೀನು ದುಸ್ಸಾಧ್ಯವಾದ ಅತಿಶ್ರೇಷ್ಠವಾದ ರಾಜಸೂಯಯಾಗವನ್ನು ಮಾಡಿ ಪಾಂಡು ಮಹಾರಾಜನನ್ನು ಸ್ವರ್ಗದಲ್ಲಿ ತಂದ್ ನಿಲ್ಲಿಸಿದೆ. ನಾನು ಈ ದೇಹವನ್ನು ಬಿಟ್ಟಮೇಲೆ ಸ್ವರ್ಗಕ್ಕೆ ಹೋಗುವಂತೆ ಮಾಡುವೆಯಲ್ಲವೇ? ನನಗೆ ನಿನ್ನನ್ನು ಬಿಟ್ಟರೆ ಇನ್ನಾರು ಗತಿ ಎಂದು ಧೃತರಾಷ್ಟ್ರನು ಧರ್ಮಜನಿಗೆ ಹೇಳಿದನು.

ಅರ್ಥ:
ರೂಢಿ: ವಾಡಿಕೆ, ಬಳಕೆ; ನಿರ್ಜರ: ದೇವತೆ; ಕಟಕ: ಗುಂಪು; ಖಯ: ಜಂಬ, ಸೊಕ್ಕು; ಖೋಡಿ: ದುರುಳತನ, ನೀಚತನ; ನಿಲಿಸು: ತಡೆ; ತ್ರಿದಿವ: ಸ್ವರ್ಗ; ಮಗ: ಸುತ; ಗೂಡ: ಆಲಯ, ದೇಹ; ಬಿಸುಟು: ಹೊರಹಾಕು; ಸುರ: ದೇವ; ಸಂಗಡ: ಜೊತೆ; ಗತಿ: ಗಮನ, ಸಂಚಾರ;

ಪದವಿಂಗಡಣೆ:
ರೂಢಿಗ್+ಅಗ್ಗದ +ರಾಜಸೂಯದಲ್
ಊಡಿ +ನಿರ್ಜರಕ್+ಅಕಟಕವನು+ ಖಯ
ಖೋಡಿಯಿಲ್ಲದೆ+ ನಿಲಿಸಿದೈ+ ತ್ರಿದಿವದಲಿ+ ಪಾಂಡುವನು
ಮಾಡುವೆಯಲಾ +ಮಗನೆಯೆನ್+ಈ+
ಗೂಡ +ಬಿಸುಟರೆ+ ಸುರರ+ ಸಂಗಡ
ವಾಡುವಂತಿರೆ+ ತನಗೆ +ಗತಿ +ನೀನಲ್ಲದಾರೆಂದ

ಅಚ್ಚರಿ:
(೧) ನಿರ್ಜರ, ಸುರ – ಸಮನಾರ್ಥಕ ಪದ

ಪದ್ಯ ೬೦: ಧೃತರಾಷ್ಟ್ರನು ಧರ್ಮರಾಯನಲ್ಲೆ ಏನು ಬೇಡಿದನು?

ಎನ್ನನೀಕ್ಷಿಸಿ ಮಗನೆ ಮರೆ ನಿನ
ಗನ್ಯಳೇ ಗಾಂಧಾರಿ ಪಿತನೆಂ
ದೆನ್ನ ಕಾಬಿರಿ ವೃದ್ಧನೆಂದು ಗತಾಕ್ಷ ತಾನೆಂದು
ಮನ್ನಿಸುವಿರೆಲೆ ಮಕ್ಕಳಿರ ಸಂ
ಪನ್ನ ಸತ್ಯರು ನೀವು ಕರ್ಮಿಗ
ಳೆನ್ನವರು ದೋಶಾಭಿಸಂಧಿಯ ಮರೆದು ಕಳೆಯೆಂದ (ಸಭಾ ಪರ್ವ, ೧೬ ಸಂಧಿ, ೬೦ ಪದ್ಯ)

ತಾತ್ಪರ್ಯ:
ನನ್ನನ್ನು ನೋಡು ಮಗು ಧರ್ಮರಾಯ, ನನ್ನನ್ನು ನೋಡಿ ನಡೆದುದೆಲ್ಲವನ್ನು ಮರೆತುಬಿಡು, ಗಾಂಧಾರಿ ನಿನಗೆ ಬೇರೆಯವಳೆ, ನಾನು ವೃದ್ಧನೂ, ಕುರುಡನೂ ಆಗಿದ್ದರು ನನ್ನನ್ನು ತಂದೆಯಸಮಾನನಾಗಿ ನೀವು ಕಾಣುವಿರಿ, ನೀವು ಸತ್ಯವಂತರು, ನನ್ನ ಮಕ್ಕಳು ದುಷ್ಕರ್ಮಿಗಳು ಅವರ ದೋಷವನ್ನು ನೀವು ಮರೆತುಬಿಡಿ ಎಂದು ಬೇಡಿಕೊಂಡನು.

ಅರ್ಥ:
ಈಕ್ಷಿಸು: ನೋಡು; ಮಗ: ಪುತ್ರ; ಮರೆ: ನೆನಪಿನಿಂದ ದೂರ ತಳ್ಳು; ಅನ್ಯ: ಬೇರೆ; ಪಿತ: ತಂದೆ; ಕಾಬ: ನೋಡುವ; ವೃದ್ಧ: ವಯಸ್ಸಾದ; ಗತ: ಕಳೆದ; ಅಕ್ಷ: ಕಣ್ಣು; ಮನ್ನಿಸು: ಒಪ್ಪು, ಅಂಗೀಕರಿಸು, ದಯಪಾಲಿಸು; ಮಕ್ಕಳು: ಪುತ್ರ; ಸಂಪನ್ನ: ಶ್ರೇಷ್ಠವಾದ; ಸತ್ಯ: ದಿಟ; ಕರ್ಮಿ: ದುಷ್ಕರ್ಮಿ, ಪಾಪಿಷ್ಠ; ದೋಷ: ತಪ್ಪು; ಕಳೆ: ತೊರೆ;

ಪದವಿಂಗಡಣೆ:
ಎನ್ನನೀಕ್ಷಿಸಿ+ ಮಗನೆ+ ಮರೆ +ನಿನ
ಗನ್ಯಳೇ +ಗಾಂಧಾರಿ +ಪಿತನೆಂದ್
ಎನ್ನ +ಕಾಬಿರಿ+ ವೃದ್ಧನೆಂದು +ಗತಾಕ್ಷ +ತಾನೆಂದು
ಮನ್ನಿಸುವಿರ್+ಎಲೆ+ ಮಕ್ಕಳಿರ+ ಸಂ
ಪನ್ನ +ಸತ್ಯರು +ನೀವು +ಕರ್ಮಿಗಳ್
ಎನ್ನವರು +ದೋಷಾಭಿಸಂಧಿಯ +ಮರೆದು +ಕಳೆಯೆಂದ

ಅಚ್ಚರಿ:
(೧) ಧೃತರಾಷ್ಟ್ರನ ಕೋರಿಕೆ – ಎನ್ನನೀಕ್ಷಿಸಿ ಮಗನೆ ಮರೆ; ಕರ್ಮಿಗಳೆನ್ನವರು ದೋಶಾಭಿಸಂಧಿಯ ಮರೆದು ಕಳೆಯೆಂದ
(೨) ಪಾಂಡವರನ್ನು ಹೊಗಳುವ ಪರಿ – ಸಂಪನ್ನ ಸತ್ಯರು ನೀವು
(೩) ಕುರುಡನೆಂದು ಹೇಳಲು – ಗತಾಕ್ಷ ಪದದ ಬಳಕೆ

ಪದ್ಯ ೫೯: ಧೃತರಾಷ್ಟ್ರನು ಧರ್ಮಜನನ್ನು ಏಕೆ ಅಪ್ಪಿಕೊಂಡನು?

ಮಕ್ಕಳೆನಗಲ್ಲವರು ನೀವೇ
ಮಕ್ಕಳೈವರು ಮಗನೆ ನಮ್ಮದು
ಮಕ್ಕಳಾಟಿಕೆಯಾಯ್ತಲಾ ಸೌಬಲನ ದೆಸೆಯಿಂದ
ಮಿಕ್ಕು ನೀ ಸೈರಿಸುವುದೆಮ್ಮದು
ಬಕ್ಕುಡಿಯ ಬೇಳಂಬ ನಿಮ್ಮಲಿ
ಕಕ್ಕುಲಿತೆಯಿಲ್ಲೆಂದು ತೆಗೆದಪ್ಪಿದನು ಧರ್ಮಜನ (ಸಭಾ ಪರ್ವ, ೧೬ ಸಂಧಿ, ೫೯ ಪದ್ಯ)

ತಾತ್ಪರ್ಯ:
ಧರ್ಮಜನ ಮಾತನ್ನು ಕೇಳಿ ಧೃತರಾಷ್ಟ್ರನು, ಹೇ ಧರ್ಮಜ ಕೌರವರು ನನಗೆ ಮಕ್ಕಳಲ್ಲ. ನೀವು ಐದುಜನರೇ ನನಗೆ ನಿಜವಾದ ಮಕ್ಕಳು. ಶಕುನಿಯ ದೆಸೆಯಿಂದ ಈ ಹುಡುಗಾಟವಾಗಿಬಿಟ್ಟಿತು, ನೀನು ಬಹು ಹೆಚ್ಚಿನ ಸಹನೆಯನ್ನು ತೆಗೆದುಕೊಳ್ಳಬೇಕಾಯಿತು, ನಮ್ಮದು ಬಾಳಲ್ಲ, ಬಾಳಿನ ಅಣಕ, ನಿಮ್ಮಲ್ಲಿ ನಾನು ಪ್ರೀತಿಯನ್ನು ತೋರಿಸಲಿಲ್ಲ ಎಂದು ಹೇಳುತ್ತಾ ಧೃತರಾಷ್ಟ್ರನು ಧರ್ಮರಾಯನನ್ನು ಬಿಗಿದಪ್ಪಿಕೊಂಡನು.

ಅರ್ಥ:
ಮಕ್ಕಳು: ಸುತರು; ಮಗ: ಸುತ; ಆಟಿಕೆ: ಆಟವಾಡುವ ಸಾಧನ; ದೆಸೆ: ಕಾರಣ; ಮಿಕ್ಕು: ಉಳಿದ; ಸೈರಿಸು: ಸಹಿಸು; ಬಕ್ಕುಡಿಯ: ವಿಸ್ಮಯಕಾರಕ, ವಿವಾದಾತ್ಮಕ; ಬೇಳು: ದಡ್ಡತನ; ಕಕ್ಕುಲಿತೆ: ಚಿಂತೆ, ಸಂಶಯ; ಅಪ್ಪು: ತಬ್ಬಿಕೊ;

ಪದವಿಂಗಡಣೆ:
ಮಕ್ಕಳ್+ಎನಗಲ್+ಅವರು+ ನೀವೇ
ಮಕ್ಕಳ್+ಐವರು+ ಮಗನೆ+ ನಮ್ಮದು
ಮಕ್ಕಳಾಟಿಕೆಯಾಯ್ತಲಾ +ಸೌಬಲನ +ದೆಸೆಯಿಂದ
ಮಿಕ್ಕು+ ನೀ+ ಸೈರಿಸುವುದ್+ಎಮ್ಮದು
ಬಕ್ಕುಡಿಯ +ಬೇಳಂಬ +ನಿಮ್ಮಲಿ
ಕಕ್ಕುಲಿತೆಯಿಲ್ಲೆಂದು +ತೆಗೆದಪ್ಪಿದನು+ ಧರ್ಮಜನ

ಅಚ್ಚರಿ:
(೧) ಧೃತರಾಷ್ಟ್ರನು ತನ್ನ ಬಾಳನ್ನು ವಿವರಿಸುವ ಪರಿ – ಎಮ್ಮದು ಬಕ್ಕುಡಿಯ ಬೇಳಂಬ
(೨) ೧-೩ ಸಾಲಿನ ಮೊದಲ ಪದ – ಮಕ್ಕಳ ಪದದಿಂದ ಪ್ರಾರಂಭ

ಪದ್ಯ ೫೮: ಯುಧಿಷ್ಠಿರನು ಧೃತರಾಷ್ಟ್ರನನ್ನು ಹೇಗೆ ಸಂಭೋದಿಸಿದನು?

ಬಾ ವೃಕೋದರ ನಕುಲ ಬಾ ಸಹ
ದೇವ ಬಾರೈ ತಮ್ಮ ಫಲುಗುಣ
ದೇವಿಯರು ನೀವ್ಬನ್ನಿಯೆನಲವನೀಶನೈತಂದು
ಆವುದೈ ಕರ್ತವ್ಯ ನೀವೇ
ದೈವ ಗುರು ಪಿತರೆಂದು ಮಿಗೆ ಸಂ
ಭಾವನೋಕ್ತಿಯನಾಡಿದನು ಧೃತರಾಷ್ಟ್ರಭೂಪತಿಗೆ (ಸಭಾ ಪರ್ವ, ೧೬ ಸಂಧಿ, ೫೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಭೀಮನಿಗೆ ಹೇಳಿದ ಹಿತವಚನವನ್ನು ಕೇಳಿ, ಧೃತರಾಷ್ಟ್ರನು ಭೀಮ, ನಕುಲ, ಸಹದೇವ, ಅರ್ಜುನ, ದ್ರೌಪದಿಯರನ್ನು ತನ್ನ ಬಳಿ ಕರೆಯಲು, ಧರ್ಮರಾಯನು ಅವರೊಡನೆ ಮುನ್ನಡೆದು, ದೊಡ್ಡಪ್ಪ ಈಗ ನಮ್ಮ ಕರ್ತವ್ಯವೇನೆಂದು ತಿಳಿಸಿರಿ, ನೀವೇ ನಮಗೆ ದೈವ, ಗುರು, ತಂದೆಯಾಗಿರುವಿರಿ ಎಂದು ಮನ್ನಣೆಯ ನುಡಿಗಳಿಂದ ಸಂಭೋದಿಸಿದನು.

ಅರ್ಥ:
ವೃಕ: ತೋಳ; ಉದರ: ಹೊಟ್ಟೆ; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ದೇವಿ: ಹೆಣ್ಣು, ಸ್ತ್ರೀ; ಅವನೀಶ: ರಾಜ; ಐತಂದು: ಬಂದು; ಕರ್ತವ್ಯ: ಕಾರ್ಯ, ಕೆಲಸ; ದೈವ: ಭಗವಂತ; ಗುರು: ಆಚಾರ್ಯ; ಪಿತ: ತಂದೆ; ಮಿಗೆ: ಮತ್ತು ಸಂಭಾವನೆ: ಮನ್ನಣೆ; ಉಕ್ತಿ: ಮಾತು, ನುಡಿ; ಭೂಪತಿ: ರಾಜ;

ಪದವಿಂಗಡಣೆ:
ಬಾ+ ವೃಕೋದರ+ ನಕುಲ+ ಬಾ +ಸಹ
ದೇವ +ಬಾರೈ +ತಮ್ಮ +ಫಲುಗುಣ
ದೇವಿಯರು +ನೀವ್+ಬನ್ನಿ+ಎನಲ್+ಅವನೀಶನ್+ಐತಂದು
ಆವುದೈ +ಕರ್ತವ್ಯ +ನೀವೇ
ದೈವ +ಗುರು +ಪಿತರೆಂದು +ಮಿಗೆ +ಸಂ
ಭಾವನ+ಉಕ್ತಿಯನಾಡಿದನು+ ಧೃತರಾಷ್ಟ್ರ+ಭೂಪತಿಗೆ

ಅಚ್ಚರಿ:
(೧) ಭೂಪತಿ, ಅವನೀಶ – ಸಮನಾರ್ಥಕ ಪದ
(೨) ಧೃತರಾಷ್ಟ್ರನನ್ನು ಕರೆದ ಬಗೆ – ದೈವ, ಗುರು, ಪಿತ

ಪದ್ಯ ೫೭: ಯುಧಿಷ್ಠಿರನು ಭೀಮನಿಗೆ ಏನು ಹೇಳಿದ?

ಹಗೆಗಳೇ ಕೌರವರು ತೆಗೆ ಬಲು
ವಗೆ ಕಣಾ ಕಾಮಾದಿ ರಿಪುಗಳು
ಸೆಗಳಿಕೆಯ ಸಸಿಯಾಗವೇ ನಿಜ ಸತ್ಯಭಾಷೆಗಳು
ಉಗುಳುಗುಳು ರೋಷವನು ರಾಧೆಯ
ಮಗ ವಿಕಾರಿ ಕಣಾ ವೃಕೋದರ
ಬೆಗಡುಗೊಳಿಸದಿರೆಮ್ಮನೆಂದನು ಧರ್ಮನಂದನನು (ಸಭಾ ಪರ್ವ, ೧೬ ಸಂಧಿ, ೫೭ ಪದ್ಯ)

ತಾತ್ಪರ್ಯ:
ಭೀಮನ ಕೋಪವನ್ನು ನೋಡಿದ ಯುಧಿಷ್ಠಿರನು, ಭೀಮ ಕೌರವರು ನಮ್ಮ ವೈರಿಗಳೇ? ಬಿಡು, ನಮ್ಮ ನಿಜವಾದ ವೈರಿಗಳು ನಮ್ಮಲ್ಲಿರುವ ಕಾಮಾದಿ ಅರಿಷಡ್ವರ್ಗಗಳು, ನೀನು ಕೋಪದ ಎಲ್ಲೆಯನ್ನು ಮೀರಿದರೆ, ಕಾವಿನಲ್ಲಿ ಬಾಡಿದ ಸಸಿಯಂತೆ ನಮ್ಮ ಸತ್ಯವಚನಗಳು ನಾಶವಾಗುತ್ತವೆ. ಕೋಪವನ್ನು ಬಿಡು, ಕರ್ಣನು ದುಷ್ಟ, ಜುಗುಪ್ಸೆ ತರಿಸುವ ನಡತೆಯುಳ್ಳವನು, ನಮ್ಮನ್ನು ನಿನ್ನ ಕೋಪಾವೇಶದಿಂದ ಭಯಗೊಳಿಸಬೇಡ ಎಂದು ಧರ್ಮರಾಯನು ಹೇಳಿದನು.

ಅರ್ಥ:
ಹಗೆ: ವೈರಿ; ತೆಗೆ: ಬಿಡು; ಬಲು: ತುಂಬ; ಕಣಾ: ನೋಡು; ಕಾಮಾದಿ: ಕಾಮ ಮುಂತಾದ ಅರಿಷಡ್ವರ್ಗ; ರಿಪು: ವೈರಿ; ಸೆಗಳಿಕೆ: ಕಾವು, ಬಿಸಿ; ಸಸಿ: ಎಳೆಯ ಗಿಡ, ಸಸ್ಯ; ನಿಜ: ದಿಟ; ಸತ್ಯ: ದಿಟ; ಬಾಷೆ: ನುಡಿ; ಉಗುಳು: ಹೊರಹಾಕು; ರೋಷ: ಕೋಪ; ರಾಧೆಯ ಮಗ: ಕರ್ಣ; ಮಗ: ಸುತ; ವಿಕಾರಿ: ದುಷ್ಟ; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಬೆಗಡು: ಆಶ್ಚರ್ಯ, ಬೆರಗು; ನಂದನ: ಮಗ;

ಪದವಿಂಗಡಣೆ:
ಹಗೆಗಳೇ+ ಕೌರವರು +ತೆಗೆ +ಬಲು
ವಗೆ +ಕಣಾ +ಕಾಮಾದಿ +ರಿಪುಗಳು
ಸೆಗಳಿಕೆಯ +ಸಸಿಯಾಗವೇ +ನಿಜ+ ಸತ್ಯ+ಭಾಷೆಗಳು
ಉಗುಳುಗುಳು +ರೋಷವನು +ರಾಧೆಯ
ಮಗ +ವಿಕಾರಿ +ಕಣಾ +ವೃಕೋದರ
ಬೆಗಡುಗೊಳಿಸದಿರ್+ಎಮ್ಮನೆಂದನು+ ಧರ್ಮನಂದನನು

ಅಚ್ಚರಿ:
(೧) ನಿಜವಾದ ವೈರಿಗಳು – ಬಲುವಗೆ ಕಣಾ ಕಾಮಾದಿ ರಿಪುಗಳು
(೨) ಉಪಮಾನದ ಬಳಕೆ – ಸೆಗಳಿಕೆಯ ಸಸಿಯಾಗವೇ ನಿಜ ಸತ್ಯಭಾಷೆಗಳು
(೩) ಕೋಪವನ್ನು ಬಿಡು ಎಂದು ಹೇಳಲು – ಉಗುಳುಗುಳು ರೋಷವನು
(೪) ಹಗೆ, ರಿಪು – ಸಮನಾರ್ಥಕ ಪದ

ಪದ್ಯ ೫೬: ಭೀಮನು ಕರ್ಣನ ಮಾತಿಗೆ ಹೇಗೆ ಕೋಪಗೊಂಡನು?

ಘುಡು ಘುಡಿಸಿದನು ರೋಷವಹ್ನಿಯ
ತಡಿಯ ಹೊಕ್ಕನು ಬಿಗಿದ ಹುಬ್ಬಿನ
ಬಿಡೆಯ ಬವರಿಯ ಲಳಿಯ ಲವಣಿಯ ಲೋಚನದ್ವಯದ
ಕಡುಮುಳಿಸಿನುಬ್ಬಟೆಯ ಮಾರುತಿ
ಕಡುಹಿನಲಿ ಭುಗು ಭುಗಿಪ ಭಾರಿಯ
ಕಿಡಿಗೆದರಿ ನೋಡಿದನು ಬಾಗಿಲ ಲಾಳವಿಂಡಿಗೆಯ (ಸಭಾ ಪರ್ವ, ೧೬ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿ ಭೀಮನು ಘುಡುಘುಡಿಸಿದನು. ಕೋಪದ ದಡವನ್ನು ಸೇರಿ, ರೋಷದ ತಾಪವು ಮೇಲೇರಿ ತನ್ನ ಹುಬ್ಬುಗಳನ್ನು ಗಂಟಿಟ್ಟುಕೊಂಡನು. ಸುತ್ತಲೂ ತಿರುಗಿ, ಆವೇಗದಿಂದ ತಿರುಗುವ ಕಣ್ಣುಗಳಲ್ಲಿ ಅತಿಶಯವಾದ ಕೋಪವನ್ನು ತೋರುತ್ತಾ, ಉಗ್ರವಾಗಿ ಉರಿಯುವ ಕಣ್ಣುಗಳಿಂದ ಕಿಡಿಸೂಸುತ್ತಾ ಬಾಗಿಲಿನ್ನು ಭದ್ರಪಡಿಸುವ ಲಾಳವಿಂಡಿಗೆಯನ್ನು ನೋಡಿದನು.

ಅರ್ಥ:
ಘುಡು: ಶಬ್ದವನ್ನು ವಿವರಿಸುವ ಪದ; ರೋಷ: ಕೋಪ; ವಹ್ನಿ: ಅಗ್ನಿ; ತಡಿ: ದಡ, ತಟ; ಹೊಕ್ಕು: ಸೇರು; ಬಿಗಿ: ಕಟ್ಟು, ಬಂಧನ; ಹುಬ್ಬು: ಕಣ್ಣಿನ ಮೇಲಿನ ರೋಮಾವಳಿ; ಬವರಿ: ತಿರುಗುವುದು; ಲಳಿ: ರಭಸ, ಆವೇಶ; ಲವಣಿ: ಕಾಂತಿ; ಲೋಚನ: ಕಣ್ಣು; ದ್ವಯ: ಎರಡು; ಕಡು: ಬಹಳ; ಮುಳಿ: ಸಿಟ್ಟು, ಕೋಪ; ಉಬ್ಬಟೆ: ಅತಿಶಯ; ಮಾರುತಿ: ಭೀಮ; ಕಡುಹು:ಸಾಹಸ, ಹುರುಪು; ಭುಗು: ಬೆಂಕಿ, ತಾಪವನ್ನು ಸೂಚಿಸುವ ಪದ; ಭಾರಿ: ತುಂಬ; ಕಿಡಿ: ಬೆಂಕಿಯ ಕಿಡಿ; ನೋಡು: ವೀಕ್ಷಿಸು; ಕೆದರು: ಹರಡು; ಬಾಗಿಲ: ಕದ; ಲಾಳವಿಂಡಿಗೆ: ಬಾಗಿಲನ್ನು ಮುಚ್ಚಿ ಭದ್ರ ಪಡಿಸುವ ಸಾಧನ, ಅಗುಳಿ;

ಪದವಿಂಗಡಣೆ:
ಘುಡು +ಘುಡಿಸಿದನು +ರೋಷ+ವಹ್ನಿಯ
ತಡಿಯ +ಹೊಕ್ಕನು +ಬಿಗಿದ +ಹುಬ್ಬಿನ
ಬಿಡೆಯ +ಬವರಿಯ+ ಲಳಿಯ+ ಲವಣಿಯ +ಲೋಚನದ್ವಯದ
ಕಡುಮುಳಿಸಿನ್+ಉಬ್ಬಟೆಯ +ಮಾರುತಿ
ಕಡುಹಿನಲಿ +ಭುಗು +ಭುಗಿಪ+ ಭಾರಿಯ
ಕಿಡಿಗೆದರಿ +ನೋಡಿದನು +ಬಾಗಿಲ +ಲಾಳವಿಂಡಿಗೆಯ

ಅಚ್ಚರಿ:
(೧) ಘುಡು ಘುಡಿಸು, ಭುಗ ಭುಗಿಪ – ಪದಗಳ ಬಳಕೆ
(೨) ಬ ಕಾರದ ಪದ – ಬಿಗಿದ ಹುಬ್ಬಿನ ಬಿಡೆಯ ಬವರಿಯ
(೩) ಲ ಕಾರದ ತ್ರಿವಳಿ ಪದ – ಲಳಿಯ ಲವಣಿಯ ಲೋಚನದ್ವಯದ
(೪) ಭೀಮನ ಕೋಪದ ಚಿತ್ರಣವನ್ನು ತಿಳಿಸುವ ಪದ್ಯ