ಪದ್ಯ ೫೫: ದ್ರೌಪದಿಯನ್ನು ಕರ್ಣನು ಹೇಗೆ ಪ್ರಶಂಶಿಸಿದ?

ಹೊಕ್ಕಗೂಡಿನ ಹುಲಿಗಳನು ಹೊರ
ಗಿಕ್ಕಿದೆಯಲಾ ಇರುಬಿನಲಿ ಬಿ
ದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲಾ
ಸೊಕ್ಕಿದುರು ಮೀನುಗಳ ಗಂಟಲೊ
ಳಿಕ್ಕಿದವಲಾ ಗಾಣ ಗಂಟಲ
ಸಿಕ್ಕ ಬಿಡಿಸಿದೆ ಗರುವೆ ನೀನೆಂದುಲಿದನಾ ಕರ್ಣ (ಸಭಾ ಪರ್ವ, ೧೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಪಂಜರದಲ್ಲಿ ಸೇರಿದ ಹುಲಿಗಳನ್ನು ನೀನು ಬಿಡಿಸಿ ಹೊರಕ್ಕೆ ತಂದೆಯಲ್ಲವೇ! ತಗ್ಗಿನಲ್ಲಿ ಬಿದ್ದು ಸಿಕ್ಕಿಹಾಕಿಕೊಂಡಿದ್ದ ಬಲಿಷ್ಠರಾದವರನ್ನು (ಸಲಗ) ನೋವಾಗದಂತೆ ಹೊರಕ್ಕೆ ತ್ಗೆದೆಯಲ್ಲವೇ! ಗಂಟಲಿಗೆ ಗಾಣ ಸಿಕ್ಕಿ ಹಾಕಿಕೊಂಡಿದ್ದ ಸೊಕ್ಕಿದ ಮೀನುಗಳನ್ನು ಪಾರುಮಾಡಿದೆ, ನೀನು ನಿಜಕ್ಕೂ ಸ್ವಾಭಿಮಾನಿ, ಶ್ರೇಷ್ಠಳು ಎಂದು ಕರ್ಣನು ದ್ರೌಪದಿಯನ್ನು ಹೊಗಳಿದನು.

ಅರ್ಥ:
ಹೊಕ್ಕು: ಒಳಸೇರು; ಗೂಡು: ಆಲಯ, ಮನೆ; ಹುಲಿ: ವ್ಯಾಘ್ರ; ಹೊರಗಿಕ್ಕು: ಆಚೆಹಾಕು; ಇರುಬು: ತೊಡಕು; ಬಿದ್ದ: ಕೆಳಕ್ಕೆ ಬೀಳು; ಎಕ್ಕಲ: ಕಾಡುಹಂದಿ, ಬಲಿಷ್ಠ; ನೋವು: ಪೆಟ್ಟು; ಕೆಲ: ಹೊರಭಾಗ; ತೆಗೆ: ಹೊರತರು; ಸೊಕ್ಕು: ಗರ್ವ, ಅಹಂಕಾರ; ಉರು: ಅತಿದೊಡ್ಡ, ಶ್ರೇಷ್ಠ; ಮೀನು: ಮತ್ಸ್ಯ; ಗಂಟಲು: ಕಂಠ; ಗಾಣ: ಗಾಳ, ಬಲೆಯ ಕೊಕ್ಕು; ಬಿಡಿಸು: ಕಳಚು, ಸಡಿಲಿಸು; ಗರುವ: ಹಿರಿಯ, ಶ್ರೇಷ್ಠ; ಉಲಿ: ಹೇಳು;

ಪದವಿಂಗಡಣೆ:
ಹೊಕ್ಕ+ಗೂಡಿನ +ಹುಲಿಗಳನು +ಹೊರ
ಗಿಕ್ಕಿದೆಯಲಾ +ಇರುಬಿನಲಿ +ಬಿದ್ದ್
ಎಕ್ಕಲಂಗಳ+ ನೋಯಲೀಯದೆ +ಕೆಲಕೆ +ತೆಗೆದೆಯಲಾ
ಸೊಕ್ಕಿದ್+ಉರು+ ಮೀನುಗಳ+ ಗಂಟಲೊಳ್
ಇಕ್ಕಿದವಲಾ+ ಗಾಣ+ ಗಂಟಲ
ಸಿಕ್ಕ+ ಬಿಡಿಸಿದೆ+ ಗರುವೆ+ ನೀನೆಂದ್+ಉಲಿದನಾ+ ಕರ್ಣ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊಕ್ಕಗೂಡಿನ ಹುಲಿಗಳನು ಹೊರ
ಗಿಕ್ಕಿದೆಯಲಾ; ಇರುಬಿನಲಿ ಬಿದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲಾ; ಸೊಕ್ಕಿದುರು ಮೀನುಗಳ ಗಂಟಲೊಳಿಕ್ಕಿದವಲಾ ಗಾಣ ಗಂಟಲಸಿಕ್ಕ ಬಿಡಿಸಿದೆ

ಪದ್ಯ ೫೩: ಧೃತರಾಷ್ಟ್ರನು ದ್ರೌಪದಿಗೆ ಏನನ್ನು ಮರೆಯಲು ಹೇಳಿದ?

ಹಾರಲತಿಶಯ ತೃಷ್ಣೆ ನಾಶಕೆ
ಕಾರಣವಲೇ ಮಾವ ವರವಿದು
ಭಾರಿಯಾದರೆ ಬೇಡ ಲಘುವನು ಕರುಣಿಸುವುದೆನಲು
ಭಾರವಾವುದು ಮಗಳೆ ಕೊಟ್ಟೆನು
ಧಾರುಣೀಪತಿ ಬಿಜಯಮಾಡಲಿ
ವೈರಬಂಧದ ಕಂದು ಕಲೆಯನು ಮರೆದು ಕಳೆಯೆಂದ (ಸಭಾ ಪರ್ವ, ೧೬ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅತಿಶಯವಾದ ಬಯಕೆಯೇ ನಾಶಕ್ಕೆ ಕಾರಣ, ನಾನು ಕೇಳಿದ ವರವು ಅತಿಶಯವಾದುದಾದರೆ ಅದೂ ಬೇಡ, ನಿಮಗೆ ತಿಳಿದಷ್ಟು ಅಲ್ಪವಾದುದನ್ನೇ ಕರುಣಿಸಿ ಎಂದು ದ್ರೌಪದಿ ಹೇಳಲು, ಧೃತರಾಷ್ಟ್ರನು, ಮಗಳೇ ನೀನು ಕೇಳಿದುದು ಹೆಚ್ಚೇನೂ ಇಲ್ಲ, ಕೊಟ್ಟಿದ್ದೇನೆ, ಧರ್ಮನಂದನನು ಎಲ್ಲವನ್ನೂ ಪಡೆದು ಇಲ್ಲಿಂದ ಹಿಂದಿರುಗಲಿ. ನಮ್ಮ ಮೇಲಿನ ವೈರದ ಪಾಶವನ್ನು ಕಂದುಕಲೆಯನ್ನು ಮರೆತುಬಿಡಿ ಎಂದು ಹೇಳಿದನು.

ಅರ್ಥ:
ಹಾರು: ಬಯಸು; ಅತಿಶಯ: ಹೆಚ್ಚು; ತೃಷ್ಣೆ: ಆಸೆ; ನಾಶ: ಅಂತ್ಯ; ಕಾರಣ: ನಿಮಿತ್ತ, ಹೇತು; ಮಾವ: ಗಂಡನ ತಂದೆ; ವರ: ಅನುಗ್ರಹ; ಭಾರಿ: ದೊಡ್ಡದು; ಬೇಡ: ತ್ಯಜಿಸು; ಲಘು: ಸುಲಭ; ಕರುಣಿಸು: ಅನುಗ್ರಹಿಸು; ಭಾರ: ದೊಡ್ಡದ್ದು, ಘನ; ಮಗಳೆ: ಸುತೆ; ಕೊಟ್ಟೆ: ನೀಡಿದೆ; ಧಾರುಣೀಪತಿ: ರಾಜ; ಬಿಜಯ: ತೆರಳುವಿಕೆ, ಆಗಮನ; ವೈರ: ಶತ್ರು; ಬಂಧ: ಕಟ್ಟು; ಕಂದು: ಕಳಾಹೀನ; ಕಲೆ: ಗುರುತು; ಮರೆ: ನೆನಪಿನಿಂದ ದೂರ ಮಾಡು; ಕಳೆ: ತ್ಯಜಿಸು

ಪದವಿಂಗಡಣೆ:
ಹಾರಲತಿಶಯ +ತೃಷ್ಣೆ +ನಾಶಕೆ
ಕಾರಣವಲೇ+ ಮಾವ +ವರವಿದು
ಭಾರಿಯಾದರೆ +ಬೇಡ +ಲಘುವನು+ ಕರುಣಿಸುವುದ್+ಎನಲು
ಭಾರವಾವುದು +ಮಗಳೆ +ಕೊಟ್ಟೆನು
ಧಾರುಣೀಪತಿ +ಬಿಜಯಮಾಡಲಿ
ವೈರಬಂಧದ+ ಕಂದು +ಕಲೆಯನು +ಮರೆದು +ಕಳೆ+ಎಂದ

ಅಚ್ಚರಿ:
(೧) ನೀತಿ ವಚನ – ಹಾರಲತಿಶಯ ತೃಷ್ಣೆ ನಾಶಕೆ ಕಾರಣ
(೨) ವೈರತ್ವವನ್ನು ಬಿಡಿ ಎಂದು ಹೇಳುವ ಪರಿ – ವೈರಬಂಧದ ಕಂದು ಕಲೆಯನು ಮರೆದು ಕಳೆಯೆಂದ

ಪದ್ಯ ೫೨: ಧರ್ಮಶಾಸ್ತ್ರದ ಪ್ರಕಾರ ಯಾರು ಎಷ್ಟು ವರ ಕೇಳಬಹುದು?

ವರವೆರಡು ಸಂದವು ಮನೋರಥ
ಭರಿತವಾಗಲಿ ಮತ್ತೆ ಹೇಳೆನೆ
ತರುಣಿಯೆಂದಳು ಧರ್ಮಶಾಸ್ತ್ರ ಪ್ರಕಟ ಪದ್ಧತಿಯ
ವರವು ವೈಶ್ಯರಿಗೊಂದು ನೃಪಸತಿ
ಗೆರಡು ನೃಪರಿಗೆ ಮೂರು ಭೂದೇ
ವರಿಗೆ ನೂರಧಿಕಾರವೆಂದಳು ನಗುತ ಪಾಂಚಾಲಿ (ಸಭಾ ಪರ್ವ, ೧೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದ್ರೌಪದಿ ಬೇಡಿದ ಎರಡು ವರಗಳನ್ನು ದಯಪಾಲಿಸಿದ್ದೇನೆ ನಿನ್ನ ಮನೋರಥವು ಪೂರ್ಣವಾಗಲಿ ಎಂದು ಹೇಳಿದನು. ಮೂರನೆಯ ವರವನ್ನು ಬೇಡು ಎಂದು ಹೇಳಲು, ದ್ರೌಪದಿಯು ನಸುನಗುತ್ತಾ, ರಾಜ ಧರ್ಮಶಾಸ್ತ್ರದ ಪ್ರಕಾರ ವೈಶ್ಯರಿಗೆ ಒಂದು ವರ, ರಾಜನ ಪತ್ನಿಗೆ ಎರಡು, ರಾಜನಿಗೆ ಮೂರು ಹಾಗು ಬ್ರಾಹ್ಮಣರಿಗೆ ನೂರು ವರಗಳನ್ನು ಬೇಡುವ ಅಧಿಕಾರವಿದೆ ಎಂದು ಹೇಳಿದಳು.

ಅರ್ಥ:
ವರ: ಅನುಗ್ರಹ; ಸಂದು: ಸೇರು; ಮನೋರಥ: ಆಸೆ, ಬಯಕೆ; ಭರಿತ: ತುಂಬು; ತರುಣಿ: ಹೆಣ್ಣು; ಧರ್ಮಶಾಸ್ತ್ರ: ಧಾರ್ಮಿಕ ವಿಷಯಗಳ ಬಗೆಗೆ ಬರೆದ ಪ್ರಮಾಣ ಗ್ರಂಥ; ಪ್ರಕಟ: ಪ್ರಕಾರ; ಪದ್ಧತಿ: ರೀತಿ; ವೈಶ್ಯ: ವ್ಯಾಪಾರಿ; ನೃಪ: ರಾಜ; ಸತಿ: ಹೆಂಡತಿ; ನೃಪಸತಿ: ರಾಣಿ; ಭೂದೇವ:ಬ್ರಾಹ್ಮಣ; ಅಧಿಕಾರ: ಹಕ್ಕು, ಯೋಗ್ಯತೆ; ನಗುತ: ಹಸನ್ಮುಖ;

ಪದವಿಂಗಡಣೆ:
ವರವೆರಡು+ ಸಂದವು +ಮನೋರಥ
ಭರಿತವಾಗಲಿ+ ಮತ್ತೆ+ ಹೇಳ್+ಎನೆ
ತರುಣಿ+ಎಂದಳು+ ಧರ್ಮಶಾಸ್ತ್ರ +ಪ್ರಕಟ +ಪದ್ಧತಿಯ
ವರವು+ ವೈಶ್ಯರಿಗೊಂದು +ನೃಪಸತಿ
ಗೆರಡು +ನೃಪರಿಗೆ +ಮೂರು +ಭೂದೇ
ವರಿಗೆ+ ನೂರ್+ಅಧಿಕಾರವ್+ಎಂದಳು +ನಗುತ +ಪಾಂಚಾಲಿ

ಅಚ್ಚರಿ:
(೧) ರಾಣಿಯನ್ನು ನೃಪಸತಿ ಎಂದು ಕರೆದಿರುವುದು
(೨) ಧರ್ಮಶಾಸ್ತ್ರವನ್ನು ದ್ರೌಪದಿ ಅರಿತಿದ್ದಳು ಎನ್ನುವುದಕ್ಕೆ ಈ ಪದ್ಯವು ಸಾಕ್ಷಿ

ಪದ್ಯ ೫೧: ದ್ರೌಪದಿಯು ಮೊದಲನೆಯದಾಗಿ ಯಾವ ವರವನ್ನು ಬೇಡಿದಳು?

ವರವನಿತ್ತಿರೆ ಮಾವ ಭೂಮೀ
ಶ್ವರರ ದಾಸ್ಯವ ಬಿಟ್ಟುಕಳೆಮ
ತ್ತೆರಡನೆಯ ವರವೇನು ವಚನಿಸು ಕೊಟ್ಟೆ ನಾ ನಿನಗೆ
ವರ ವೃಕೋದರ ನಕುಲ ಸಹದೇವ
ರಿಗೆ ಕೊಡಿ ಶಸ್ತ್ರಾಸ್ತ್ರಗಜರಥ
ತುರಗನಿಕರವನೆಂದಡೆಂದನು ಮತ್ತೆ ಧೃತರಾಷ್ಟ್ರ (ಸಭಾ ಪರ್ವ, ೧೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವರವನ್ನು ನೀಡುವೆನೆಂದು ಹೇಳಿದ ಬಳಿಕ ದ್ರೌಪದಿ, ಮಾವ ನೀವು ವರವನ್ನು ನೀಡುವಿರಾ? ಹಾಗಾದರೆ ನನ್ನ ಪತಿಗಳ ದಾಸ್ಯವನ್ನು ಬಿಸಿಸಿರಿ ಎಂದಳು, ಅದಕ್ಕೆ ಧೃತರಾಷ್ಟ್ರನು ಎರಡನೆಯ ವರವನ್ನು ಕೇಳು ಎಂದು ಹೇಳಲು, ದ್ರೌಪದಿಯು ಪಾಂಡವರ ಶಸ್ತ್ರಾಸ್ತ್ರಗಳನ್ನು ಸೈನ್ಯವನ್ನೂ ನೀಡಿ ಎಂದು ಬೇಡಿಕೊಂಡಳು.

ಅರ್ಥ:
ವರ: ಅನುಗ್ರಹ; ಮಾವ: ಗಂಡನ ತಂದೆ; ಭೂಮೀಶ್ವರ: ರಾಜ; ದಾಸ್ಯ: ಸೇವಕ; ಬಿಟ್ಟು: ತ್ಯಜಿಸು, ಬಿಡು; ವಚನಿಸು: ಹೇಳು; ಶಸ್ತ್ರ: ಆಯುಧ; ಗಜ: ಆನೆ; ರಥ: ಬಂಡಿ; ತುರಗ: ಕುದುರೆ; ನಿಕರ: ಗುಂಪು;

ಪದವಿಂಗಡಣೆ:
ವರವನಿತ್ತಿರೆ+ ಮಾವ +ಭೂಮೀ
ಶ್ವರರ +ದಾಸ್ಯವ +ಬಿಟ್ಟುಕಳೆ+ಮ
ತ್ತೆರಡನೆಯ+ ವರವೇನು +ವಚನಿಸು +ಕೊಟ್ಟೆ +ನಾ +ನಿನಗೆ
ವರ+ ವೃಕೋದರ +ನಕುಲ +ಸಹದೇವ
ರಿಗೆ +ಕೊಡಿ +ಶಸ್ತ್ರಾಸ್ತ್ರ+ಗಜ+ರಥ
ತುರಗ+ನಿಕರವನೆಂದಡ್+ಎಂದನು +ಮತ್ತೆ +ಧೃತರಾಷ್ಟ್ರ

ಅಚ್ಚರಿ:
(೧) ವರವೇನು ವಚನಿಸು – ವ ಕಾರದ ಜೋಡಿ ಪದ
(೨) ವರ – ೧, ೪ ಸಾಲಿನ ಮೊದಲ ಪದ

ಪದ್ಯ ೫೦: ಪಾಂಡವರಲ್ಲಿರುವ ಶ್ರೇಷ್ಠವಾದ ಆಯುಧವಾವುದು?

ತಾಯೆ ಬೇಡೌ ವರವ ತಾನ
ನ್ಯಾಯದಲಿ ನಿಮ್ಮನು ನಿರರ್ಥಕ
ನೋಯಿಸಿದೆನದ ನೆನೆಯದಿರಿ ಸರ್ವಾಪರಾಧವನು
ದಾಯಗೆಡೆ ನಿನ್ನವರು ಕೊಲುವರೆ
ಕಾಯಲಾಪವರುಂಟೆ ವರಸ
ತ್ಯಾಯುಧರಲೇ ನೀವೆನುತತಿಳುಹಿದನು ಧೃತರಾಷ್ಟ್ರ (ಸಭಾ ಪರ್ವ, ೧೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದ್ರೌಪದಿಯನ್ನು ಸಂತೈಸುತ್ತಾ, ತಾಯೇ ನಾನು ನಿಮ್ಮನ್ನು ನಿರರ್ಥಕವಾಗಿ ಅನ್ಯಾಯದಿಂದ ನೋಯಿಸಿದೆ, ನನ್ನ ಸರ್ವಾಪರಾಧಗಳನ್ನು ನೆನೆಯಬೇಡಿರಿ, ಒಂದುವೇಳೆ ಲೆಕ್ಕದಪ್ಪಿ ನಿನ್ನ ಪತಿಗಳು ಕೊಲ್ಲಲು ಅಣಿಯಾಗಿದ್ದರೆ, ಕಾಯುವವರೇ ಇರುತ್ತಿರಲಿಲ್ಲ. ನಿಮಗೆ ಸತ್ಯವೇ ಆಯುಧ, ಆದುದರಿಂದ ನೀನು ವರವನ್ನು ಬೇಡು ನಾನು ನೀಡುತ್ತೇನೆ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ತಾಯೆ: ಮಾತೆ; ಬೇಡು: ಕೇಳಿಕೋ; ವರ: ಅನುಗ್ರಹ, ಕೊಡುಗೆ; ಅನ್ಯಾಯ: ಯೋಗ್ಯವಲ್ಲದ; ನಿರರ್ಥಕ: ಅರ್ಥವಿಲ್ಲದೆ; ನೋಯಿಸು: ತೊಂದರೆ ನೀಡು; ನೆನೆ: ಜ್ಞಾಪಿಸು; ಸರ್ವ: ಎಲ್ಲಾ; ಅಪರಾಧ: ತಪ್ಪುಗಳು; ದಾಯ: ಸಮತೋಲನ, ಆಯ; ಕೊಲು: ಕೊಂದುಹಾಕು, ಸಾಯಿಸು; ಕಾಯಲಾಪು: ಕಾಯಲು ಶಕ್ತನಾಗು; ವರ: ಶ್ರೇಷ್ಠ; ಸತ್ಯ: ನಿಜ, ದಿಟ; ಆಯುಧ: ಶಸ್ತ್ರ; ತಿಳುಹು: ಹೇಳು;

ಪದವಿಂಗಡಣೆ:
ತಾಯೆ +ಬೇಡೌ+ ವರವ +ತಾನ್
ಅನ್ಯಾಯದಲಿ +ನಿಮ್ಮನು +ನಿರರ್ಥಕ
ನೋಯಿಸಿದೆನ್+ಅದ+ ನೆನೆಯದಿರಿ +ಸರ್ವ+ಅಪರಾಧವನು
ದಾಯಗೆಡೆ +ನಿನ್ನವರು +ಕೊಲುವರೆ
ಕಾಯಲಾಪವರುಂಟೆ +ವರಸ
ತ್ಯಾಯುಧರಲೇ+ ನೀವೆನುತ +ತಿಳುಹಿದನು +ಧೃತರಾಷ್ಟ್ರ

ಅಚ್ಚರಿ:
(೧) ನ ಕಾರದ ತ್ರಿವಳಿ ಪದಗಳು – ನಿಮ್ಮನು ನಿರರ್ಥಕನೋಯಿಸಿದೆನದ ನೆನೆಯದಿರಿ

ಪದ್ಯ ೪೯: ಧೃತರಾಷ್ಟ್ರನು ದ್ರೌಪದಿಯನ್ನು ಹೇಗೆ ಸಂತೈಸಿದನು?

ದುರುಳರೆನ್ನವದಿರು ದುರಂತಃ
ಕರಣರಾವ್ದುಶ್ಚೇಷ್ಟೆಯೆಮ್ಮದು
ದುರಭಿಮತ ದುಷ್ಪೂರ್ವರೆನ್ನ ಕುಮಾರರಭಿಧಾನ
ಕರುಣಿಗಳು ಕಮನೀಯ ಗುಣಬಂ
ಧುರರು ಶೌರ್ಯಬಲ ಪ್ರಭಾವಓ
ತ್ತರರು ನಿನ್ನವರೆಂದುನಯದಲಿ ತಿಳುಹಿದನು ಸತಿಯ (ಸಭಾ ಪರ್ವ, ೧೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದ್ರೌಪದಿಯನ್ನು ಸಂತೈಸುತ್ತಾ, ಮಗಳೇ, ನನ್ನ ಮಕ್ಕಳು ಕೆಟ್ಟವರು, ನಮ್ಮ ಮನಸ್ಸು ಕೆಟ್ಟದು, ನಮ್ಮದು ಕೆಟ್ಟ ಚೇಷ್ಟೆಗಳಿಂದ ಕೂಡಿದ ಬುದ್ಧಿ, ನಮ್ಮ ಅಭಿಪ್ರಾಯಗಳೂ ಕೆಟ್ಟದ್ದು, ನನ್ನ ಮಕ್ಕಳ ಹೆಸರ ಮುಂದೆ ದುರ್ ಎಂದು ಪ್ರಾರಂಭವಾಗುತ್ತದೆ, ಆದರೆ ನಿನ್ನ ಪತಿಗಳು ಕರುಣಾಶಾಲಿಗಳು, ಉತ್ತಮ ಗುಣಗಳು ಅವರನ್ನು ಸುಂದರವನ್ನಾಗಿಸಿದೆ, ಅವರು ಉತ್ತಮ ಪ್ರಭಾವವುಳ್ಳವರು, ಪರಾಕ್ರಮಿಗಳು ಎಂದು ಧೃತರಾಷ್ಟ್ರನು ಪಾಂಡವರನ್ನು ಹೊಗಳುತ್ತಾ ದ್ರೌಪದಿಯನ್ನು ಸಂತೈಸಿದನು.

ಅರ್ಥ:
ದುರುಳ: ಕೆಟ್ಟವನು, ನೀಚ; ಅವದಿರು: ಅವರು; ಅಂತಃಕರಣ: ಮನಸ್ಸು, ಚಿತ್ತವೃತ್ತಿ; ದುಶ್ಚೇಷ್ಟೆ: ಕೆಟ್ಟ ಚೆಲ್ಲಾಟ; ಅಭಿಮತ: ಅಭಿಪ್ರಾಯ; ಅಭಿಧಾನ: ಹೆಸರು; ಪೂರ್ವ: ಮುಂಚೆ; ಕರುಣಿ: ದಯೆ; ಕಮನೀಯ: ಮನೋಹರ, ಸುಂದರ; ಗುಣ: ನಡತೆ; ಬಂಧುರ: ಸುಂದರ, ಚೆಲುವು; ಶೌರ್ಯಬಲ: ಪರಾಕ್ರಮ; ಪ್ರಭಾವ: ಘನತೆ, ಹಿರಿಮೆ; ನಯ: ನುಣುಪು, ಮೃದುತ್ವ; ತಿಳುಹು: ಹೇಳು; ಸತಿ: ಹೆಂಡತಿ;

ಪದವಿಂಗಡಣೆ:
ದುರುಳರ್+ಎನ್ನವದಿರು+ ದುರಂತಃ
ಕರಣರಾವ್+ದುಶ್ಚೇಷ್ಟೆ+ಎಮ್ಮದು
ದುರಭಿಮತ+ ದುಷ್ಪೂರ್ವರ್+ಎನ್ನ+ ಕುಮಾರರ್+ಅಭಿಧಾನ
ಕರುಣಿಗಳು +ಕಮನೀಯ +ಗುಣಬಂ
ಧುರರು +ಶೌರ್ಯಬಲ +ಪ್ರಭಾವೋ
ತ್ತರರು +ನಿನ್ನವರೆಂದು+ನಯದಲಿ +ತಿಳುಹಿದನು +ಸತಿಯ

ಅಚ್ಚರಿ:
(೧) ಕೌರವರ ಬಗ್ಗೆ ಹೇಳಲು ಉಪಯೋಗಿಸಿದ ಪದಗಳು: ದುರುಳ, ದುರಂತಃಕರಣ, ದುಶ್ಚೇಷ್ಟೆ, ದುರಭಿಮತ
(೨) ಪಾಂಡವರ ಗುಣದ ಬಗ್ಗೆ ಉಪಯೋಗಿಸಿದ ಪದಗಳು: ಕರುಣಿ, ಕಮನೀಯ ಗುಣಬಂಧುರ, ಶೌರಬಲ ಪ್ರಭಾವ

ಪದ್ಯ ೪೮: ಧೃತರಾಷ್ಟ್ರನು ದ್ರೌಪದಿಯನ್ನು ಹೇಗೆ ಬೇಡಿಕೊಂಡನು?

ಧರ್ಮ ನಿಮ್ಮದು ತಾಯೆ ಕಿಲ್ಭಿಷ
ಕರ್ಮವೆಮ್ಮದು ಲೋಕವರಿಯಲು
ನಿರ್ಮಲರು ನೀವ್ಪಾಪ ಪಂಕಿಲ ಹೃದಯರಾವ್ಜಗಕೆ
ದುರ್ಮತಿಗಳಿವದಿರ ಕುಚೇಷ್ಟೆಯ
ನೆಮ್ಮನೀಕ್ಷಿಸಿ ಮರೆಮಗಳೆ ಸ
ದ್ಧರ್ಮಮತಿಗಳು ನೀವೆನುತ ತಿಳುಹಿದನು ದ್ರೌಪದಿಯ (ಸಭಾ ಪರ್ವ, ೧೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದ್ರೌಪದಿಯನ್ನು ಸಂಭೋದಿಸುತ್ತಾ, ಮಗಳೇ ನೀವು ಧರ್ಮಿಷ್ಠರು, ನಾವು ಪಾಪಕರ್ಮಿಗಳು. ಲೋಕವೇ ಅರಿತಂಗೆ ನೀವು ಶುದ್ಧರು, ನಾವು ಪಾಪದ ಕೆಸರಿನಲ್ಲಿ ಅದ್ದಿರುವ ಮನಸ್ಸುಳ್ಳವರು. ದುರ್ಮತಿಗಳಾದ ನನ್ನ ಮಕ್ಕಳ ದುಶ್ಚೇಷ್ಟೆಯನ್ನು ನನ್ನು ಮುಖವನ್ನು ನೋಡಿ ಮರೆತುಬಿಡು. ನೀವು ಧರ್ಮಮತಿಗಳು ಎಂದು ಧೃತರಾಷ್ಟ್ರನು ದ್ರೌಪದಿಗೆ ಹೇಳಿದನು.

ಅರ್ಥ:
ಧರ್ಮ: ಧಾರಣೆ ಮಾಡಿದುದು; ತಾಯೆ: ಮಾತೆ; ಕಿಲ್ಭಿಷ: ಪಾಪ; ಕರ್ಮ: ಕಾರ್ಯ, ಕೆಲಸ; ಪಾಪ: ಕೆಟ್ಟ ಕೆಲಸ; ಪಂಕಿಲ: ಕೆಸರಿನಿಂದ ಕೂಡಿದ; ಹೃದಯ: ಎದೆ; ಜಗ: ಪ್ರಪಂಚ;ಆರಿ: ತಿಳಿ; ನಿರ್ಮಲ: ಶುದ್ಧ; ದುರ್ಮತಿ: ಕೆಟ್ಟ ಬುದ್ಧಿ; ಕುಚೇಷ್ಟೆ: ಕುತಂತ್ರ; ಈಕ್ಷಿಸು: ನೋಡು; ಮರೆ: ನೆನಪಿನಿಂದ ದೂರಮಾಡು; ಮಗಳೆ: ಸುತೆ; ಸಧರ್ಮಮತಿ: ಒಳ್ಳೆಯ ನಡತೆಯುಳ್ಳ ಬುದ್ಧಿ, ಸದ್ಭುದ್ಧಿ; ತಿಳುಹು: ಹೇಳು;

ಪದವಿಂಗಡಣೆ:
ಧರ್ಮ +ನಿಮ್ಮದು +ತಾಯೆ +ಕಿಲ್ಭಿಷ
ಕರ್ಮವ್+ಎಮ್ಮದು +ಲೋಕವ್+ಅರಿಯಲು
ನಿರ್ಮಲರು+ ನೀವ್+ಪಾಪ +ಪಂಕಿಲ +ಹೃದಯರಾವ್+ಜಗಕೆ
ದುರ್ಮತಿಗಳ್+ಇವದಿರ +ಕುಚೇಷ್ಟೆಯನ್
ಎಮ್ಮನ್+ಈಕ್ಷಿಸಿ+ ಮರೆ+ಮಗಳೆ +ಸ
ದ್ಧರ್ಮಮತಿಗಳು+ ನೀವ್+ಎನುತ +ತಿಳುಹಿದನು +ದ್ರೌಪದಿಯ

ಅಚ್ಚರಿ:
(೧) ಪಾಂಡವರನ್ನು ಹೊಗಳುವ ಪರಿ – ಧರ್ಮ ನಿಮ್ಮದು, ನಿರ್ಮಲರು ನೀವ್, ಸದ್ಧರ್ಮಮತಿಗಳು ನೀವ್;