ಪದ್ಯ ೪೭: ದ್ರೌಪದಿಯು ಧೃತರಾಷ್ಟ್ರನಿಗೆ ಹೇಗೆ ಉತ್ತರಿಸಿದಳು?

ಮಗಳಹೆನು ಸೊಸೆಯಹೆನು ನಿಮ್ಮಯ
ಮಗನ ಕಣ್ಣಿಗೆ ಕಾಳಕೂಟದ
ಮಗಳೊ ಸೊಸೆಯೋ ನಾದಿನಿಯೊ ಬೆಸಗೊಳ್ಳಿ ನಿಮ್ಮವನ
ಅಗಡು ಮಾಡಿದ ನಿಮ್ಮ ಮಕ್ಕಳ
ವಿಗಡ ತನಕಂಜಿದರೊ ದುರಿತದ
ಸೊಗಡಿಗಂಜಿದರೋ ಪೃಥಾಸುತರೆಂದಳಿಂದುಮುಖಿ (ಸಭಾ ಪರ್ವ, ೧೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ನಾನು ನಿಮಗೆ ಮಗಳಾಗಿರಬಹುದು ಅಥವ ಸೊಸೆಯಾಗಿರಬಹುದು, ಆದರೆ ನಿಮ್ಮ ಮಗನ ಕಣ್ಣಿಗೆ ನಾನು ಕಾಳಕೂಟ ವಿಷದ ಮಗಳೊ, ಸೊಸೆಯೋ, ನಾದಿನಿಯೋ ಸ್ವಲ್ಪ ನಿಮ್ಮ ಮಗನನ್ನೇ ಕೇಳಿಕೊಳ್ಳಿ. ನಿಮ್ಮ ಮಕ್ಕಳ ದುಷ್ಟತನದ ಪರಾಕ್ರಮಕ್ಕೆ ಪಾಂಡವರು ಸುಮ್ಮನಿರುವವರೋ ಅಥವ ಪಾಪದ ಭೀತಿಯಿಂದ ಸುಮ್ಮನಿರುವರೋ ನೀವೆ ಸ್ವಲ್ಪ ಯೋಚಿಸಿರೆ ಎಂದು ದ್ರೌಪದಿ ಧೃತರಾಷ್ಟ್ರನಿಗೆ ಹೇಳಿದಳು.

ಅರ್ಥ:
ಮಗಳು: ಸುತೆ; ಸೊಸೆ: ಮಗನ ಹೆಂಡತಿ; ಮಗ: ಸುತ; ಕಣ್ಣು: ನಯನ; ಕಾಳಕೂಟ: ವಿಷ; ನಾದಿನಿ: ಸಹೋದರನ ಹೆಂಡತಿ; ಬೆಸ: ಕೇಳುವುದು, ವಿಚಾರಿಸುವುದು; ಅಗಡು: ತುಂಟತನ; ವಿಗಡ: ಭೀಕರವಾದ; ಅಂಜು: ಹೆದರು; ದುರಿತ: ಪಾಪ, ಪಾತಕ; ಸೊಗಡು: ವಾಸನೆ; ಸುತ: ಮಗ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಸುಂದರಿ);

ಪದವಿಂಗಡಣೆ:
ಮಗಳಹೆನು +ಸೊಸೆಯಹೆನು +ನಿಮ್ಮಯ
ಮಗನ +ಕಣ್ಣಿಗೆ +ಕಾಳಕೂಟದ
ಮಗಳೊ+ ಸೊಸೆಯೋ +ನಾದಿನಿಯೊ+ ಬೆಸಗೊಳ್ಳಿ+ ನಿಮ್ಮವನ
ಅಗಡು+ ಮಾಡಿದ +ನಿಮ್ಮ +ಮಕ್ಕಳ
ವಿಗಡ+ ತನಕ್+ಅಂಜಿದರೊ+ ದುರಿತದ
ಸೊಗಡಿಗ್+ಅಂಜಿದರೋ +ಪೃಥಾಸುತರ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಧೃತರಾಷ್ಟ್ರನನ್ನು ಪೃಥಾಸುತ ಎಂದು ಕರೆದಿರುವುದು
(೨) ಸಂಬಂಧ ಹೇಳುವ ಶಬ್ದ – ಮಗ, ಮಗಳು, ಸೊಸೆ, ನಾದಿನಿ

ಪದ್ಯ ೪೬: ಧೃತರಾಷ್ಟ್ರನು ದ್ರೌಪದಿಯನ್ನು ಹೇಗೆ ಸಂತೈಸಿದನು?

ಖೇದ ಮಿಗೆ ನಡೆತಂದು ನೃಪತಿ ತ
ಳೋದರಿಯ ನುಡಿಸಿದನು ಮಗಳೆ ವಿ
ಷಾದವನು ಬಿಡು ಮಾತ ಮನ್ನಿಸು ಮಾವನಾ ನಿನಗೆ
ಈ ದುರಾತ್ಮರ ಮಾತು ಬೇಡ ವಿ
ಭೇದವೇ ದುಶ್ಯಳೆಗೆ ನಿನಗೆಂ
ದಾದರಿಸಿ ನುಡಿದನು ವಿಪತ್ತಿನಲಾ ಮಹಾಸತಿಯ (ಸಭಾ ಪರ್ವ, ೧೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ವಿದುರಾದಿಗಳ ಒತ್ತಾಯದ ಮೇಲೆ ಧೃತರಾಷ್ಟ್ರನು ದುಃಖಿಸುತ್ತಿದ್ದ ಧರ್ಮರಾಯನ ಮಡದಿಯಾದ ದ್ರೌಪದಿಯ ಬಳಿ ಬಂದು ಪ್ರೀತಿಯ ನುಡಿಗಳಿಂದ ಮಗಳೇ, ದುಃಖವನ್ನು ಮರೆತು ಬಿಡು, ಮಾವನಾದ ನನ್ನ ಮಾತಿಗೆ ಒಪ್ಪಿಕೋ. ಈ ದುರಾತ್ಮರ ಮಾತೇ ಬೇಡ, ದುಶ್ಯಳೆಗೂ ನಿನಗೂ ಭೇದವಿಲ್ಲ ಎಂದು ಪ್ರೀತಿಯಿಂದ ಆದರಿಸಿ ಮಾತಾಡಿದನು.

ಅರ್ಥ:
ಖೇದ: ದುಃಖ, ಉಮ್ಮಳ; ಮಿಗೆ: ಅಧಿಕವಾಗಿ; ನಡೆ: ಮುಂದೆ ಹೋಗು; ನೃಪತಿ: ರಾಜ; ತಳೋದರಿ: ಹೆಂಡತಿ; ನುಡಿಸು: ಮಾತಾಡು; ಮಗಳೆ: ಸುತೆ; ವಿಷಾದ: ದುಃಖ, ವ್ಯಥೆ; ಬಿಡು: ತೊರೆ; ಮಾತು: ನುಡಿ; ಮನ್ನಿಸು: ಗೌರವಿಸು; ಮಾವ: ಗಂಡನ ತಂದೆ; ದುರಾತ್ಮ: ದುಷ್ಟ; ಮಾತು: ನುಡಿ; ಬೇಡ: ತ್ಯಜಿಸು; ವಿಭೇದ: ವ್ಯತ್ಯಾಸ, ಭಿನ್ನತೆ; ಆದರಿಸು: ಗೌರವಿಸು; ನುಡಿ: ಮಾತಾಡಿಸು; ವಿಪತ್ತು: ಆಪತ್ತು, ಕೇಡು; ಸತಿ: ಗರತಿ; ಮಹಾ: ಶ್ರೇಷ್ಠ;

ಪದವಿಂಗಡಣೆ:
ಖೇದ +ಮಿಗೆ +ನಡೆತಂದು +ನೃಪತಿ +ತ
ಳೋದರಿಯ +ನುಡಿಸಿದನು +ಮಗಳೆ+ ವಿ
ಷಾದವನು +ಬಿಡು +ಮಾತ +ಮನ್ನಿಸು +ಮಾವನಾ +ನಿನಗೆ
ಈ +ದುರಾತ್ಮರ +ಮಾತು +ಬೇಡ +ವಿ
ಭೇದವೇ +ದುಶ್ಯಳೆಗೆ +ನಿನಗೆಂದ್
ಆದರಿಸಿ+ ನುಡಿದನು +ವಿಪತ್ತಿನಲಾ +ಮಹಾಸತಿಯ

ಅಚ್ಚರಿ:
(೧) ದ್ರೌಪದಿಯನ್ನು ಕರೆದಿರುವ ಪರಿ – ನೃಪತಿ ತಳೋದರಿ, ಮಗಳೆ, ಮಹಾಸತಿ
(೨) ಮ ಕಾರದ ಸಾಲು ಪದ – ಮಾತ ಮನ್ನಿಸು ಮಾವನಾ

ಪದ್ಯ ೪೫: ವಿದುರಾದಿಗಳು ಧೃತರಾಷ್ಟ್ರನಿಗೆ ಏನು ಹೇಳಿದರು?

ಇದಕೆ ನಿಸ್ಸಂದೇಹವೈ ವರ
ಸುದತಿಯನು ನೀ ಬೇಡಿಕೊಳು ಯ
ಜ್ಞದಲಿ ಪಾವಕಗುದಿಸಿದಳು ಪಾಂಚಾಲಿ ಮಾನಿನಿಯೆ
ಇದು ಭವತ್ಸಂತಾನ ವಿಲಯಾ
ಸ್ಪದ ಕಣಾ ನಡೆ ಪಾಪಿಯೆಂದಾ
ವಿದುರ ಗುರು ಕೃಪರೌಕಿದರು ಧೃತರಾಷ್ಟ್ರ ಭೂಪತಿಯ (ಸಭಾ ಪರ್ವ, ೧೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ವಿದುರ, ದ್ರೋಣ, ಕೃಪಾಚಾರ್ಯರು ಭೀಷ್ಮನ ಮಾತನ್ನು ಅನುಮೋದಿಸಿದರು. ಭೀಷ್ಮನು ಹೇಳಿದುದರಲ್ಲಿ ಸಂಶಯವೇ ಇಲ್ಲ. ದ್ರೌಪದಿಯು ಯಜ್ಞದಲ್ಲಿ ಯಾಗಕುಂಡದಿಂದ ಹುಟ್ಟಿದವಳು, ಆಕೆ ಸಾಮಾನ್ಯ ಮಾನವಳಲ್ಲ, ಈಗ ತೋರಿಬಂದು ಉತ್ಪಾತಗಳು ನಿನ್ನ ಸಂತಾನದ ನಾಶವನ್ನು ಸೂಚಿಸುತ್ತಿವೆ. ಪಾಪೀ ಧೃತರಾಷ್ಟ್ರ ನಡೆ ದ್ರೌಪದಿಯನ್ನು ಸಂತೈಸು ಎಂದು ವಿದುರ, ದ್ರೋಣ, ಕೃಪಾಚಾರ್ಯರು ಧೃತರಾಷ್ಟ್ರನನ್ನು ನೂಕಿದರು.

ಅರ್ಥ:
ನಿಸ್ಸಂದೇಹ: ಸಂಶಯವಿಲ್ಲದೆ; ವರ: ಶ್ರೇಷ್ಠ; ಸುದತಿ: ಸುಂದರವಾದ ಹಲ್ಲುಳ್ಳವಳು, ಯುವತಿ, ಸ್ತ್ರೀ; ಬೇಡು: ಕೇಳು; ಯಜ್ಞ: ಕ್ರತು; ಪಾವಕ: ಅಗ್ನಿ; ಉದಿಸು: ಹುಟ್ಟು; ಮಾನಿನಿ: ಹೆಣ್ಣು; ಸಂತಾನ: ವಂಶ, ಮಕ್ಕಳು; ವಿಲಯ: ವಿನಾಶ, ಹಾಳು; ಆಸ್ಪದ: ಅವಕಾಶ; ನಡೆ: ಮುಂದೆ ಹೋಗು; ಪಾಪಿ: ದುಷ್ಟ; ಗುರು: ದ್ರೋಣಾಚಾರ್ಯ; ಔಕು: ತಳ್ಳು, ನೂಕು; ಭೂಪತಿ: ರಾಜ;

ಪದವಿಂಗಡಣೆ:
ಇದಕೆ +ನಿಸ್ಸಂದೇಹವೈ +ವರ
ಸುದತಿಯನು +ನೀ +ಬೇಡಿಕೊಳು+ ಯ
ಜ್ಞದಲಿ +ಪಾವಕಗ್+ಉದಿಸಿದಳು +ಪಾಂಚಾಲಿ +ಮಾನಿನಿಯೆ
ಇದು +ಭವತ್+ಸಂತಾನ +ವಿಲಯಾ
ಸ್ಪದ+ ಕಣಾ +ನಡೆ +ಪಾಪಿ+ಎಂದ್+ಆ
ವಿದುರ +ಗುರು +ಕೃಪರ್+ಔಕಿದರು +ಧೃತರಾಷ್ಟ್ರ +ಭೂಪತಿಯ

ಅಚ್ಚರಿ:
(೧) ಸುದತಿ, ಮಾನಿನಿ – ಸಮನಾರ್ಥಕ ಪದ
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಇದು ಭವತ್ಸಂತಾನ ವಿಲಯಾಸ್ಪದ ಕಣಾ ನಡೆ ಪಾಪಿ

ಪದ್ಯ ೪೪: ಭೀಷ್ಮನು ಧೃತರಾಷ್ಟ್ರನಿಗೆ ಯಾರನ್ನು ಸಂತೈಸಲು ಹೇಳಿದನು?

ಆಹಹ ಭೂತ ಕ್ಷೋಭವಿದು ನಿ
ರ್ದಹಿಸುವುದು ಕುರುಕುಲವ ನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದೆಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆನಡೆಯೆಂದನಾ ಭೀಷ್ಮ (ಸಭಾ ಪರ್ವ, ೧೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಪಂಚಭೂತಗಳಲ್ಲಿ ಉಂಟಾದ ಈ ಕೋಲಾಹಲವು ಕುರುಕುಲವನ್ನೇ ಸುಟ್ಟು ಬೂದಿ ಮಾಡುತ್ತದೆ, ದ್ರೌಪದಿಯು ದೇವತೆಗಳಿಗೆ ಮೊರೆಯಿಟ್ಟುದುದರಿಂದ ದೇವತೆಗಳು ಈ ಉತ್ಪಾತಗಳನ್ನುಂಟುಮಾಡುತ್ತಿದ್ದಾರೆ. ನಿನ್ನ ದುಷ್ಟ ಮಕ್ಕಳನ್ನು ದುಷ್ಕೃತ್ಯಮಾಡಲು ಬಿಟ್ಟು ನೀನು ಮೌನದಿಂದಿರುವುದು ಸರಿಯಲ್ಲ. ದ್ರೌಪದಿಯನ್ನು ಸಂತೈಸು ಬಾ, ನಡೆ ಎಂದು ಭೀಷ್ಮನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಅಹಹ: ಓಹೋ!; ಭೂತ: ದೆವ್ವ, ಪಿಶಾಚಿ, ಪಂಚಭೂತ; ಕ್ಷೋಭೆ: ಉದ್ವೇಗ; ದಹಿಸು: ಸುಡು; ಅಕಟ: ಅಯ್ಯೋ; ಮಹಿಳೆ: ಹೆಣ್ಣು; ಒರಲು: ಗೋಳು, ಕೂಗು; ಅಮರ: ದೇವ, ಸುರರು; ನಿಕರ: ಗುಂಪು; ದೈವ: ಭಗವಂತ; ಕೃತ: ಮಾಡಿದ; ಕುಹಕಿ: ಕಪಟಿ; ಮಕ್ಕಳು: ಪುತ್ರರು; ಮೌನ: ಸದ್ದಿಲ್ಲದ ಸ್ಥಿತಿ; ಸಂತೈಸು: ಸಮಾಧಾನ ಪಡಿಸು; ನಡೆ: ಚಲಿಸು, ಮುಂದೆ ಹೋಗು;

ಪದವಿಂಗಡಣೆ:
ಆಹಹ +ಭೂತ +ಕ್ಷೋಭವಿದು +ನಿ
ರ್ದಹಿಸುವುದು +ಕುರುಕುಲವನ್ + ಅಕಟ
ಈ+ಮಹಿಳೆ+ಒರಲಿದಳ್+ಅಮರ+ ನಿಕರಕೆ +ದೈವ+ಕೃತವಿದ್+ಎಲೆ
ಕುಹಕಿ+ ಮಕ್ಕಳನಿಕ್ಕಿ+ ಮೌನದೊಳ್
ಇಹರೆ+ ಬಾ +ಧೃತರಾಷ್ಟ್ರ +ಪಾಂಡವ
ಮಹಿಳೆಯನು +ಸಂತೈಸು +ನಡೆನಡೆ+ಎಂದನಾ +ಭೀಷ್ಮ

ಅಚ್ಚರಿ:
(೧) ದ್ರೌಪದಿಯನ್ನು ಮಹಿಳೆ ಎಂದು ಕರೆದಿರುವುದು
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಕುಹಕಿ ಮಕ್ಕಳನಿಕ್ಕಿ ಮೌನದೊಳಿಹ

ಪದ್ಯ ೪೩: ಸಭೆಯಲ್ಲಿದ್ದವರು ಏಕೆ ಭಯಭೀತರಾದರು?

ನಡುಗಿತಿಳೆ ನಡುಹಗಲು ಕತ್ತಲೆ
ಯಡಸಿತಾಕಾಶದಲಿ ಹೆಮ್ಮರ
ನುಡಿದು ಬಿದ್ದವು ಸಲಿಲವುಕ್ಕಿತು ಕೂಡೆ ಕೆರೆ ತೊರೆಯ
ಉಡಿದುವವದಿರ ಕೈಯ ಕೈದುಗ
ಳೊಡನೊಡನೆ ಸಿಡಿಲೆರಗಿತಾ ಸಭೆ
ಸೆಡೆದುದಲ್ಲಿಯದಲ್ಲಿ ಹುದುಗಿತು ಭೀತಿಗರ ಹೊಡೆದು (ಸಭಾ ಪರ್ವ, ೧೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೂಮಿ ನಡುಗಿತು, ನಡುಹಗಲಿನಲ್ಲೇ ಕತ್ತಲಾಯಿತು, ದೊಡ್ಡ ಮರಗಳು ಉರುಳಿಬಿದ್ದವು. ಕೆರೆ, ತೊರೆ ಹಳ್ಳಗಳ ನೀರು ಉಕ್ಕಿತು, ಕೌರವರು ಹಿಡಿದಿದ್ದ ಆಯುಧಗಳು ಮುರಿದುಬಿದ್ದವು. ಮತ್ತೆ ಮತ್ತೆ ಬರಸಿಡಿಲೆರಗಿತು, ಆ ಸಭೆಯಲ್ಲಿದ್ದ ಜನರಲ್ಲಿ ಭೀತಿಯು ಆವರಿಸಿ ಎಲ್ಲರು ಸ್ಥಬ್ಧರಾದರು.

ಅರ್ಥ:
ನಡುಗು: ಕಂಪಿಸು; ಇಳೆ: ಭೂಮಿ; ಹಗಲು: ದಿನ; ಕತ್ತಲೆ: ಅಂಧಕಾರ; ಅಡಸು: ಆಕ್ರಮಿಸು, ಮುತ್ತು; ಆಕಾಶ: ಆಗಸ; ಹೆಮ್ಮರ: ದೊಡ್ಡ ವೃಕ್ಷ; ಉಡಿ: ಮುರಿ; ಬಿದ್ದು: ಬೀಳು; ಸಲಿಲ: ನೀರು; ಉಕ್ಕು: ಮೇಲೇಳು; ಕೂಡು: ಸೇರು; ಕೆರೆ: ಜಲಾಶಯ; ತೊರೆ: ಹೊಳೆ; ಅವದಿರ: ಅವರ; ಕೈಯ: ಹಸ್ತ; ಕೈದು: ಆಯುಧ; ಒಡನೊಡನೆ: ತಕ್ಷಣ, ಒಂದೇ ಸಮನೆ; ಸಿಡಿಲು: ಅಶನಿ; ಎರಗು: ಬೀಳು; ಸಭೆ: ಓಲಗ; ಸೆಡೆ: ನಡುಗು; ಹುದುಗು: ಸೇರು, ಕೂಡು; ಭೀತಿ: ಭಯ; ಗರ: ಪಿಶಾಚಿ, ದೆವ್ವ, ಸ್ಥಬ್ಧ; ಹೊಡೆ: ಏಟು, ಹೊಡೆತ;

ಪದವಿಂಗಡಣೆ:
ನಡುಗಿತ್+ಇಳೆ +ನಡುಹಗಲು +ಕತ್ತಲೆ
ಅಡಸಿತ್+ಆಕಾಶದಲಿ +ಹೆಮ್ಮರನ್
ಉಡಿದು+ ಬಿದ್ದವು+ ಸಲಿಲ+ಉಕ್ಕಿತು +ಕೂಡೆ +ಕೆರೆ+ ತೊರೆಯ
ಉಡಿದುವ್+ಅವದಿರ +ಕೈಯ +ಕೈದುಗಳ್
ಒಡನೊಡನೆ +ಸಿಡಿಲ್+ಎರಗಿತ್+ ಆ+ ಸಭೆ
ಸೆಡೆದುದ್+ಅಲ್ಲಿಯದಲ್ಲಿ +ಹುದುಗಿತು +ಭೀತಿಗರ +ಹೊಡೆದು

ಅಚ್ಚರಿ:
(೧) ಗ್ರಹಣ ವನ್ನು ವಿವರಿಸುವ ಪರಿ – ನಡುಹಗಲು ಕತ್ತಲೆ ಯಡಸಿತಾಕಾಶದಲಿ
(೨) ಕೆರೆ, ತೊರೆ; ಕೈಯ ಕೈದು – ಪ್ರಾಸ ಪದಗಳು
(೩) ಭಯವು ಸಭೆಯನ್ನು ಆವರಿಸಿದುದನ್ನು ಚಿತ್ರಿಸುವ ಪರಿ – ಸಭೆ ಸೆಡೆದುದಲ್ಲಿಯದಲ್ಲಿ ಹುದುಗಿತು ಭೀತಿಗರ ಹೊಡೆದು

ಪದ್ಯ ೪೨: ಯಾವ ಬಗೆಯ ಅಪಶಕುನಗಳ ಕಾಣಿಸಿತು?

ಬಾರಿಸಿತು ದೆಸೆದೆಸೆಗಳಲಿ ಹಾ
ಹಾರವಾವಿರ್ಭಾವ ತೊಳಗಿರೆ
ತಾರಕೆಗಳಿನ ಬಿಂಬವನು ಝೋಂಪಿಸಿದನಾ ರಾಹು
ತೋರಣದಲುರಿ ತಳಿತು ರಾಜ
ದ್ವಾರ ಹೊಗೆದುದು ದೆಸೆಗಳಂಬರ
ಧಾರುಣಿಯೊಳುತ್ಪಾತ ಬಿಗಿದುದು ಮೊಗೆದುದದ್ಭುತವ (ಸಭಾ ಪರ್ವ, ೧೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಹಾಹಾಕಾರ, ದುಃಖದ ಮೊರೆ ಎಲ್ಲಾ ದೆಸೆಗಳಿಂದಲೂ ಮೊಳಗಿತು. ಆಕಾಶದಲ್ಲಿ ನಕ್ಷತ್ರಗಳು ಹಗಲಿನಲ್ಲೇ ಕಾಣಿಸಿದವು. ರಾಹುವು ಸೂರ್ಯನ ಬಿಂಬವನ್ನು ನುಂಗಿದನು. ಕೌರವನ ಅರಮನೆಯ ಮಹಾದ್ವಾರಕ್ಕೆ ಕಟ್ಟಿದ್ದ ತೋರಣಗಳಿಗೆ ಉರಿಹತ್ತಿ ಮಹಾದ್ವಾರದೆಲ್ಲೆಲ್ಲಾ ಹೊಗೆ ಮುಸುಕಿತು. ಭೂಮಿ, ಆಕಾಶ ಎಲ್ಲಾ ದಿಕ್ಕುಗಳಲ್ಲಿಯೂ ಉತ್ಪಾತಗಳು ಉಂಟಾಗಿ ಅದ್ಭುತವಾಗಿ ಕಾಣಿಸಿತು.

ಅರ್ಥ:
ಬಾರಿಸು: ಹೊಡೆ; ದೆಸೆ: ದಿಕ್ಕು; ಹಾಹಾ: ದುಃಖದ ಕೂಗು; ರವ: ಶಬ್ದ; ಆವಿರ್ಭಾವ: ಹುಟ್ಟು, ಕಾಣಿಸಿಕೊ; ತೊಳಗು: ಕಾಂತಿ, ಪ್ರಕಾಶ; ತಾರಕೆ: ನಕ್ಷತ್ರ; ಬಿಂಬ: ಪ್ರಭಾವ ವಲಯ; ಝೋಂಪಿಸು: ಭಯಗೊಳ್ಳು, ಬೆಚ್ಚಿಬೀಳು; ತೋರಣ: ಬಾಗಿಲು, ಬೀದಿಗಳಲ್ಲಿ ಕಟ್ಟುವ ತಳಿರು; ಉರಿ: ಬೆಂಕಿ; ತಳಿತು: ಹುಟ್ಟು, ಚಿಗುರು; ದ್ವಾರ: ಬಾಗಿಲು; ಹೊಗೆ: ಧೂಮ; ಅಂಬರ: ಆಗಸ; ಧಾರುಣಿ: ಭೂಮಿ; ಉತ್ಪಾತ: ಅಪಶಕುನ; ಬಿಗಿ: ಕಟ್ಟು, ಬಂಧಿಸು; ಮೊಗೆ: ಸೆರೆಹಿಡಿ, ಬಂಧಿಸು; ಅದ್ಭುತ: ಆಶ್ಚರ್ಯ; ಇನ: ಸೂರ್ಯ;

ಪದವಿಂಗಡಣೆ:
ಬಾರಿಸಿತು +ದೆಸೆದೆಸೆಗಳಲಿ+ ಹಾಹಾ
ರವ+ಆವಿರ್ಭಾವ +ತೊಳಗಿರೆ
ತಾರಕೆಗಳ್+ಇನ +ಬಿಂಬವನು +ಝೋಂಪಿಸಿದನ್+ಆ+ ರಾಹು
ತೋರಣದಲ್+ಉರಿ+ ತಳಿತು+ ರಾಜ
ದ್ವಾರ +ಹೊಗೆದುದು +ದೆಸೆಗಳ್+ಅಂಬರ
ಧಾರುಣಿಯೊಳ್+ಉತ್ಪಾತ +ಬಿಗಿದುದು +ಮೊಗೆದುದ್+ಅದ್ಭುತವ

ಅಚ್ಚರಿ:
(೧) ಗ್ರಹಣವಾಯಿತು ಎಂದು ಹೇಳಲು – ಇನ ಬಿಂಬವನು ಝೋಂಪಿಸಿದನಾ ರಾಹು
(೨) ಅಪಶಕುನಗಳು – ತೋರಣದಲುರಿ ತಳಿತು ರಾಜದ್ವಾರ ಹೊಗೆದುದು