ಪದ್ಯ ೩೧: ಭೀಮನು ಕೋಪಗೊಂಡು ಮೇಲೆದ್ದ ರೀತಿ ಹೇಗಿತ್ತು?

ಕಡಲ ತೆರೆಗಳ ತರುಬಿ ತುಡುಕುವ
ವಡಬನಂತಿರೆ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂತಿರೆ ಸಭೆಯೊಳಡಹಾಯ್ದು
ಕುಡಿ ಕುಠಾರನ ರಕುತವನು ತಡೆ
ಗಡಿ ಸುಯೋಧನನೂರುಗಳ ನಿ
ಮ್ಮಡಿಸಿ ಮುನಿಯಲಿ ಧರ್ಮಸುತನೆಂದೆದ್ದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತೊಡೆಯನ್ನು ದ್ರೌಪದಿಗೆ ತೋರಲು ಭೀಮನು ಅತೀವ ಕೋಪಗೊಂಡನು. ಸಮುದ್ರದ ತೆರೆಗಳನ್ನು ತಡೆದು ಮೇಲಕ್ಕೆ ಬರುವ ವಡಬಾಗ್ನಿಯಂತೆ, ಮೋಡಗಳ ತೆರೆಯನ್ನು ಸೀಳಿ ಬಡಿಯುವ ಸಿಡಿಲಿನಂತೆ, ಭೀಮನು ಸಭೆಯ ಮಧ್ಯದಿಂದೆದ್ದು ದ್ರೌಪದಿಯ ಕಡೆಗೆ ನುಗ್ಗಿ, ಈ ಕ್ರೂರಿಯ ರಕ್ತವನ್ನು ಕುಡಿದು, ದುರ್ಯೋಧನನ ತೊಡೆಗಳನ್ನು ಬಡಿದು ಕಡಿಯುತ್ತೇನೆ, ಧರ್ಮರಾಯನು ಎರಡು ಪಟ್ಟು ಸಿಟ್ಟಾಗಲಿ ಎಂದು ಭೀಮನು ಗರ್ಜಿಸಿದನು.

ಅರ್ಥ:
ಕಡಲು: ಸಮುದ್ರ; ತೆರೆ: ಅಲೆ; ತರುಬು: ತಡೆ, ನಿಲ್ಲಿಸು; ತುಡುಕು: ಹೋರಾಡು, ಸೆಣಸು; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ಮೇಘ: ಮೋಡ; ಪಟಲ: ಸಮೂಹ; ಒಡೆ: ಸೀಳು; ಸೂಸು: ಹೊರಹೊಮ್ಮು; ಸಿಡಿಲು: ಅಶನಿ, ಆರ್ಭಟಿಸು; ಸಭೆ: ಓಲಗ; ಹಾಯ್ದು: ಮೇಲೆಬೀಳು; ಕುಡಿ: ಪಾನಮಾಡು; ಕುಠಾರ: ಕ್ರೂರಿ; ರಕುತ: ನೆತ್ತರು; ತಡೆ: ಅಡ್ಡಿ, ವಿಘ್ನ; ಊರು: ತೊಡೆ; ಇಮ್ಮಡಿಸು: ಎರಡು ಪಟ್ಟು; ಮುನಿ: ಕೋಪಗೊಳ್ಳು; ಸುತ: ಮಗ; ಎದ್ದು: ಮೇಲೇಳು;

ಪದವಿಂಗಡಣೆ:
ಕಡಲ+ ತೆರೆಗಳ+ ತರುಬಿ+ ತುಡುಕುವ
ವಡಬನಂತಿರೆ+ ಮೇಘ+ಪಟಲವನ್
ಒಡೆದು +ಸೂಸುವ +ಸಿಡಿಲಿನಂತಿರೆ+ ಸಭೆಯೊಳಡ+ಹಾಯ್ದು
ಕುಡಿ+ ಕುಠಾರನ+ ರಕುತವನು +ತಡೆ
ಗಡಿ +ಸುಯೋಧನನ್+ಊರುಗಳನ್+
ಇಮ್ಮಡಿಸಿ+ ಮುನಿಯಲಿ +ಧರ್ಮಸುತನ್+ಎಂದ್+ಎದ್ದನಾ +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ತೆರೆಗಳ ತರುಬಿ ತುಡುಕುವ ವಡಬನಂತಿರೆ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂತಿರೆ
(೨) ಭೀಮನ ಪ್ರತಿಜ್ಞೆ – ಕುಡಿ ಕುಠಾರನ ರಕುತವನು ತಡೆಗಡಿ ಸುಯೋಧನನೂರುಗಳ

ಪದ್ಯ ೩೦: ದ್ರೌಪದಿ ದುರ್ಯೋಧನನಿಗೆ ಏನೆಂದು ಶಪಿಸಿದಳು?

ಎಲೆಗೆ ನಿನ್ನವರೇನ ಮಾಡುವ
ರೊಲೆಯೊಳಡಗಿದ ಕೆಂಡವಿವರ
ಗ್ಗಳಿಕೆ ನಂದಿದುದೆನುತ ಮುಂಜೆರಗೆತ್ತಿ ಮಾನಿನಿಗೆ
ಖಳನು ತೊಡೆಗಳ ತೋರಿಸಿದೊಡತಿ
ಮುಳಿದು ಕೊಟ್ಟಳು ಶಾಪವನು ನಿ
ನ್ನಳಿವು ತೊಡೆಯಲಿ ಮುಗಿವುದೆಂದಳು ಮುಗುದೆ ಖಾತಿಯಲಿ (ಸಭಾ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ವಿದುರನು ದ್ರೌಪದಿಗೆ ಧೈರ್ಯವನ್ನು ಹೇಳುತ್ತಿರಲು, ದುರ್ಯೋಧನನು ಎಲೇ ನಿನ್ನ ಪತಿಗಳು ಈಗ ಏನು ಮಾಡಿಯಾರು? ಅವರ ಪರಾಕ್ರಮವೀಗ ಒಲೆಯಲ್ಲೇ ಸುಟ್ಟು ಬೂದಿಯಾದ ಕೆಂಡದಂತೆ, ನಾಶವಾಗಿ ಹೋಗಿದೆ, ಎಂದು ಹೇಳಿ ತನ್ನ ಸೆರಗನ್ನು ಸರಿಸಿ ತನ್ನ ತೊಡೆಗಳನ್ನು ತೋರಿಸಿದನು. ಇದನ್ನು ನೋಡಿದ ದ್ರೌಪದಿಯು ಅತಿಯಾಗಿ ಕೋಪಗೊಂಡು ನಿನ್ನ ಮರಣವು ಆ ತೊಡೆಗಳಿಂದಲೇ ಆಗಲಿ ಎಂದು ಶಪಿಸಿದಳು.

ಅರ್ಥ:
ಒಲೆ: ಅಶ್ಮಂತಕ, ಅಡುಗೆ ಮಾಡಲು ಬೆಂಕಿಯನ್ನು ಉರಿಸುವ ಸಲಕರಣೆ; ಅಡಗು: ಮುಚ್ಚು; ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಅಗ್ಗಳಿಕೆ: ಹಿರಿಮೆ; ನಂದು: ಆರಿಹೋಗು, ಇಲ್ಲವಾಗು; ಮುಂಜೆರಗು: ಸೆರಗಿನ ಮುಂಭಾಗ; ಮಾನಿನಿ: ಹೆಣ್ಣು; ಖಳ: ದುಷ್ಟ; ತೊಡೆ: ಊರು; ತೋರಿಸು: ಪ್ರದರ್ಶಿಸು; ಅತಿ: ಬಹಳ; ಮುಳಿ: ಕೋಪಗೊಳ್ಳು; ಕೊಡು: ನೀಡು; ಶಾಪ: ನಿಷ್ಠುರದ ನುಡಿ; ಅಳಿ: ನಾಶ; ಮುಗಿವುದು: ಕೊನೆಗೊಳ್ಳು; ಮುಗುದೆ: ಕಪಟವರಿಯದವಳು, ಮುಗ್ಧೆ; ಖಾತಿ: ಕೋಪ;

ಪದವಿಂಗಡಣೆ:
ಎಲೆಗೆ +ನಿನ್ನವರೇನ +ಮಾಡುವರ್
ಒಲೆಯೊಳ್+ಅಡಗಿದ +ಕೆಂಡವ್+ಇವರ್
ಅಗ್ಗಳಿಕೆ+ ನಂದಿದುದ್+ಎನುತ +ಮುಂಜೆರಗ್+ಎತ್ತಿ +ಮಾನಿನಿಗೆ
ಖಳನು +ತೊಡೆಗಳ +ತೋರಿಸಿದೊಡ್+ಅತಿ
ಮುಳಿದು+ ಕೊಟ್ಟಳು +ಶಾಪವನು +ನಿನ್
ಅಳಿವು +ತೊಡೆಯಲಿ +ಮುಗಿವುದ್+ಎಂದಳು +ಮುಗುದೆ +ಖಾತಿಯಲಿ

ಅಚ್ಚರಿ:
(೧) ದ್ರೌಪದಿಯನ್ನು ಮಾನಿನಿ, ಮುಗುದೆ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಒಲೆಯೊಳಡಗಿದ ಕೆಂಡವಿವರಗ್ಗಳಿಕೆ ನಂದಿದುದೆನುತ