ಪದ್ಯ ೨೬: ದ್ರೌಪದಿ ದೇವಲೋಕದ ಮತ್ತಾರನ್ನು ತನ್ನ ಸಹಾಯಕ್ಕೆ ಬೇಡಿಕೊಂಡಳು?

ಅಂಧನೊಬ್ಬನೆ ಮಾವ ನೀವೇ
ನಂಧರಾದಿರೆ ಪಾಂಡು ಕರುಣಾ
ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ
ಅಂಧಕಾಸುರಮಥನ ನೀನೇ
ಬಂಧಿಸಿದೆಲಾ ಪೂರ್ವವರ ಸಂ
ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ (ಸಭಾ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಹೇ ಮಾವ ಪಾಂಡು ಮಹಾರಾಜರೇ, ಮಾವ ಧೃತರಾಷ್ಟ್ರ ಕುರುಡನಾದರೇ, ನೀವು ಕುರುಡರಾದಿರೇ? ನನಗೆ ಬಂದಿರುವ ಈ ವಿಪತ್ತನ್ನು ನೋಡಿ ನೀವು ಸುಮ್ಮನಿರುವಿರೇ? ಹೇ ಪರಮೇಶ್ವರ, ಅಂಧಕಾಸುರಮಥನ ಮಾಡಿ ಹಿಂದೆ ಧರೆಯನ್ನು ರಕ್ಷಿಸಿದವ, ಪಾಂಡವರ ನನ್ನ ಸಂಬಂಧವನ್ನು ಹಿಂದೆ ಏರ್ಪಡಿಸಿದವನು ನೀನೆ ಅಲ್ಲವೇ ನೀನಾದರೂ ನನ್ನ ಸೆರಗನ್ನು ಬಿಡಿಸು ಎಂದು ಗೋಳಿಟ್ಟಳು ದ್ರೌಪದಿ.

ಅರ್ಥ:
ಅಂಧ: ಕುರುಡ; ಕರುಣಾಸಿಂಧು: ದಯಾ ಸಾಗರ; ಸೈರಿಸು: ತಾಳು, ಸಹಿಸು; ವಿಪತ್ತು: ಕಷ್ಟ; ಮಥನ: ನಾಶಮಾಡಿದ; ಬಂಧಿಸು: ಕೂಡಿಸು; ಪೂರ್ವ: ಹಿಂದೆ; ವರ: ಶ್ರೇಷ್ಠ; ಸಂಬಂಧ: ಸಹವಾಸ, ಹೊಂದಾಣಿಕೆ; ಸೆರಗು: ವಸ್ತ್ರ, ಸೀರೆಯ ಭಾಗ; ಬಿಡಿಸು: ಕಳಚು, ಸಡಿಲಿಸು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಅಂಧನ್+ಒಬ್ಬನೆ +ಮಾವ +ನೀವೇನ್
ಅಂಧರಾದಿರೆ+ ಪಾಂಡು +ಕರುಣಾ
ಸಿಂಧು +ನೀ +ಸೈರಿಸುವುದೇ+ ತನ್ನೀ+ ವಿಪತ್ತಿನಲಿ
ಅಂಧಕಾಸುರಮಥನ +ನೀನೇ
ಬಂಧಿಸಿದೆಲಾ +ಪೂರ್ವ+ವರ+ ಸಂ
ಬಂಧವನು +ನೀ +ಸೆರಗ +ಬಿಡಿಸೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಶಿವನನ್ನು ಅಂಧಕಾಸುರಮಥನ ಎಂದು ಕರೆದಿರುವುದು

ಪದ್ಯ ೨೫: ದ್ರೌಪದಿ ತನ್ನನ್ನು ಕಾಪಾಡಲು ಕೊನೆಗೆ ಯಾರಲ್ಲಿ ಮೊರೆಯಿಟ್ಟಳು?

ಕ್ಷಿತಿಯೆ ಬಿಡಿಸಾ ಸೆರಗನೆಲೆ ಪಾ
ರ್ವತಿಯೆ ತನ್ನದು ಧರ್ಮವಾದೊಡೆ
ಗತಿ ತನಗೆ ನೀವಾಗಿರೌ ಕಮಲಾದಿಶಕ್ತಿಗಳೆ
ಸತಿಯಹಲ್ಯಾದಿತಿ ವರಾರುಂ
ಧತಿ ಮಹಾ ಮಾಯಾದಿ ದೇವ
ಪ್ರತತಿ ಬಿಡಿಸಿರೆ ಸೆರಗನೆಂದೊರಲಿದಳು ಪಾಂಚಾಲಿ (ಸಭಾ ಪರ್ವ, ೧೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅತ್ತೆ ಮಾವರನ್ನು ಕೇಳಿದ ಬಳಿಕೆ ದ್ರೌಪದಿಯು ದೇವರಲ್ಲಿ ಮೊರೆಹೋದಳು. ಹೇ ಭೂಮಿತಾಯೆ, ದುಶ್ಯಾಸನನಿಂದ ನನ್ನ ಸೆರಗನ್ನು ಬಿಡಿಸು, ಪಾರ್ವತೀದೇವಿಯೇ ಕಮಲಾದಿ ಶಕ್ತಿಗಳೇ, ಪತಿವ್ರತೆಯರಾದ ಅಹಲ್ಯೆ, ಅದಿತಿ, ಅರುಂಧತಿ, ಮಹಾಮಾಯೆ, ನೀವಾದರೂ ದುಶ್ಯಾಸನನಿಂದ ನನ್ನ ಸೆರಗನ್ನು ಬಿಡಿಸಿರಿ ಎಂದು ದ್ರೌಪದಿಯು ತನ್ನ ಅಳಲನ್ನು ತೋಡಿಕೊಂಡಳು.

ಅರ್ಥ:
ಕ್ಷಿತಿ: ಭೂಮಿ; ಬಿಡಿಸು: ನಿವಾರಿಸು; ಸೆರಗು: ಸೀರೆಯ ಭಾಗ, ವಸ್ತ್ರ; ಪಾರ್ವತಿ: ಶಂಕರಿ; ಧರ್ಮ: ಧಾರಣೆಮಾಡಿದುದು, ನಿಯಮ; ಗತಿ: ಸ್ಥಿತಿ, ರೀತಿ; ಆದಿ: ಮುಂತಾದ; ಶಕ್ತಿ: ಬಲ, ಪಾರ್ವತಿ; ಸತಿ: ಹೆಂಡತಿ; ವರ: ಶ್ರೇಷ್ಠ; ಪ್ರತತಿ: ಗುಂಪು, ಸಮೂಹ; ಒರಲು: ಗೋಳಿಡು; ಪಾಂಚಾಲಿ: ದ್ರೌಪದಿ;

ಪದವಿಂಗಡಣೆ:
ಕ್ಷಿತಿಯೆ +ಬಿಡಿಸ್+ಆ+ ಸೆರಗನ್+ಎಲೆ +ಪಾ
ರ್ವತಿಯೆ +ತನ್ನದು +ಧರ್ಮವಾದೊಡೆ
ಗತಿ+ ತನಗೆ+ ನೀವಾಗಿರೌ+ ಕಮಲಾದಿ+ಶಕ್ತಿಗಳೆ
ಸತಿ+ಅಹಲ್ಯ+ಅದಿತಿ+ ವರ+ಅರುಂ
ಧತಿ+ ಮಹಾ ಮಾಯಾದಿ +ದೇವ
ಪ್ರತತಿ+ ಬಿಡಿಸಿರೆ +ಸೆರಗನ್+ಎಂದ್+ಒರಲಿದಳು +ಪಾಂಚಾಲಿ

ಅಚ್ಚರಿ:
(೧) ಮಹಾ ಸತಿಯರ ಉಲ್ಲೇಖ – ಅಹಲ್ಯ, ಅದಿತಿ, ಅರುಂಧತಿ, ಮಹಾಮಾಯೆ
(೨) ದೇವಿಯರ ಉಲ್ಲೇಖ – ಕ್ಷಿತಿ, ಪಾರ್ವತಿ, ಕಮಲಾದಿ ಶಕ್ತಿ

ಪದ್ಯ ೨೪: ದ್ರೌಪದಿ ಮತ್ತಾರರಲ್ಲಿ ತನ್ನ ವ್ಯಥೆಯನ್ನು ಹೇಳಿಕೊಂಡಳು?

ಮಾವ ನಿಮ್ಮಯ ನೇತ್ರವಂತ
ರ್ಭಾವದಲಿ ಬೆರಸಿದೊಡೆ ವಿಜ್ಞಾ
ನಾವಲಂಬನ ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ
ದೇವಿಯರಿಗಿದು ಸೊಗಸಲಾ ಸ
ಖ್ಯಾವಳಿಗೆ ಸೇರುವುದಲಾ ನಿ
ರ್ಜೀವರಾದಿರೆ ನೀವೆನುತ ಹಲುಬಿದಳು ಲಲಿತಾಂಗಿ (ಸಭಾ ಪರ್ವ, ೧೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾವ, ನಿಮ್ಮ ಬಾಹಿರ ಕಣ್ಣು ಕುರುಡಿರಬಹುದು ಆದರೆ ನಿಮ್ಮ ಹೃದಯದ ಕಣ್ಣು ಸಹ ಕುರುಡಾಯಿತೇ? ಹೇ ಗಾಂಧಾರೀ ದೇವಿ ನಿಮಗೆ ಈ ನಡೆಯಿಂದ ಸಂತೋಷವಾಯಿತೇ? ಇದು ನಿಮಗೆ ಒಪ್ಪಿಗೆಯೇ? ನೀವು ಬದುಕಿದ್ದೂ ನಿರ್ಜೀವರಾಗಿರುವಿರಲ್ಲಾ, ಎಂದು ದ್ರೌಪದಿಯು ತನ್ನ ಅಳಲನ್ನು ಹೊರಹಾಕಿದಳು.

ಅರ್ಥ:
ಮಾವ: ಗಂಡನ ತಂದೆ; ನೇತ್ರ: ಕಣ್ಣು; ಅಂತರ್ಭಾವ: ಒಳಗೆ, ಆಂತರ್ಯ; ಬೆರಸು: ಸೇರಿಸು; ವಿಜ್ಞಾನ: ಅರಿವು, ತಿಳಿವಳಿಕೆ; ಅವಲಂಬನ: ಆಸರೆ; ದಿಟ್ಟಿ: ಕಣ್ಣು; ಬೆಂದು: ಸುಡು; ಹೃದಯ: ಎದೆ; ದೇವಿ: ಸ್ತ್ರೀಯರನ್ನು ಕರೆಯುವ ಬಗೆ; ಸೊಗಸು: ಚೆಲುವು; ಸಖ್ಯ: ಸ್ನೇಹ; ಆವಳಿ: ಗುಂಪು; ಸೇರು: ಜೊತೆ; ನಿರ್ಜೀವ: ಜೀವವಿಲ್ಲದ; ಹಲುಬು: ಗೋಳಿಡು; ಲಲಿತಾಂಗಿ: ಲತೆಯಂತೆ ದೇಹವುಳ್ಳವಳು, ಸುಂದರಿ;

ಪದವಿಂಗಡಣೆ:
ಮಾವ +ನಿಮ್ಮಯ +ನೇತ್ರವ್+ಅಂತ
ರ್ಭಾವದಲಿ +ಬೆರಸಿದೊಡೆ+ ವಿಜ್ಞಾನ
ಅವಲಂಬನ +ದಿಟ್ಟಿ +ಬೆಂದುದೆ +ನಿಮ್ಮ +ಹೃದಯದಲಿ
ದೇವಿಯರಿಗ್+ಇದು +ಸೊಗಸಲಾ+ ಸ
ಖ್ಯಾವಳಿಗೆ +ಸೇರುವುದಲಾ +ನಿ
ರ್ಜೀವರಾದಿರೆ+ ನೀವೆನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೊಗಸಲಾ ಸಖ್ಯಾವಳಿಗೆ ಸೇರುವುದಲಾ
(೨) ದ್ರೌಪದಿಯ ಪ್ರಶ್ನೆಗಳು – ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ; ನಿರ್ಜೀವರಾದಿರೆ ನೀವೆನುತ ಹಲುಬಿದಳು

ಪದ್ಯ ೨೩: ದ್ರೌಪದಿಯು ದುಶ್ಯಾಸನನಿಂದ ತಪ್ಪಿಸಿಕೊಳ್ಳಲು ಯಾರನ್ನು ಬೇಡಿದಳು?

ಮಾಣಿಸೈ ಗಾಂಗೇಯ ಗುರು ನಿ
ಮ್ಮಾಣೆಯಡಿ ಕೃಪ ಕೃಪೆಯ ಮಾಡೈ
ರಾಣಿವಾಸಂಗಳಿರ ನಿಲಿಸಿರೆ ನಿಮ್ಮ ಮೈದುನನ
ಪ್ರಾಣವಿದ ಕೊಳ ಹೇಳಿರೌ ಸಾ
ಕೂಣೆಯವ ಹೊರಲಾರೆನೆನುತಾ
ರಾಣಿ ಹಲುಬಿದಳೊಡೆಮ್ರುಚಿ ಹೆಣಗಿದಳು ಖಳನೊಡನೆ (ಸಭಾ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುಶ್ಯಾಸನನಿಂದ ತಪ್ಪಿಸಿಕೊಳ್ಳಲು ದ್ರೌಪದಿಯು ಭೀಷ್ಮರ ಬಳಿ ಬಂದು, ಹೇ ಗಾಂಗೇಯ ದುಶ್ಯಾಸನನನ್ನು ನಿಲ್ಲಿಸಿ, ದ್ರೋಣ ನಿಮ್ಮಾಣೆ, ಕೃಪಾಚಾರ್ಯರೇ ದಯವಿಟ್ಟು ದಯೆ ತೋರಿ, ರಾಣಿವಾಸದವರೇ ನನ್ನ ಮೇಲೆ ಕೃಪೆ ತೋರಿ, ನನ್ನನ್ನು ಕೊಂದುಬಿಡಿ ಎಂದು ಹೇಳಿರಿ ಆದರೆ ಈ ಮಾನಭಂಗವನ್ನು ನಾನು ಸಹಿಸಲಾರೆ, ಎಂದು ಗೋಳಿಡುತ್ತಾ ದ್ರೌಪದಿಯು ದುಶ್ಯಾಸನನಿಂದ ತಪ್ಪಿಸಿಕೊಳ್ಳಲು ಹೆಣಗಿದಳು.

ಅರ್ಥ:
ಮಾಣಿಸು: ನಿಲ್ಲುವಂತೆ ಮಾಡು, ನಿಲ್ಲಿಸು; ಗಾಂಗೇಯ: ಭೀಷ್ಮ; ಗುರು: ಆಚಾರ್ಯ; ಆಣೆ: ಪ್ರಮಾಣ; ಅಡಿ: ಕೆಳಗೆ; ಕೃಪೆ: ದಯೆ; ರಾಣಿವಾಸ: ಅಂತಃಪುರದ ಜನ; ನಿಲಿಸು: ತಡೆ; ಮೈದುನ: ತಂಗಿಯ ಗಂಡ; ಪ್ರಾಣ: ಜೀವ; ಕೊಳ: ತೆಗೆ; ಹೇಳಿ: ತಿಳಿಸಿ; ಊಣೆ: ನ್ಯೂನತೆ, ಕುಂದು; ಹೊರು: ಹೊತ್ತುಕೋ; ರಾಣಿ: ಅರಸಿ; ಹಲುಬು: ಗೋಳಿಡು; ಮುರುಚು: ಹಿಂತಿರುಗಿಸು; ಹೆಣಗು: ಹೋರಾಡು, ಕಾಳಗ ಮಾಡು; ಖಳ: ದುಷ್ಟ;

ಪದವಿಂಗಡಣೆ:
ಮಾಣಿಸೈ+ ಗಾಂಗೇಯ +ಗುರು +ನಿ
ಮ್ಮಾಣೆ+ಅಡಿ+ ಕೃಪ+ ಕೃಪೆಯ +ಮಾಡೈ
ರಾಣಿವಾಸಂಗಳಿರ+ ನಿಲಿಸಿರೆ+ ನಿಮ್ಮ +ಮೈದುನನ
ಪ್ರಾಣವಿದ+ ಕೊಳ+ ಹೇಳಿರೌ +ಸಾ
ಕೂಣೆಯವ +ಹೊರಲಾರೆನ್+ಎನುತಾ
ರಾಣಿ +ಹಲುಬಿದಳೊಡೆ+ಮುರುಚಿ +ಹೆಣಗಿದಳು +ಖಳನೊಡನೆ

ಅಚ್ಚರಿ:
(೧) ನಿಲಿಸಿ, ಮಾಣಿಸೈ – ಸಮನಾರ್ಥಕ ಪದ
(೨) ದ್ರೌಪದಿಯ ಕಷ್ಟದ ಪರಿಸ್ಥಿತಿ – ಪ್ರಾಣವಿದ ಕೊಳ ಹೇಳಿರೌ ಸಾಕೂಣೆಯವ ಹೊರಲಾರೆನೆನುತಾ ರಾಣಿ ಹಲುಬಿದ
(೩) ಕೃಪ ಕೃಪೆಯ ಮಾಡೈ – ಪದಗಳ ಬಳಕೆ

ಪದ್ಯ ೨೨: ಸಭೆಯ ಜನರು ಏಕೆ ವ್ಯಥೆಪಟ್ಟರು?

ಸುಳಿವ ಹುಲ್ಲೆಯ ಸೋಹಿನಲಿ ಕು
ಕ್ಕುಳಿಸಿದರೆ ಕುಕ್ಕುರನ ಕೈಯಲಿ
ತಳುವಹುದೆ ಜನಮೇಜಯ ಕ್ಷಿತಿಪಾಲ ನಿನ್ನವರ
ಬಳಲಿಕೆಯನೇನೆಂಬೆನೈ ಹಿಡಿ
ದೆಳೆಯೆ ಹಲುಬಿದಳಕಟ ರಾಯನ
ಲಲನೆಗೀಗತಿಯೇ ಮಹಾದೇವೆಂದುದಖಿಳಜನ (ಸಭಾ ಪರ್ವ, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಜಿಂಕೆಯ ಮರಿಯನ್ನು ಓಡಿಸಿಕೊಂಡು ಹೋಗುವಾಗ ಆ ಜಿಂಕೆಯ ಮರಿಯು ಸಂಕಟಪಟ್ಟರೆ ನಾಯಿಯು ಅದನ್ನು ಹಿಡಿಯುವುದಕ್ಕೆ ತಡಮಾಡೀತೇ? ರಾಜ ಜನಮೇಜಯ ಪಾಂಡವರಿಗೊದಗಿದ ಸಂಕಟವನ್ನೇನೆಂದು ಹೇಳಲಿ, ದುಶ್ಯಾಸನನು ದ್ರೌಪದಿಯನ್ನು ಹಿಡಿದೆಳೆದನು, ದ್ರೌಪದಿಯ ಆಕ್ರಂದನ ಮುಗಿಲುಮುಟ್ಟಿತು, ಪಾಂಡವರ ರಾಣಿಯಾದ ದ್ರೌಪದಿಗೆ ಈ ಸ್ಥಿತಿ ಬಂದುದನ್ನು ನೋಡಿ ಜನರು ದೇವರನ್ನು ನೆನೆಯುತ್ತಾ ಕೊರಗಿ ಗೋಳಾಡಿದರು.

ಅರ್ಥ:
ಸುಳಿ: ಚಿಕ್ಕ, ಮರಿ; ಹುಲ್ಲೆ: ಜಿಂಕೆ; ಸೋಹು: ಅಟ್ಟು, ಓಡಿಸು; ಕುಕ್ಕುಳಿಸು: ಕುದಿ, ತಳಮಳಿಸು; ಕುಕ್ಕುರ: ನಾಯಿ, ಶ್ವಾನ; ತಳುವು: ತಡಮಾಡು; ಕ್ಷಿತಿಪಾಲ: ರಾಜ; ಬಳಲಿಕೆ: ಆಯಾಸ, ದಣಿವು; ಹಿಡಿ: ಬಂಧಿಸು; ಎಳೆ: ತನ್ನ ಕಡೆಗೆ ಸೆಳೆದುಕೊ; ಹಲುಬು: ದುಃಖಪಡು, ಬೇಡಿಕೋ; ಅಕಟ: ಅಯ್ಯೋ; ರಾಯ: ರಾಜ; ಲಲನೆ: ಹೆಣ್ಣು; ಗತಿ: ಸ್ಥಿತಿ; ಅಖಿಳ: ಎಲ್ಲಾ; ಜನ: ಗುಂಪು;

ಪದವಿಂಗಡಣೆ:
ಸುಳಿವ +ಹುಲ್ಲೆಯ +ಸೋಹಿನಲಿ +ಕು
ಕ್ಕುಳಿಸಿದರೆ+ ಕುಕ್ಕುರನ +ಕೈಯಲಿ
ತಳುವಹುದೆ +ಜನಮೇಜಯ +ಕ್ಷಿತಿಪಾಲ +ನಿನ್ನವರ
ಬಳಲಿಕೆಯನ್+ಏನೆಂಬೆನೈ +ಹಿಡಿ
ದೆಳೆಯೆ+ ಹಲುಬಿದಳ್+ಅಕಟ +ರಾಯನ
ಲಲನೆಗ್+ಈ+ಗತಿಯೇ+ ಮಹಾದೇವ+ಎಂದುದ್+ಅಖಿಳಜನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುಳಿವ ಹುಲ್ಲೆಯ ಸೋಹಿನಲಿ ಕುಕ್ಕುಳಿಸಿದರೆ ಕುಕ್ಕುರನ ಕೈಯಲಿ
ತಳುವಹುದೆ
(೨) ಕ ಕಾರದ ತ್ರಿವಳಿ ಪದ – ಕುಕ್ಕುಳಿಸಿದರೆ ಕುಕ್ಕುರನ ಕೈಯಲಿ
(೩) ರಾಯ, ಕ್ಷಿತಿಪಾಲ – ಸಮನಾರ್ಥಕ ಪದ

ಪದ್ಯ ೨೧: ದುರ್ಯೋಧನನು ದುಶ್ಯಾಸನನಿಗೆ ಏನೆಂದು ಆಜ್ಞಾಪಿಸಿದನು?

ಅಹುದಲೇ ಬಳಿಕೇನು ನೀನ ತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ (ಸಭಾ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಕರ್ಣನ ಮಾತನ್ನು ಸಮರ್ಥಿಸುತ್ತಾ, ಕರ್ಣ ವಿಶಾಲಬುದ್ಧಿಯುಳ್ಳ ನಿನ್ನ ಮಾತು ಸರಿಯಾಗಿದೆ, ಈ ದುರಭಿಮಾನಿಗಳಾದ ಪಾಂಡವರ ಮೋಸಗಳು ನಿನಗೇನು ಗೊತ್ತು, ಅವರ ದುರ್ಮಾರ್ಗಗಳು ಅವರಿಗೇ ಇರಲಿ, ಎಂದು ದುಶ್ಯಾಸನನ್ನು ಕರೆದು ದಾಸಿಯರ ಭವನದಲ್ಲಿ ಸಹಾರರು, ಅವರ ವೇಳೆಗಳನ್ನು ಸರದಿಗಳನ್ನು ಗೊತ್ತುಪಡಿಸುವವರು ಬರಲಿ, ಈ ಹೆಣ್ಣನ್ನು ದಾಸಿಯರ ಭವನಕ್ಕೆ ನೂಕೆಂದು ದುರ್ಯೋಧನನು ದುಶ್ಯಾಸನನಿಗೆ ಆಜ್ಞಾಪಿಸಿದನು.

ಅರ್ಥ:
ಬಳಿಕ: ನಂತರ; ಬಹಳ: ತುಂಬ; ಮತಿ: ಬುದ್ಧಿ; ಕುಹಕ: ಮೋಸ, ವಂಚನೆ; ಕೋಟಿ: ವರ್ಗ, ಕೊನೆ; ಬಲ್ಲೆ: ತಿಳಿ; ವೃಥ: ಸುಮ್ಮನೆ; ಅಭಿಮಾನಿ: ಪ್ರೀತಿಯುಳ್ಳವನು; ರಹಣಿ: ಹೊಂದಿಕೆ, ಕ್ರಮ; ಸಾಕು: ಕೊನೆ, ಅಂತ್ಯ; ತೊತ್ತು: ದಾಸ; ಸಹಚರ: ಅನುಚರ, ಸೇವಕ; ಸೂಳಾಯತ: ಓಲೆಯಕಾರ; ಕರೆ: ಬರೆಮಾಡು; ಮಹಿಳೆ: ಸ್ತ್ರೀ; ನೂಕು: ತಳ್ಳು; ನೇಮಿಸು: ಅಜ್ಞಾಪಿಸು;

ಪದವಿಂಗಡಣೆ:
ಅಹುದಲೇ+ ಬಳಿಕೇನು +ನೀನ್+ಅತಿ
ಬಹಳ +ಮತಿಯೈ +ಕರ್ಣ +ನೀನ್+ಈ
ಕುಹಕ+ ಕೋಟಿಯನೆತ್ತ+ ಬಲ್ಲೆ +ವೃಥ+ಅಭಿಮಾನಿಗಳ
ರಹಣಿ+ ಸಾಕಂತಿರಲಿ+ ತೊತ್ತಿರ
ಸಹಚರರ+ ಸೂಳಾಯಿತರ+ ಕರೆ
ಮಹಿಳೆಯನು +ನೂಕೆಂದು +ದುಶ್ಯಾಸನಗೆ+ ನೇಮಿಸಿದ

ಅಚ್ಚರಿ:
(೧) ದುರ್ಯೋಧನನು ಪಾಂಡವರನ್ನು ನೋಡುವ ಪರಿ – ಕುಹಕ ಕೋಟಿಯನೆತ್ತ ಬಲ್ಲೆ, ವೃಥಾಭಿಮಾನಿಗಳ ರಹಣಿ