ಪದ್ಯ ೮: ದುರ್ಯೋಧನನು ದ್ರೌಪದಿಯನ್ನು ಏನು ಮಾಡಲು ಹೇಳಿದ?

ನೀತಿ ಮರುಳನು ವಿದುರನೀತನ
ಮಾತಿನಲಿ ಫಲವೇನು ತೊತ್ತಿರೊ
ಳೀ ತಳೋದರಿ ಬೆರೆಸಿ ಬದುಕಲಿ ಕರ್ಣ ಕಳುಹಿವಳ
ಈ ತತುಕ್ಷಣ ದೃಷ್ಟಿಬಂಧನ
ವೇತರಲಿ ಮಾಡಿದಳೊ ಲಜ್ಜಾ
ಜಾತವುಳಿದುದು ಬೆಳೆದ ಸೀರೆಯ ಕಟ್ಟಿ ಹೊರಿಸೆಂದ (ಸಭಾ ಪರ್ವ, ೧೬ ಸಂಧಿ, ೮ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರಿಸುತ್ತಾ, ಕರ್ಣಾ, ವಿದುರನು ನೀತಿಯ ಬೆನ್ನತ್ತಿ ಹುಚ್ಚಹಿಡಿದವನು, ಇವನ ಮಾತಿನಿಂದ ಏನು ಪ್ರಯೋಜನವಿಲ್ಲ. ದ್ರೌಪದಿಯು ದಾಸಿಯರೊಡನೆ ಸೇರಲಿ ಇವಳನ್ನು ಕಳಿಸು. ಯಾವ ಕಣ್ಣುಕಟ್ಟು ವಿದ್ಯೆಯಿಂದಲೋ ತನ್ನ ಮಾನವನ್ನು ರಕ್ಷಿಸಿಕೊಂಡಳು. ಈ ಸೀರೆಗಳನ್ನೆಲ್ಲಾ ಕಟ್ಟಿಸಿ ಇವಳ ಕೈಯಲ್ಲಿ ಹೊರಿಸು ಎಂದು ಅಪ್ಪಣೆ ನೀಡಿದನು.

ಅರ್ಥ:
ನೀತಿ: ಮಾರ್ಗದರ್ಶನ; ಮರುಳ: ತಿಳಿಗೇಡಿ, ದಡ್ಡ; ಮಾತು: ವಾಣಿ, ನುಡಿ; ಫಲ: ಪ್ರಯೋಜನ; ತೊತ್ತು: ದಾಸ; ತಳೋದರಿ: ಹೆಂಡತಿ; ಬೆರಸಿ:ಕೂಡಿಸು, ಜೊತೆ; ಬದುಕು: ಜೀವನ; ಕಳುಹು: ತೆರಳು, ಕಳಿಸು; ತತುಕ್ಷಣ: ಕೂಡಲೆ; ದೃಷ್ಟಿ: ನೋಟ; ಬಂಧನ: ಕಟ್ಟು; ಏತರಲಿ: ರೀತಿ; ಲಜ್ಜ: ನಾಚಿಕೆ; ಜಾತ: ಹುಟ್ಟಿದ; ಉಳಿ: ಮಿಕ್ಕ, ನಿಲ್ಲು; ಬೆಳೆದ: ಹೆಚ್ಚು; ಕಟ್ಟು: ಕಂತೆ, ಬಂಧಿಸು; ಹೊರಿಸು: ಹೇರು; ಸೀರೆ: ವಸ್ತ್ರ;

ಪದವಿಂಗಡಣೆ:
ನೀತಿ+ ಮರುಳನು+ ವಿದುರನ್+ಈತನ
ಮಾತಿನಲಿ +ಫಲವೇನು +ತೊತ್ತಿರೊಳ್
ಈ+ ತಳೋದರಿ+ ಬೆರೆಸಿ+ ಬದುಕಲಿ +ಕರ್ಣ +ಕಳುಹಿವಳ
ಈ +ತತುಕ್ಷಣ +ದೃಷ್ಟಿ+ಬಂಧನವ್
ಏತರಲಿ+ ಮಾಡಿದಳೊ+ ಲಜ್ಜಾ
ಜಾತ+ಉಳಿದುದು +ಬೆಳೆದ +ಸೀರೆಯ +ಕಟ್ಟಿ +ಹೊರಿಸೆಂದ

ಅಚ್ಚರಿ:
(೧) ದುರ್ಯೋಧನನ ನೀಚ ನುಡಿ – ತೊತ್ತಿರೊಳೀ ತಳೋದರಿ ಬೆರೆಸಿ ಬದುಕಲಿ
(೨) ವಿದುರನನ್ನು ಹಂಗಿಸುವ ಪರಿ – ನೀತಿ ಮರುಳನು

ಪದ್ಯ ೭: ದುರ್ಯೋಧನನು ವಿದುರನ ಮಾತಿಗೆ ಹೇಗೆ ಉತ್ತರಿಸಿದನು?

ದೈವವೀ ದ್ರೌಪದಿಗೆ ಸೀರೆಯ
ನೀವುದಲ್ಲದೆ ಬಿಡಿಸಲಾಪುದೆ
ದೈವತೊತ್ತಿದ ಹುರುಡುಗೆಲಸದ ಹಿಂಡುಗೂಟದಲಿ
ದೈವವಿವಳಿಗೆ ತಾನಲೇ ತ
ನ್ನೈವರಿಕ್ಕಿದ ಮಾತು ರಿಪುಗಳ
ಮೈವಳಿಯ ನುಡಿಗಾರ ನೀ ಸಾರೆಂದನಾ ಭೂಪ (ಸಭಾ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ವಿದುರನ ಮಾತಿಗೆ ಪ್ರತ್ಯುತ್ತರ ನೀಡಿದ ದುರ್ಯೋಧನ, ದೈವವು ಇವಳಿಗೆ ಸೀರೆಯನ್ನು ಕೊಡಬಲ್ಲುದೇ ಹೊರತು ಅವಳನ್ನು ದೈವವು ದಾಸ್ಯದಿಂದ ಬಿಡಿಸಲಾರದು. ಇವಳ ಪತಿಗಳು ನಮ್ಮ ದಾಸರು, ಅವರ ಸಮೂಹವು ಇವಳಿಗೇನನ್ನು ವಿಧಿಸುವುದೋ ಅದೇ ಇವಳಿಗೆ ದೈವವಾಕ್ಯ. ವಿದುರಾ ನೀನು ಶತ್ರುಪರ ಮಾತನಾಡುವವ, ನೀನು ಇಲ್ಲಿಂದ ಹೊರಡು ಎಂದು ದುರ್ಯೋಧನನು ಹೇಳಿದನು.

ಅರ್ಥ:
ದೈವ: ಭಗವಂತ; ಸೀರೆ: ವಸ್ತ್ರ; ಬಿಡಿಸು: ಕಳಚು, ಸಡಿಲಿಸು; ಈವು: ನೀಡು; ತೊತ್ತು: ದಾಸ್ಯ; ಹುರುಡು: ಹೊಟ್ಟೆಕಿಚ್ಚು, ಮತ್ಸರ, ಹಟ; ಕೆಲಸ: ಕಾರ್ಯ; ಹಿಂಡು: ಗೂಟ: ದಸಿ; ಹಿಂಡು: ಗುಂಪು; ರಿಪು: ವೈರಿ; ಮೈವಳಿ: ವಶ, ಅಧೀನ; ನುಡಿ: ವಾಣಿ; ಸಾರು: ಹೋಗು; ಭೂಪ: ರಾಜ;

ಪದವಿಂಗಡಣೆ:
ದೈವವ್+ಈ+ ದ್ರೌಪದಿಗೆ +ಸೀರೆಯ
ನೀವುದ್+ಅಲ್ಲದೆ +ಬಿಡಿಸಲಾಪುದೆ
ದೈವ+ತೊತ್ತಿದ+ ಹುರುಡು+ಕೆಲಸದ+ ಹಿಂಡು+ಗೂಟದಲಿ
ದೈವವ್+ಇವಳಿಗೆ+ ತಾನಲೇ +ತನ್
ಐವರಿಕ್ಕಿದ+ ಮಾತು +ರಿಪುಗಳ
ಮೈವಳಿಯ+ ನುಡಿಗಾರ+ ನೀ +ಸಾರೆಂದನಾ +ಭೂಪ

ಅಚ್ಚರಿ:
(೧) ವಿದುರನನ್ನು ಬಯ್ಯುವ ಪರಿ – ರಿಪುಗಳ ಮೈವಳಿಯ ನುಡಿಗಾರ ನೀ ಸಾರೆಂದನಾ ಭೂಪ
(೨) ದೈವ – ೧, ೩, ೪ ಸಾಲಿನ ಮೊದಲ ಪದ

ಪದ್ಯ ೬: ವಿದುರನು ದುರ್ಯೋಧನನಿಗೆ ಏನು ಹೇಳಿದ?

ನೆನೆದೆ ನೀನನುಚಿತವನೀ ಹೊ
ತ್ತಿನಲಿ ದ್ರುಪದಾತ್ಮಜೆಯ ದೈವದ
ನೆನಹಿನಲಿ ದೂರಡಗಿತರೆ ಬೆಳಸಾದುದಪಕೀರ್ತಿ
ವನಿತೆಯನು ಬಿಡು ಪಾಂಡುನೃಪ ನಂ
ದನರ ನೀನೊಲಿದಂತೆ ಮಾಡುವು
ದನುನಯವು ನಿನಗೆಂದು ನುಡಿದನು ವಿದುರ ಕುರುಪತಿಗೆ (ಸಭಾ ಪರ್ವ, ೧೬ ಸಂಧಿ, ೬ ಪದ್ಯ)

ತಾತ್ಪರ್ಯ:
ವಿದುರನು ದುರ್ಯೋಧನನನ್ನು ಉದ್ದೇಶಿಸಿ, ನೀನು ಅನುಚಿತವಾದ ಕಾರ್ಯವನ್ನು ಮಾಡಲು ಮುಂದಾದೆ, ಆದರೆ ದ್ರೌಪದಿಯ ದೈವಭಕ್ತಿಯಿಂದ ಆ ಕಾರ್ಯವನು ಭಂಗಗೊಂಡಿತು, ನಿನ್ನ ಅಪಕೀರ್ತಿಯ ಪೈರು ಅರ್ಧಕ್ಕೆ ಬೆಳೆಯದೇ ನಿಂತಿತು. ದ್ರೌಪದಿಯನ್ನು ಬಿಟ್ಟುಬಿಡು, ಪಾಂಡವರನ್ನು ನಿನಗೆ ತಿಳಿದಂತೆ ನಡೆಸಿಕೋ ಎಂದು ವಿದುರನು ಹೇಳಿದನು.

ಅರ್ಥ:
ನೆನೆ: ಯೋಚಿಸು; ಅನುಚಿತ: ಸರಿಯಲ್ಲದ; ಹೊತ್ತು: ಸಮಯ; ಆತ್ಮಜೆ: ಮಗಳು; ದೈವ: ಭಗವಂತ; ನೆನಹು: ಯೋಚನೆ; ದೂರ: ಬಹಳ ಅಂತರ, ದೀರ್ಘವಾದ; ಅರೆ: ಅರ್ಧ; ಅಡಗು: ಮುಚ್ಚು; ಬೆಳಸು: ಹೆಚ್ಚಿಸು; ಅಪಕೀರ್ತಿ: ಅಪಯಶಸ್ಸು; ವನಿತೆ: ಸ್ತ್ರೀ, ಯುವತಿ; ಬಿಡು: ತೊರೆ, ತ್ಯಜಿಸು; ನೃಪ: ರಾಜ; ನಂದನ: ಮಕ್ಕಳು; ಒಲಿ: ಇಷ್ಟ; ಅನುನಯ: ಸೂಕ್ತವಾದ ಕ್ರಮ; ನುಡಿ: ಮಾತಾಡು; ಕುರುಪತಿ: ದುರ್ಯೋಧನ;

ಪದವಿಂಗಡಣೆ:
ನೆನೆದೆ +ನೀನ್+ಅನುಚಿತವನ್+ಈ+ ಹೊ
ತ್ತಿನಲಿ +ದ್ರುಪದ್+ಆತ್ಮಜೆಯ +ದೈವದ
ನೆನಹಿನಲಿ +ದೂರ್+ಅಡಗಿತ್+ಅರೆ+ ಬೆಳಸಾದುದ್+ಅಪಕೀರ್ತಿ
ವನಿತೆಯನು +ಬಿಡು +ಪಾಂಡುನೃಪ+ ನಂ
ದನರ +ನೀನ್+ಒಲಿದಂತೆ +ಮಾಡುವುದ್
ಅನುನಯವು +ನಿನಗೆಂದು +ನುಡಿದನು +ವಿದುರ +ಕುರುಪತಿಗೆ

ಅಚ್ಚರಿ:
(೧) ದ್ರೌಪದಿಯನ್ನು ದ್ರುಪದಾತ್ಮಜೆ, ವನಿತೆ ಎಂದು ಕರೆದಿರುವುದು
(೨) ಅಪಕೀರ್ತಿ ಅರ್ಧಕ್ಕೆ ನಿಂತಿತು ಎನ್ನುವ ಪರಿ – ದೂರಡಗಿತರೆ ಬೆಳಸಾದುದಪಕೀರ್ತಿ

ಪದ್ಯ ೫: ಭೀಷ್ಮಾದಿಗಳ ಪರಿಸ್ಥಿತಿ ಹೇಗಿತ್ತು?

ಬೆಗಡಿನಲಿ ಮುದ ಖೇದ ನಯನಾಂ
ಬುಗಳೊಳಾನಂದಾಶ್ರು ಶೋಕದ
ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ
ದುಗುಡದಲಿ ಪರಿತೋಷ ಕಂದಿದ
ಮೊಗದಲುಜ್ವಲ ವೃತ್ತಿ ಭೀಷ್ಮಾ
ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮುಹೂರ್ತದಲಿ (ಸಭಾ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯ ಸೀರೆಯನ್ನು ಸೆಳೆಯಲು ಮುಂದಾಗಿ ಅದರಲ್ಲಿ ಆಶ್ಚರ್ಯಕರವಾಗಿ ಆಕೆಯ ಮಾನವುಳಿದ ರೀತಿಯು ಭೀಷ್ಮಾದಿಗಳಲ್ಲಿ ಹಲವಾರು ಭಾವನೆಗಳು ಸೇರಿಕೊಂಡವು. ದ್ರೌಪದಿಯ ಸೀರೆಗೆ ಕೈಹಾಕಿದಾಗ ಆಶ್ಚರ್ಯ ಮತ್ತು ದುಃಖದ ಭಾವನೆ, ಹಾಗೆಯೇ ಆಶ್ಚರ್ಯಕರ ರೀತಿಯಲ್ಲಿ ಅವಳ ಮಾನವುಳಿದುದು ಸಂತಸದ ನಗೆ, ಕಣ್ಣೀರೊಡನೆ ಆನಂದಾಶ್ರುಗಳು ಒಮ್ಮೆಗೆ ಹೊರಬಂದವು. ದುಃಖಿತ ಮನಸ್ಥಿತಿಯಲ್ಲಿದ್ದವರಿಂದ ಉಕ್ಕಿಬಂದ ಸಂತಸದ ನಗೆ, ಉದ್ವೇಗದ ಬೆವರೊಂದು ಕಡೆ, ಅದರಲ್ಲೇ ಇನ್ನೊಂದೆಡೆ ರೋಮಾಂಚನ, ದುಃಖದಲ್ಲಿ ಅತಿಶಯ ಸಂತೋಷ, ಬಾಡಿಹೋಗಿದ್ದ ಮುಖದಲ್ಲಿ ಬೆಳಗಿದ ಬೆಳಕು, ಇವು ಭೀಷ್ಮಾದಿಗಳಲ್ಲಿ ಮೂಡಿಬಂದ ಭಾವನೆಗಳು.

ಅರ್ಥ:
ಬೆಗಡು: ಆಶ್ಚರ್ಯ, ಬೆರಗು; ಮುದ: ಸಂತೋಷ; ಖೇದ: ದುಃಖ, ಉಮ್ಮಳ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಆನಂದ: ಸಂತೋಷ; ಆಶ್ರು: ಕಣ್ಣೀರು; ಶೋಕ: ದುಃಖ; ಬಗೆ: ಆಲೋಚನೆ; ಉಬ್ಬು: ಹಿಗ್ಗು; ನಗೆ: ಸಂತಸ; ಸ್ವೇದ: ಬೆವರು; ರೋಮಾಂಚ: ಮೈಗೂದಲು ನಿಮಿರುವಿಕೆ, ಪುಳಕ; ದುಗುಡ: ದುಃಖ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಕಂದು: ಕಳಾಹೀನ; ಮೊಗ: ಮುಖ; ಉಜ್ವಲ: ಪ್ರಕಾಶ; ಉಜ್ವಲವೃತ್ತಿ: ಜ್ವಾಜಲ್ಯಮಾನ ಪ್ರಕಾಶ; ಆದಿ: ಮುಂತಾದ; ಪಲ್ಲಟ: ಬದಲಾವಣೆ, ಮಾರ್ಪಾಟು; ಪಡಿ: ಸಮಾನವಾದುದು, ಎಣೆ; ಮುಹೂರ್ತ: ಒಳ್ಳೆಯ ಸಮಯ;

ಪದವಿಂಗಡಣೆ:
ಬೆಗಡಿನಲಿ +ಮುದ +ಖೇದ +ನಯನಾಂ
ಬುಗಳೊಳ್+ಆನಂದ+ಆಶ್ರು+ ಶೋಕದ
ಬಗೆಯೊಳ್+ಉಬ್ಬಿದ +ನಗೆಯಲಾ +ಸ್ವೇದದಲಿ +ರೋಮಾಂಚ
ದುಗುಡದಲಿ +ಪರಿತೋಷ +ಕಂದಿದ
ಮೊಗದಲ್+ಉಜ್ವಲ +ವೃತ್ತಿ +ಭೀಷ್ಮಾ
ದಿಗಳೊಳಗೆ+ ಪಲ್ಲಟಿಸುತಿರ್ದುದು +ಪಡಿ+ಮುಹೂರ್ತದಲಿ

ಅಚ್ಚರಿ:
(೧) ಮುದ ಖೇದ; ಆನಂದ, ಶೋಕ; ದುಗುಡ, ಪರಿತೋಷ – ವೈರುಧ್ಯ ಭಾವನೆಗಳನ್ನು ವಿವರಿಸುವ ಪರಿ