ಪದ್ಯ ೧೩೯: ಕೃಷ್ಣನು ಏಕೆ ಚಿಂತಿಸಿದನು?

ಕೇಳಿದನು ಮುರವೈರಿ ತನ್ನಯ
ಮೇಳದೈವರ ಸತಿಯ ಹುಯ್ಯಲ
ನಾಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ
ಕೋಳುವೋದವೆ ಪಾಂಡುಪುತ್ರರ
ಬಾಳುವೆಗಳಕಟೆನುತ ಲಕ್ಷ್ಮೀ
ಲೋಲ ಚಿಂತಿಸಿ ನುಡಿದ ರುಕ್ಮಿಣಿದೇವಿಗೀ ಹದನ (ಸಭಾ ಪರ್ವ, ೧೫ ಸಂಧಿ, ೧೩೯ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನೆರಡು ಕೈಗಳನ್ನು ಎತ್ತಿ ಕೃಷ್ಣನಲ್ಲಿ ಮೊರೆಯಿಟ್ಟುದನ್ನು ಕೇಳಿದನು. ಆಳಿಗೆ ಆದ ಅಪಮಾನ ಒಡೆಯನಿಗೇ ಆದದ್ದು ಎಂಬ ನ್ಯಾಯವನ್ನು ಅವನು ಮನಗೊಂಡನು. ಅಯ್ಯೋ ಪಾಂಡುಪುತ್ರರು ದಾಸರಾಗಿ ಬಾಳುವಂತಾಯಿತೇ ಎಂದು ನೊಂದು ಚಿಂತಿಸಿ ರುಕ್ಮಿಣಿದೇವಿಗೆ ಹೀಗೆ ಹೇಳಿದನು.

ಅರ್ಥ:
ಕೇಳು: ಆಲಿಸು; ಮೇಳ: ಸಂಬಂಧ, ನಂಟು, ಗುಂಪು; ಸತಿ: ಹೆಂಡತಿ; ಹುಯ್ಯಲು: ಗೋಳು, ಕೂಗು; ಆಳು: ದಾಸ; ಅಪಮಾನ: ಅಗೌರವ; ಆಳ್ದ: ಒಡೆಯ; ನುಡಿ: ಮಾತು; ಕೋಳು: ಹೊಡೆತ, ಪೆಟ್ಟು; ಬಾಳುವೆ: ಜೀವನ; ಅಕಟ: ಅಯ್ಯೋ; ಚಿಂತಿಸು: ಯೋಚಿಸು; ನುಡಿ: ಮಾತಾಡು; ಹದ: ಸ್ಥಿತಿ, ರೀತಿ; ಲೋಲ: ಪ್ರೀತಿ;

ಪದವಿಂಗಡಣೆ:
ಕೇಳಿದನು +ಮುರವೈರಿ +ತನ್ನಯ
ಮೇಳದ್+ಐವರ +ಸತಿಯ +ಹುಯ್ಯಲನ್
ಆಳಿನ್+ಒಂದ್+ಅಪಮಾನವ್+ಆಳ್ದಂಗೆಂಬ+ ನುಡಿಯಿಂದ
ಕೋಳುವೋದವೆ+ ಪಾಂಡುಪುತ್ರರ
ಬಾಳುವೆಗಳ್+ಅಕಟೆನುತ +ಲಕ್ಷ್ಮೀ
ಲೋಲ +ಚಿಂತಿಸಿ +ನುಡಿದ +ರುಕ್ಮಿಣಿದೇವಿಗ್+ಈ+ ಹದನ

ಅಚ್ಚರಿ:
(೧) ಹಿತನುಡಿಯ ಬಳಕೆ – ಆಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ

ಪದ್ಯ ೧೩೮: ಕೃಷ್ಣನು ಮನದಲ್ಲಿ ಏನನ್ನು ನೆಲೆಗೊಳಿಸಿದನು?

ಇತ್ತ ದ್ವಾರಾವತಿಯೊಳಗೆ ದೇ
ವೋತ್ತಮನು ಭಕುತರಿಗೆ ತನ್ನನು
ತೆತ್ತು ಬದುಕುವೆನೆಂಬ ಪರಮವ್ರತದ ನಿಷ್ಠೆಯನು
ಚಿತ್ತದಲಿ ನೆಲೆಗೊಳಿಸಿ ರುಕ್ಮಿಣಿ
ಯತ್ತ ಸಂತೋಷದಿ ಸಮೇಳದ
ನೆತ್ತ ಸಾರಿಯ ಹರಹಿ ಹಾಸಂಗಿಯನು ದಾಳಿಸುತ (ಸಭಾ ಪರ್ವ, ೧೫ ಸಂಧಿ, ೧೩೮ ಪದ್ಯ)

ತಾತ್ಪರ್ಯ:
ಇತ್ತ ದ್ವಾರಕೆಯಲ್ಲಿ ಶ್ರೀಕೃಷ್ಣನು ಭಕ್ತರಿಗೆ ನನ್ನನ್ನೇ ತೆತ್ತುಬಿಡುತ್ತೇನೆ ಎಂಬ ಮಹಾವ್ರತದ ನಿಷ್ಠೆಯನ್ನು ಮನಸ್ಸಿನಲ್ಲೇ ಇಟ್ಟುಬಿಟ್ಟಿರುತ್ತಿದ್ದನು. ಅವನು ರುಕ್ಮಿಣಿದೇವಿಯ ಮನೆಯಲ್ಲಿ ಹಾಸನ್ನು ಹಾಸಿ ಕಾಯಿಗಳನ್ನು ಹೂಡಿ, ದಾಳಗಳನ್ನು ನೆಡೆಸುತ್ತಿದ್ದನು.

ಅರ್ಥ:
ದೇವೋತ್ತಮ: ಭಗವಂತನಲ್ಲಿ ಶ್ರೇಷ್ಠನಾದ; ಭಕುತ: ಪೂಜಿಸುವವನು, ಆರಾಧಕ; ತೆತ್ತು: ಕೊಡು, ನೀಡು; ಬದುಕು: ಜೀವಿಸು; ವ್ರತ: ನಿಯಮ; ನಿಷ್ಠೆ: ದೃಢತೆ, ಸ್ಥಿರತೆ; ಚಿತ್ತ: ಮನಸ್ಸು; ನೆಲೆಗೊಳಿಸು: ಭದ್ರಮಾಡು; ಸಂತೋಷ: ಸಂತಸ; ಸಮೇಳ: ಜೊತೆ; ನೆತ್ತ: ಪಗಡೆಯ ದಾಳ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಹರಹು: ವಿಸ್ತಾರ, ವೈಶಾಲ್ಯ; ಹಾಸಂಗಿ: ಜೂಜಿನ ದಾಳ, ಲೆತ್ತ; ದಾಳಿ

ಪದವಿಂಗಡಣೆ:
ಇತ್ತ +ದ್ವಾರಾವತಿಯೊಳಗೆ +ದೇ
ವೋತ್ತಮನು +ಭಕುತರಿಗೆ +ತನ್ನನು
ತೆತ್ತು +ಬದುಕುವೆನೆಂಬ+ ಪರಮವ್ರತದ+ ನಿಷ್ಠೆಯನು
ಚಿತ್ತದಲಿ+ ನೆಲೆಗೊಳಿಸಿ+ ರುಕ್ಮಿಣಿ
ಯತ್ತ+ ಸಂತೋಷದಿ +ಸಮೇಳದ
ನೆತ್ತ +ಸಾರಿಯ +ಹರಹಿ +ಹಾಸಂಗಿಯನು +ದಾಳಿಸುತ

ಅಚ್ಚರಿ:
(೧) ಶ್ರೀಕೃಷ್ಣನ ಅಭಯ – ದೇವೋತ್ತಮನು ಭಕುತರಿಗೆ ತನ್ನನು ತೆತ್ತು ಬದುಕುವೆನೆಂಬ ಪರಮವ್ರತದ ನಿಷ್ಠೆಯನುಚಿತ್ತದಲಿ ನೆಲೆಗೊಳಿಸಿ

ಪದ್ಯ ೧೩೭: ಕೃಷ್ಣನು ದ್ರೌಪದಿಯ ಹಿಂದಿನ ಜನ್ಮದ ಯಾವ ಪ್ರಸಂಗವನ್ನು ಹೇಳಿದನು?

ಭೂಸುರರುಗಳು ಚೋರರಿಂದವೆ
ಗಾಸಿಯಾಗಿ ದಿಗಂಬರದಿಬರೆ
ಯಾ ಸುದತಿ ತಾನುಟ್ಟ ಸೀರೆಯೊಳರ್ಧವನು ಸೀಳಿ
ವಾಸುದೇವಾರ್ಪಣವು ತಾನೆಂ
ದೋಸರಿಸದಂತಾಗ ಕೊಡಲಿಂ
ದೀಸಮಯಕಿಂತೊದಗಿ ಬಂದುದು ಪೂರ್ವದತ್ತ ಫಲ (ಸಭಾ ಪರ್ವ, ೧೫ ಸಂಧಿ, ೧೩೭ ಪದ್ಯ)

ತಾತ್ಪರ್ಯ:
ಸತ್ಯಭಾಮೆ, ದ್ರೌಪದಿಯು ಪೂರ್ವ ಜನ್ಮದಲ್ಲಿ ನಾರಾಯಣಿಯಾಗಿ ಪತಿಯನ್ನು ಪಡೆಯಲು ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದಳು. ಆಗ ದರೋಡೆಕೋರರು ಬ್ರಾಹ್ಮಣ ಸಂಸಾರವೊಂದರ ಬಟ್ಟೆಗಳನ್ನೆಲ್ಲಾ ಕಸಿದುಕೊಳ್ಳಲು, ಆವರು ಕಾಡಿನಲ್ಲಿ ಬೆತ್ತಲೆಯಾಗಿ ಓಡಿಬರುತ್ತಿದ್ದುದನ್ನು ಕಂಡ ನಾರಾಯಣಿಯು ಅವಳು ಧರಿಸಿದ್ದ ಸೀರೆಯಲ್ಲಿ ಅರ್ಧಭಾಗವನ್ನು ಹರಿದು ವಾಸುದೇವಾರ್ಪಣ ವೆಂದು ಕೊಟ್ಟಳು. ಪೂರ್ವಜನ್ಮದ ದಾನಕ್ಕೆ ಈಗ ಹೀಗೆ ಫಲಸಿಕ್ಕಿದೆ, ಇದು ಬಿಟ್ಟರೆ ಬೇರೇನೂ ಇಲ್ಲ ಎಂದು ಕೃಷ್ಣನು ಹೇಳಿದನು.

ಅರ್ಥ:
ಭೂಸುರ: ಬ್ರಾಹ್ಮಣ; ಚೋರ: ಕಳ್ಳ; ಗಾಸಿ:ತೊಂದರೆ, ಕಷ್ಟ; ದಿಗಂಬರ: ಬಟ್ಟೆಯಿಲ್ಲದ ಸ್ಥಿತಿ, ನಗ್ನ; ಬರೆ: ಆಗಮಿಸು; ಸುದತಿ: ಹೆಣ್ಣು, ಸುಂದರಿ; ಉಟ್ಟ: ಧರಿಸಿದ; ಸೀರೆ: ವಸ್ತ್ರ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಸೀಳು: ಹರಿ; ಅರ್ಪಣ: ಒಪ್ಪಿಸುವುದು; ಓಸರಿಸು: ಹಿಂಜರಿ; ಕೊಡಲು: ನೀಡಲು; ಸಮಯ: ಕಾಲ; ಒದಗು: ಕೂಡಿಬರು; ಪೂರ್ವ: ಹಿಂದೆ; ದತ್ತ: ಪಡೆದ; ಫಲ: ಪ್ರಯೋಜನ;

ಪದವಿಂಗಡಣೆ:
ಭೂಸುರರುಗಳು +ಚೋರರಿಂದವೆ
ಗಾಸಿಯಾಗಿ+ ದಿಗಂಬರದಿ+ಬರೆ
ಯಾ+ ಸುದತಿ+ ತಾನುಟ್ಟ +ಸೀರೆಯೊಳ್+ಅರ್ಧವನು +ಸೀಳಿ
ವಾಸುದೇವಾರ್ಪಣವು+ ತಾನೆಂದ್
ಓಸರಿಸದಂತ್+ಆಗ +ಕೊಡಲಿಂದ್
ಈ+ಸಮಯಕಿಂತ್+ಒದಗಿ+ ಬಂದುದು+ ಪೂರ್ವದತ್ತ+ ಫಲ

ಅಚ್ಚರಿ:
(೧) ಒಳ್ಳೆಯ ಕಾರ್ಯವು ಹೇಗೆ ರಕ್ಷಿಸುತ್ತದೆ ಎನ್ನುವುದನ್ನು ತಿಳಿಸುವ ಕಾವ್ಯ

ಪದ್ಯ ೧೩೬: ಕೃಷ್ಣನು ಸತ್ಯಭಾಮೆಯ ಪ್ರಶ್ನೆಗೆ ಹೇಗೆ ಉತ್ತರಿಸಿದನು?

ಕೌರವರು ಜೂಜಿನಲಿ ನಾರಿಯ
ಸೀರೆಯನು ಸುಲಿಯಲ್ಕೆ ಮೊರೆಯಿಡೆ
ನಾರಿಗಕ್ಷಯ ವಸ್ತ್ರವಾಗಲಿಯೆನ್ನ ನೆನೆದುದಕೆ
ಆರದೆನ್ನನು ನೆನೆವರವರಿಗೆ
ಧಾರಕನು ತಾನಹೆನು ಕೇಳೆಲೆ
ನಾರಿ ಬೇರೊಂದಿಲ್ಲವೆಂದನು ಶೌರಿ ನಸುನಗುತ (ಸಭಾ ಪರ್ವ, ೧೫ ಸಂಧಿ, ೧೩೬ ಪದ್ಯ)

ತಾತ್ಪರ್ಯ:
ಸತ್ಯಭಾಮೆಯ ಪ್ರಶ್ನೆಗೆ ಉತ್ತರಿಸುತ್ತಾ, ಎಲೈ ಸತ್ಯಭಾಮೆ, ಕೌರವರು ಪಾಂಡವರನ್ನು ದ್ಯೂತದಲ್ಲಿ ಸೋಲಿಸಿ ದ್ರೌಪದಿಯನ್ನು ಸೋತರು, ಕೌರವರು ದ್ರೌಪದಿಯ ಸೀರೆಯನ್ನು ಸುಲಿಯಲಾರಂಭಿಸಿದರು, ದ್ರೌಪದಿಯು ನನ್ನಲ್ಲಿ ಮೊರೆಯಿಡಲು ನಾನು ಅಕ್ಷಯವಾಗಲಿ ಎಂದೆನು. ಸತ್ಯಭಾಮೆ, ಕೇಳು ಅಸಹಾಯಕರಾಗಿ ಯಾರು ನನ್ನನ್ನು ನೆನೆಯುವರೋ ಅವರನ್ನು ನಾನು ಕಾಪಾಡುತ್ತೇನೆ, ಇನ್ನೇನೂ ಇಲ್ಲ ಎಂದು ನಗುತ ಉತ್ತರಿಸಿದನು.

ಅರ್ಥ:
ಜೂಜು: ದ್ಯೂತ; ನಾರಿ: ಹೆಣ್ಣು; ಸೀರೆ: ವಸ್ತ್ರ; ಸುಲಿ: ಕಳಚು, ತೆಗೆ; ಮೊರೆ: ಅಳಲು, ಕೂಗು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ವಸ್ತ್ರ: ಬಟ್ಟೆ; ನೆನೆ: ಜ್ಞಾಪಿಸು; ಧಾರಕ: ಆಧಾರವಾದುದು; ಕೇಳು: ಆಲಿಸು; ಬೇರೆ: ಅನ್ಯ; ಶೌರಿ: ಕೃಷ್ಣ; ನಗು: ಸಂತಸ;

ಪದವಿಂಗಡಣೆ:
ಕೌರವರು+ ಜೂಜಿನಲಿ +ನಾರಿಯ
ಸೀರೆಯನು +ಸುಲಿಯಲ್ಕೆ +ಮೊರೆಯಿಡೆ
ನಾರಿಗ್+ಅಕ್ಷಯ +ವಸ್ತ್ರವಾಗಲಿ+ಎನ್ನ +ನೆನೆದುದಕೆ
ಆರದ್+ಎನ್ನನು +ನೆನೆವರ್+ಅವರಿಗೆ
ಧಾರಕನು +ತಾನಹೆನು +ಕೇಳೆಲೆ
ನಾರಿ+ ಬೇರೊಂದಿಲ್ಲವ್+ಎಂದನು +ಶೌರಿ +ನಸುನಗುತ

ಅಚ್ಚರಿ:
(೧) ನಾರಿ – ದ್ರೌಪದಿ ಮತ್ತು ಸತ್ಯಭಾಮೆಯನ್ನು ಕರೆದ ಪರಿ
(೨) ಕೃಷ್ಣನ ಅಭಯ ನುಡಿ – ಆರದೆನ್ನನು ನೆನೆವರವರಿಗೆ ಧಾರಕನು ತಾನಹೆನು

ಪದ್ಯ ೧೩೫: ಸತ್ಯಭಾಮೆ ಕೃಷ್ಣನನ್ನು ಏನೆಂದು ಪ್ರಶ್ನಿಸಿದಳು?

ಸತಿ ನೆಗಹಿದಳು ನೆತ್ತವನು ಗಣಿ
ಸುತಲಿ ನೋಡಿದಳೆಣಿಕೆಯೊಳಗಿ
ಲ್ಲತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು
ಮತಿಗೆ ಗೋಚರವಲ್ಲ ಈ ಸಂ
ಗತಿಗೆ ಬಾರದು ದೇವವಾಕ್ಯ
ಸ್ಥಿತಿಯ ಪಲ್ಲಟವೆನುತ ಮಿಗೆ ಬೆಸಗೊಂಡಳಾ ಹರಿಯ (ಸಭಾ ಪರ್ವ, ೧೫ ಸಂಧಿ, ೧೩೫ ಪದ್ಯ)

ತಾತ್ಪರ್ಯ:
ಕೃಷ್ಣನು ಅಕ್ಷಯ ಎಂಬ ಪದವನ್ನುಚ್ಚರಿಸಲು ತಬ್ಬಿಬ್ಬಾದ ಸತ್ಯಭಾಮೆ ದಾಳಗಳನ್ನು ಎತ್ತಿ ಎಲ್ಲಾ ಕಡೆಗೂ ನೋಡಿ, ಇದೇನು, ಇವುಗಳ ಯಾವ ಪಕ್ಕದಲ್ಲೂ ಅಕ್ಷಯವೆಂಬ ಮಾತನ್ನು ಬರೆದಿಲ್ಲ. ಆದರೂ ನೀನು ಅಕ್ಷಯವೆನ್ನುತಿರುವೆ, ನಿನ್ನ ಮಾತು ಹೀಗೇಕೆ ಬಂದಿತೆಂದು ಕೇಳಿದಳು.

ಅರ್ಥ:
ಸತಿ: ಹೆಂಡತಿ; ನೆಗಹು: ಮೇಲೆತ್ತು; ನೆತ್ತ: ಪಗಡೆಯ ದಾಳ; ಗಣಿ: ಮೂಲ ಸ್ಥಾನ; ನೋಡು: ವೀಕ್ಷಿಸು; ಎಣಿಕೆ: ಲೆಕ್ಕ; ಅತಿಶಯ: ಹೆಚ್ಚು; ನುಡಿ: ಮಾತು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ವಾಕ್ಯ: ಮಾತು; ಮತಿ: ಬುದ್ಧಿ; ಗೋಚರ: ಕಾಣುವುದು; ಸಂಗತಿ: ವಿಷಯ; ಸ್ಥಿತಿ: ರೀತಿ, ಅವಸ್ಥೆ; ಪಲ್ಲಟ: ಬದಲಾವಣೆ, ಮಾರ್ಪಾಟು; ಮಿಗೆ: ಮತ್ತು, ಅಧಿಕವಾಗಿ; ಬೆಸ: ವಿಚಾರಿಸುವುದು, ಪ್ರಶ್ನಿಸುವುದು; ಹರಿ: ವಿಷ್ಣು, ಕೃಷ್ಣ;

ಪದವಿಂಗಡಣೆ:
ಸತಿ+ ನೆಗಹಿದಳು +ನೆತ್ತವನು +ಗಣಿ
ಸುತಲಿ +ನೋಡಿದಳ್+ಎಣಿಕೆಯೊಳಗಿಲ್ಲ್
ಅತಿಶಯದ +ನುಡಿ+ಅಕ್ಷಯವ್+ಅದೆಂದ್+ಎಂಬ +ವಾಕ್ಯವಿದು
ಮತಿಗೆ +ಗೋಚರವಲ್ಲ+ ಈ +ಸಂ
ಗತಿಗೆ+ ಬಾರದು +ದೇವ+ವಾಕ್ಯ
ಸ್ಥಿತಿಯ +ಪಲ್ಲಟವೆನುತ +ಮಿಗೆ +ಬೆಸಗೊಂಡಳಾ +ಹರಿಯ

ಅಚ್ಚರಿ:
(೧) ಸತಿ, ಮತಿ, ಗತಿ, ಸ್ಥಿತಿ – ಪ್ರಾಸ ಪದಗಳು
(೨) ಸತ್ಯಭಾಮೆಯ ಪ್ರಶ್ನೆ – ಅತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು

ಪದ್ಯ ೧೩೪: ಶ್ರೀಕೃಷ್ಣನು ಆಟದ ಮಧ್ಯೆ ಯಾವ ಪದವನ್ನು ಪ್ರಯೋಗಿಸಿದನು?

ಹರಿಯ ಚಿತ್ತದ ದುಗುಡವನು ತಾ
ನರಿದು ಸತ್ರಾಜಿತನ ಸುತೆಯಂ
ದುರುತರದ ದುಗುಡವನು ಪರಿಹರಿಪನುವ ನೆನೆದಾಗ
ವಿರಚಿಸಿದಳೊಲವಿನಲಿ ಸಾರಿಯ
ನಿರದೆ ಹಾಸಂಗಿಗಳ ಢಾಳಿಸಿ
ಸರಿಬೆಸನೊ ಹೇಳೆಂದುದಕ್ಷಯವೆಂದನಾ ಸತಿಗೆ (ಸಭಾ ಪರ್ವ, ೧೫ ಸಂಧಿ, ೧೩೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಮುಖಭಾವದಲ್ಲಿ ದುಃಖವನ್ನು ಕಂಡ ಸತ್ಯಭಾಮೆಯು ಅವನ ದುಃಖವನ್ನು ಹೋಗಲಾಡಿಸಲು ಪಗಡೆಯ ಹಾಸನ್ನು ಹಾಕಿ ಕಾಯಿಗಳನ್ನು ಹೂಡಿ, ದಾಳಗಳನ್ನಿಟ್ಟು ಈಗ ಸರಿ ಸಂಖ್ಯೆಯೋ ಬೆಸ ಸಂಖ್ಯೆಯೋ ಎಂದು ಕೃಷ್ಣನನ್ನು ಕೇಳಲು ಅವನು ಅಕ್ಷಯ ಎಂದು ಹೆಂಡತಿಗೆ ಉತ್ತರಿಸಿದನು.

ಅರ್ಥ:
ಹರಿ: ಕೃಷ್ಣ; ಚಿತ್ತ: ಮನಸ್ಸು; ದುಗುಡ: ದುಃಖ; ಅರಿ: ತಿಳಿ; ಸುತೆ: ಮಗಳು; ದುರುತರ: ಹೆಚ್ಚಿನ; ಪರಿಹರಿಸು: ನಿವಾರಣೆ, ಹೋಗಲಾಡಿಸು; ನೆನೆ: ಸ್ಮರಿಸು, ವಿಚಾರಿಸು; ವಿರಚಿಸು: ರಚಿಸು, ನಿರ್ಮಿಸು; ಒಲವು: ಪ್ರೀತಿ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಹಾಸಂಗಿ: ಪಗಡೆಯ ಹಾಸು; ಢಾಳಿಸು: ಕಾಂತಿಗೊಳ್ಳು; ಸರಿ: ಸಮಸಂಖ್ಯೆ; ಬೆಸ: ವಿಷಮ ಸಂಖ್ಯೆ; ಹೇಳು: ತಿಳಿಸು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ಸತಿ: ಹೆಂಡತಿ;

ಪದವಿಂಗಡಣೆ:
ಹರಿಯ+ ಚಿತ್ತದ +ದುಗುಡವನು +ತಾನ್
ಅರಿದು +ಸತ್ರಾಜಿತನ +ಸುತೆಯಂ
ದುರುತರದ +ದುಗುಡವನು +ಪರಿಹರಿಪನುವ +ನೆನೆದಾಗ
ವಿರಚಿಸಿದಳ್+ಒಲವಿನಲಿ +ಸಾರಿಯ
ನಿರದೆ+ ಹಾಸಂಗಿಗಳ +ಢಾಳಿಸಿ
ಸರಿ+ಬೆಸನೊ +ಹೇಳೆಂದುದ್+ಅಕ್ಷಯವೆಂದನಾ+ ಸತಿಗೆ

ಅಚ್ಚರಿ:
(೧) ಹರಿ, ಅರಿ, ಸರಿ – ಪ್ರಾಸ ಪದಗಳು
(೨) ಸತ್ಯಭಾಮೆಯನ್ನು ಸತ್ರಾಜಿತನ ಸುತೆೆ ಎಂದು ಕರೆದಿರುವುದು