ಪದ್ಯ ೧೩೩: ಕೃಷ್ಣನು ಏಕೆ ಚಿಂತಾಕ್ರಾಂತನಾದನು?

ಇತ್ತಲಾದ್ವಾರಕೆಯೊಳಗೆ ದೇ
ವೋತ್ತಮನು ನಿಜಭವನದೊಳು ನರ
ವೃತ್ತಿಯಿಂದಿರುತಾಗ ಕೇಳಿದ ಸತಿಯ ಹೊಲ್ಲೆಹವ
ಕೆತ್ತ ದುಮ್ಮಾನದಲಿ ದ್ರೌಪದಿ
ಯುತ್ತಮೆಯಲಾ ದೃಢಪತಿವ್ರತೆ
ಗೆತ್ತಣದು ಪರಿಭವವಿದೆಂದಸುರಾರಿ ಚಿಂತಿಸಿದ (ಸಭಾ ಪರ್ವ, ೧೫ ಸಂಧಿ, ೧೩೩ ಪದ್ಯ)

ತಾತ್ಪರ್ಯ:
ಇತ್ತ ದ್ವಾರಕೆಯಲ್ಲಿ ದೇವೋತ್ತಮನಾದ ಶ್ರೀಕೃಷ್ಣನು ತನ್ನ ಅರಮನೆಯಲ್ಲಿ ಮಾನವ ಸಹಜ ರೀತಿಯಿಂದಿರುವಾಗ ಅವನಿಗೆ ದ್ರೌಪದಿಯ ಮೊರೆಯು ಕೇಳಿಸಿತು. ದುಃಖದಿಂದ ಅದರಿದನು, ದ್ರೌಪದಿಯು ಉತ್ತಮಳು, ಶ್ರೇಷ್ಠ ಪತಿವ್ರತೆ, ಇಂತಹವಳಿಗೆ ಈ ಸ್ಥಿತಿ ಏಕೆ ಬಂದಿತೆಂದು ಚಿಂತಾಗ್ರಸ್ಥನಾದನು.

ಅರ್ಥ:
ದೇವೋತ್ತಮ: ಭಗವಂತನಲ್ಲಿ ಶ್ರೇಷ್ಠನಾದವನು; ನಿಜ: ದಿಟ; ಭವನ: ಮನೆ; ನರ: ಮನುಷ್ಯ; ವೃತ್ತಿ: ಕೆಲಸ, ಕಾರ್ಯ; ಕೇಳು: ಆಲಿಸು; ಸತಿ: ಹೆಂಗಸು; ಹೊಲ್ಲೆಹ: ದೋಷ; ಕೆತ್ತು:ಅದರು, ನಡುಗು; ದುಮ್ಮಾನ: ದುಃಖ; ಉತ್ತಮ: ಶ್ರೇಷ್ಠ; ದೃಢ: ಗಟ್ಟಿ, ಸ್ಥಿರತೆ; ಪತಿವ್ರತೆ: ಗರತಿ; ಎತ್ತಣ: ಎಲ್ಲಿಯ; ಪರಿಭವ: ಅನಾದರ, ತಿರಸ್ಕಾರ; ಅಸುರಾರಿ: ರಾಕ್ಷಸರ ವೈರಿ; ಚಿಂತೆ: ಯೋಚನೆ, ಕಳವಳ;

ಪದವಿಂಗಡಣೆ:
ಇತ್ತಲ್+ಆ+ ದ್ವಾರಕೆಯೊಳಗೆ +ದೇ
ವೋತ್ತಮನು +ನಿಜಭವನದೊಳು+ ನರ
ವೃತ್ತಿಯಿಂದಿರುತಾಗ+ ಕೇಳಿದ+ ಸತಿಯ +ಹೊಲ್ಲೆಹವ
ಕೆತ್ತ+ ದುಮ್ಮಾನದಲಿ +ದ್ರೌಪದಿ
ಉತ್ತಮೆಯಲಾ +ದೃಢಪತಿವ್ರತೆಗ್
ಎತ್ತಣದು +ಪರಿಭವವ್+ಇದೆಂದ್+ಅಸುರಾರಿ +ಚಿಂತಿಸಿದ

ಅಚ್ಚರಿ:
(೧) ದ್ರೌಪದಿಯ ಗುಣಗಾನ – ದ್ರೌಪದಿ ಯುತ್ತಮೆಯಲಾ ದೃಢಪತಿವ್ರತೆ

ಪದ್ಯ ೧೩೨: ದ್ರೌಪದಿಯು ಕೃಷ್ಣನಲ್ಲಿ ಹೇಗೆ ಮೊರೆಯಿಟ್ಟಳು?

ಏಕಹಸ್ತದಲಂಬರವ ಹಿಡಿ
ದೇಕಹಸ್ತವ ನೆಗಹಿ ಮೊರೆಯಿಡೆ
ಲೋಕನಾಥ ಮುಕುಂದ ತಾನದ ಕೇಳದಂತಿರಲು
ಆಕೆ ಮನದೊಳಗರಿದು ತನಗಿ
ನ್ನೇಕೆ ಮನದಭಿಮಾನವೆನುತಲೆ
ಲೋಕಸುಂದರಿ ಕರವೆರಡ ಮುಗಿದೆತ್ತಿಯೊರಲಿದಳು (ಸಭಾ ಪರ್ವ, ೧೫ ಸಂಧಿ, ೧೩೨ ಪದ್ಯ)

ತಾತ್ಪರ್ಯ:
ದುಶ್ಯಾಸನನು ಸೆಳೆಯುತ್ತಿದ್ದ ಸೀರೆಯನ್ನು ಒಂದು ಕೈಯಿಂದ ಹಿಡಿದುಕೊಂಡು ಇನ್ನೊಂದು ತೋಳನ್ನು ಮೇಲಕ್ಕೆತ್ತಿ ದ್ರೌಪದಿಯು ಶ್ರೀಕೃಷ್ಣನಲ್ಲಿ ಮೊರೆಯಿಡುತ್ತಿದ್ದಳು. ಜಗನ್ನಾಥನಾದ ಶ್ರೀಕೃಷ್ಣನು ಅದನ್ನು ಕೇಳದಂತೆ ತೋರಲಿಲ್ಲ. ಅದನ್ನು ಅವಳು ಮನಸ್ಸಿನಲ್ಲಿ ಅರಿತುಕೊಂಡು, ಇನ್ನು ವೃಥ ಅಭಿಮಾನವೇಕೆ ಎಂದುಕೊಂಡು ಎರಡೂ ಕೈಗಳನ್ನೆತ್ತಿ ಮೊರೆಯಿಟ್ಟಳು.

ಅರ್ಥ:
ಏಕ: ಒಂದು; ಹಸ್ತ: ಕೈ; ಅಂಬರ: ಬಟ್ಟೆ, ಸೀರೆ; ಹಿಡಿ: ಹಿಡಿದುಕೊಳ್ಳು ತಳೆ, ಗ್ರಹಿಸು; ನೆಗಹು: ಮೇಲೆತ್ತು; ಮೊರೆ: ಗೋಳಾಟ, ಹುಯ್ಯಲು; ಲೋಕ: ಜಗತ್ತು; ನಾಥ: ಒಡೆಯ; ಲೋಕನಾಥ: ಜಗತ್ತಿನ ಒಡೆಯ; ಕೇಳು: ಆಲಿಸು; ಮನ: ಮನಸ್ಸು, ಚಿತ್ತ; ಅರಿ: ತಿಳಿ; ಅಭಿಮಾನ: ಆತ್ಮಗೌರವ; ಸುಂದರಿ: ಚೆಲುವೆ; ಕರ: ಕೈ; ಮುಗಿದೆತ್ತು: ಕೈಗಳೆರಡನ್ನೂ ಜೋಡಿಸು; ಒರಲು: ಗೋಳಿಡು;

ಪದವಿಂಗಡಣೆ:
ಏಕಹಸ್ತದಲ್+ಅಂಬರವ +ಹಿಡಿದ್
ಏಕಹಸ್ತವ+ ನೆಗಹಿ+ ಮೊರೆಯಿಡೆ
ಲೋಕನಾಥ +ಮುಕುಂದ +ತಾನದ +ಕೇಳದಂತಿರಲು
ಆಕೆ +ಮನದೊಳಗ್+ಅರಿದು +ತನಗಿ
ನ್ನೇಕೆ +ಮನದ್+ಅಭಿಮಾನವ್+ಎನುತಲೆ
ಲೋಕಸುಂದರಿ +ಕರವೆರಡ+ ಮುಗಿದೆತ್ತಿ+ಒರಲಿದಳು

ಅಚ್ಚರಿ:
(೧) ಲೋಕನಾಥ, ಲೋಕಸುಂದರಿ – ಪದಗಳ ಬಳಕೆ
(೨) ಪರಿಪೂರ್ಣವಾಗಿ ಶರಣಾಗುವ ಪರಿ – ತನಗಿನ್ನೇಕೆ ಮನದಭಿಮಾನವೆನುತಲೆ
ಲೋಕಸುಂದರಿ ಕರವೆರಡ ಮುಗಿದೆತ್ತಿಯೊರಲಿದಳು

ಪದ್ಯ ೧೩೧: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೨೦?

ನಂದಗೋಪ ಕುಮಾರ ಗೋಪೀ
ವೃಂದ ವಲ್ಲಭ ದೈತ್ಯ ಮಥನ ಮು
ಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧೆ
ನೊಂದೆನೈ ನುಗ್ಗಾದೆನೈ ಗೋ
ವಿಂದ ಕೃಪೆ ಮಾಡಕಟೆನುತ ಪೂ
ರ್ಣೇಂದು ಮುಖಿ ಹಲುಬಿದಳು ಬಲುತೆರದಿಂದಲಚ್ಯುತನ (ಸಭಾ ಪರ್ವ, ೧೫ ಸಂಧಿ, ೧೩೧ ಪದ್ಯ)

ತಾತ್ಪರ್ಯ:
ನಂದಗೋಪ ಕುಮಾರನೇ, ಗೋಪೀವೃಂದ ವಲ್ಲಭನೇ, ದೈತ್ಯರನ್ನು ಸಂಹಾರಿಸುವವನೇ, ಮುಕುಂದ, ಮುರಾರಿ, ಭಕ್ತವತ್ಸಲ, ಕೃಪಾಸಾಗರ, ಶ್ರೀಕೃಷ್ಣ, ನಾನು ನೊಂದು ನಿತ್ರಾಣಳಾಗಿದ್ದೇನೆ. ಗೋವಿಂದನೇ, ನನ್ನ ಮೇಲೆ ಕೃಪೆದೋರು ಎಂದು ದ್ರೌಪದಿಯು ಹಲವು ವಿಧದಿಂದ ದುಃಖಪಟ್ಟು ಕೃಷ್ಣನನ್ನು ಬೇಡಿಕೊಂಡಳು.

ಅರ್ಥ:
ಗೋಪ: ಗೋವುಗಳನ್ನು ಕಾಯುವವನು, ದನಗಾಹಿ; ಕುಮಾರ: ಪುತ್ರ; ಗೋಪಿ: ಗೊಲ್ಲ ಜಾತಿಯ ಹೆಂಗಸು, ಗೊಲ್ಲಿತಿ; ವೃಂದ: ಗುಂಪು; ವಲ್ಲಭ: ಒಡೆಯ; ದೈತ್ಯ: ರಾಕ್ಷಸ; ಮಥನ: ಕೊಲೆ, ವಧೆ; ಘನ:ಶ್ರೇಷ್ಠ; ಕೃಪ: ದಯೆ, ಕರುಣೆ; ಜಲಧಿ: ಸಾಗರ; ನೊಂದೆ: ದುಃಖ, ತೊಂದರೆ; ಬಡವಾದುದು, ತ್ರಾಣವಿಲ್ಲದುದು; ಕೃಪೆ: ಕರುಣೆ, ದಯೆ; ಅಕಟ: ಅಯ್ಯೋ; ಪೂರ್ಣೇಂದುಮುಖಿ: ಪೂರ್ಣ ಚಂದ್ರನಂತೆ ಮುಖವುಳ್ಳ; ಹಲುಬು: ದುಃಖಪಡು, ಬೇಡಿಕೋ; ಅಚ್ಯುತ: ಕೃಷ್ಣ;

ಪದವಿಂಗಡಣೆ:
ನಂದಗೋಪ+ ಕುಮಾರ +ಗೋಪೀ
ವೃಂದ ವಲ್ಲಭ+ ದೈತ್ಯ ಮಥನ+ ಮು
ಕುಂದ +ಮುರಹರ+ ಭಕ್ತವತ್ಸಲ +ಘನ+ ಕೃಪಾಜಲಧೆ
ನೊಂದೆನೈ +ನುಗ್ಗಾದೆನೈ+ ಗೋ
ವಿಂದ+ ಕೃಪೆ+ ಮಾಡ್+ಅಕಟೆನುತ+ ಪೂ
ರ್ಣೇಂದು ಮುಖಿ+ ಹಲುಬಿದಳು +ಬಲುತೆರದಿಂದಲ್+ಅಚ್ಯುತನ

ಅಚ್ಚರಿ:
(೧) ಕೃಷ್ಣನ ಹಲವು ನಾಮಗಳ ಬಳಕೆ – ನಂದಗೋಪ ಕುಮಾರ, ಗೋಪೀ ವೃಂದ ವಲ್ಲಭ, ದೈತ್ಯ ಮಥನ, ಮುಕುಂದ, ಮುರಹರ, ಭಕ್ತವತ್ಸಲ, ಘನ ಕೃಪಾಜಲಧೆ, ಅಚ್ಯುತ

ಪದ್ಯ ೧೩೦: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೯?

ತುಸು ಮೊದಲು ಚತುರಾಸ್ಯ ಪರಿಯಂ
ತೆಸೆವುದೀ ಭುವನದಲಿ ಜೀವ
ಪ್ರಸರವಿದ್ದುದು ದುಃಖಸೌಖ್ಯದ ತಾರತಮತೆಯಲಿ
ಉಸುರು ಪಸರಣವಿಲ್ಲದೆನ್ನು
ಬ್ಬಸದ ಭೀತಿಯ ಬೇಗೆ ಮಿಗೆ ದಾ
ಹಿಸುವುದೈ ಕಾರುಣ್ಯನಿಧಿಯೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೩೦ ಪದ್ಯ)

ತಾತ್ಪರ್ಯ:
ಅತಿ ಚಿಕ್ಕದಾದ ಜೀವಿಯಿಂದ ಹಿಡಿದು ಹಿರಣ್ಯಗರ್ಭ ಬ್ರಹ್ಮನವರೆಗೂ ಸಮಸ್ತ ಜೀವಗಳೂ ಸುಖ ದುಃಖಗಳನ್ನು ಒಂದಲ್ಲ ಒಂದು ಮಟ್ಟದಲ್ಲಿ ಅನುಭವಿಸುತ್ತಿದ್ದಾರೆ. ನನಗೋ ಉಸುರು ಕಟ್ಟಿದ ಹಾಗಿದೆ. ದುಃಖ ಭೀತಿಗಳ ವೇಗದಿಂದ ಏದುಸಿರನ್ನು ಅನುಭವಿಸುತ್ತಿದ್ದೇನೆ. ಮಾನಭಂಗದ ಭಯವು ನನ್ನನ್ನು ಸುಡುತ್ತಿದೆ. ಕಾರುಣ್ಯನಿಧಿಯಾದ ಶ್ರೀಕೃಷ್ಣನೇ ನನ್ನನ್ನು ರಕ್ಷಿಸು ಎಂದು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ತುಸು: ಸ್ವಲ್ಪ; ಮೊದಲು: ಮುಂಚೆ; ಚತುರ್: ನಾಲ್ಕು; ಆಸ್ಯ: ಮುಖ; ಚತುರಾಸ್ಯ: ಬ್ರಹ್ಮ; ಪರಿ: ರೀತಿ; ಎಸೆ: ತೋರು; ಭುವನ: ಜಗತ್ತು, ಪ್ರಪಂಚ; ಜೀವ: ಜೀವಿ; ಪ್ರಸರ: ಸಮೂಹ, ವಿಸ್ತಾರ; ದುಃಖ: ನೋವು; ಸೌಖ್ಯ: ಸಂತಸ, ಕ್ಷೇಮ; ತಾರತಮ್ಯ: ಹೆಚ್ಚು-ಕಡಿಮೆ; ಉಸುರು: ಜೀವ, ವಾಯು; ಪಸರಣ: ಹರಡುವಿಕೆ; ಉಬ್ಬಸ: ಸಂಕಟ, ಮೇಲುಸಿರು; ಭೀತಿ: ಭಯ; ಬೇಗೆ: ಬೆಂಕಿ, ಕಿಚ್ಚು; ಮಿಗೆ: ಅಧಿಕವಾಗಿ; ದಾಹಿಸು: ಸುಡು; ಕಾರುಣ್ಯ: ದಯೆ; ಒರಲು: ಕೂಗು; ತರಳೆ: ಯುವತಿ;

ಪದವಿಂಗಡಣೆ:
ತುಸು +ಮೊದಲು +ಚತುರ್+ಆಸ್ಯ +ಪರಿಯಂತ್
ಎಸೆವುದ್+ಈ+ ಭುವನದಲಿ+ ಜೀವ
ಪ್ರಸರವಿದ್ದುದು +ದುಃಖ+ಸೌಖ್ಯದ+ ತಾರತಮತೆಯಲಿ
ಉಸುರು +ಪಸರಣವಿಲ್ಲದೆನ್+
ಉಬ್ಬಸದ +ಭೀತಿಯ +ಬೇಗೆ +ಮಿಗೆ +ದಾ
ಹಿಸುವುದೈ +ಕಾರುಣ್ಯನಿಧಿ+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ದ್ರೌಪದಿಯ ದುಃಖ – ಉಸುರು ಪಸರಣವಿಲ್ಲದೆನ್ನುಬ್ಬಸದ ಭೀತಿಯ ಬೇಗೆ ಮಿಗೆ ದಾಹಿಸುವುದೈ

ಪದ್ಯ ೧೨೯: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೮?

ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೯ ಪದ್ಯ)

ತಾತ್ಪರ್ಯ:
ಋಷಿಮುನಿಗಳು ತರ್ಕದಲ್ಲಿ ಪಾಂಡಿತ್ಯಹೊಂದಿದವರು, ಕರ್ಮದಲ್ಲಿ ನಿರತರಾದವರು ಪಂಡಿತರು,
ಮೂಢರಾದ ಮಿಕ್ಕ ಜನರು ವಿಷಯಗಳೆಂಬ ಎರೆಹುಳುಗಳು ಚುಚ್ಚಿದ ಗಾಳಕ್ಕೆ ಬೀಳುವ ಮೀನಿನಂತಿರುವವರು. ನನ್ನವರೆಂಬ ಮೋಹದಿಂದಾದರೂ ನಮ್ಮನ್ನು ರಕ್ಷಿಸಲು ಮುಗಿಬೀಳುವಂತಹ ಕೃಪೆಯನ್ನೇಕೆ ತೋರಿಸುತ್ತಿಲ್ಲ ಕೃಷ್ಣ ಎಂದು ದ್ರೌಪದಿ ಮೊರೆಯಿಟ್ಟಳು.

ಅರ್ಥ:
ಋಷಿ: ಮುನಿ; ತಾರ್ಕಿಕ: ತರ್ಕದಲ್ಲಿ ಪಾಂಡಿತ್ಯಪಡೆದವ; ಕರ್ಮ: ಕಾರ್ಯ; ವ್ಯಸನಿ: ಗೀಳುಳ್ಳವ, ಚಟ; ಕೋವಿದ: ಪಂಡಿತ; ಮಿಕ್ಕ: ಉಳಿದ; ವಿಷಯ: ವಿಚಾರ, ಸಂಗತಿ; ಎರೆ: ಮೀನು, ಹಕ್ಕಿ ಗಳಿಗೆ ಹಾಕುವ ಆಹಾರ; ಮೀನು: ಮತ್ಸ್ಯ; ಮೂಢ: ತಿಳಿವಳಿಕೆಯಿಲ್ಲದ, ಮೂರ್ಖ; ಮನುಷ್ಯ: ನರ; ಒಸೆ: ಪ್ರೀತಿಸು, ಮೆಚ್ಚು; ಬಗೆ: ಆಲೋಚನೆ, ಯೋಚನೆ; ಬಸಿ: ಸರು, ಸ್ರವಿಸು, ಜಿನುಗು; ಬೀಳು: ಎರಗು; ಕೃಪೆ: ದಯೆ; ತೋರು: ಕಾಣು, ದೃಷ್ಟಿಗೆ ಬೀಳು; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ಋಷಿಗಳ್+ಅತಿ +ತಾರ್ಕಿಕರು+ ಕರ್ಮ
ವ್ಯಸನಿಗಳು +ಕೋವಿದರು+ ಮಿಕ್ಕಿನ
ವಿಷಯದ್+ಎರೆ +ಮೀನುಗಳು +ಮೂಢ +ಮನುಷ್ಯರೆಂಬುವರು
ಒಸೆದು +ನಿನ್ನವರೆಂದು +ಬಗೆವರೆ
ಬಸಿದು +ಬೀಳುವ +ಕೃಪೆಯ+ ನೀ+ ತೋ
ರಿಸೆ+ಇದೇನೈ +ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಿಕ್ಕಿನ ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
(೨) ಕೃಷ್ಣನನ್ನು ಮೊರೆಯಿಡುವ ಪರಿ – ಒಸೆದು ನಿನ್ನವರೆಂದು ಬಗೆವರೆ ಬಸಿದು ಬೀಳುವ ಕೃಪೆಯ ನೀ ತೋರಿಸೆ