ಪದ್ಯ ೧೨೮: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೭?

ಮರೆದೆನಭ್ಯುದಯದಲಿ ನೀನೆಂ
ದರಿವೆನಾಪತ್ತಿನಲಿ ಮದದಲಿ
ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ
ಅರಿಯದಜ್ಞರ ಗುಣವ ದೋಷವ
ನರಸುವರೆ ನಿನ್ನಡಿಯ ಕೃಪೆಯನು
ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೮ ಪದ್ಯ)

ತಾತ್ಪರ್ಯ:
ಏಳಿಗೆಯ ಕಾಲದಲ್ಲಿ ನಿನ್ನನ್ನು ಮರೆಯುತ್ತೇನೆ, ಆಪತ್ತು, ಕಷ್ಟ ಬಂದಾಗ ನೀನೇ ಗತಿಯೆಂಬ ಅರಿವು ಬರುತ್ತದೆ . ಏಳಿಗೆಯ ಕಾಲದಲ್ಲಿ ಮದದಿಂದ ಸೋಕ್ಕುತ್ತೇನೆ, ಆಪತ್ತು, ಕಷ್ಟ ಬಂದಾಗ ಕಳವಳಿಸುತ್ತೇನೆ. ಅಜ್ಞಾನಿಗಳಾದ ನಮ್ಮಂತಹವರಲ್ಲಿ ಗುಣ ದೋಷಗಳನ್ನು ಪ್ರಭವಾದ ನೀನು ಹುಡುಕಬಹುದೇ? ನಿನ್ನ ಕೃಪೆಯನ್ನು ತೋರಿಸಬಾರದೇ, ಕೃಷ್ಣಾ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಅಭ್ಯುದಯ: ಏಳಿಗೆ; ಅರಿ: ತಿಳಿ; ಆಪತ್ತು: ಸಂಕಟ; ಮದ: ಅಹಂಕಾರ; ಮುರುಕಿಸು: ಅಹಂಕಾರಮಾಡು; ಉಬ್ಬು: ಹಿಗ್ಗು, ಗರ್ವಿಸು; ಕಳವಳ: ಗೊಂದಲ, ಚಿಂತೆ; ಖೋಡಿ: ದುರುಳತನ, ನೀಚತನ; ಅಜ್ಞರ: ತಿಳಿದವರಲ್ಲದ; ಗುಣ: ನಡತೆ, ಸ್ವಭಾವ; ದೋಷ: ತಪ್ಪು; ಅರಸು: ಹುಡುಕು; ಅಡಿ: ಪಾದ; ಕೃಪೆ: ಕರುಣೆ, ದಯೆ; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಹೆಣ್ಣು),

ಪದವಿಂಗಡಣೆ:
ಮರೆದೆನ್+ಅಭ್ಯುದಯದಲಿ+ ನೀನೆಂದ್
ಅರಿವೆನ್+ಆಪತ್ತಿನಲಿ +ಮದದಲಿ
ಮುರುಕಿಸುವೆನ್+ಉಬ್ಬಿನಲಿ +ಕಳವಳಿಸುವೆನು +ಖೋಡಿಯಲಿ
ಅರಿಯದ್+ಅಜ್ಞರ +ಗುಣವ +ದೋಷವನ್
ಅರಸುವರೆ +ನಿನ್ನಡಿಯ +ಕೃಪೆಯನು
ಮೆರೆಯಲಾಗದೆ+ ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ

ಅಚ್ಚರಿ:
(೧) ಮರೆ – ೧, ೬ ಸಾಲಿನ ಮೊದಲ ಪದ
(೨) ಅರಿ – ೨, ೪ ಸಾಲಿನ ಮೊದಲ ಪದ

ಪದ್ಯ ೧೨೭: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೬?

ಕರುಣಿ ನೀ ಕಾರುಣ್ಯ ಪಾತ್ರದ
ತರಳೆ ತಾ ದೀನಾರ್ತಿ ದುಃಖೋ
ತ್ತರಣ ನೀ ದೀನಾರ್ತ ದುಃಖಿತೆಯಾನು ಜಗವರಿಯೆ
ಪರಮಪಾಲಕ ನೀನೆ ಗತ್ಯಂ
ತರದ ವಿಹ್ವಲೆ ತಾನಲಾ ನಿ
ಷ್ಠುರವಿದೇಕೈ ಕೃಷ್ಣಯೆಂದೊರಲಿದಳು ಲಲಿತಾಂಗಿ (ಸಭಾ ಪರ್ವ, ೧೫ ಸಂಧಿ, ೧೨೭ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನಾನು ಕರುಣೆಗೆ ಪಾತ್ರಳಾದವಳು, ನೀನು ಕರುಣಿ, ದೀನರ ಸಂಕಟವನ್ನು ಪರಿಹರಿಸಿ ದುಃಖವನ್ನು ದಾಟಿಸುವವನು ನೀನು, ನಾನು ದೀನೆ, ದುಃಖಿತಳಾದವಳು, ನೀನು ಎಲ್ಲರನ್ನು ಸಲಹುವ ಪರಮ ಪಾಲಕ. ಬೇರೆ ಗತಿಯಿಲ್ಲದೆ ಕಳವಳದಿಂದ ಆತಂಕಗೊಂಡು ಭಯಪಡುವವಳು ನಾನು. ಕೃಷ್ಣಾ ನೀನೇಕೆ ದಯೆತೋರದೆ ನಿಷ್ಠುರನಾಗಿರುವೆ ಎಂದು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಕರುಣೆ: ದಯೆ; ಕಾರುಣ್ಯ: ಮರುಕ; ಪಾತ್ರ: ಅರ್ಹನಾದವನು; ತರಳೆ: ಯುವತಿ; ದೀನ: ದುಃಖ, ಸಂಕಟ; ಆರ್ತಿ: ಸಂಕಟ, ಕಷ್ಟಕ್ಕೆ ಸಿಕ್ಕಿದವ; ದುಃಖ: ಸಂಕಟ, ನೋವು; ಉತ್ತರ: ಅಧಿಕ; ದೀನಾರ್ತ: ದುಃಖತಪ್ತರನ್ನು ರಕ್ಷಿಸುವ; ಜಗ: ಜಗತ್ತು; ಅರಿ: ತಿಳಿ; ಪರಮ: ಶ್ರೇಷ್ಠ; ಪಾಲಕ: ಕಾಪಾಡುವ; ಗತ್ಯಂತರ: ಅನ್ಯಮಾರ್ಗ,ಬೇರೆಯ ಉಪಾಯ; ವಿಹ್ವಲೆ: ವ್ಯಥೆಯಿಂದ ಕೂಡಿದ; ನಿಷ್ಠುರ: ಕಠಿಣವಾದ, ಒರಟಾದ; ಒರಲು: ಗೋಳಿಡು, ಕೂಗು; ಲಲಿತಾಂಗಿ: ಹೆಣ್ಣು, ಬಳ್ಳಿಯಂತಹ ದೇಹವುಳ್ಳ;

ಪದವಿಂಗಡಣೆ:
ಕರುಣಿ +ನೀ +ಕಾರುಣ್ಯ +ಪಾತ್ರದ
ತರಳೆ+ ತಾ +ದೀನಾರ್ತಿ+ ದುಃಖೋ
ತ್ತರಣ+ ನೀ +ದೀನಾರ್ತ +ದುಃಖಿತೆ+ಆನು+ ಜಗವರಿಯೆ
ಪರಮಪಾಲಕ+ ನೀನೆ+ ಗತ್ಯಂ
ತರದ +ವಿಹ್ವಲೆ+ ತಾನಲಾ +ನಿ
ಷ್ಠುರವಿದೇಕೈ+ ಕೃಷ್ಣ+ಯೆಂದ್+ಒರಲಿದಳು +ಲಲಿತಾಂಗಿ

ಅಚ್ಚರಿ:
(೧) ದ್ರೌಪದಿಯನ್ನು ವಿವರಿಸುವ ಪದ – ಕಾರುಣ್ಯ ಪಾತ್ರದ ತರಳೆ, ದೀನಾರ್ತಿ, ದುಃಖಿತೆ, ಗತ್ಯಂತರದ ವಿಹ್ವಲೆ
(೨) ಕೃಷ್ಣನನ್ನು ವಿವರಿಸುವ ಪದ – ಕರುಣಿ, ದೀನಾರ್ತ, ಪರಮಪಾಲಕ;

ಪದ್ಯ ೧೨೬: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೫?

ಆರಿಗೊರಲುವೆನೈ ಖಳಾಪ
ಸ್ಮಾರವಿದೆ ಸೆರೆವಿಡಿದು ತನ್ನಸು
ವಾರಿಗೆಯು ವೈರಾಗ್ಯ ಗಡ ಮತ್ಪ್ರಾಣ ವಿಭುಗಳಿಗೆ
ಘೋರತರ ಭವದುರಿತ ತರುವಿನ
ಬೇರ ಸುಡುವೀ ನಿನ್ನ ನಾಮಕೆ
ನಾರಿಯಕ್ಕೆಯ ನಿಲಿಸಲೇನರಿದೆಂದಳಿಂದುಮುಖಿ (ಸಭಾ ಪರ್ವ, ೧೫ ಸಂಧಿ, ೧೨೬ ಪದ್ಯ)

ತಾತ್ಪರ್ಯ:
ವೈರಿಯಾದ, ದುಷ್ಟನಾದ ಈ ದುಶ್ಯಾಸನನೆಂಬ ಮೂರ್ಛಾರೋಗವು ನನ್ನ ಪ್ರಾಣವನ್ನು ಸೆರೆಹಿಡಿದಿದೆ, ನನ್ನನ್ನು ರಕ್ಷಿಸಬೇಕಾದ ನನ್ನ ಪ್ರಭುಗಳಿಗೆ ವೈರಾಗ್ಯದಲ್ಲಿ ಮುಳುಗಿದ್ದಾರೆ. ಸಂಸಾರವೆಂಬ ಪಾಪವೃಕ್ಷದ ಬೇರನ್ನೇ ಸುಡಬಲ್ಲ ನಿನ್ನ ನಾಮಕ್ಕೆ ನನ್ನ ದುಃಖವನ್ನು ನಿವಾರಣೆ ಮಾಡುವುದು ಸಾಧ್ಯವಾಗುವುದಿಲ್ಲವೇ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಅರಿ: ವೈರಿ; ಒರಲು: ಗೋಳಿಡು; ಖಳ: ದುಷ್ಟ; ಅಪಸ್ಮಾರ: ಮೂರ್ಛೆರೋಗ, ಮರೆವು; ಸೆರೆ: ಬಂಧನ; ಅಸು: ಪ್ರಾಣ; ವಾರಿ: ಕಟ್ಟುವ ಸ್ಥಳ; ವೈರಾಗ್ಯ: ಅನಾಸಕ್ತಿ, ವಿರಕ್ತಿ; ಗಡ: ಅಲ್ಲವೇ; ಪ್ರಾಣ: ಜೀವ; ವಿಭು:ಒಡೆಯ, ಅರಸು; ಘೋರ: ಉಗ್ರ, ಭಯಂಕರ; ಭವ: ಇರುವಿಕೆ, ಅಸ್ತಿತ್ವ; ತರು: ಮರ; ಬೇರ: ಬೇರು, ಬುಡ; ಸುಡು: ಬೆಂಕಿಯಿಡು, ದಹಿಸು; ನಾಮ: ಹೆಸರು; ನಾರಿ: ಹೆಣ್ಣು; ಅಕ್ಕೆ: ಅಳುವಿಕೆ; ನಿಲಿಸು: ತಡೆ ಅರಿ: ತಿಳಿ; ಇಂದುಮುಖಿ: ಚಂದ್ರನಂತ ಮುಖ;

ಪದವಿಂಗಡಣೆ:
ಆರಿಗ್+ಒರಲುವೆನೈ+ ಖಳ+ಅಪ
ಸ್ಮಾರವಿದೆ+ ಸೆರೆವಿಡಿದು+ ತನ್+ಅಸು
ವಾರಿಗೆಯು +ವೈರಾಗ್ಯ +ಗಡ +ಮತ್ಪ್ರಾಣ+ ವಿಭುಗಳಿಗೆ
ಘೋರತರ +ಭವದುರಿತ+ ತರುವಿನ
ಬೇರ+ ಸುಡುವೀ +ನಿನ್ನ+ ನಾಮಕೆ
ನಾರಿ+ಅಕ್ಕೆಯ+ ನಿಲಿಸಲೇನ್+ಅರಿದ್+ಎಂದಳ್+ಇಂದುಮುಖಿ

ಅಚ್ಚರಿ:
(೧) ವಾರಿ, ನಾರಿ – ಪ್ರಾಸ ಪದ
(೨) ಅಪಸ್ಮಾರ, ಅಸುವಾರಿ – ಪದಗಳ ಬಳಕೆ
(೩) ಕೃಷ್ಣನ ಮಹಿಮೆ – ಘೋರತರ ಭವದುರಿತ ತರುವಿನಬೇರ ಸುಡುವೀ ನಿನ್ನ ನಾಮಕೆ

ಪದ್ಯ ೧೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೪?

ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೫ ಪದ್ಯ)

ತಾತ್ಪರ್ಯ:
ಅಯ್ಯೋ ಕೃಷ್ಣ, ಹಂಸದ ಮರಿಯನ್ನು ಕುಕ್ಕುವ ಕೊಕ್ಕರೆಯನ್ನು ತೊಲಗಿಸು, ಗಿಡುಗನಿಂದ ಗಿಳಿಯನ್ನು ಸಂರಕ್ಷಿಸು, ಭಕ್ತರನ್ನು ಕಾಪಾಡುವೆ ಎಂದು ನೀನು ನುಡಿದಿಲ್ಲವೇ ಅದು ನಿನ್ನ ಕರ್ತವ್ಯ ವಲ್ಲವೇ, ಭೂತವು ಹಿಡಿದು ಬಾಧಿಸುತ್ತಿರುವುದರಿಂದ ನಿನ್ನ ಬಿರುದನ್ನು ನಿನಗೇ ತಿಳಿಸುತ್ತಿದ್ದೇನೆ, ಭಕ್ತವತ್ಸಲನೇ ಆಗಿದ್ದರೆ ನನ್ನನ್ನು ರಕ್ಷಿಸು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಅಕಟ: ಅಯ್ಯೋ; ಹಂಸ: ಮರಾಲ, ಬಿಳಿಯ ಪಕ್ಷಿ; ಮರಿ: ಶಿಶು; ಮೋದು: ಹೊಡೆ, ಅಪ್ಪಳಿಸು; ಬಕ: ಕೊಕ್ಕರೆ; ತೆಗೆ: ಹೋಗಲಾಡಿಸು; ಗಿಡುಗ: ಹದ್ದು; ಎರಗು: ಬೀಳು; ಶುಕ: ಗಿಳಿ; ಶೋಕ: ದುಃಖ; ಮಾಣಿಸು: ನಿಲ್ಲುವಂತೆ ಮಾಡು; ವಾಣಿ: ಮಾತು; ಭಕುತ: ಆರಾಧಕ; ಪ್ರಕಟ: ಸ್ಪಷ್ಟವಾದುದು, ಕಾಣುವಿಕೆ; ಭೂತ: ದೆವ್ವ, ಪಿಶಾಚಿ; ಬಾಧೆ: ತೊಂದರೆ; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಬಿರುದು: ಪದವಿ, ಪಟ್ಟ; ತಡೆ: ನಿಲ್ಲಿಸು; ವತ್ಸಲ: ಪ್ರೀತಿಸುವ; ಅಹರು: ಆಗುವರು; ಸಲಹು: ಕಾಪಾಡು; ಒರಲು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಅಕಟ +ಹಂಸೆಯ +ಮರಿಯ +ಮೋದುವ
ಬಕನ+ ತೆಗೆಸೈ+ ಗಿಡುಗನ್+ಎರಗುವ
ಶುಕನ+ ಶೋಕದ+ ಮಾಣಿಸೈ+ ವಾಣಿಯವೆ+ ಭಕುತರಲಿ
ಪ್ರಕಟ+ಭೂತಗ್ರಹದ+ ಬಾಧೆಗೆ
ವಿಕಳೆ+ ನಿನ್ನಯ+ ಬಿರುದ+ ತಡೆದೆನು
ಭಕುತ+ವತ್ಸಲನ್+ಅಹರೆ+ ಸಲಹೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹಂಸೆಯ ಮರಿಯ ಮೋದುವ ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ

ಪದ್ಯ ೧೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೩?

ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವನೈ ಕಾಗೆಗಳಕಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೪ ಪದ್ಯ)

ತಾತ್ಪರ್ಯ:
ದಾರಿ ತಪ್ಪಿದ ಜಿಂಕೆಯು ಬೇಡನು ಹಾಸಿದ ಬಲೆಯಲ್ಲಿ ಸಿಕ್ಕುಬೀಳುವ ಪರಿ ನನ್ನ ಸ್ಥಿತಿಯಾಗಿದೆ, ತಾಯಿಯು ಕಾಡಿನಲ್ಲಿ ಎಸೆದು ಹೋದ ಮಗುವಿನಂತೆ ನನ್ನ ಸ್ಥಿತಿಯಾಗಿದೆ, ಕಾಗೆಗಳು ಕೋಗಿಲೆಯ ಮರಿಯನ್ನು ಕೊಲ್ಲುತ್ತಿವೆ, ಕರುಣಾಸಮುದ್ರನಾದ ಶ್ರೀಕೃಷ್ಣನೇ ನೀನೇ ನನ್ನನ್ನು ರಕ್ಷಿಸಬೇಕೆಂದು ಕೃಷ್ಣನಲ್ಲಿ ಮೊರೆಯಿಟ್ಟಳು ದ್ರೌಪದಿ.

ಅರ್ಥ:
ಹೊಲಬು: ದಾರಿ, ಪಥ; ತಪ್ಪು: ಸರಿಯಲ್ಲದ; ಹುಲ್ಲೆ: ಜಿಂಕೆ; ಬೇಡ: ಬೇಟೆಯಾಡುವವ; ಬಲೆ: ಜಾಲ, ಬಂಧನ; ಬಿದ್ದು: ಬೀಳು; ಬಲು: ಬಹಳ; ಹಳುವ: ಕಾಡು; ತಾಯಿ: ಮಾತೆ; ಬಿಸುಟು: ಬಿಸಾಡಿ, ಹೊರಹಾಕು; ಶಿಶು: ಮಗು; ಹರಿ: ಕೃಷ್ಣ; ಕೊಲು: ಸಾಯಿಸು; ಕಾಗೆ: ಕಾಕಾ; ಕೋಗಿಲೆ: ಪಿಕ; ಮರಿ: ಎಳೆಯದು, ಕೂಸು; ಕರುಣಾಜಲಧಿ: ದಯಾಸಾಗರ; ಕೈಗಾಯು: ಕಾಪಾಡು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಹೊಲಬು+ ತಪ್ಪಿದ +ಹುಲ್ಲೆ +ಬೇಡನ
ಬಲೆಗೆ+ ಬಿದ್ದಂತಾದೆನೈ +ಬಲು
ಹಳುವದಲಿ +ತಾಯ್+ಬಿಸುಟ +ಶಿಶು +ತಾನಾದೆನೆಲೆ+ ಹರಿಯೆ
ಕೊಲುವನೈ+ ಕಾಗೆಗಳ್+ಅಕಟ+ ಕೋ
ಗಿಲೆಯ +ಮರಿಯನು +ಕೃಷ್ಣ +ಕರುಣಾ
ಜಲಧಿಯೇ +ಕೈಗಾಯಬೇಕೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊಲಬುದಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದಂತಾದೆನೈ; ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ; ಕೊಲುವನೈ ಕಾಗೆಗಳಕಟ ಕೋಗಿಲೆಯ ಮರಿಯನು