ಪದ್ಯ ೧೨೩: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೨?

ನಾಥರಿಲ್ಲದ ಶಿಶುಗಳಿಗೆ ನೀ
ನಾಥನೈ ಗೋವಿಂದ ಸಲಹೈ
ಯೂಥಪತಿಗಳು ಬಿಸುಟ ತರುಣಿಗೆ ಕೃಪೆಯ ನೀ ಮಾಡೈ
ನಾಥರಿಲ್ಲೆನಗಿಂದು ದೀನಾ
ನಾಥ ಬಾಂಧವ ನೀನಲೈ ವರ
ಮೈಥಿಲೀಪತಿ ಮನ್ನಿಸೆಂದೊರಲಿದಳು ಮೃಗನಯನೆ (ಸಭಾ ಪರ್ವ, ೧೫ ಸಂಧಿ, ೧೨೩ ಪದ್ಯ)

ತಾತ್ಪರ್ಯ:
ತಂದೆಯಿಲ್ಲದ ಮಕ್ಕಳಿಗೆ ನೀನೆ ತಂದೆಯಲ್ಲವೇ? ಹೇ ಗೋವಿಂದ ಸಲಹು! ಪಾಂಡವರೂ, ಬಂಧುಗಳು ತಿರಸ್ಕರಿಸಿದ ನನ್ನ ಮೇಲೆ ಕೃಪೆ ತೋರು ತಂದೆ, ಯಾರೂ ನನ್ನನ್ನು ಕಾಪಾಡುವವರಿಲ್ಲದ ಹಾಗಿದೆ, ಅನಾಥ ಬಾಂಧವ ನೀನು, ಹೇ ಶ್ರೀರಾಮನಾಗಿ ಅವತರಿಸಿದವನೇ ನನ್ನ ಮೊರೆಯನ್ನು ಕೇಳು ಎಂದು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ನಾಥ: ಒಡೆಯ, ರಕ್ಷಕ; ಶಿಶು: ಮಕ್ಕಳು; ಸಲಹು: ರಕ್ಷಿಸು; ಯೂಥ: ಗುಂಪು, ಹಿಂಡು; ಪತಿ: ಒಡೆಯ; ಬಿಸುಟ: ಹೊರಹಾಕಿದ; ತರುಣಿ: ಹೆಣ್ಣು; ಕೃಪೆ: ಕರುಣೆ; ದೀನ: ಬಡವ, ದರಿದ್ರ, ಸಂಕಟ; ಬಾಂಧವ: ಬಂಧುಜನ; ವರ: ಶ್ರೇಷ್ಠ; ಮೈಥಿಲೀಪತಿ: ಸೀತಾಪತಿ (ರಾಮ); ಮನ್ನಿಸು: ಅನುಗ್ರಹಿಸು; ಒರಲು: ಗೋಳಿಡು, ಕೂಗು; ಮೃಗನಯನೆ: ಜಿಂಕೆಯಂತ ಕಣ್ಣುಳ್ಳವಳು (ದ್ರೌಪದಿ)

ಪದವಿಂಗಡಣೆ:
ನಾಥರಿಲ್ಲದ+ ಶಿಶುಗಳಿಗೆ+ ನೀ
ನಾಥನೈ +ಗೋವಿಂದ +ಸಲಹೈ
ಯೂಥಪತಿಗಳು+ ಬಿಸುಟ +ತರುಣಿಗೆ+ ಕೃಪೆಯ +ನೀ +ಮಾಡೈ
ನಾಥರಿಲ್+ಎನಗಿಂದು +ದೀನಾ
ನಾಥ+ ಬಾಂಧವ+ ನೀನಲೈ+ ವರ
ಮೈಥಿಲೀಪತಿ+ ಮನ್ನಿಸೆಂದ್+ಒರಲಿದಳು +ಮೃಗನಯನೆ

ಅಚ್ಚರಿ:
(೧) ನಾಥ, ಯೂಥ, ದೀನಾನಾಥ – ಪ್ರಾಸ ಪದಗಳು
(೨) ನಾಥ ಪದದ ಬಳಕೆ – ೧,೨, ೪,೫ ಸಾಲು
(೩) ದ್ರೌಪದಿಯನ್ನು ಮೃಗನಯನೆ, ತರುಣಿ ಎಂದು ಕರೆದಿರುವುದು