ಪದ್ಯ ೧೨೨: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೧?

ಚರಣಭಜಕರ ಮಾನಹಾನಿಯ
ಹರಿಬವಾರದು ಕೃಷ್ಣ ನಾಮ
ಸ್ಮರಣ ಧನಿಕರಿಗುಂಟೆ ಫಲ್ಲಣೆ ಘೋರಪಾತಕದ
ಪರಮ ಭಕ್ತ ಕುಟುಂಬಕನು ನೀ
ಕರುಣೀಯಲ್ಲದೊಡೀ ಕುಟುಂಬಕೆ
ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೨ ಪದ್ಯ)

ತಾತ್ಪರ್ಯ:
ನಿನ್ನ ಪಾದಕಮಲವನ್ನು ಭಜಿಸುವವರ ಮಾನವು ಹೋಗುವಂತಿರುವಾಗ ಅದನ್ನು ರಕ್ಷಿಸುವ ಹೊಣೆಗಾರಿಗೆ ನಿನ್ನದಲ್ಲವೇ, ಕೃಷ್ಣ ನಾಮಸ್ಮರಣೆಯೆಂಬ ಧನವಿರುವವರಿಗೆ ಘೋರ ಪಾಪವು ಅವರನ್ನು ಮುಟ್ಟುವುದೇ? ಭಕ್ತ ಕುಟುಂಬಿಯಾದ ನೀನು ಕರುಣೆಯನ್ನು ತೋರಿಸದಿದ್ದರೆ ಭಕ್ತರಿಗೆ ಆಶ್ರಯನೀಡುವವರಾರು! ಕೃಷ್ಣಾ ನನ್ನನ್ನು ರಕ್ಷಿಸೆಂದು ದ್ರೌಪದಿ ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಚರಣ: ಪಾದ; ಭಜಕ: ಆರಾಧಿಸುವ; ಮಾನ: ಮರ್ಯಾದೆ, ಗೌರವ; ಹಾನಿ: ನಷ್ಟ; ಹರಿಬ: ಕೆಲಸ, ಕಾರ್ಯ; ನಾಮ: ಹೆಸರು; ಸ್ಮರಣೆ: ಧ್ಯಾನ, ಚಿಂತನೆ; ಧನಿಕ: ಶ್ರೀಮಂತ; ಫಲ್ಲಣೆ: ಸೋಂಕು; ಘೋರ: ಉಗ್ರ; ಪಾತಕ: ಪಾಪ; ಪರಮ: ಶ್ರೇಷ್ಠ; ಭಕ್ತ: ಪೂಜಿಸುವವ; ಕುಟುಂಬಕ: ಪರಿವಾರದ; ಕರುಣಿ: ದಯೆಯುಳ್ಳವ; ಶರಣ: ಆಶ್ರಯ; ಸಲಹು: ಕಾಪಾಡು; ಒರಲು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಚರಣ+ಭಜಕರ+ ಮಾನ+ಹಾನಿಯ
ಹರಿಬವಾರದು+ ಕೃಷ್ಣ +ನಾಮ
ಸ್ಮರಣ +ಧನಿಕರಿಗುಂಟೆ +ಫಲ್ಲಣೆ+ ಘೋರಪಾತಕದ
ಪರಮ+ ಭಕ್ತ +ಕುಟುಂಬಕನು +ನೀ
ಕರುಣೀ+ಅಲ್ಲದೊಡ್+ಈ+ ಕುಟುಂಬಕೆ
ಶರಣದಾರೈ+ ಕೃಷ್ಣ +ಸಲಹೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಕೃಷ್ಣ ನಾಮಸ್ಮರಣ ಧನಿಕರಿಗುಂಟೆ ಫಲ್ಲಣೆ ಘೋರಪಾತಕದ

ಪದ್ಯ ೧೨೧: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೦?

ಸೊಕ್ಕಿದಂತಕ ದೂತರನು ಸದೆ
ದೊಕ್ಕಲಿಕ್ಕಿಯಜಾಮಿಳನ ಹಿಂ
ದಿಕ್ಕಿ ಕೊಂಡೆಯಲೈ ದುರಾತ್ಮಕ್ಷತ್ರ ಬಂಧದಲಿ
ಸೊಕ್ಕಿದರು ಕೌರವರು ಖಳರಿಗೆ
ಸಿಕ್ಕಿದೆನು ನಿನಗಲ್ಲದಾರಿಗೆ
ಕಕ್ಕುಲಿತೆಬಡುವೆನು ಮುರಾಂತಕಯೆಂದಳಿಂದುಮುಖಿ (ಸಭಾ ಪರ್ವ, ೧೫ ಸಂಧಿ, ೧೨೧ ಪದ್ಯ)

ತಾತ್ಪರ್ಯ:
ದರ್ಪದಿಂದ ಬಂದ ಯಮಧೂತರನ್ನು ಸೋಲಿಸಿ ಅಜಾಮಿಳನನ್ನು ಕಾಪಾಡಿದೆ, ದುಷ್ಟ ಕ್ಷಾತ್ರದಿಂದ ಕೌರವರು ಸೊಕ್ಕಿದ್ದಾರೆ. ಅವರಿಗೆ ನಾನು ಸಿಕ್ಕಿದ್ದೇನೆ, ನಿನ್ನನ್ನು ಬಿಟ್ಟು ಇನ್ನಾರಿಗಾಗಿ ನಾನು ಹಂಬಲಿಸಲಿ ಮುರಾರಿ ನನ್ನನ್ನು ರಕ್ಷಿಸು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಸೊಕ್ಕು: ದರ್ಪ; ಅಂತಕ: ಯಮ, ಮೃತ್ಯುದೇವತೆ; ದೂತ: ಸೇವಕ; ಸದೆ: ಪುಡಿಮಾಡು; ಹಿಂದಿಕ್ಕು: ಸಂರಕ್ಷಿಸು; ದುರಾತ್ಮ: ದುಷ್ಟ; ಕ್ಷತ್ರ: ಕ್ಷತ್ರಿಯ; ಬಂಧ: ಹಿಡಿತ; ಖಳ: ದುಷ್ಟ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಕಕ್ಕುಲಿತೆ: ಚಿಂತೆ; ಮುರಾಂತಕ: ಕೃಷ್ಣ; ಇಂದುಮುಖಿ: ಸುಂದರಿ, ಚಂದ್ರನಂತೆ ಮುಖವುಳ್ಳವಳು;

ಪದವಿಂಗಡಣೆ:
ಸೊಕ್ಕಿದ್+ಅಂತಕ +ದೂತರನು +ಸದೆದ್
ಒಕ್ಕಲಿಕ್ಕಿ+ಅಜಾಮಿಳನ+ ಹಿಂ
ದಿಕ್ಕಿ +ಕೊಂಡೆಯಲೈ +ದುರಾತ್ಮ+ಕ್ಷತ್ರ+ ಬಂಧದಲಿ
ಸೊಕ್ಕಿದರು+ ಕೌರವರು +ಖಳರಿಗೆ
ಸಿಕ್ಕಿದೆನು +ನಿನಗಲ್ಲದಾರಿಗೆ
ಕಕ್ಕುಲಿತೆಬಡುವೆನು+ ಮುರಾಂತಕ+ಎಂದಳ್+ಇಂದುಮುಖಿ

ಅಚ್ಚರಿ:
(೧) ಸೊಕ್ಕಿದ – ೧, ೪ ಸಾಲಿನ ಮೊದಲ ಪದ
(೨) ಕೌರವರನ್ನು ಬಯ್ಯುವ ಪರಿ – ದುರಾತ್ಮ, ಖಳ

ಪದ್ಯ ೧೨೦: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೯?

ಒದೆದೊಡೊಲಿದವರುಂಟೆ ಬೈದೊಡೆ
ಪದವನಿತ್ತವರುಂಟೆ ಕರುಣಾ
ಸ್ಪದರನಾ ಕೇಳ್ದರಿಯೆನೇ ಕಮಲಾಸನಾದ್ಯರಲಿ
ಪದವ ಸೋಂಕಿದ ಮೂಹೊರಡು ತಿ
ದ್ದಿದುದು ಗಡ ಹೆಂಗುಸಿನ ಹೇರಾ
ಳದ ಕೃಪಾಳುವೆ ಕೃಷ್ಣ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೦ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ಒದ್ದರೂ ಪ್ರೀತಿಸುವರುಂಟೆ? ನಿನನ್ನು ಕಾಲಿನಿಂದ ಒದ್ದ ಭೃಗು ಮಹರ್ಷಿಯನ್ನು ನೀನು ಪ್ರೀತಿಸಿದೆ, ಬೈದರೂ ದಯೆ ತೋರುವವರುಂಟೆ? ಶಿಶುಪಾಲನು ನಿನಗೆ ಎಷ್ಟೆ ಬೈದರು ಅವನಿಗೆ ಸದ್ಗತಿಯನ್ನು ನೀಡಿದೆ, ಬ್ರಹ್ಮಾದಿಗಳಲ್ಲೂ ನಿನ್ನಂತಹ ಕರುಣಾಶಾಲಿಗಳಿಲ್ಲ. ನಿನ್ನ ಪಾದದ ಸೋಂಕಿನಿಂದ ಕುಬ್ಜೆಯ ಗೂನುಬೆನ್ನು ನೆಟ್ಟಗಾಯಿತು. ಹೆಂಗಸರಿಗೆ ನೀನು ಅತೀವ ಕರುಣೆಯನ್ನು ತೋರಿಸುವವನು, ಹೇ ಕೃಷ್ಣ ನನ್ನನ್ನು ಕಾಪಾಡು ಎಂದು ದ್ರೌಪದಿ ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಒದೆ: ಕಾಲಿನಿಂದ ನೂಕು; ಒಲಿ: ಪ್ರೀತಿಸು; ಬೈದು: ಜರೆ, ಹೀಯಾಳಿಸು; ಪದ: ಪದವಿ, ಸ್ಥಾನ; ಕರುಣಾ: ದಯೆ; ಕೇಳು: ಆಲಿಸು; ಅರಿ: ತಿಳಿ; ಕಮಲಾಸನ: ಕಮಲವನ್ನು ಆಸನವನ್ನಾಗಿಸಿದವನು (ಬ್ರಹ್ಮ); ಆದಿ: ಮುಂತಾದ; ಪದ: ಪಾದ; ಸೊಂಕು: ತಾಗು, ಮುಟ್ಟು; ಮೂಹೊರಡು: ಮೂರು ಡೊಂಕು; ತಿದ್ದು: ಸರಿಪಡಿಸು; ಗಡ: ಅಲ್ಲವೆ; ಹೆಂಗಸು: ಸ್ತ್ರೀ; ಹೇರಾಳ: ಹೆಚ್ಚು; ಕೃಪಾಳು: ದಯೆ, ಕರುಣೆ; ಸಲಹು: ರಕ್ಷಿಸು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಒದೆದೊಡ್+ಒಲಿದವರುಂಟೆ+ ಬೈದೊಡೆ
ಪದವನ್+ಇತ್ತವರುಂಟೆ +ಕರುಣಾ
ಸ್ಪದರನಾ+ ಕೇಳ್ದ್+ಅರಿಯೆನೇ +ಕಮಲಾಸನಾದ್ಯರಲಿ
ಪದವ+ ಸೋಂಕಿದ +ಮೂಹೊರಡು +ತಿ
ದ್ದಿದುದು +ಗಡ+ ಹೆಂಗುಸಿನ+ ಹೇರಾ
ಳದ +ಕೃಪಾಳುವೆ +ಕೃಷ್ಣ +ಸಲಹೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ಪದ – ೨ ಅರ್ಥದಲ್ಲಿ ಬಳಕೆ
(೨) ಕರುಣಾಸ್ಪದ, ಕೃಪಾಳು – ಕೃಷ್ಣನ ಗುಣಗಾನದ ಪದಗಳು