ಪದ್ಯ ೧೧೯: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೮?

ತುರುವ ನುಂಗಿದ ಫಣಿಯ ಗಂಟಲ
ಮುರಿದು ಕಾಯ್ದೈ ಗೋವುಗಳ ಗಿರಿ
ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
ಮೆರೆದೆಲಾ ಕೃಪೆಯಲಿ ಗಜೇಂದ್ರನ
ಮುರಿಯಲೀಯದೆ ಖಳನು ಸೋಕಿದ
ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ (ಸಭಾ ಪರ್ವ, ೧೫ ಸಂಧಿ, ೧೧೯ ಪದ್ಯ)

ತಾತ್ಪರ್ಯ:
ಹಸುಗಳನ್ನು ನುಂಗುತ್ತಿದ್ದ ಕಾಳಿಯೆಂಬ ರಾಕ್ಷಸನ ಗಂಟಲನ್ನು ಸಂಹಾರಮಾಡಿ ಗೋವುಗಳನ್ನು ರಕ್ಷಿಸಿದೆ, ಇಂದ್ರನಿಗೆ ಹೆದರದೆ ಗೋವರ್ಧನ ಪರ್ವತವನ್ನು ಎತ್ತಿ ಗೋಕುಲವನ್ನು ಕಾಪಾಡಿದೆ, ಗಜೇಂದ್ರನನ್ನು ರಕ್ಷಿಸಿದೆ, ಹೇ ಕೃಷ್ಣ ಈ ಖಳನು ಹಿಡಿದಿರುವ ನನ್ನ ಸೆರಗನ್ನು ಬಿಡಿಸಲಾರೆಯಾ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ತುರು: ದನ, ಗೋವು; ನುಂಗು: ಕಬಳಿಸು, ತಿನ್ನು; ಫಣಿ: ಹಾವು; ಗಂಟಲು: ಕಂಠ; ಮುರಿ: ಸೀಳು; ಕಾಯ್ದೆ: ಕಾಪಾಡು; ಗೋವು: ಹಸು; ಗಿರಿ: ಬೆಟ್ಟ; ಮರೆ: ಗುಟ್ಟು, ರಹಸ್ಯ; ಖಾತಿ: ಕೋಪ, ಕ್ರೋಧ; ಅಳುಕು: ಹೆದರು; ಕಾಯ್ದೆ: ಕಾಪಾಡು; ಮೆರೆ: ಹೊಳೆ, ಪ್ರಕಾಶಿಸು; ಕೃಪೆ: ಕರುಣೆ; ಗಜೇಂದ್ರ: ಆನೆಗಳ ರಾಜ; ಮುರಿ: ಸೀಳು; ಖಳ: ದುಷ್ಟ; ಸೋಕು: ಮುಟ್ಟು; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿಸು: ಕಳಚು, ಸಡಿಲಿಸು; ರಾಣಿ: ಅರಸಿ;

ಪದವಿಂಗಡಣೆ:
ತುರುವ +ನುಂಗಿದ +ಫಣಿಯ +ಗಂಟಲ
ಮುರಿದು +ಕಾಯ್ದೈ +ಗೋವುಗಳ+ ಗಿರಿ
ಮರೆಯಲ್+ಇಂದ್ರನ +ಖಾತಿಗ್+ಅಳುಕದೆ +ಕಾಯ್ದೆ +ಗೋಕುಲವ
ಮೆರೆದೆಲಾ+ ಕೃಪೆಯಲಿ +ಗಜೇಂದ್ರನ
ಮುರಿಯಲೀಯದೆ +ಖಳನು +ಸೋಕಿದ
ಸೆರಗ+ ಬಿಡಿಸೈ+ ಕೃಷ್ಣ+ಎಂದಳು +ಪಾಂಡವರ +ರಾಣಿ

ಅಚ್ಚರಿ:
(೧) ತುರು, ಗೋವು – ಸಮನಾರ್ಥಕ ಪದ
(೨) ಕಾಳಿಂಗ ಮರ್ಧನದ ವಿವರ – ತುರುವ ನುಂಗಿದ ಫಣಿಯ ಗಂಟಲಮುರಿದು ಕಾಯ್ದೈ ಗೋವುಗಳ
(೩) ಗೋವರ್ಧನ ಗಿರಿಧಾರಿಯ ವಿವರ – ಗಿರಿ ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
(೪) ಗಜೇಂದ್ರ ಮೋಕ್ಷದ ವಿವರ – ಮೆರೆದೆಲಾ ಕೃಪೆಯಲಿ ಗಜೇಂದ್ರನ

ಪದ್ಯ ೧೧೮: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೭?

ಶಿಶುವಧೆಗೆ ಸೀವರಿಸದಸುರನ
ಬಸುರ ಹೂಮಾಲೆಯನು ನೀ ತುರು
ಬಿಸಿದೆಲಾ ನಖರಾಜಿಗಬಲನ ಕಾಯ್ದು ಕರುಣದಲಿ
ಶಿಶುವನಯ್ಯಂಗಿತ್ತು ಜಲಧಿಯ
ಮುಸುಕನುಗಿದತಿ ಕರುಣಿಯೇ ಹೆಂ
ಗಸಿನ ಹರಿಬಕೆ ಕೃಪೆಯ ಮಾಡೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೧೮ ಪದ್ಯ)

ತಾತ್ಪರ್ಯ:
ಹಿರಣ್ಯಕಶಿಪು ತನ್ನ ಮಗನನ್ನು ಕೊಲ್ಲಲು ಮುಂದಾದಾಗ ಶಿಶುವಧೆಯನ್ನು ತಪ್ಪಿಸಿ ಅವನ ಕರುಳನ್ನೇ ಹಾರವನ್ನಾಗಿ ಹಾಕಿಕೊಂಡೆ, ನಿನ್ನ ಗುರುವಾದ ಸಾಂದೀಪಾನಿಯ ಮಗನು ಸಮುದ್ರವನ್ನು ಸೇರಿರಲು, ನೀನು ಸಮುದ್ರವನ್ನು ಹೊಕ್ಕು ತಂದೆ ಮತ್ತು ಮಗನನ್ನು ಒಂದುಗೂಡಿಸಿ ನಿನ್ನ ಗುರುದಕ್ಷಿಣೆಯನ್ನು ನೀಡಿದೆ. ಹೇ ಕೃಷ್ಣನೇ, ಈ ಬಡಪಾಯಿ ಹೆಣ್ಣಿನ ಕಷ್ಟಕಾಲದಲ್ಲಿ ನೀನು ಕೃಪೆದೋರು ಎಂದು ದ್ರೌಪದಿ ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಶಿಶು: ಮಗು; ವಧೆ: ಸಂಹಾರ; ಸೀವರಿಸು: ಆರ್ಭಟಿಸು, ಘೀಳಿಡು; ಅಸುರ: ರಾಕ್ಷಸ; ಬಸುರ: ಹೊಟ್ಟೆ; ಹೂ: ಪುಷ್ಪ; ಮಾಲೆ: ಹಾರ; ತುರುಬು: ಮುಡಿಸು; ನಖ: ಉಗುರು; ರಾಜಿ: ಸಾಲು, ಗುಂಪು; ಅಬಲ: ಶಕ್ತಿಯಿಲ್ಲದ; ಕಾಯ್ದು: ಕಾಪಾಡು; ಕರುಣ: ದಯೆ; ಅಯ್ಯ: ಹಿರಿಯ, ತಂದೆ; ಜಲಧಿ; ಸಮುದ್ರ; ಮುಸುಕು: ತೆರೆ, ಪರದೆ; ಹೆಂಗಸು: ಸ್ತ್ರಿ; ಹರಿಬ: ಕೆಲಸ; ಕೃಪೆ: ದಯೆ; ಒರಲು: ಗೋಳಿಡು; ತರಳೆ: ಹೆಣ್ಣು;

ಪದವಿಂಗಡಣೆ:
ಶಿಶುವಧೆಗೆ +ಸೀವರಿಸದ್+ಅಸುರನ
ಬಸುರ+ ಹೂಮಾಲೆಯನು +ನೀ +ತುರು
ಬಿಸಿದೆಲಾ +ನಖರಾಜಿಗ್+ಅಬಲನ +ಕಾಯ್ದು +ಕರುಣದಲಿ
ಶಿಶುವನ್+ಅಯ್ಯಂಗಿತ್ತು +ಜಲಧಿಯ
ಮುಸುಕನುಗಿದ್+ಅತಿ +ಕರುಣಿಯೇ +ಹೆಂ
ಗಸಿನ +ಹರಿಬಕೆ+ ಕೃಪೆಯ+ ಮಾಡೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಅಸುರ, ಬಸುರ – ಪ್ರಾಸ ಪದ
(೨) ಕೃಷ್ಣನ ಗುಣಗಾನ – ಅಬಲನ ಕಾಯ್ದು ಕರುಣದಲಿ, ಅತಿ ಕರುಣೀಯೇ

ಪದ್ಯ ೧೧೭: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೬?

ದೇವಕೀದೇವಿಯರ ಸೆರೆಯನು
ದೇವ ಕೃಪೆಯಲಿ ಬಿಡಿಸಿದೈ ಕರು
ಣಾವಲಂಬದಿ ಕಳಚಿದೈ ಹದಿನಾರು ಸಾವಿರದ
ದೇವಕನ್ಯಾ ಬಂಧನವನಭಿ
ಭಾವಕರ ಕೌರವರ ಭಂಗಿಸಿ
ದೇವ ಬಿಡಿಸೈ ಸೆರಗನೆಂದೊರಲಿದಳು ಪಾಂಚಾಲೆ (ಸಭಾ ಪರ್ವ, ೧೫ ಸಂಧಿ, ೧೧೭ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನೀನು ನಿನ್ನ ತಾಯಿಯಾದ ದೇವಕೀದೇವಿಯ ಸೆರೆಮನೆ ವಾಸವನ್ನು ಮುಕ್ತಗೊಳಿಸಿದೆ. ಹದಿನಾರು ಸಾವಿರ ದೇವಕನ್ಯೆಯರನ್ನು ಸೆರೆಮನೆಯಿಂದ ಬಿಡಿಸಿದೆ. ನನಗೆ ಸಂಕಟಕೊಡುತ್ತಿರುವ ಈ ಕೌರವರನ್ನು ಮುರಿದು ನನ್ನ ಸೆರಗನ್ನು ಬಿಡಿಸು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ದೇವಿ: ಹೆಣ್ಣುದೇವತೆ; ಸೆರೆ: ಬಂಧನ; ದೇವ: ಭಗವಂತ; ಕೃಪೆ: ಕರುಣೆ; ಬಿಡಿಸು: ಮುಕ್ತಗೊಳಿಸು; ಕರುಣೆ: ದಯೆ; ಅವಲಂಬ: ಆಸರೆ; ಕಳಚು: ತೊರೆ; ಸಾವಿರ: ಸಹಸ್ರ; ಕನ್ಯೆ: ಹುಡುಗಿ; ಅಭಿಭಾವಕ: ಸಂಕಟಕೊಡುವ; ಭಂಗಿಸು: ಹೊಡೆ, ಮುರಿ; ಬಿಡಿಸು: ನಿವಾರಿಸು; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಒರಲು: ಗೋಳಿಡು; ಪಾಂಚಾಲೆ: ದ್ರೌಪದಿ;

ಪದವಿಂಗಡಣೆ:
ದೇವಕೀದೇವಿಯರ +ಸೆರೆಯನು
ದೇವ +ಕೃಪೆಯಲಿ +ಬಿಡಿಸಿದೈ +ಕರು
ಣಾವಲಂಬದಿ+ ಕಳಚಿದೈ +ಹದಿನಾರು +ಸಾವಿರದ
ದೇವಕನ್ಯಾ +ಬಂಧನವನ್+ಅಭಿ
ಭಾವಕರ+ ಕೌರವರ +ಭಂಗಿಸಿ
ದೇವ +ಬಿಡಿಸೈ +ಸೆರಗನೆಂದ್+ಒರಲಿದಳು +ಪಾಂಚಾಲೆ

ಅಚ್ಚರಿ:
(೧) ಕೃಪೆ, ಕರುಣ – ಸಮನಾರ್ಥಕ ಪದ
(೨) ಬಿಡಿಸಿದೈ, ಕಳಚಿದೈ, ಬಿಡಿಸೈ – ಸಾಮ್ಯಾರ್ಥ ಪದಗಳು

ಪದ್ಯ ೧೧೬: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೫?

ರಕ್ಷಿಸಿದೆ ಯೋಗಿಣಿಗೆ ಬೆದರುವ
ದಕ್ಷಸುತೆಯನು ಕೋಪಶಿಖಿ ತಿಮಿ
ರಾಕ್ಷನಾ ಜಮದಗ್ನಿ ಮುನಿಪನ ನುಡಿಯನನುಕರಿಸಿ
ರಕ್ಷಿಸಿದೆ ರೇಣುಕೆಯನೆನ್ನನು
ಪೇಕ್ಷಿಸಿದಿರೈ ಕರುಣದಲಿ ಕಮ
ಲಾಕ್ಷ ಬಿಡಿಸಾ ಸೆರಗನೆಂದೊರಲಿದಳು ಹರಿಣಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೧೬ ಪದ್ಯ)

ತಾತ್ಪರ್ಯ:
ಎಲೈ ಕೃಷ್ಣ, ನೀನು ಯೋಗಿನಿಗೆ ಹೆದರಿದ ದಕ್ಷಪುತ್ರಿಯನ್ನು ರಕ್ಷಿಸಿದೆ. ಕೋಪಶಿಖಿಯಿಂದ ಕತ್ತಲುಗುಡಿಸಿದ ಜಮದಗ್ನಿ ಮುನಿಯಿಂದ ರೇಣುಕಾದೇವಿಯನ್ನು ರಕ್ಷಿಸಿದೆ. ಈಗ ನನ್ನನ್ನು ಕಡೆಗಣಿಸಬೇಡ. ಹೇ ಕೃಷ್ಣ ನನ್ನ ಸೆರಗನ್ನು ಬಿಡಿಸು ಎಂದು ಕೃಷ್ಣನಲ್ಲಿ ದ್ರೌಪದಿ ಮೊರೆಯಿಟ್ಟಳು.

ಅರ್ಥ:
ರಕ್ಷಿಸು: ಕಾಪಾಡು; ಬೆದರು: ಹೆದರು, ಅಂಜು; ಸುತೆ: ಮಗಳು; ಕೋಪ: ಕ್ರೋಧ, ರೋಷ; ಶಿಖಿ: ಅಗ್ನಿ; ತಿಮಿರ: ಕತ್ತಲು; ಮುನಿ: ಋಷಿ; ನುಡಿ: ಮಾತು; ಅನುಕರಿಸು: ಅನುಗ್ರಹ ರೂಪ; ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ಕರುಣ: ದಯೆ; ಕಮಲಾಕ್ಷ: ಕಮಲದಂತ ಕಣ್ಣುಳ್ಳವ; ಬಿಡಿಸು: ತೊರೆ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಒರಲು: ಗೋಳಿಡು; ಹರಿಣಾಕ್ಷಿ: ಜಿಂಕೆಯ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ರಕ್ಷಿಸಿದೆ+ ಯೋಗಿಣಿಗೆ+ ಬೆದರುವ
ದಕ್ಷ+ಸುತೆಯನು +ಕೋಪಶಿಖಿ+ ತಿಮಿ
ರಾಕ್ಷನಾ +ಜಮದಗ್ನಿ+ ಮುನಿಪನ+ ನುಡಿಯನ್+ಅನುಕರಿಸಿ
ರಕ್ಷಿಸಿದೆ +ರೇಣುಕೆಯನ್+ಎನ್ನನ್
ಉಪೇಕ್ಷಿಸಿದಿರೈ+ ಕರುಣದಲಿ+ ಕಮ
ಲಾಕ್ಷ +ಬಿಡಿಸಾ+ ಸೆರಗನೆಂದ್+ಒರಲಿದಳು +ಹರಿಣಾಕ್ಷಿ

ಅಚ್ಚರಿ:
(೧) ರಕ್ಷಿಸಿದೆ – ೧, ೪ ಸಾಲಿನ ಮೊದಲ ಪದ
(೨) ಕಣ್ಣನಿಂದ ಹೆಸರನ್ನು ಕರೆಯುವ ಪರಿ – ಕಮಲಾಕ್ಷ, ಹರಿಣಾಕ್ಷಿ

ಪದ್ಯ ೧೧೫: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೪?

ವೇದವಧುಗಳ ಕಾಯ್ದೆಲಾ ತಮ
ಬಾಧೆಯಲಿ ಖಳನಿಂದ ಧರಣಿ ಮ
ಹೋದಧಿಯಲಕ್ಕಾಡಿದರೆ ದಾಡೆಯಲಿ ದಾನವನ
ಕೋದು ಹಾಕೀ ಭೂತ ಧಾತ್ರಿಯ
ಕಾದೆಲಾ ಕಾರುಣ್ಯಸಿಂಧುವೆ
ಮೇದಿನೀಪತಿ ಮನ್ನಿಸೆಂದೊರಲಿದಳು ತರಳಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೧೫ ಪದ್ಯ)

ತಾತ್ಪರ್ಯ:
ಜ್ಞಾನದ ಪ್ರತೀಕವಾದ ಬೆಳಕನ್ನು ತಮನೆಂಬ ರಾಕ್ಷಸನು ಕದ್ದು ಸಮುದ್ರವನ್ನು ಹೊಕ್ಕಾಗ ಮತ್ಸ್ಯರೂಪದಿಂದ ವೇದವಧುವನ್ನು ರಕ್ಷಿಸಲಿಲ್ಲವೇ? ಹಿರಣ್ಯಾಕ್ಷನು ಭೂಮಿಯನ್ನು ಸಮುದ್ರದಲ್ಲಿ ಮುಳುಗಿಸಿದಾಗ ಯಜ್ಞವರಾಹನಾಗಿ ಕೋರೆದಾಡೆಯಿಂದ ಭೂದೇವಿಯನ್ನು ಉದ್ಧರಿಸಲಿಲ್ಲವೇ! ಹೇ ಭೂದೇವಿ ರಮಣನೇ ನನ್ನನ್ನು ಕಾಪಾಡು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ವೇದ: ಅರಿವು, ಜ್ಞಾನ; ತಮ: ರಾಕ್ಷಸನ ಹೆಸರು, ಅಂಧಕಾರ; ವಧು: ಹೆಣ್ಣು; ಕಾಯ್ದೆ: ಕಾಪಾಡಿದೆ; ಬಾಧೆ: ತೊಂದರೆ; ಖಳ: ದುಷ್ಟ; ಧರಣಿ: ಭೂಮಿ; ಮಹೋದಧಿ: ದೊಡ್ಡ ಸಮುದ್ರ; ಉದಧಿ: ಸಮುದ್ರ; ಕಾಡು: ಪೀಡಿಸು; ದಾಡೆ: ದವಡೆ, ಹಲ್ಲು; ದಾನವ: ರಾಕ್ಷಸ; ಕೋದು: ಸೇರಿಸಿ, ಪೋಣಿಸಿ; ಭೂತ: ಚರಾಚರಾತ್ಮಕ ಜೀವರಾಶಿ; ಧಾತ್ರಿ: ಭೂಮಿ; ಕಾದೆ: ಕಾಪಾಡಿದೆ; ಕಾರುಣ್ಯಸಿಂಧು: ಕರುಣೆಯ ಸಾಗರ; ಮೇದಿನೀಪತಿ: ಭೂಮಿಪತಿ; ಮನ್ನಿಸು: ದಯೆತೋರು, ಅನುಗ್ರಹಿಸು; ತರಳಾಕ್ಷಿ: ಚಂಚಲವಾದ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ವೇದ+ವಧುಗಳ+ ಕಾಯ್ದೆಲಾ+ ತಮ
ಬಾಧೆಯಲಿ +ಖಳನಿಂದ +ಧರಣಿ +ಮಹ
ಉದಧಿಯಲ್+ಕಾಡಿದರೆ+ ದಾಡೆಯಲಿ+ ದಾನವನ
ಕೋದು +ಹಾಕಿ+ಈ+ ಭೂತ +ಧಾತ್ರಿಯ
ಕಾದೆಲಾ+ ಕಾರುಣ್ಯ+ಸಿಂಧುವೆ
ಮೇದಿನೀಪತಿ+ ಮನ್ನಿಸೆಂದ್+ಒರಲಿದಳು +ತರಳಾಕ್ಷಿ

ಅಚ್ಚರಿ:
(೧) ಧಾತ್ರಿ, ಮೇದಿನಿ, ಧರಣಿ; ಉದಧಿ, ಸಿಂಧು – ಸಮನಾರ್ಥಕ ಪದ
(೨) ವೇದವನ್ನು ಬೆಳಕೆಂದು ನೋಡುವ ಹಾಗು ತಮ (ಅಂಧಕಾರ) ರಾಕ್ಷಸನೆಂದು ನೋಡುವ ಪರಿ
(೩) ಕೃಷ್ಣನನ್ನು ಕರೆದ ಬಗೆ – ಕಾರುಣ್ಯಸಿಂಧುವೆ, ಮೇದಿನೀಪತಿ;
(೪) ಕೃಷ್ಣನ ಗುಣಗಾನ – ವೇದವಧುಗಳ ಕಾಯ್ದೆಲಾ, ಭೂತ ಧಾತ್ರಿಯ ಕಾದೆಲಾ

ಪದ್ಯ ೧೧೪: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೩?

ಕಾಯಿದೈ ಕರುಣದಲಿ ದಿವಿಜರ
ತಾಯ ಪರಿಭವವನು ಪಯೋಧಿಯ
ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ
ಕಾಯಿದೈ ಜಾನಕಿಯನೆನ್ನನು
ಕಾಯಬೇಹುದು ಹೆಣ್ಣ ಹರಿಬಕೆ
ನೋಯಬಲ್ಲರೆ ಕೆಲಬರೆಂದೊರಲಿದಳು ತರಳಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೧೪ ಪದ್ಯ)

ತಾತ್ಪರ್ಯ:
ಎಲೈ ಕೃಷ್ಣನೇ ನೀನು ದೇವಕಿಯ ಸೆರಮನೆಯನ್ನು ತಪ್ಪಿಸಿ ಆಕೆಯನ್ನು ರಕ್ಷಿಸಿದೆ, ಸಾಗರಕ್ಕೆ ಸೇತುವೆಯನ್ನು ಕಟ್ಟಿ ಸಮುದ್ರವನ್ನು ದಾಟಿ ರಾವಣಾದಿ ರಾಕ್ಷಸರನ್ನು ಕೊಂದು ಅವರ ತಲೆಯನ್ನು ಚೆಂಡಾಡಿ ಸೀತೆಯನ್ನು ರಕ್ಷಿಸಿದೆ, ಈಗ ನನ್ನನ್ನು ಕಾಪಾಡಬೇಕಿದೆ, ಸ್ರೀಯ ದುಃಖಕ್ಕಾಗಿ ನಿನ್ನನ್ನು ಬಿಟ್ಟು ಇನ್ನಾರು ತಾನೆ ನೊಂದು ಸಹಾಯ ಮಾಡಿಯಾರು ಎಂದು ದ್ರೌಪದಿ ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಕಾಯು: ಕಾಪಾಡು, ರಕ್ಷಿಸು; ಕರುಣೆ: ದಯೆ; ದಿವಿಜ: ಬ್ರಾಹ್ಮಣ; ತಾಯ: ತಾಯಿ, ಮಾತೆ; ಪರಿಭವ: ಸೋಲು, ತಿರಸ್ಕಾರ; ಪಯೋಧಿ: ಸಮುದ್ರ; ಹಾಯಿದು: ಹಾರಿ; ಅಮರ: ದೇವತೆ; ಅರಿ: ವೈರಿ; ಅಮರಾರಿ: ರಾಕ್ಷಸ; ಖಂಡಿಸು: ಸೋಲಿಸು; ತಲೆ: ಶಿರ; ಚೆಂಡಾಡು: ಆಟವಾಡು, ಸೋಲಿಸು; ಜಾನಕಿ: ಸೀತೆ; ಬೇಹುದು: ಬೇಕು; ಹೆಣ್ಣು: ಸ್ತ್ರೀ; ಹರಿಬ: ಕೆಲಸ; ನೋವು: ಬೇನೆ, ಶೂಲೆ; ಕೆಲ: ಸ್ವಲ್ಪ; ಒರಲು: ಗೋಳಿಡು; ತರಳಾಕ್ಷಿ: ಚಂಚಲವಾದ ಕಣ್ಣುಳ್ಳವಳು (ಸುಂದರಿ)

ಪದವಿಂಗಡಣೆ:
ಕಾಯಿದೈ+ ಕರುಣದಲಿ +ದಿವಿಜರ
ತಾಯ +ಪರಿಭವವನು +ಪಯೋಧಿಯ
ಹಾಯಿದ್+ಅಮರ+ಅರಿಗಳ+ ಖಂಡಿಸಿ +ತಲೆಯ +ಚೆಂಡಾಡಿ
ಕಾಯಿದೈ +ಜಾನಕಿಯನ್+ಎನ್ನನು
ಕಾಯಬೇಹುದು +ಹೆಣ್ಣ +ಹರಿಬಕೆ
ನೋಯಬಲ್ಲರೆ+ ಕೆಲಬರೆಂದ್+ಒರಲಿದಳು +ತರಳಾಕ್ಷಿ

ಅಚ್ಚರಿ:
(೧) ಕಾಯಿದೈ – ೧, ೪ ಸಾಲಿನ ಮೊದಲ ಪದ
(೨) ದಿವಿಜರ ತಾಯಿ – ದೇವಕಿಯನ್ನು ಕರೆದಿರುವ ಪರಿ, ದೇವಕಿಯು ಅದಿತಿಯ ಅವತಾರವೆಂದು ಪರಿಗಣಿಸುತ್ತಾರೆ
(೩) ರಾಮನ ಅವತಾರವನ್ನು ವಿವರಿಸುವ ಪರಿ – ಪಯೋಧಿಯ ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ ಕಾಯಿದೈ ಜಾನಕಿಯ

ಪದ್ಯ ೧೧೩: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೨?

ಗತಿ ವಿಹೀನರಿಗಕಟ ನೀನೇ
ಗತಿಯಲೈ ಗೋವಿಂದ ರಿಪು ಬಾ
ಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲ
ಸತಿ ಪಶು ದ್ವಿಜ ಬಾಧೆಯಲಿ ಜೀ
ವಿತವ ತೊರೆವರು ಗರುವತನ ಹಿಂ
ಗಿತೆ ಸುಯೋಧನ ಸಭೆಯೊಳೆಂದೊರಲಿದಳು ಲಲಿತಾಂಗಿ (ಸಭಾ ಪರ್ವ, ೧೫ ಸಂಧಿ, ೧೧೩ ಪದ್ಯ)

ತಾತ್ಪರ್ಯ:
ಬೇರೆ ದಾರಿ ತೋರದವರಿಗೆ ಗೋವಿಂದ ನೀನೆ ಅವರೆಲ್ಲರಿಗೂ ದಾರಿ ತೋರುವವನು, ಶತ್ರುಗಳಿಂದ ತೊಂದರೆಗೀಡಾದವರು, ನೊಂದವರು, ಶಕ್ತಿಯಿಲ್ಲದವರೆಲ್ಲರಿಗೂ ನೀನೇ ಪರಮ ಬಾಂಧವ. ಹೇ ಕೃಷ್ಣ ಸ್ತ್ರೀಯರಿಗೆ, ಗೋವುಗಳಿಗೆ, ಬ್ರಾಹ್ಮಣರಿಗೆ ಬಾಧೆಯುಂಟಾದರೆ ಅವರನ್ನುಳಿಸಲು ತಮ್ಮ ಪ್ರಾಣವನ್ನೇ ಕೊಡುತ್ತಾರೆ. ಈ ಕೌರವ ಸಭೆಯಲ್ಲಿ ಅಂತಹ ಹಿರಿಮೆ ಹಿಂಗೆ ಹೋಗಿದೆ ಎಂದು ದ್ರೌಪದಿ ಕೃಷ್ಣನ ಮೊರೆಯಿಟ್ಟಳು.

ಅರ್ಥ:
ಗತಿ: ಸ್ಥಿತಿ, ಅವಸ್ಥೆ; ವಿಹೀನ: ತ್ಯಜಿಸಿದ, ಬಿಟ್ಟ; ಅಕಟ: ಅಯ್ಯೋ; ಗೋವಿಂದ: ಕೃಷ್ಣ; ರಿಪು: ವೈರಿ; ಬಾಧಿತ: ತೊಂದರೆಗೊಳಗಾದ; ಅಬಲ: ಶಕ್ತಿಹೀನ; ಆರ್ತ: ಕಷ್ಟ, ಸಂಕಟ; ಪರಮ: ಶ್ರೇಷ್ಠ; ಬಂಧು: ನೆಂಟ, ಸಂಬಂಧಿಕ; ಸತಿ: ಹೆಂಡತಿ; ಪಶು: ಪ್ರಾಣಿ; ದ್ವಿಜ: ಬ್ರಾಹ್ಮಣ; ಬಾಧೆ: ತೊಂದರೆ; ಜೀವಿತ: ಪ್ರಾಣ; ತೊರೆ: ಹೊರದೂಡು; ಗರುವ: ಶ್ರೇಷ್ಠ; ಹಿಂಗು: ಕಡಮೆಯಾಗು; ಸಭೆ: ಓಲಗ; ಒರಳು: ಗೋಳಿಡು; ಲಲಿತಾಂಗಿ: ಲತೆಯಂತ ತನುವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಗತಿ +ವಿಹೀನರಿಗ್+ಅಕಟ +ನೀನೇ
ಗತಿಯಲೈ +ಗೋವಿಂದ +ರಿಪು +ಬಾ
ಧಿತರಿಗ್+ಅಬಲರಿಗ್+ಆರ್ತರಿಗೆ +ನೀ +ಪರಮ+ ಬಂಧುವಲ
ಸತಿ+ ಪಶು +ದ್ವಿಜ +ಬಾಧೆಯಲಿ +ಜೀ
ವಿತವ+ ತೊರೆವರು +ಗರುವತನ+ ಹಿಂ
ಗಿತೆ+ ಸುಯೋಧನ+ ಸಭೆಯೊಳ್+ಎಂದ್+ಒರಲಿದಳು +ಲಲಿತಾಂಗಿ

ಅಚ್ಚರಿ:
(೧) ಕೃಷ್ಣನು ಯಾರಿಗೆ ಪರಮ ಬಾಂಧವ – ಗೋವಿಂದ ರಿಪು ಬಾಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲ
(೨) ಶ್ರೇಷ್ಠತೆಯ ಪ್ರತೀಕ – ಸತಿ ಪಶು ದ್ವಿಜ ಬಾಧೆಯಲಿ ಜೀವಿತವ ತೊರೆವರು