ಪದ್ಯ ೧೧೨: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧?

ಸುಲಿವರೊರೊಳಗುಟ್ಟ ಸೀರೆಯ
ನೆಲೆ ಮುರಾಂತಕ ರಕ್ಷಿಸೈ ಶಶಿ
ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೧೨ ಪದ್ಯ)

ತಾತ್ಪರ್ಯ:
ಈ ಸಭೆಯ ನಡುವೆ ನಾನುಟ್ಟ ಸೀರೆಯನ್ನು ಸೆಳೆಯುತ್ತಿದ್ದಾರೆ. ಹೇ ಮುರಾಂತಕ ನೀನೇ ನನ್ನನ್ನು ರಕ್ಷಿಸು, ನುಂಗಲು ಬಂದ ರಾಹುವಿನ ತುಟಿಗಳೊಡನೆ ಚಂದ್ರನ ಕಾಂತಿಗೆ ಸಲಿಗೆಯುಂಟೇ? ಈ ರಾಕ್ಷಸರು ನನ್ನ ಪ್ರಾಣವನ್ನೇ ಹೀರುತ್ತಿದ್ದಾರೆ. ಸೀರೆಯು ಬಿಚ್ಚಿದರೆ ನಾನು ಬದುಕಿರುವುದಿಲ್ಲ. ಹೇ ಕರುಣಾಸಮುದ್ರನೇ ಶ್ರೀಕೃಷ್ಣ ಕಾಪಾಡು ಎಂದು ಮೊರೆಯಿಟ್ಟಳು.

ಅರ್ಥ:
ಸುಲಿ: ತೆಗೆ, ಕಳಚು; ಊರು: ಸಭೆ, ಪುರ; ಉಟ್ಟ: ತೊಟ್ಟ; ಸೀರೆ: ಬಟ್ಟೆ; ನೆಲೆ: ಆಶ್ರಯ, ವಾಸಸ್ಥಾನ; ಮುರಾಂತಕ: ಕೃಷ್ಣ; ರಕ್ಷಿಸು: ಕಾಪಾಡು; ಶಶಿ: ಚಂದ್ರ; ಕಳೆ: ಪ್ರಕಾಶ, ಕಾಂತಿ; ಸದರ: ಸಲಿಗೆ, ಸುಲಭ; ರಾಹು: ನವಗ್ರಹಗಳಲ್ಲಿ ಒಂದು; ರಚಿಸು: ನಿರ್ಮಿಸು; ತುಟಿ: ಅಧರ; ತೋಟಿ: ಕಲಹ, ಜಗಳ; ಅಸು: ಪ್ರಾಣ; ಖಳ: ದುಷ್ಟ; ಸೆಳೆ: ಎಳೆತ, ಜಗ್ಗು; ಕರುಣಾಜಲಧಿ: ಕರೂಣೆಯ ಸಾಗರ; ಕಾಯು: ಕಾಪಾಡು; ಒರಳು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಸುಲಿವರ್+ಊರೊಳಗ್+ಉಟ್ಟ +ಸೀರೆಯನ್
ಎಲೆ+ ಮುರಾಂತಕ +ರಕ್ಷಿಸೈ +ಶಶಿ
ಕಳೆಗೆ+ ಸದರವೆ+ ರಾಹು +ರಚಿಸಿದ +ತುಟಿಯ +ತೋಟಿಯದು
ಸೆಳೆವರ್+ಅಸುವನು +ಖಳರು +ಸೀರೆಯ
ಸುಲಿದರ್+ಉಳಿಯೆನು +ಕೃಷ್ಣ +ಕರುಣಾ
ಜಲಧಿಯೇ +ಕೈ+ಕಾಯಬೇಕೆಂದ್+ ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಶಶಿ ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
(೨) ಕೃಷ್ಣನಿಗೆ ಮೊರೆಯಿಡುವ ಪರಿ – ಮುರಾಂತಕ ರಕ್ಷಿಸೈ, ಸೀರೆಯ ಸುಲಿದರುಳಿಯೆನು ಕೃಷ್ಣ ಕರುಣಾಜಲಧಿಯೇ ಕೈಗಾಯಬೇಕೆಂದೊರಲಿದಳು

ನಿಮ್ಮ ಟಿಪ್ಪಣಿ ಬರೆಯಿರಿ