ಪದ್ಯ ೧೧೨: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧?

ಸುಲಿವರೊರೊಳಗುಟ್ಟ ಸೀರೆಯ
ನೆಲೆ ಮುರಾಂತಕ ರಕ್ಷಿಸೈ ಶಶಿ
ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೧೨ ಪದ್ಯ)

ತಾತ್ಪರ್ಯ:
ಈ ಸಭೆಯ ನಡುವೆ ನಾನುಟ್ಟ ಸೀರೆಯನ್ನು ಸೆಳೆಯುತ್ತಿದ್ದಾರೆ. ಹೇ ಮುರಾಂತಕ ನೀನೇ ನನ್ನನ್ನು ರಕ್ಷಿಸು, ನುಂಗಲು ಬಂದ ರಾಹುವಿನ ತುಟಿಗಳೊಡನೆ ಚಂದ್ರನ ಕಾಂತಿಗೆ ಸಲಿಗೆಯುಂಟೇ? ಈ ರಾಕ್ಷಸರು ನನ್ನ ಪ್ರಾಣವನ್ನೇ ಹೀರುತ್ತಿದ್ದಾರೆ. ಸೀರೆಯು ಬಿಚ್ಚಿದರೆ ನಾನು ಬದುಕಿರುವುದಿಲ್ಲ. ಹೇ ಕರುಣಾಸಮುದ್ರನೇ ಶ್ರೀಕೃಷ್ಣ ಕಾಪಾಡು ಎಂದು ಮೊರೆಯಿಟ್ಟಳು.

ಅರ್ಥ:
ಸುಲಿ: ತೆಗೆ, ಕಳಚು; ಊರು: ಸಭೆ, ಪುರ; ಉಟ್ಟ: ತೊಟ್ಟ; ಸೀರೆ: ಬಟ್ಟೆ; ನೆಲೆ: ಆಶ್ರಯ, ವಾಸಸ್ಥಾನ; ಮುರಾಂತಕ: ಕೃಷ್ಣ; ರಕ್ಷಿಸು: ಕಾಪಾಡು; ಶಶಿ: ಚಂದ್ರ; ಕಳೆ: ಪ್ರಕಾಶ, ಕಾಂತಿ; ಸದರ: ಸಲಿಗೆ, ಸುಲಭ; ರಾಹು: ನವಗ್ರಹಗಳಲ್ಲಿ ಒಂದು; ರಚಿಸು: ನಿರ್ಮಿಸು; ತುಟಿ: ಅಧರ; ತೋಟಿ: ಕಲಹ, ಜಗಳ; ಅಸು: ಪ್ರಾಣ; ಖಳ: ದುಷ್ಟ; ಸೆಳೆ: ಎಳೆತ, ಜಗ್ಗು; ಕರುಣಾಜಲಧಿ: ಕರೂಣೆಯ ಸಾಗರ; ಕಾಯು: ಕಾಪಾಡು; ಒರಳು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಸುಲಿವರ್+ಊರೊಳಗ್+ಉಟ್ಟ +ಸೀರೆಯನ್
ಎಲೆ+ ಮುರಾಂತಕ +ರಕ್ಷಿಸೈ +ಶಶಿ
ಕಳೆಗೆ+ ಸದರವೆ+ ರಾಹು +ರಚಿಸಿದ +ತುಟಿಯ +ತೋಟಿಯದು
ಸೆಳೆವರ್+ಅಸುವನು +ಖಳರು +ಸೀರೆಯ
ಸುಲಿದರ್+ಉಳಿಯೆನು +ಕೃಷ್ಣ +ಕರುಣಾ
ಜಲಧಿಯೇ +ಕೈ+ಕಾಯಬೇಕೆಂದ್+ ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಶಶಿ ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
(೨) ಕೃಷ್ಣನಿಗೆ ಮೊರೆಯಿಡುವ ಪರಿ – ಮುರಾಂತಕ ರಕ್ಷಿಸೈ, ಸೀರೆಯ ಸುಲಿದರುಳಿಯೆನು ಕೃಷ್ಣ ಕರುಣಾಜಲಧಿಯೇ ಕೈಗಾಯಬೇಕೆಂದೊರಲಿದಳು

ಪದ್ಯ ೧೧೧: ಕೊನೆಯದಾಗಿ ದ್ರೌಪದಿಯು ಯಾರ ಮೊರೆ ಹೋದಳು?

ಮೈದೆಗೆದವೀ ಪ್ರಾಣವಾಯುಗ
ಳೈದು ಬಳಿಕೆನಗಾರು ಮರುಗುವ
ರೈದೆತನವೊಂದುಳಿಯಲುಳಿವುವು ಮಿಕ್ಕ ಮಹಿಮೆಗಳು
ಬೈದು ಫಲವೇನಿನ್ನು ನಿನ್ನಯ
ಮೈದುನರ ಮರುಳಾಟಕೆನ್ನನು
ಕಾಯ್ದುಕೊಳ್ಳೈ ಕೃಷ್ಣಯೆಂದೊರಲಿದಳು ಲಲಿತಾಂಗಿ (ಸಭಾ ಪರ್ವ, ೧೫ ಸಂಧಿ, ೧೧೧ ಪದ್ಯ)

ತಾತ್ಪರ್ಯ:
ಹೇ ಕೃಷ್ಣ! ನನ್ನ ಪ್ರಾಣವಾಯುವು ನನ್ನ ದೇಹದಿಂದ ಹೊರಹೋಗುವುದರಲ್ಲಿದೆ, ನನಗೆ ಮರುಗುವವರಾರುಯಿಲ್ಲ. ನನ್ನ ಮುತ್ತೈದೆತನವೊಂದುಳಿದರೆ ಉಳಿದೆಲ್ಲ ವೈಭವಗಳೂ ಉಳಿದ ಹಾಗೆಯೇ, ಬೇರೆಯವರನ್ನು ಬೈದು ಫಲವೇನು? ಕೃಷ್ಣ, ನಿನ್ನ ಮೈದುನರ ಹುಚ್ಚಾಟದಿಂದ ಹಾಳಾಗಲಿರುವ ನನ್ನನ್ನು ನೀನೇ ಕಾಪಾಡಬೇಕು ಎಂದು ದ್ರೌಪದಿಯು ಕೃಷ್ಣನ ಮೊರೆಹೊಕ್ಕಳು.

ಅರ್ಥ:
ಮೈ: ತನು; ತೆಗೆ: ಹೊರತರು; ಮೈದೆಗೆ: ಅಂಜು, ಹೆದರು; ಪ್ರಾಣ: ಜೀವ; ವಾಯು: ಉಸಿರು; ಐದು: ಹೋಗಿಸೇರು; ಬಳಿಕ: ನಂತರ; ಮರುಗು: ತಳಮಳ, ಸಂಕಟ; ಐದೆತನ: ಮುತ್ತೈದೆತನ; ಉಳಿ: ಹೊರತಾಗು, ಮಿಗು; ಮಿಕ್ಕ: ಉಳಿದ; ಮಹಿಮೆ: ಶ್ರೇಷ್ಠತೆ; ಬೈದು: ಜರೆದು; ಫಲ: ಪ್ರಯೋಜನ; ಮೈದುನ: ಗಂಡ ಯಾ ಹೆಂಡತಿಯ ತಮ್ಮ; ಮರುಳ: ತಿಳಿಗೇಡಿ, ದಡ್ಡ; ಕಾಯ್ದು: ಕಾಪಾಡು; ಒರಲು: ಗೋಳಿಡು; ಲಲಿತಾಂಗಿ: ಲತೆಯಂತ ತನುವಿರುವವಳು (ದ್ರೌಪದಿ)

ಪದವಿಂಗಡಣೆ:
ಮೈ+ತೆಗೆದವ್+ಈ+ ಪ್ರಾಣವಾಯುಗಳ್
ಐದು +ಬಳಿಕೆನಗ್+ಆರು +ಮರುಗುವರ್
ಐದೆತನವೊಂದ್+ಉಳಿಯಲ್+ಉಳಿವುವು+ ಮಿಕ್ಕ+ ಮಹಿಮೆಗಳು
ಬೈದು +ಫಲವೇನ್+ಇನ್ನು+ ನಿನ್ನಯ
ಮೈದುನರ+ ಮರುಳಾಟಕ್+ಎನ್ನನು
ಕಾಯ್ದುಕೊಳ್ಳೈ+ ಕೃಷ್ಣ+ ಎಂದ್+ಒರಲಿದಳು +ಲಲಿತಾಂಗಿ

ಅಚ್ಚರಿ:
(೧) ಹೆಣ್ಣಿಗೆ ಮುಖ್ಯವಾದ ಆಸ್ತಿಯನ್ನು ವಿವರಿಸುವ ಪರಿ – ಐದೆತನವೊಂದುಳಿಯಲುಳಿವುವು ಮಿಕ್ಕ ಮಹಿಮೆಗಳು

ಪದ್ಯ ೧೧೦: ದ್ರೌಪದಿಯ ದಯನೀಯ ಸ್ಥಿತಿ ಹೇಗಿತ್ತು?

ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿಯ ಕೊಂಡರು ಭೀಷ್ಮ ಮೊದಲಾ
ದತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ
ಸುತನ ಸಿರಿ ಕಡು ಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯ ಕಾಣೆನು ಶಿವ ಶಿವಾಯೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೧೦ ಪದ್ಯ)

ತಾತ್ಪರ್ಯ:
ನನ್ನ ಗಂಡಂದಿರು ನನ್ನನ್ನು ಮಾರಿ ಧರ್ಮವನ್ನು ಕೊಂಡುಕೊಂಡಿದ್ದಾರೆ. ಭೀಷ್ಮರೇ ಮೊದಲಾದ ಮಹಾ ಪರಾಕ್ರಮಿಗಳು ವೃಥಾ ಭಯದಿಂದ ಪರರಿಗೆ ಹಿತವನ್ನು ಮಾಡದೆ ಸುಮ್ಮನಿದ್ದಾರೆ. ತಮ್ಮ ಮಗನ ವೈಭವವು ಗಾಂಧಾರಿಗೆ ಧೃತರಾಷ್ಟ್ರರರಿಗೆ ಬಹಳ ಸೊಗಸುತ್ತಿದೆ. ಅನಾಥೆಯಾದ ನನಗೆ ಶಿವ ಶಿವಾ ಗತಿ ಯಾರು ಎಂದು ದ್ರೌಪದಿಯು ಕೊರಗಿದಳು.

ಅರ್ಥ:
ಪತಿ: ಗಂಡ; ಮಾರು: ವಿಕ್ರಯಿಸು; ಧರ್ಮ: ಧಾರಣೆ ಮಾಡಿದುದು, ನಿಯಮ; ಸ್ಥಿತಿ: ಅವಸ್ಥೆ; ಅತಿರಥ: ಪರಾಕ್ರಮಿ; ಪರ: ಬೇರೆ; ಹಿತ: ಒಳಿತು; ಬಿಸುಟು: ಹೊರಹಾಕು; ವ್ಯರ್ಥ: ನಿರುಪಯುಕ್ತತೆ; ಭೀತಿ: ಭಯ; ಸುತ: ಮಗ; ಸಿರಿ: ಐಶ್ವರ್ಯ; ಕಡು: ವಿಶೇಷ, ಅಧಿಕ; ಸೊಗಸು: ಅಂದ, ಚೆಲುವು; ಭೂಪತಿ: ರಾಜ; ಅನಾಥ: ತಬ್ಬಲಿ; ಗತಿ: ದಿಕ್ಕು; ಕಾಣು: ತೋರು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಪತಿಗಳ್+ಎನ್ನನು +ಮಾರಿ +ಧರ್ಮ
ಸ್ಥಿತಿಯ +ಕೊಂಡರು +ಭೀಷ್ಮ +ಮೊದಲಾದ್
ಅತಿರಥರು +ಪರಹಿತವ +ಬಿಸುಟರು +ವ್ಯರ್ಥ+ಭೀತಿಯಲಿ
ಸುತನ +ಸಿರಿ +ಕಡು +ಸೊಗಸಲಾ +ಭೂ
ಪತಿಗೆ +ಗಾಂಧಾರಿಗೆ +ಅನಾಥೆಗೆ
ಗತಿಯ+ ಕಾಣೆನು +ಶಿವ+ ಶಿವಾ+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ದ್ರೌಪದಿಯ ದಯನೀಯ ಸ್ಥಿತಿ – ಅನಾಥೆಗೆ ಗತಿಯ ಕಾಣೆನು ಶಿವ ಶಿವಾ
(೨) ಗಾಂಧಾರಿಗೆ ತನ್ನ ದುಃಖವನ್ನು ತೋರುವ ಪರಿ – ಸುತನ ಸಿರಿ ಕಡು ಸೊಗಸಲಾ ಭೂ
ಪತಿಗೆ ಗಾಂಧಾರಿಗೆ

ಪದ್ಯ ೧೦೯: ದ್ರೌಪದಿಯು ಸಹಾಯಕ್ಕಾಗೆ ಮತ್ತಾರರಲ್ಲಿ ಮೊರೆಯಿಟ್ಟಳು?

ಧಾರುಣೀಪತಿಗಳಿರ ರಾಜ ಕು
ಮಾರರಿರ ಮಂತ್ರಿಗಳಿರಾ ಪರಿ
ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು
ನಾರಿಯೊಬ್ಬಳನಕಟ ಸಭೆಯಲಿ
ಸೀರೆಯುಡಿಯುರುವರು ಕೆಟ್ಟೆನು
ಕಾರುಣಿಕರಿಲ್ಲಾ ಶಿವಾಯೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೯ ಪದ್ಯ)

ತಾತ್ಪರ್ಯ:
ಸಭೆಯಲ್ಲಿರುವ ರಾಜರೇ, ರಾಜ ಕುಮಾರರೇ, ಮಂತ್ರಿಗಳೆ, ಪರಿವಾರಕ್ಕೆ ಹತ್ತಿರವಾಗಿರುವ ಜನರೇ, ದುಶ್ಯಾಸನು ಹಿಡಿದ ಮಾರ್ಗವು ನೀವು ಸರಿಯೆನ್ನುವಿರಾ? ನೀವೇ ವಿಚಾರಮಾಡಿ, ಒಬ್ಬ ನಿರಪರಾಧಿ ಹೆಣ್ಣಿನ ಸೀರೆಯ ಉಡಿಯನ್ನು ಬಿಚ್ಚುತ್ತಿದ್ದರೆ ಕರುಣೆಯಿಂದಾದರೂ ಇದನ್ನು ತಪ್ಪಿಸುವರಿಲ್ಲವೇ ಶಿವ ಶಿವಾ ಎಂದು ದ್ರೌಪದಿ ಗೋಳಿಟ್ಟಳು.

ಅರ್ಥ:
ಧಾರುಣಿ: ಭೂಮಿ; ಧಾರುಣೀಪತಿ: ರಾಜ; ರಾಜಕುಮಾರ: ಯುವರಾಜ; ಮಂತ್ರಿ: ಸಚಿವ; ಪರಿವಾರ: ಸುತ್ತಲಿನವರು, ಪರಿಜನ; ಪಂಥ: ಪಥ, ದಾರಿ; ವಿಚಾರಿಸು: ಆಲೋಚಿಸು; ನಿರಪರಾಧಿ: ತಪ್ಪು ಮಾಡದವಳು; ನಾರಿ: ಸ್ತ್ರೀ; ಅಕಟ: ಅಯ್ಯೋ; ಸಭೆ: ಓಲಗ; ಸೀರೆ: ಬಟ್ಟೆ, ವಸ್ತ್ರ; ಉರ್ಚು: ಹೊರಕ್ಕೆ ತೆಗೆ; ಕೆಟ್ಟೆ: ಹಾಳಾಗು; ಕಾರುಣಿಕ: ಕರುಣೆತೋರುವ; ಒರಲು: ಗೋಳಿಡು; ತರಳೆ: ಯುವತಿ; ಉಡಿ: ಮಡಿಲು, ತುಂಡುಮಾಡು;

ಪದವಿಂಗಡಣೆ:
ಧಾರುಣೀಪತಿಗಳಿರ+ ರಾಜ ಕು
ಮಾರರಿರ+ ಮಂತ್ರಿಗಳಿರಾ+ ಪರಿ
ವಾರಕಿದು+ ಪಂಥವೆ +ವಿಚಾರಿಸಿ+ ನಿರಪರಾಧಿಯನು
ನಾರಿಯೊಬ್ಬಳನ್+ಅಕಟ+ ಸಭೆಯಲಿ
ಸೀರೆ+ಉಡಿ+ಉರುವರು+ ಕೆಟ್ಟೆನು
ಕಾರುಣಿಕರಿಲ್ಲಾ+ ಶಿವಾ+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ಕುಮಾರ, ಪರಿವಾರ – ಪ್ರಾಸ ಪದ
(೨) ದ್ರೌಪದಿಯ ಸ್ಥಿತಿ – ನಾರಿಯೊಬ್ಬಳನಕಟ ಸಭೆಯಲಿ ಸೀರೆಯುಡಿಯುರುವರು ಕೆಟ್ಟೆನು
ಕಾರುಣಿಕರಿಲ್ಲಾ ಶಿವಾ

ಪದ್ಯ ೧೦೮: ದ್ರೌಪದಿ ಮತ್ತಾರನ್ನು ಸಹಾಯಕ್ಕೆ ಬೇಡಿದಳು?

ಕ್ರೂರನಿವ ದುಶ್ಯಾಸನನು ಗಾಂ
ಧಾರಿ ಬಿಡಿಸೌ ಸೆಅರಗ ಸೊಸೆಯ
ಲ್ಲಾರು ಹೇಳೌ ತಂಗಿಯಲ್ಲಾ ನಿಮಗೆ ಭಾನುಮತಿ
ವೀರ ಸೈಂಧವನರಸಿ ರಾಜಕು
ಮಾರಿ ನೀ ನಾದಿನಿಯಲಾ ಖಳ
ರೌರವದೊಳದ್ದುವನು ಬಿಡಿಸೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ಅಯ್ಯೋ ದುಶ್ಯಾಸನು ಕ್ರೂರ, ಗಾಂಧಾರಿ ನಿನಗೆ ನಾನು ಸೊಸೆಯಲ್ಲವೇ? ನನ್ನ ಸೆರಗನ್ನು ದುಶ್ಯಾಸನನಿಂದ ಬಿಡಿಸು. ಭಾನುಮತಿ ನಿನಗೆ ನಾನು ತಂಗಿಯಲ್ಲವೇ? ದುಶ್ಯಳೆ ನಿನಗೆ ನಾನು ನಾದಿನಿಯಲ್ಲವೇ? ಈ ನೀಚನು, ದುಷ್ಟನೂ ಆದ ದುಶ್ಯಾಸನನು ನನ್ನನ್ನು ರೌರವನರಕದಲ್ಲಿ ಮುಳುಗಿಸಲು ಮುಂದಾಗುತ್ತಿದ್ದಾನೆ, ನೀವಾದರೂ ನನನ್ನು ಇವನಿಂದ ಬಿಡಿಸೆಂದು ಗೋಳಿಟ್ಟಳು ದ್ರೌಪದಿ.

ಅರ್ಥ:
ಕ್ರೂರ: ದುಷ್ಟ; ಬಿಡಿಸು:ನಿವಾರಿಸು, ಹೋಗಲಾಡಿಸು; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಸೊಸೆ: ಮಗನ ಹೆಂಡತಿ; ಹೇಳಿ: ತಿಳಿಸಿ; ತಂಗಿ: ಸೋದರಿ; ವೀರ: ಶೂರ; ಸೈಂಧವ: ಜಯದ್ರಥ; ಅರಸಿ: ರಾಣಿ; ಸೈಂಧವನರಸಿ: ದುಶ್ಯಳೆ; ಖಳ:ದುಷ್ಟ; ರೌರವ: ಭಯಂಕರವಾದ; ಅದ್ದು: ಮುಳುಗಿಸು; ಒರಲು: ಗೋಳಿಡು, ಅರಚು; ತರಳೆ: ಯುವತಿ;

ಪದವಿಂಗಡಣೆ:
ಕ್ರೂರನಿವ +ದುಶ್ಯಾಸನನು +ಗಾಂ
ಧಾರಿ+ ಬಿಡಿಸೌ+ ಸೆರಗ +ಸೊಸೆಯಲ್
ಆರು +ಹೇಳೌ+ ತಂಗಿಯಲ್ಲಾ+ ನಿಮಗೆ +ಭಾನುಮತಿ
ವೀರ +ಸೈಂಧವನರಸಿ+ ರಾಜಕು
ಮಾರಿ +ನೀ +ನಾದಿನಿಯಲಾ +ಖಳ
ರೌರವದೊಳ್+ಅದ್ದುವನು +ಬಿಡಿಸೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಸೊಸೆ, ತಂಗಿ, ನಾದಿನಿ – ಸಂಬಂಧಗಳನ್ನು ವಿವರಿಸುವ ಪದ
(೨) ದುಶ್ಯಳೆಯನ್ನು ಸೈಂಧವನರಸಿ, ರಾಜಕುಮಾರಿ ಎಂದು ಕರೆದಿರುವುದು