ಪದ್ಯ ೧೦೭: ದ್ರೌಪದಿ ತನ್ನ ರಕ್ಷಣೆಗಾಗಿ ಮತ್ತೆ ಯಾರನ್ನು ಬೇಡಿದಳು?

ಎಲೆ ವಿಲಾಸಿನಿಯರಿರ ಭೂಪನ
ತಿಳಿಹಿರೌ ತಾಯ್ಗಳಿರ ನೀವಿಂ
ದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ
ತಿಳುಹಿರೌ ಶರಣಾಗತರ ತಾ
ನುಳುಹಿ ಕೊಂಬುದು ಧರ್ಮವಕಟಾ
ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೦೭ ಪದ್ಯ)

ತಾತ್ಪರ್ಯ:
ಭೀಷ್ಮಾದಿಗಳಿಂದ ಸಹಾಯ ಹಸ್ತ ದೊರೆಯದ ಕಾರಣ, ದುರ್ಯೋಧನನ ಅಂತಃಪುರದ ಸ್ತ್ರೀಯರಲ್ಲಿ ಮೊರೆಯಿಟ್ಟಳು, ಎಲೆ ವಿಲಾಸಿನಿಯರೇ, ನಿಮ್ಮ ದೊರೆಗೆ ತಿಳಿಸಿ, ನನ್ನನ್ನು ಉಳಿಸಿರಿ, ಆಪ್ತಸಖೀ ಜನರೇ ನನ್ನನ್ನು ನಿಮ್ಮ ತಂಗಿಯಂದೇ ಬಗೆದು ಕೌರವನಿಗೆ ತಿಳಿಸಿರಿ, ಶರಣಾಗತರನ್ನು ಕಾಪಾಡುವುದು ಧರ್ಮಮಾರ್ಗ, ಆದರೆ ನಿಮ್ಮದು ಕಲ್ಲು ಹೃದಯ ಎಂದು ದ್ರೌಪದಿ ಕಣ್ಣೀರಿಟ್ಟಳು.

ಅರ್ಥ:
ವಿಲಾಸಿನಿ: ಒಯ್ಯಾರಿ, ಬೆಡಗಿ; ಭೂಪ: ರಾಜ; ತಿಳಿಹಿ: ತಿಳಿಸಿ, ಹೇಳು; ತಾಯಿ: ಮಾತೆ; ಪಸಾಯ್ತೆ: ಆಪ್ತಸಖಿ; ಸಹೋದರಿ: ತಂಗಿ; ಶರಣು: ಆಶ್ರಯ; ಉಳುಹು: ಕಾಪಾಡು; ಧರ್ಮ: ಧಾರಣೆ ಮಾಡಿದುದು, ನಿಯಮ; ಅಕಟ: ಅಯ್ಯೋ; ಕಲು: ಗಟ್ಟಿ, ಕಲ್ಲು; ಹೃದಯ: ಎದೆ; ಹಲುಬು: ದುಃಖಪಡು; ತರಳಾಕ್ಷಿ: ಚಂಚಲವಾದ ಕಣ್ಣುಳ್ಳವಳು (ದ್ರೌಪದಿ);

ಪದವಿಂಗಡಣೆ:
ಎಲೆ +ವಿಲಾಸಿನಿಯರಿರ+ ಭೂಪನ
ತಿಳಿಹಿರೌ+ ತಾಯ್ಗಳಿರ +ನೀವಿಂ
ದೆಲೆ+ ಪಸಾಯ್ತೆಯರಿರ+ ಸಹೋದರಿಯೆಂದು +ಕೌರವನ
ತಿಳುಹಿರೌ +ಶರಣಾಗತರ+ ತಾನ್
ಉಳುಹಿ +ಕೊಂಬುದು +ಧರ್ಮವ್+ಅಕಟಾ
ಕಲು+ಹೃದಯರೌ+ ನೀವೆನುತ+ ಹಲುಬಿದಳು+ ತರಳಾಕ್ಷಿ

ಅಚ್ಚರಿ:
(೧) ತಂಗಿಯನ್ನಾಗಿ ನೋಡಿ ಎಂದು ಅಳುವ ಪರಿ – ನೀವಿಂದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ ತಿಳುಹಿರೌ

ಪದ್ಯ ೧೦೬: ದ್ರೌಪದಿ ಯಾರ ಕಡೆ ತಿರುಗಿ ಸಹಾಯವನ್ನು ಬೇಡಿದಳು?

ಮುರಿದುದನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ
ಸೋದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳಕಟ ಗಂಗಾ
ವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ದೈನ್ಯದ ಸ್ಥಿತಿಯಲ್ಲಿ ಪಾಂಡವರ ಕಡೆ ದ್ರೌಪದಿ ನೋಡಲು, ಪಾಂಡವರು ಆಕೆಯ ಮುಖವನ್ನು ನೋಡಲಾಗದೆ, ಅವರ ಮುಖವನ್ನು ಬೇರೆ ಕಡೆಗೆ ತಿರುಗಿಸಿದರು. ಯುಧಿಷ್ಠಿರನ ಸನ್ನೆಯಂತೆ ಉಳಿದ ನಾಲ್ವರು ಸುಮ್ಮನಿದ್ದರು. ಅವಳು ಮತ್ತೆ ಹಿರಿಯರಾದ ಭೀಷ್ಮಾದಿಗಳ ಬಳಿ ಹೋಗಿ, ಭೀಷ್ಮ, ದ್ರೋಣ, ಕೃಪಾಚಾರ್ಯರೆ, ನನ್ನ ತಂದೆಗಳಿರಾ ನನ್ನ ಸೆರಗನ್ನು ಬಿಡಿಸಿರಿ ಎಂದು ಕಣ್ಣೀರಿಟ್ಟಳು.

ಅರ್ಥ:
ಮುರಿ: ತಿರುಗು; ಅನಿಬರು: ಅಷ್ಟು ಜನ; ಮೋರೆ: ಮುಖ; ಮಹಿಷ: ರಾಜ; ಕೊರಲು: ದನಿ; ಕೊಂಕು: ಹಿಂಜರಿ; ಸೋದರ: ತಮ್ಮ; ಸಾರ: ರಸ; ಕಾಣು: ನೋಡು; ಮರಳಿ: ಮತ್ತೆ; ನೋಡು: ವೀಕ್ಷಿಸು; ಅಕಟ: ಅಯ್ಯೋ; ವರ: ಶ್ರೇಷ್ಠ; ಕುಮಾರ: ಮಗ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿಸು: ಕಳಚು, ಸಡಿಲಿಸು; ತಂದೆ: ಪಿತ, ತಾತ; ಒರಲು: ಗೋಳಿಡು; ತರಳೆ: ಬಾಲೆ, ಯುವತಿ;

ಪದವಿಂಗಡಣೆ:
ಮುರಿದುದ್+ಅನಿಬರ+ ಮೋರೆ+ ಮಹಿಪನ
ಕೊರಲ+ ಕೊಂಕಿನಲ್+ಇದ್ದರಾ
ಸೋದರರು+ ಸಾರವನಲ್ಲಿ+ ಕಾಣದೆ +ಭೀಷ್ಮ +ಗುರು +ಕೃಪರ
ಮರಳಿ +ನೋಡಿದಳ್+ಅಕಟ +ಗಂಗಾ
ವರ+ ಕುಮಾರ+ ದ್ರೋಣ +ಕೃಪರ್+ಈ
ಸೆರಗ+ ಬಿಡಿಸಿರೆ +ತಂದೆಗಳಿರ್+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ಭೀಷ್ಮರನ್ನು ಗಂಗಾವರ ಕುಮಾರ ಎಂದು ಕರೆದಿರುವುದು
(೨) ದೈನ್ಯದ ಸ್ಥಿತಿ – ಮರಳಿ ನೋಡಿದಳಕಟ ಗಂಗಾವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ

ಪದ್ಯ ೧೦೫: ದ್ರೌಪದಿಯು ದೈನ್ಯದಿಂದ ಯಾರ ಕಡೆ ನೋಡಿದಳು?

ಅಳುಕಿದನೆ ಸುಡಲವನ ಮೇಲುದ
ಸೆಳೆದನುನ್ನತ ಕುಚನ ನಳಿತೋ
ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ವಿಷ್ಠುರಕೆ
ಕಳವಳಿಸಿದಳು ಬೆರಳಿನಲಿ ದೃಗು
ಜಲವ ಬಿದುರುತ ನೋಡಿದಳು ನೃಪ
ತಿಲಕನನು ಭೀಮಾರ್ಜುನರ ಮಾದ್ರೀಕುಮಾರಕರ (ಸಭಾ ಪರ್ವ, ೧೫ ಸಂಧಿ, ೧೦೫ ಪದ್ಯ)

ತಾತ್ಪರ್ಯ:
ದುಶ್ಯಾಸನನು ಹೆದರಿದನೇ, ಅವನನ್ನು ಸುಡಬೇಕು. ಅವನು ತನ್ನ ಕೈಯನ್ನು ದ್ರೌಪದಿಯ ಸೆರಗಿನ ಮೇಲಿಟ್ಟು ಎಳೆಯಲು, ತನ್ನ ಮಾನವನ್ನು ರಕ್ಷಿಸಿಕೊಳ್ಲಲು, ದ್ರೌಪದಿಯು ತನ್ನ ತೋಳುಗಳಿಂದ ತುಂಬಿದ ಸ್ತನವನ್ನು ಮರೆಮಾಡಿದಳು. ಅವನ ನಿರ್ದಯ ಕೃತ್ಯಕ್ಕೆ ಬೆಚ್ಚಿ ಕಳವಳಿಸಿದಳು. ಬೆರಳಿನಿಂದ ಕಣ್ಣೀರನ್ನು ಒರೆಸುತ್ತಾ, ಪಾಂಡವರ ಕಡೆಗೆ ದೈನ್ಯದಿಂದ ನೋಡಿದಳು.

ಅರ್ಥ:
ಅಳುಕು: ಹೆದರಿಕೆ; ಸುಡು: ದಹನ; ಮೇಲುದ: ಸೆರಗು; ಸೆಳೆ: ಎಳೆ; ಉನ್ನತ: ಉತ್ತಮ; ಕುಚ:ಸ್ತನ; ನಳಿ: ಬಾಗು, ಬಗ್ಗು; ತೋಳು: ಬಾಹು; ಮುಚ್ಚು: ಮರೆಮಾಡು; ಅಬಲೆ: ಹೆಣ್ಣು; ಬೆಚ್ಚು: ಹೆದರು; ನಿಷ್ಠುರ: ಕಠಿಣ, ಒರಟು; ಕಳವಳ: ಚಿಂತೆ; ಬೆರಳು: ಅಂಗುಲಿ; ದೃಗು: ಕಣ್ಣು; ಜಲ: ನ್ರು; ಬಿದುರು: ನಡುಗು, ಕಂಪಿಸು; ನೋಡು: ವೀಕ್ಷಿಸು; ನೃಪ: ರಾಜ; ತಿಲಕ: ಶ್ರೇಷ್ಠ; ಕುಮಾರ: ಸುತ;

ಪದವಿಂಗಡಣೆ:
ಅಳುಕಿದನೆ +ಸುಡಲವನ+ ಮೇಲುದ
ಸೆಳೆದನ್+ಉನ್ನತ +ಕುಚನ +ನಳಿ+ತೋ
ಳ್ಗಳಲಿ + ಮುಚ್ಚಿದಳ್+ಅಬಲೆ +ಬೆಚ್ಚಿದಳ್+ಅವನ +ವಿಷ್ಠುರಕೆ
ಕಳವಳಿಸಿದಳು+ ಬೆರಳಿನಲಿ +ದೃಗು
ಜಲವ +ಬಿದುರುತ +ನೋಡಿದಳು +ನೃಪ
ತಿಲಕನನು +ಭೀಮಾರ್ಜುನರ+ ಮಾದ್ರೀಕುಮಾರಕರ

ಅಚ್ಚರಿ:
(೧) ದ್ರೌಪದಿಯ ಸ್ತಿತಿಯನ್ನು ವಿವರಿಸುವ ಪರಿ – ಮೇಲುದಸೆಳೆದನುನ್ನತ ಕುಚನ ನಳಿತೋ
ಳ್ಗಳಲಿ ಮುಚ್ಚಿದಳಬಲೆ, ಕಳವಳಿಸಿದಳು ಬೆರಳಿನಲಿ ದೃಗುಜಲವ ಬಿದುರುತ ನೋಡಿದಳು ನೃಪ
ತಿಲಕನನು

ಪದ್ಯ ೧೦೪: ಭೀಷ್ಮಾದಿಗಳ ಅಸಹಾಯಕತೆ ಹೇಗಿತ್ತು?

ಮುರುಹಿದರು ಮುಸುಡುಗಳ ಮಿಗೆ ನೀ
ರೊರೆವ ಕಂಗಳಲಕಟಕಟ ನಿ
ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ
ಕರಗಿದರು ಕಂದಿದರು ಮಮ್ಮಲ
ಮರುಗಿದರು ಭೀಷ್ಮಾದಿಗಳು ಜ
ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ (ಸಭಾ ಪರ್ವ, ೧೫ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಈ ದುಷ್ಕೃತ್ಯವನ್ನು ನೋಡಲಾರದೆ ಭೀಷ್ಮಾದಿಗಳು ಮುಖವನ್ನು ಬೇರೆಯಡೆಗೆ ತಿರುಗಿಸಿದರು, ಅವರ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು, ಅಯ್ಯಯ್ಯೋ ಈ ನಿಷ್ಠೂರ ಇದರಿಂದ ಬರುವ ಅಪಕೀರ್ತಿ, ಅಪಯಶಸ್ಸು, ಅನುಚಿತ ಕೃತ್ಯಗಳು ಏಕೆ ಎಂದು ಕೊರಗಿ, ಕಳಾಹೀನರಾಗಿ, ಬಹಳ ಮರುಗಿದರು.

ಅರ್ಥ:
ಮುರುಹು: ತಿರುಗಿಸು; ಮುಸುಡು: ಮುಖ; ಮಿಗೆ: ಮತ್ತು, ಅಧಿಕ; ನೀರು: ಜಲ; ಒರೆ: ಬಳಿ, ಸವರು; ಕಂಗಳು: ನಯನ; ಅಕಟಕಟ: ಅಯ್ಯಯ್ಯೋ; ನಿಷ್ಠುರ: ಕಠಿಣವಾದ; ಅಪಕೀರ್ತಿ: ಅಪಯಶಸ್ಸು, ಅಪಖ್ಯಾತಿ; ಅನುಚಿತ: ಸರಿಯಲ್ಲದ; ಕರಗು: ಕನಿಕರ ಪಡು; ಕಂದು:ಕಳಾಹೀನ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ, ಸಂಕಟ; ಆದಿ: ಮುಂತಾದ; ಜರ್ಝರಿತ: ಭಗ್ನ, ಚೂರು; ತಡೆ: ನಿಲ್ಲಿಸು; ಖಳ: ದುಷ್ಟ; ದುಷ್ಕೃತ: ಕೆಟ್ಟ ಕೆಲಸ;

ಪದವಿಂಗಡಣೆ:
ಮುರುಹಿದರು+ ಮುಸುಡುಗಳ +ಮಿಗೆ +ನೀರ್
ಒರೆವ +ಕಂಗಳಲ್+ಅಕಟಕಟ +ನಿ
ಷ್ಠುರವ್+ಇದೇಕ್+ಅಪಕೀರ್ತಿ+ಏಕ್+ಅನುಚಿತವ್+ಇದೇದ್+ಎನುತ
ಕರಗಿದರು+ ಕಂದಿದರು +ಮಮ್ಮಲ
ಮರುಗಿದರು +ಭೀಷ್ಮಾದಿಗಳು +ಜ
ರ್ಝರಿತರಾದರು +ತಡೆಯಲಾರದೆ+ ಖಳನ +ದುಷ್ಕೃತವ

ಅಚ್ಚರಿ:
(೧) ಭೀಷ್ಮಾದಿಗಳ ನೋವಿನ ಚಿತ್ರಣ – ಕರಗಿದರು ಕಂದಿದರು ಮಮ್ಮಲಮರುಗಿದರು ಭೀಷ್ಮಾದಿಗಳು ಜರ್ಝರಿತರಾದರು
(೨) ಮ ಕಾರದ ತ್ರಿವಳಿ ಪದ – ಮುರುಹಿದರು ಮುಸುಡುಗಳ ಮಿಗೆ
(೩) ಮೂರನೇ ಸಾಲು ಒಂದೇ ಪದವಾಗಿ ರಚಿಸಿರುವುದು – ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ