ಪದ್ಯ ೯೫: ಸಭೆಯಲ್ಲಿದ್ದ ಜನರ ಭಾವನೆ ಹೇಗಿತ್ತು?

ಕಂಗಳಿಂದನುಯೋಗ ನಿಜ ಹ
ಸ್ತಾಂಗುಲಿಯೊಳುತ್ತರ ಲಸದ್ಭ್ರೂ
ಭಂಗದಲಿ ಸಂದೇಹ ಮುಖ ವಿಕೃತಿಯಲಿ ದುರ್ನೀತಿ
ಇಂಗಿತದಲಾಂಗಿಕದ ಭಾವಾ
ಭಂಗ ಪರಿಯನು ಯೋಗಯುಕ್ತ ನ
ಯಂಗಳಲಿ ತಿಳಿದುಸುರದಿರ್ದುದು ಸಭೆ ಸುಭೀತಿಯಲಿ (ಸಭಾ ಪರ್ವ, ೧೫ ಸಂಧಿ, ೯೫ ಪದ್ಯ)

ತಾತ್ಪರ್ಯ:
ಸಭೆಯಲ್ಲಿದ್ದವರೆಲ್ಲರೂ ಕಣ್ಣಿನಿಂದ ಒಬ್ಬರನೊಬ್ಬರು ಪ್ರಶ್ನೆಯನ್ನು ಕೇಳುವ, ಕೈ ಮತ್ತು ಬೆರಳುಗಳಿಂದ ಪರಸ್ಪರ ಸನ್ನೆಮಾಡಿ ಉತ್ತರವನ್ನು ಕೊಡುವ, ಮುರಿದು ಹುಬ್ಬುಗಳಿಂದ ಸಂದೇಹವನ್ನು ಸೂಚಿಸುವ, ಸಭೆಯಲ್ಲಿ ನಡೆದ ಕೆಟ್ಟ ಪ್ರಸಂಗವನ್ನು ಮುಖದ ಹಾವಾಭಾವದಲ್ಲಿ ತೋರಿಸುವ, ತಮ್ಮ ಮನಸ್ಸಿನ ಭಾವನೆಯನ್ನು ದೇಹದ ಭಾವ ಭಂಗಿಯಲ್ಲಿ ತೋರ್ಪಡಿಸುತ್ತಿದ್ದರೂ, ಕಣ್ಣುಗಳಿಂದಲೇ ತಿಳಿಸಿದರಾದರೂ ಯಾರೊಬ್ಬರೂ ಭಯದಿಂದ ತಮ್ಮ ಉಸುರನ್ನು ಹೊರಹಾಕಲಿಲ್ಲ, ಮಾತಾಡಲಿಲ್ಲ.

ಅರ್ಥ:
ಕಂಗಳು: ಕಣ್ಣು, ನಯನ; ಅನುಯೋಗ: ಪ್ರಶ್ನೆ, ದೋಷಾ ರೋಪಣೆ; ನಿಜ: ದಿಟ; ಹಸ್ತ: ಕೈ; ಅಂಗುಲಿ: ಬೆರಳು; ಉತ್ತರ: ಸಮಾಧಾನ; ಲಸದ್ಭ್ರೂಭಂಗ: ಮನೋಹರವಾದ ಹುಬ್ಬಿನ ಕೊಂಕು; ಸಂದೇಹ: ಅನುಮಾನ; ಮುಖ: ಆನನ; ವಿಕೃತಿ: ವ್ಯತ್ಯಾಸ; ದುರ್ನೀತಿ: ಕೆಟ್ಟ ನಡತೆ; ಇಂಗಿತ: ಆಶಯ, ಅಭಿಪ್ರಾಯ; ಆಂಗಿಕ: ಶಾರೀರಿಕ ಚಲನೆ; ಭಾವ: ಭಾವನೆ, ಚಿತ್ತವೃತ್ತಿ; ಭಂಗ: ಕುಂದು, ದೋಷ; ಭಾವಾಭಂಗ: ಭಾವನೆಯನ್ನು ವ್ಯಕ್ತಪಡಿಸುವ ಪರಿ; ಪರಿ: ರೀತಿ; ಯೋಗ: ಜೋಡಿಸುವಿಕೆ; ಯುಕ್ತ: ಜೋಡಣೆ, ಸೇರಿಕೆ; ನಯಂಗಳು: ಕಣ್ಣುಗಳು; ತಿಳಿದು: ಅರಿತು; ಉಸುರು: ಹೇಳು; ಸಭೆ: ಓಲಗ; ಭೀತಿ: ಭಯ;

ಪದವಿಂಗಡಣೆ:
ಕಂಗಳಿಂದ್+ಅನುಯೋಗ +ನಿಜ+ ಹ
ಸ್ತಾಂಗುಲಿಯೊಳ್+ಉತ್ತರ+ ಲಸದ್+ಭ್ರೂ
ಭಂಗದಲಿ+ ಸಂದೇಹ +ಮುಖ +ವಿಕೃತಿಯಲಿ +ದುರ್ನೀತಿ
ಇಂಗಿತದಲ್+ಆಂಗಿಕದ +ಭಾವಾ
ಭಂಗ +ಪರಿಯನು +ಯೋಗಯುಕ್ತ +ನ
ಯಂಗಳಲಿ+ ತಿಳಿದ್+ಉಸುರದಿರ್ದುದು +ಸಭೆ+ ಸುಭೀತಿಯಲಿ

ಅಚ್ಚರಿ:
(೧) ಭಯಭೀತರಿಂದ ಕೂಡಿದ ಸಭೆಯ ಸದಸ್ಯರ ಭಾವನೆಯ ಚಿತ್ರಣವನ್ನು ಹೇಳುವ ಪದ್ಯ

ನಿಮ್ಮ ಟಿಪ್ಪಣಿ ಬರೆಯಿರಿ