ಪದ್ಯ ೯೭: ವಿಕರ್ಣನು ಭೀಷ್ಮರ ಮೇಲೆ ಏಕೆ ಗರ್ಜಿಸಿದನು?

ಹುಸಿವಚನ ಪಾರುಷ್ಯ ಲಲನಾ
ವಿಷಯ ಮೃಗತೃಷ್ಣಾ ಪಿಪಾಸಾ
ವ್ಯಸನಿ ಬಲ್ಲನೆ ಧರ್ಮತತ್ವರಹಸ್ಯ ನಿಶ್ಚಯವ
ಉಸುರಲಮ್ಮಿರೆ ವೈದಿಕದಿ ತನಿ
ರಸದ ಸವಿ ನಿಮಗಲ್ಲದಾರಿಗೆ
ಬಸಿದು ಬೀಳ್ವುದು ಭೀಷ್ಮಯೆಂದು ವಿಕರ್ಣ ಗರ್ಜಿಸಿದ (ಸಭಾ ಪರ್ವ, ೧೫ ಸಂಧಿ, ೯೭ ಪದ್ಯ)

ತಾತ್ಪರ್ಯ:
ವಿಕರ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಸುಳ್ಳು, ಕಠೋರವಾಕ್ಯ, ಸ್ತ್ರೀಲಂಪಟತ್ವ, ಬೇಟೆ ಮೊದಲಾದವುಗಳ ವ್ಯಸನಕ್ಕೊಳಗಾದವನು ಧರ್ಮರಹಸ್ಯವನ್ನು ತಿಳಿದು ನಿಶ್ಚಯಿಸಲಾರ, ಆದರೆ ವೇದದ ಸಾರವನ್ನೇ ಅರಿತಿರುವೆ ನೀವು ಹೇಳಲು ಏಕೆ ಹಿಂಜರಿಯುತ್ತಿದ್ದೀರಿ ಎಂದು ವಿಕರ್ಣನು ಭೀಷ್ಮರನ್ನು ನೋಡಿ ಜೋರಾಗಿ ಕೇಳಿದನು.

ಅರ್ಥ:
ಹುಸಿ: ಸುಳ್ಳು; ವಚನ: ಮಾತು, ನುಡಿ; ಪಾರುಷ್ಯ: ಕಾಠಿಣ್ಯ; ಲಲನೆ: ಹೆಣ್ಣು; ಮೃಗ: ಪ್ರಾಣಿ; ತೃಷ್ಣ: ತೃಷೆ, ನೀರಡಿಕೆ; ಪಿಪಾಸ: ಕುಡಿಯುವ; ವ್ಯಸನ: ಚಟ, ಗೀಳು; ಬಲ್ಲನು: ತಿಳಿ; ಧರಂಅ: ಧಾರಣೆ ಮಾಡಿದುದು, ನಿಯಮ; ತತ್ವ: ಸಾರ, ತಿರುಳು; ರಹಸ್ಯ: ಗುಟ್ಟು, ಗೋಪ್ಯ, ಮರ್ಮ; ನಿಶ್ಚಯ: ನಿರ್ಣಯ; ಉಸುರು: ಮಾತಾಡು; ವೈದಿಕ: ವೇದಗಳನ್ನು ಬಲ್ಲವನು; ತನಿ:ಅತಿಶಯ, ಚೆನ್ನಾಗಿ ಬೆಳೆದ; ರಸ: ಸಾರ; ಸವಿ: ಸಿಹಿ; ಬಸಿ:ಸ್ರವಿಸು, ಜಿನುಗು; ಬೀಳು: ಕೆಳಗೆ ಇಳಿ; ಗರ್ಜಿಸು: ಕೂಗು;

ಪದವಿಂಗಡಣೆ:
ಹುಸಿವಚನ +ಪಾರುಷ್ಯ +ಲಲನಾ
ವಿಷಯ +ಮೃಗತೃಷ್ಣಾ+ ಪಿಪಾಸಾ
ವ್ಯಸನಿ+ ಬಲ್ಲನೆ+ ಧರ್ಮ+ತತ್ವ+ರಹಸ್ಯ+ ನಿಶ್ಚಯವ
ಉಸುರಲಮ್ಮಿರೆ +ವೈದಿಕದಿ+ ತನಿ
ರಸದ +ಸವಿ +ನಿಮಗಲ್ಲದ್+ಆರಿಗೆ
ಬಸಿದು +ಬೀಳ್ವುದು+ ಭೀಷ್ಮಯೆಂದು +ವಿಕರ್ಣ +ಗರ್ಜಿಸಿದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಸಿದು ಬೀಳ್ವುದು ಭೀಷ್ಮಯೆಂದು
(೨) ವ್ಯಸನಗಳ ವಿವರ – ಹುಸಿವಚನ, ಪಾರುಷ್ಯ, ಲಲನಾವಿಷಯ, ಮೃಗತೃಷ್ಣಾ, ಪಿಪಾಸಾ
ವ್ಯಸನಿ

ಪದ್ಯ ೯೬: ವಿಕರ್ಣನು ಸಭಾಸದರನ್ನು ಏಕೆ ಜರೆದನು?

ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿ ದೂತರ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ (ಸಭಾ ಪರ್ವ, ೧೫ ಸಂಧಿ, ೯೬ ಪದ್ಯ)

ತಾತ್ಪರ್ಯ:
ಎಲ್ಲರ ಭೀತಿಯಿಂದ ಮೌನವಾಗಿರುವುದನ್ನು ಕಂಡು, ಕೌರವರಲ್ಲೊಬ್ಬನಾದ ವಿಕರ್ಣನು ಎದ್ದು ನಿಂತು, ಇದೇನು ತಿಳಿದು ಎಲ್ಲರೂ ಮೌನವಾಗಿದ್ದೀರಿ, ಹೆಣ್ಣೊಬ್ಬಳು ಪ್ರಶ್ನೆ ಕೇಳಿದಳೆಂದ ಅಲಕ್ಷವೋ? ನೇರವಾಗಿ ಕಡ್ಡಿ ಮುರಿದಹಾಗೆ ಸಮಸ್ಯೆಗೆ ಉತ್ತರವನ್ನು ಕೊಡಲು ನಿಮಗೆ ಸಾಧ್ಯವಿಲ್ಲವೋ? ಏತಕ್ಕಾಗಿ ಸುಮ್ಮನಿರುವಿರಿ? ತಿಳಿಯದೇ ನಿಮಗೆ ಪಾಂಡವರಿಗಾದ ನಾಶವು, ನಿಮ್ಮ ವಿವೇಕವನ್ನು ನೀವೇಕೆ ಮರೆತಿರಿ ಎಂದು ವಿಕರ್ಣನು ಕೇಳಿದನು.

ಅರ್ಥ:
ಅರಿ: ತಿಳಿ; ಮೌನ: ನೀರವತೆ, ಮಾತಿಲ್ಲದ ಸ್ಥಿತಿ; ಮೇಣು: ಮತ್ತು, ಅಥವಾ; ಮಾನಿನಿ: ಹೆಣ್ಣು; ಒರಲು: ಅರಚು, ಕೂಗಿಕೊಳ್ಳು; ಉಪೇಕ್ಷೆ:ಅಲಕ್ಷ್ಯ, ಕಡೆಗಣಿಸುವಿಕೆ; ಮುರಿ: ತುಂಡು, ಸೀಳು; ನುಡಿ: ಮಾತಾಡು; ಅಸಾಧ್ಯ: ಸಾಧ್ಯವಲ್ಲದ; ಸಮವರ್ತಿ: ತಾರತಮ್ಯ ಭಾವವಿಲ್ಲದವನು; ದೂತ: ಸೇವಕ; ಮುರುಕ: ಬಿಂಕ, ಬಿನ್ನಾಣ; ಮರೆ: ನೆನಪಿನಿಂದ ದೂರ ಮಾಡು; ಜರೆ: ಬಯ್ಯು; ಸಭೆ: ಓಲಗ;

ಪದವಿಂಗಡಣೆ:
ಅರಿದು +ಮೌನವೊ +ಮೇಣು +ಮಾನಿನಿ
ಒರಲುತಿರಲ್+ಎಂದಾದ್+ಉಪೇಕ್ಷೆಯೊ
ಮುರಿದು+ ನುಡಿವುದ್+ಅಸಾಧ್ಯವೋ +ಮೇಣ್+ಆವುದ್+ಇದರೊಳಗೆ
ಅರಿಯಿರೇ+ ಸಮವರ್ತಿ +ದೂತರ
ಮುರುಕವನು +ನೀವೇಕೆ +ನಿಮ್ಮನು
ಮರೆದಿರೆಂದು +ವಿಕರ್ಣ +ಜರೆದನು +ತತ್ಸಭಾಸದರ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೌನವೊ ಮೇಣು ಮಾನಿನಿ

ಪದ್ಯ ೯೫: ಸಭೆಯಲ್ಲಿದ್ದ ಜನರ ಭಾವನೆ ಹೇಗಿತ್ತು?

ಕಂಗಳಿಂದನುಯೋಗ ನಿಜ ಹ
ಸ್ತಾಂಗುಲಿಯೊಳುತ್ತರ ಲಸದ್ಭ್ರೂ
ಭಂಗದಲಿ ಸಂದೇಹ ಮುಖ ವಿಕೃತಿಯಲಿ ದುರ್ನೀತಿ
ಇಂಗಿತದಲಾಂಗಿಕದ ಭಾವಾ
ಭಂಗ ಪರಿಯನು ಯೋಗಯುಕ್ತ ನ
ಯಂಗಳಲಿ ತಿಳಿದುಸುರದಿರ್ದುದು ಸಭೆ ಸುಭೀತಿಯಲಿ (ಸಭಾ ಪರ್ವ, ೧೫ ಸಂಧಿ, ೯೫ ಪದ್ಯ)

ತಾತ್ಪರ್ಯ:
ಸಭೆಯಲ್ಲಿದ್ದವರೆಲ್ಲರೂ ಕಣ್ಣಿನಿಂದ ಒಬ್ಬರನೊಬ್ಬರು ಪ್ರಶ್ನೆಯನ್ನು ಕೇಳುವ, ಕೈ ಮತ್ತು ಬೆರಳುಗಳಿಂದ ಪರಸ್ಪರ ಸನ್ನೆಮಾಡಿ ಉತ್ತರವನ್ನು ಕೊಡುವ, ಮುರಿದು ಹುಬ್ಬುಗಳಿಂದ ಸಂದೇಹವನ್ನು ಸೂಚಿಸುವ, ಸಭೆಯಲ್ಲಿ ನಡೆದ ಕೆಟ್ಟ ಪ್ರಸಂಗವನ್ನು ಮುಖದ ಹಾವಾಭಾವದಲ್ಲಿ ತೋರಿಸುವ, ತಮ್ಮ ಮನಸ್ಸಿನ ಭಾವನೆಯನ್ನು ದೇಹದ ಭಾವ ಭಂಗಿಯಲ್ಲಿ ತೋರ್ಪಡಿಸುತ್ತಿದ್ದರೂ, ಕಣ್ಣುಗಳಿಂದಲೇ ತಿಳಿಸಿದರಾದರೂ ಯಾರೊಬ್ಬರೂ ಭಯದಿಂದ ತಮ್ಮ ಉಸುರನ್ನು ಹೊರಹಾಕಲಿಲ್ಲ, ಮಾತಾಡಲಿಲ್ಲ.

ಅರ್ಥ:
ಕಂಗಳು: ಕಣ್ಣು, ನಯನ; ಅನುಯೋಗ: ಪ್ರಶ್ನೆ, ದೋಷಾ ರೋಪಣೆ; ನಿಜ: ದಿಟ; ಹಸ್ತ: ಕೈ; ಅಂಗುಲಿ: ಬೆರಳು; ಉತ್ತರ: ಸಮಾಧಾನ; ಲಸದ್ಭ್ರೂಭಂಗ: ಮನೋಹರವಾದ ಹುಬ್ಬಿನ ಕೊಂಕು; ಸಂದೇಹ: ಅನುಮಾನ; ಮುಖ: ಆನನ; ವಿಕೃತಿ: ವ್ಯತ್ಯಾಸ; ದುರ್ನೀತಿ: ಕೆಟ್ಟ ನಡತೆ; ಇಂಗಿತ: ಆಶಯ, ಅಭಿಪ್ರಾಯ; ಆಂಗಿಕ: ಶಾರೀರಿಕ ಚಲನೆ; ಭಾವ: ಭಾವನೆ, ಚಿತ್ತವೃತ್ತಿ; ಭಂಗ: ಕುಂದು, ದೋಷ; ಭಾವಾಭಂಗ: ಭಾವನೆಯನ್ನು ವ್ಯಕ್ತಪಡಿಸುವ ಪರಿ; ಪರಿ: ರೀತಿ; ಯೋಗ: ಜೋಡಿಸುವಿಕೆ; ಯುಕ್ತ: ಜೋಡಣೆ, ಸೇರಿಕೆ; ನಯಂಗಳು: ಕಣ್ಣುಗಳು; ತಿಳಿದು: ಅರಿತು; ಉಸುರು: ಹೇಳು; ಸಭೆ: ಓಲಗ; ಭೀತಿ: ಭಯ;

ಪದವಿಂಗಡಣೆ:
ಕಂಗಳಿಂದ್+ಅನುಯೋಗ +ನಿಜ+ ಹ
ಸ್ತಾಂಗುಲಿಯೊಳ್+ಉತ್ತರ+ ಲಸದ್+ಭ್ರೂ
ಭಂಗದಲಿ+ ಸಂದೇಹ +ಮುಖ +ವಿಕೃತಿಯಲಿ +ದುರ್ನೀತಿ
ಇಂಗಿತದಲ್+ಆಂಗಿಕದ +ಭಾವಾ
ಭಂಗ +ಪರಿಯನು +ಯೋಗಯುಕ್ತ +ನ
ಯಂಗಳಲಿ+ ತಿಳಿದ್+ಉಸುರದಿರ್ದುದು +ಸಭೆ+ ಸುಭೀತಿಯಲಿ

ಅಚ್ಚರಿ:
(೧) ಭಯಭೀತರಿಂದ ಕೂಡಿದ ಸಭೆಯ ಸದಸ್ಯರ ಭಾವನೆಯ ಚಿತ್ರಣವನ್ನು ಹೇಳುವ ಪದ್ಯ

ಪದ್ಯ ೯೪: ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಯಾರಿಂದ ನಿರೀಕ್ಷಿಸಿದಳು?

ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ (ಸಭಾ ಪರ್ವ, ೧೫ ಸಂಧಿ, ೯೪ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ, ಅಯ್ಯೋ ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವರೇ ನಿಮ್ಮ ಪತ್ನಿಯನ್ನು ಮರಣದ ಗಂಟಲಿಗೆ ಒಪ್ಪಿಸಿ ಕೊಟ್ಟಿರಾ? ಭ್ರಮೆಯಿಂದ ವಿವೇಚನೆಯನ್ನೇ ಕಳೆದುಕೊಂಡಿರಾ? ಹಾಗೆ ಆಗಲಿ, ಆದರೆ ಭೀಷ್ಮ, ದ್ರೋಣ, ಬಾಹ್ಲಿಕ, ಕೃಪನೇ ಮೊದಲಾದವರೇ ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲಿ ಎಂದು ದ್ರೌಪದಿ ಕೇಳಿದಳು.

ಅರ್ಥ:
ಅಕಟ: ಅಯ್ಯೋ; ಆದಿ: ಮೊದಲಾಗಿ; ಬಾಲಕಿ: ಹೆಣ್ಣು; ಒಪ್ಪು: ಸಮ್ಮತಿ; ಕೊಡು: ನೀಡು; ಮೃತ್ಯು: ಸಾವು; ತಾಳಿಗೆ: ಗಂಟಲು; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಕುಟಿಲ: ಮೋಸ; ಉತ್ತರ: ಪರಿಹಾರ; ಕೊಡಿ: ನೀಡಿ; ಅಬುಜಾಕ್ಷಿ: ಕಮಲದ ಕಣ್ಣಿನವಳು, ಹೆಣ್ಣು (ದ್ರೌಪದಿ)

ಪದವಿಂಗಡಣೆ:
ಅಕಟ +ಧರ್ಮಜ +ಭೀಮ +ಫಲುಗುಣ
ನಕುಲ +ಸಹದೇವ+ಆದ್ಯರಿರ+ ಬಾ
ಲಿಕಿಯನ್+ಒಪ್ಪಿಸಿ +ಕೊಟ್ಟಿರೇ +ಮೃತ್ಯುವಿನ +ತಾಳಿಗೆಗೆ
ವಿಕಳರಾದಿರೆ+ ನಿಲ್ಲಿ+ ನೀವೀಗ್
ಅಕುಟಿಲರಲಾ +ಭೀಷ್ಮ +ಗುರು+ ಬಾ
ಹ್ಲಿಕ+ ಕೃಪಾದಿಗಳ್+ಉತ್ತರವ+ ಕೊಡಿ+ಎಂದಳ್+ಅಬುಜಾಕ್ಷಿ

ಅಚ್ಚರಿ:
(೧) ದ್ರೌಪದಿಯ ಸಂಕಟ – ಬಾಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ,
ವಿಕಳರಾದಿರೆ
(೨) ದ್ರೌಪದಿಯನ್ನು ಕರೆದ ಪರಿ – ಬಾಲಕಿ, ಅಬುಜಾಕ್ಷಿ

ಪದ್ಯ ೯೩: ಯುಧಿಷ್ಠಿರನು ಭೀಮನಿಗೆ ಏನು ಹೇಳಿದನು?

ಕೋಪ ಕಿಡಿಯಿಡಲಾಗ ರೌದ್ರಾ
ಟೋಪದಲಿ ರಂಜಿಸುವ ಭೀಮನ
ರೂಪ ಕಂಡನು ನುಡಿದನಾಗಳೆ ಬೆರಳ ಸನ್ನೆಯಲಿ
ಪಾಪರಹಿತನೆ ಸಕಲಧರ್ಮಕ
ಳಾಪ ನೀನರಿಯದುದೆ ಈ ಕುರು
ಭೂಪನುಭ್ರಮಿತನವ ಸಿಅರಿಸು ಎಂದನಾ ಭೂಪ (ಸಭಾ ಪರ್ವ, ೧೫ ಸಂಧಿ, ೯೩ ಪದ್ಯ)

ತಾತ್ಪರ್ಯ:
ಭೀಮನ ರೋಷಾಗ್ನಿಯು ಹೊರಹೊಮ್ಮುತ್ತಿದ್ದು, ಭಯಂಕರವಾದ ಅಬ್ಬರ ಮಾಡುತ್ತಿದ್ದ ಭೀಮನನ್ನು ಧರ್ಮಜನು ಬೆರಳ ಸನ್ನೆಯಿಂದ ತಡೆದು, ಪಾಪವನ್ನೇ ಅರಿಯದ ಭೀಮನೇ, ಧರ್ಮದ ರೀತಿಯು ನೀನರಿಯದುದೇ? ಕೌರವನ ಈ ಮಿತಿ ಮೀರಿದ ವರ್ತನೆಯನ್ನು ಸಹಿಸು ಎಂದು ಹೇಳಿದನು.

ಅರ್ಥ:
ಕೋಪ: ರೋಷ; ಕಿಡಿ: ಬೆಂಕಿ; ರೌದ್ರ: ಭಯಂಕರ; ಆಟೋಪ: ಆವೇಶ; ರಂಜಿಸು: ಆವೇಶಗೊಳ್ಳುವಂತೆ ಮಾಡು, ಹಿಗ್ಗು; ರೂಪ: ಆಕಾರ; ಕಂಡು: ನೋಡು; ನುಡಿ: ಮಾತಾಡು; ಬೆರಳು: ಅಂಗುಲಿ; ಸನ್ನೆ: ಗುರುತು, ಚಿಹ್ನೆ; ಪಾಪರಹಿತ: ದುರಾಚಾರವಿಲ್ಲದ; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು, ನಿಯಮ; ಕಳಾಪ: ಕಾರ್ಯ; ಅರಿ: ತಿಳಿ; ಭೂಪ: ರಾಜ; ಉಭ್ರಮ: ಹೆಚ್ಚು; ಸೈರಿಸು: ತಾಳು, ಸಹಿಸು; ಭೂಪ: ರಾಜ;

ಪದವಿಂಗಡಣೆ:
ಕೋಪ +ಕಿಡಿಯಿಡಲಾಗ+ ರೌದ್ರಾ
ಟೋಪದಲಿ+ ರಂಜಿಸುವ +ಭೀಮನ
ರೂಪ +ಕಂಡನು +ನುಡಿದನ್+ಆಗಳೆ +ಬೆರಳ +ಸನ್ನೆಯಲಿ
ಪಾಪರಹಿತನೆ +ಸಕಲ+ಧರ್ಮ+ಕ
ಳಾಪ +ನೀನರಿಯದುದೆ +ಈ +ಕುರು
ಭೂಪನ್+ಉಭ್ರಮಿತನವ +ಸೈರಿಸು +ಎಂದನಾ +ಭೂಪ

ಅಚ್ಚರಿ:
(೧) ಭೀಮನನ್ನು ಕರೆಯುವ ಪರಿ – ಪಾಪರಹಿತನೆ,
(೨) ಭೀಮನನ್ನು ಚಿತ್ರಿಸುವ ಪರಿ – ಕೋಪ ಕಿಡಿಯಿಡಲಾಗ ರೌದ್ರಾಟೋಪದಲಿ ರಂಜಿಸುವ ಭೀಮನ ರೂಪ ಕಂಡನು
(೩) ಭೂಪ – ೬ ಸಾಲಿನ ಮೊದಲ ಹಾಗು ಕೊನೆ ಪದ
(೪) ಭೂಪ, ಕಳಾಪ, ರೂಪ, ಕೋಪ – ಪ್ರಾಸ ಪದಗಳು