ಪದ್ಯ ೯೧: ಅರ್ಜುನನ ಮಾತು ಕೇಳಿ ಭೀಮನು ಯಾರ ತೋಳನ್ನು ಸುಡುವೆನೆಂದನು?

ಹಿಂಗಿ ಹೋಗಲಿ ತನುವನಸು ಸ
ಪ್ತಾಂಗ ಬೇಯಲಿ ಖೋಡಿ ಮನದಲಿ
ಹಿಂಗುವುದೆ ಹರಹರ ಧನಂಜಯ ಕಾಕ ಬಳಸಿದೆಲ
ಅಂಗನೆಯ ಮೇಲೊಡ್ಡವೇ ಲಲಿ
ತಾಂಗಿಗೀ ವಿಧಿಯೇಕೆ ನಮಗೀ
ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ (ಸಭಾ ಪರ್ವ, ೧೫ ಸಂಧಿ, ೯೧ ಪದ್ಯ)

ತಾತ್ಪರ್ಯ:
ಕೋಪದ ಆವೇಶದಲ್ಲಿದ್ದ ಭೀಮನು, ಅರ್ಜುನ ಪ್ರಾಣವು ಈ ದೇಹವನ್ನು ಬಿಟ್ಟು ಹೋಗಲಿ, ಸಪ್ತಾಂಗಗಳು ಬೆಂದು ಹೋಗಲಿ, ಆದರೆ ಈ ದೋಷವು ಮನಸ್ಸನ್ನು ನೋಯಿಸದಿದ್ದೀತೆ? ಶಿವ ಶಿವಾ, ದ್ರೌಪದಿಯನ್ನು ಪಣವಾಗಿಡುವುದೇ? ನಮಗೆ ಆಗಿರುವ ಭಂಗವು ಸಾಲದೆಂದು ಅವಳಿಗೂ ದುರ್ಗತಿಯೇ? ಸಹದೇವ ಬೆಂಕಿಯನ್ನು ತಾ, ಅಣ್ಣನ ತೋಳುಗಳನ್ನು ಸುಡುವುದು ಬೇಡ, ನನ್ನ ತೋಳುಗಳನ್ನೇ ಸುಟ್ಟುಕೊಳ್ಳುತ್ತೇನೆ ಎಂದನು.

ಅರ್ಥ:
ಹಿಂಗು: ಕಡಮೆಯಾಗು, ತಗ್ಗು; ತನು: ದೇಹ; ಅಸು: ಪ್ರಾಣ; ಸಪ್ತಾಂಗ: ಏಳು ಅಂಗಗಳು; ಬೇಯು: ಪಕ್ವವಾಗು, ಖೋಡಿ: ಕೆಟ್ಟ, ಹೀನವಾದ; ಮನ: ಮನಸ್ಸು; ಹರ: ಶಿವ ; ಕಾಕ: ಕಾಗೆಯ ಪೌರುಷ, ಒಣಜಂಬ; ಬಳಸು: ಸುತ್ತುವರಿ; ಅಂಗನೆ: ಹೆಣ್ಣು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಲಲಿತಾಂಗಿ: ಬಳ್ಳಿಯಂತ ದೇಹವುಳ್ಳವಳು, ಸುಂದರಿ (ದ್ರೌಪದಿ); ವಿಧಿ: ನಿಯಮ; ಭಂಗ: ಮೋಸ, ವಂಚನೆ; ಸಾಲದೆ: ಸಾಕಾಗು; ಸುಡು: ದಹಿಸು; ತೋಳು: ಬಾಹು;

ಪದವಿಂಗಡಣೆ:
ಹಿಂಗಿ +ಹೋಗಲಿ+ ತನುವನ್+ಅಸು +ಸ
ಪ್ತಾಂಗ +ಬೇಯಲಿ +ಖೋಡಿ +ಮನದಲಿ
ಹಿಂಗುವುದೆ +ಹರಹರ+ ಧನಂಜಯ+ ಕಾಕ +ಬಳಸಿದೆಲ
ಅಂಗನೆಯ+ ಮೇಲ್+ಒಡ್ಡವೇ +ಲಲಿ
ತಾಂಗಿಗ್+ಈ +ವಿಧಿಯೇಕೆ+ ನಮಗೀ
ಭಂಗ +ಸಾಲದೆ +ಸುಡುವೆನಾದೊಡೆ +ತನ್ನ +ತೋಳುಗಳ

ಅಚ್ಚರಿ:
(೧) ಭೀಮನ ಮನಸ್ಸಿನ ಚಿತ್ರಣ – ಖೋಡಿ ಮನದಲಿ ಹಿಂಗುವುದೆ ಹರಹರ ಧನಂಜಯ ಕಾಕ ಬಳಸಿದೆಲ
(೨) ದ್ರೌಪದಿಯ ಮೇಲಿನ ಒಲವನ್ನು ಹೇಳುವ ಪರಿ – ಲಲಿತಾಂಗಿಗೀ ವಿಧಿಯೇಕೆ ನಮಗೀ
ಭಂಗ ಸಾಲದೆ
(೩) ದ್ರೌಪದಿಯನ್ನು ಕರೆದ ಬಗೆ – ಅಂಗನೆ, ಲಲಿತಾಂಗಿ

ನಿಮ್ಮ ಟಿಪ್ಪಣಿ ಬರೆಯಿರಿ