ಪದ್ಯ ೬೭: ದುಶ್ಯಾಸನನು ದ್ರೌಪದಿಯನ್ನು ಹೇಗೆ ಎಳೆದನು?

ಕೆದರಿದವು ಸೂಸಕದ ಮುತ್ತುಗ
ಳುದುರಿದವು ಸೀಮಂತ ಮಣಿಗಳ
ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು
ಸುದತಿಯರು ಗೋಳಿಡುತ ಬರೆ ಮೆ
ಟ್ಟಿದನು ತಿವಿದನು ಕಾಲಲಡಬಿ
ದ್ದುದು ಸಖೀಜನವೆಳೆದು ಝಾಡಿಸಿ ಜರೆದು ಝೋಂಪಿಸಿದ (ಸಭಾ ಪರ್ವ, ೧೫ ಸಂಧಿ, ೬೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಧರಿಸಿದ್ದ ಕುಚ್ಚಿನ ಮುತ್ತುಗಳು ಉದುರಿದವು. ಬೈತಲೆ ಮಣಿಗಳು ಉದುರಿ ಬಿದ್ದವು. ಕಿವಿಯ ರತ್ನದ ಓಲೆಗಳು ಮುರಿದವು. ದ್ರೌಪದಿಯ ಸಖಿಯರು ಗೋಳಾಡುತ್ತಾ ಬಂದು ಅವನ ಕಾಲಿಗೆ ಬೀಳಲು, ದುಶ್ಯಾಸನು ಅವರನ್ನು ಕಾಲಿನಿಂದ ಝಾಡಿಸಿ ಒದೆದು ಬಯ್ಯುತ್ತ ಅತ್ತಿತ್ತ ನೂಕಿ ಅವರನ್ನು ಮೆಟ್ಟಿ ದ್ರೌಪದಿಯನ್ನು ತಲೆಯ ಕೂದಲಿನಿಂದ ಎಳೆಯುತ್ತಿದ್ದನು.

ಅರ್ಥ:
ಕೆದರು: ಹರಡು, ಚದರು; ಸೂಸಕ: ಬೈತಲೆ ಬೊಟ್ಟು; ಮುತ್ತು: ಮೌಕ್ತಿಕ; ಉದುರು: ಕೆಳಗೆ ಬೀಳು, ಬಿಡಿಬಿಡಿಯಾಗು; ಸೀಮಂತ:ಬೈತಲೆ; ಮಣಿ: ರತ್ನ; ಹೊದರು: ಬಿರುಕು, ಸಮೂಹ; ಕರ್ಣ: ಕಿವಿ; ರತ್ನ: ಮಾಣಿಕ್ಯ; ಓಲೆ: ಕರ್ಣಾಭರಣ; ಸುದತಿ: ಹೆಣ್ಣು, ಸ್ತ್ರೀ; ಗೋಳಿಡು: ಅಳಲು; ಬರೆ: ಆಗಮಿಸು; ಮೆಟ್ಟು: ತುಳಿ; ತಿವಿ: ಚುಚ್ಚು; ಕಾಲು: ಪಾದ; ಅಡಬಿದ್ದು: ನಮಸ್ಕರಿಸು; ಸಖಿ: ದಾಸಿ; ಎಳೆ: ಸೆಳೆದು; ಝಾಡಿಸು: ಜೋರಾಗಿ ಒದೆ; ಜರೆ: ಬಯ್ಯು; ಝೋಂಪಿಸು: ಬೆಚ್ಚಿಬೀಳು;

ಪದವಿಂಗಡಣೆ:
ಕೆದರಿದವು +ಸೂಸಕದ +ಮುತ್ತುಗಳ್
ಉದುರಿದವು +ಸೀಮಂತ +ಮಣಿಗಳ
ಹೊದರು +ಮುರಿದವು +ಕರ್ಣಪೂರದ+ ರತ್ನದ್+ಓಲೆಗಳು
ಸುದತಿಯರು +ಗೋಳಿಡುತ +ಬರೆ +ಮೆ
ಟ್ಟಿದನು +ತಿವಿದನು +ಕಾಲಲ್+ಅಡಬಿ
ದ್ದುದು +ಸಖೀಜನವ್+ಎಳೆದು +ಝಾಡಿಸಿ +ಜರೆದು +ಝೋಂಪಿಸಿದ

ಅಚ್ಚರಿ:
(೧) ಕೆದರು, ಉದುರು, ಹೊದರು, ಮುರಿ, ತಿವಿ, ಮೆಟ್ಟು, ಝಾಡಿಸು, ಝೋಂಪಿಸು – ದುಶ್ಯಾಸನನ ಕ್ರೌರ್ಯವನ್ನು ವಿವಿರಿಸುವ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ