ಪದ್ಯ ೬೫: ದುಶ್ಯಾಸನು ಕೋಪಗೊಂಡು ಹೇಗೆ ದ್ರೌಪದಿಯ ಮುಡಿಗೆ ಕೈಹಾಕಿದ?

ಎಲ್ಲಿಯದು ದುಷ್ಪ್ರಶ್ನೆ ಮರು ಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಿಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ (ಸಭಾ ಪರ್ವ, ೧೫ ಸಂಧಿ, ೬೫ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿನಿಂದ ಕೋಪಗೊಂಡ ದುಶ್ಯಾಸನನು ನಿನ್ನದೆಂತಹ ದುಷ್ಟ ಪ್ರಶ್ನೆ, ಅದಕ್ಕೆ ಉತ್ತರವೇಕೆ. ನೀನಿಲ್ಲಿ ಪುಷ್ಪವತಿಯಾಗಿದ್ದೀಯ ನಡೆ ದುರ್ಯೋಧನನ ಅರಮನೆಯಲ್ಲಿ ಫಲವತಿಯಾಗು, ಕೆಲಸಕ್ಕೆ ಬಾರದ ಐವರು ತಮ್ಮನ್ನೇ ತಾವು ಸೋತಿದ್ದಾರೆ, ನಿನ್ನ ಉಚಿತವಾದ ತಿಳುವಳಿಕೆಯನ್ನು, ಬುದ್ಧಿಯನ್ನು ಅಲ್ಲಿ ತೋರಿಸು ಎನ್ನುತಾ ಅಯ್ಯೋ ಆಕೆಯ ಸಿರಿಮುಡಿಗೆ ಕೈಹಾಕಿದನು.

ಅರ್ಥ:
ದುಷ್ಪ್ರಶ್ನೆ: ದುಷ್ಟ ಪ್ರಶ್ನೆ; ಪ್ರಶ್ನೆ: ಪೃಚ್ಛೆ; ಮರು: ತಿರುಗಿ; ಮಾತು: ವಾಕ್, ನುಡಿ; ಪುಷ್ಪವತಿ: ಋತುವತಿ; ಫಲವತಿ: ಗರ್ಭಿಣಿ; ಕುರುರಾಯ: ದುರ್ಯೋಧನ; ಭವನ: ಅರಮನೆ; ಖುಲ್ಲ: ನೀಚ, ದುಷ್ಟ; ಸೋಲು: ಪರಾಭವ; ಬಲ್ಲವಿಕೆ: ತಿಳುವಳಿಕೆ; ಉಚಿತ: ಸರಿಯಾದುದ; ಮೌಳಿ: ತಲೆ; ತೋರು: ಪ್ರದರ್ಶಿಸು; ತಪ್ಪಿದ: ಸರಿನಡಿಗೆಯಲ್ಲದ; ಅಹಹ: ಅಯ್ಯೋ; ಸಿರಿ: ಶ್ರೇಷ್ಠ; ಮುಡಿ: ತಲೆ, ಶಿರ;

ಪದವಿಂಗಡಣೆ:
ಎಲ್ಲಿಯದು+ ದುಷ್ಪ್ರಶ್ನೆ +ಮರು +ಮಾ
ತೆಲ್ಲಿಯದು +ನೀ +ಪುಷ್ಪವತಿಯಾ
ಗಿಲ್ಲಿ+ ಫಲವತಿಯಾಗು +ನಡೆ +ಕುರುರಾಯ +ಭವನದಲಿ
ಖುಲ್ಲರ್+ಐವರು +ತಮ್ಮ +ಸೋತರು
ಬಲ್ಲವಿಕೆ+ಉಚಿತವನು +ಮೌಳಿಯ
ನಲ್ಲಿ+ ತೋರಾ+ಎನುತ +ತಪ್ಪಿದನ್+ಅಹಹ+ ಸಿರಿಮುಡಿಗೆ

ಅಚ್ಚರಿ:
(೧) ದುಶ್ಯಾಸನ ನೀಚ ಮಾತು – ನೀ ಪುಷ್ಪವತಿಯಾಗಿಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ
(೨) ಕವಿಯೇ ನೊಂದು ಬರೆದ ಅನುಭವ – ತಪ್ಪಿದನಹಹ ಸಿರಿಮುಡಿಗೆ
(೩) ದ್ರೌಪದಿಯ ಶಿರವನ್ನು ವರ್ಣಿಸುವ ಪದ – ಸಿರಿಮುಡಿ

ನಿಮ್ಮ ಟಿಪ್ಪಣಿ ಬರೆಯಿರಿ