ಪದ್ಯ ೬೩: ದುಶ್ಯಾಸನನು ದ್ರೌಪದಿಯನ್ನು ಹೇಗೆ ಜರೆದನು?

ಬಂದನವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿದು ಕುರುರಾಜ ಭವನದಲಿ
ಇಂದು ಮರೆ ನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ (ಸಭಾ ಪರ್ವ, ೧೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ದುಶ್ಯಾಸನನು ಮಹಾಪತಿವ್ರತೆಯಾದ ದ್ರೌಪದಿಯ ಮುಂದೆ ಬಂದನು, ಎಲೇ, ನಿನ್ನ ಈ ಹಿರಿಮೆ ದರ್ಪವೆಲ್ಲವೂ ಈ ಹಿಂದೆ ಇಂದ್ರಪ್ರಸ್ಥದಲ್ಲಿ ಸಲ್ಲುತ್ತಿದ್ದವು, ಇಂದು ಕೌರವನ ಅರಮನೆಯಲ್ಲಿ ಇವೆಲ್ಲ ಸಲ್ಲದು, ಹಿಂದಿದ್ದ ಠೀವಿಯನ್ನು ಮರೆತುಬಿಡು, ನಡೆ ನಮ್ಮ ದಾಸಿಯರೊಡನೆ ನಿನ್ನ ಹಿರಿಮೆಯನ್ನು ತೋರಿಸು, ನಡೆ ಮಂಚದಿಂದ ಇಳಿ ಎಂದು ದ್ರೌಪದಿಯನ್ನು ತೆಗಳಿದನು.

ಅರ್ಥ:
ಬಂದು: ಆಗಮಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು (ದ್ರೌಪದಿ); ಇದಿರು: ಎದುರು; ನಿಂದು: ನಿಲ್ಲು; ಗರುವತನ: ಗರ್ವ, ದರ್ಪ; ಹಿಂದೆ: ಮೊದಲು; ಸಲುವು: ಸರಿಹೊಂದು; ಸಲ್ಲದು: ಸರಿಹೊಂದದು; ಭವನ: ಅರಮನೆ; ಮರೆ: ನೆನಪಿನಿಂದ ದೂರ ಮಾಡು; ನಡೆ: ಚಲಿಸು; ತೊತ್ತು: ದಾಸಿ; ಮೆರೆ: ಖ್ಯಾತಿಹೊಂದು; ಮಂಚ: ಪಲ್ಲಂಗ; ಇಳಿ: ಕೆಳಗೆ ಬಾ; ಜರೆ: ಬಯ್ಯು, ತೆಗಳು; ಅನುಜ: ತಮ್ಮ; ಸತಿ: ಪತಿವ್ರತೆ, ಗರತಿ; ಮಹಾ: ಶ್ರೇಷ್ಠ;

ಪದವಿಂಗಡಣೆ:
ಬಂದನ್+ಅವನ್+ಅಬುಜಾಕ್ಷಿ+ಇದಿರಲಿ
ನಿಂದನ್+ಎಲೆಗ್+ಈ+ ಗರುವತನವಿದು
ಹಿಂದೆ +ಸಲುವುದು+ ಸಲ್ಲದಿದು +ಕುರುರಾಜ +ಭವನದಲಿ
ಇಂದು +ಮರೆ +ನಡೆ +ನಮ್ಮ +ತೊತ್ತಿರ
ಮುಂದೆ +ಮೆರೆ +ನಡೆ+ ಮಂಚದಿಂದ್+ಇಳಿ
ಎಂದು +ಜರೆದನು +ಕೌರವ+ಅನುಜನ್+ಆ+ ಮಹಾ+ಸತಿಯ

ಅಚ್ಚರಿ:
(೧) ಮೊದಲನೆ ಸಾಲು ಒಂದೇ ಪದವಾಗಿರುವುದು – ಬಂದನವನಬುಜಾಕ್ಷಿಯಿದಿರಲಿ
(೨) ಮರೆ ನಡೆ, ಮೆರೆ ನಡೆ – ಪದಗಳ ಬಳಕೆ – ೪,೫ ಸಾಲು
(೩) ಸಲುವುದು, ಸಲ್ಲದಿದು – ಪದಗಳ ಬಳಕೆ
(೪) ದ್ರೌಪದಿಯನ್ನು ಅಬುಜಾಕ್ಷಿ, ಮಹಾಸತಿ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ